ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆಯ ಡಾ. ಪುನಿತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜನ ಸಂಕಲ್ಪ ಯಾತ್ರೆ ಯನ್ನು ಉದ್ಘಾಟಿಸಿ ಮಾತನಾಡಿದರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಿಕೆ ಹಳ್ಳಿಯನ್ನು ಹೋಬಳಿ ಯಾಗಿ ಪರಿವರ್ತಿಸಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಮರಿಯಮ್ಮನಹಳ್ಳಿ ಕುಡಿಯುವ ನೀರಿನ ಯೋಜನೆ ಡಿಪಿಆರ್ ಆಗಿದ್ದು, ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಎರಡೂ ಜಿಲ್ಲೆಯಿಂದ 10 ಸೀಟು ಗೆಲ್ಲಿಸಬೇಕು. ಎರಡು ಜಿಲ್ಲೆಗಳಿಗೆ ಸುಪ್ರೀಂ ಕೊರ್ಟ್ ಆದೇಶದಿಂದ 20 ಸಾವಿರ ಕೋಟಿ ಬಂದಿದ್ದು, ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಮಾಡಿ, ಮಾದರಿ ಜಿಲ್ಲೆಗಳನ್ನಾಗಿ ಮಾಡಲಾಗುವುದು. ವಿಜಯನಗರ ಗತವೈಭವವನ್ನು ಪುನರ್ ಸ್ಥಾಪಿಸಲು ಭಾಜಪ ಸರ್ಕಾರ ಶ್ರಮವಹಿಸಲಿದ್ದು, ಜನರ ಆಶೀರ್ವಾದವಿರಲಿ ಎಂದು ತಿಳಿಸಿದರು.
ಆನಂದ ಸಿಂಗ್ ಅವರು ಹೃದಯ ಶ್ರೀಮಂತಿಕೆಯುಳ್ಳವರು. ಎಲ್ಲ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ರಚನೆಗೆ ಕಾರಣೀಭೂತರಾಗಿದ್ದಾರೆ. ಜಿಲ್ಲೆಯಲ್ಲಿ ಅವರ ನಾಯಕತ್ವದಲ್ಲಿ ಎಲ್ಲರೂ ಮುಂದುವರೆಯಬೇಕು.75 ಸಮುದಾಯಗಳ ನಾಯಕರನ್ನು ಈ ವೇದಿಕೆಯಲ್ಲಿ ಒಗ್ಗೂಡಿಸಿದ್ದಾರೆ. ಆನಂದ್ ಸಿಂಗ್ ಹಾಗೂ ರಾಮುಲು ಅವರ ಸಂಘಟನಾ ಶಕ್ತಿ ಇದೆ. ಸೋಮಲಿಂಗಪ್ಪ, ಗೋಪಾಲಕೃಷ್ಣ, ಸೋಮಶೇಖರ್ ರೆಡ್ಡಿ ಎಲ್ಲರು ಇದ್ದಾರೆ. ಈ ಭಾಗದ ಜನರ ಒಳಿತಿಗಾಗಿ ಎಲ್ಲರೂ ಶ್ರಮಿಸುತ್ತಿದ್ದಾರೆ ಎಂದರು.