ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಅಧಿಕಾರದ ಹಪಾಹಪಿಯಿಂದಾಗಿ “ಅಕ್ರಮ ವಲಸಿಗರಿಗೆ” ಮನೆ ನೀಡಲು ಸರ್ಕಾರ ಸಂಚು ರೂಪಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಮುಖ್ಯಮಂತ್ರಿ ಕುರ್ಚಿಯ ಪೈಪೋಟಿಯಲ್ಲಿ ಅಪ್ಪರ್ ಹ್ಯಾಂಡ್ ಪಡೆಯಲು ಇಂತಹ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು. ಕಾಂಗ್ರೆಸ್ ಹೈಕಮಾಂಡ್ ನಾಯಕ ಕೆ.ಸಿ. ವೇಣುಗೋಪಾಲ್ ಅವರ ಎಚ್ಚರಿಕೆಯ ಬೆನ್ನಲ್ಲೇ, ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಅಕ್ರಮ ವಲಸಿಗರಿಗೆ ಮನೆ ನೀಡುವ ಪ್ರಯತ್ನ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಡಿ.ಕೆ. ಶಿವಕುಮಾರ್ ಅವರು ತಾವೇ ಸಿಎಂ ಆಗುವ ಉದ್ದೇಶದಿಂದ ವೇಣುಗೋಪಾಲ್ ಅವರ ಮೂಲಕ ಸಿಎಂಗೆ ಎಚ್ಚರಿಕೆ ಕೊಡಿಸಿದ್ದಾರೆ ಎಂದು ಅವರು ಟೀಕಿಸಿದರು.
ರಾಜ್ಯದಲ್ಲಿ ಸುಮಾರು 38 ಲಕ್ಷ ಜನರು ವಸತಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಆದರೆ, ಈ ಸರ್ಕಾರ ಇದುವರೆಗೆ ಅರ್ಹ ಫಲಾನುಭವಿಗಳಿಗೆ ಒಂದು ಮನೆಯನ್ನೂ ಒದಗಿಸಿಲ್ಲ ಎಂದು ವಿಜಯೇಂದ್ರ ದೂರಿದರು. ಸ್ವಂತ ಜನರಿಗೆ ಮನೆ ನೀಡದ ಸರ್ಕಾರ, ರಾಜಕೀಯ ಲಾಭಕ್ಕಾಗಿ ಅಕ್ರಮವಾಗಿ ನೆಲೆಸಿರುವವರಿಗೆ ಆದ್ಯತೆ ನೀಡುತ್ತಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
