ಬಿಜೆಪಿಯೊಳಗಿನ ಸದಾ ಬುಸುಗುಡುವ ಜ್ವಾಲಾಮುಖಿಯಾದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ತಮ್ಮ ಬದ್ಧ ವೈರಿ ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ.
ಬಿಜೆಪಿ-ಜೆಡಿಎಸ್ ಜಂಟಿಯಾಗಿ ಹಮ್ಮಿಕೊಂಡಿರುವ ಪಾದಯಾತ್ರೆಯು ಸಿಎಮ್ ಸಿದ್ಧರಾಮಯ್ಯನವರನ್ನು ಕೆಳಗಿಳಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ವಿಷಯವಾಗಿ ವಿಜಯೇಂದ್ರ ಅವರು ಡಿಕೆ ಶಿವಕುಮಾರ್ ಅವರಿಂದ ಸುಪಾರಿ ಪಡೆದಿದ್ದು, ಅವರ ಯೋಜನೆಯಂತೆ ಈ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಯತ್ನಾಳ್, ಮುಡಾ ಹೋರಾಟವೇ ಮುಖ್ಯಂತ್ರಿಯವರನ್ನು ಕುರ್ಚಿಯಿಂದ ಇಳಿಸುವ ಸಲುವಾಗಿ ಮಾಡಲಾದ ತಂತ್ರ ಎಂದು ಹೇಳಿದರು.
ಈ ಯಾತ್ರೆಯಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಯತ್ನಾಳ್ ಈಗಾಗಲೇ ಹೇಳಿದ್ದರು. ಅವರೊಂದಿಗೆ ರಮೇಶ್ ಜಾರಕಿಹೊಳಿ ಹಾಗೂ ಲಿಂಬಾವಳಿ ಕೂಡಾ ಭಾಗವಹಿಸುವುದಿಲ್ಲ ಎಂದಿದ್ದಾರೆ. ಲಿಂಬಾವಳಿಯವರೂ ತಮ್ಮ ಪಕ್ಷದ ನಾಯಕರು ಆಡಳಿತ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ನಿನ್ನೆಯಷ್ಟೇ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಬಿಜೆಪಿ ತನ್ನ ಮೈತ್ರಿ ಪಕ್ಷವಾದ ಜೆಡಿಎಸ್ ಜೊತೆ ಸೇರಿ ಬೆಂಗಳೂರಿನಿಂದ ಮೈಸೂರಿನ ತನಕ ಏಳು ದಿನಗಳ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು, ಈ ಯಾತ್ರೆಯಲ್ಲಿ ಅದು ಆಡಳಿತ ಪಕ್ಷ ನಡೆಸಿದೆ ಎನ್ನಲಾಗುತ್ತಿರುವ ಮುಡಾ, ವಾಲ್ಮಿಕಿ ನಿಗಮದ ಹಗರಣಗಳ ಕುರಿತು ಜನ ಹೋರಾಟವನ್ನು ಸಂಘಟಿಸಲಿದೆ.