ಬೆಂಗಳೂರು: ಹಿರಿಯ ರಾಜಕಾರಣಿ ಕೆ ಎಸ್ ಈಶ್ವರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನಡುವಿನ ಮಾತಿನ ಚಕಮಕಿ ಮುಂದುವರೆದಿದ್ದು, ಮಾತಿನ ಬಿರುಸು ಬಾಣ ಸಿಡಿಯುತ್ತಲೇ ಇದೆ.
ಠೇವಣಿ ಕಳೆದುಕೊಂಡವರು ಸಂಘಟನೆ ಕಟ್ಟುತ್ತಿದ್ದಾರೆ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ, “ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ರಾಜಕೀಯದಲ್ಲಿ ಇನ್ನು ಎಳಸು. ನಾವೆಲ್ಲರೂ ಪಕ್ಷವನ್ನು ಕಟ್ಟುವ ಸಂದರ್ಭದಲ್ಲಿ ವಿಜಯೇಂದ್ರ ಕಣ್ಣು ಬಿಟ್ಟಿದ್ದಿಲ್ಲ. ಬಿಜೆಪಿಯನ್ನು ಅನೇಕರು ಶ್ರಮವಹಿಸಿ ಕಟ್ಟಿದ ಮೇಲೆ ಮೋದಿ, ಅಮಿತ್ ಷಾ ಕೃಪಕಟಾಕ್ಷದಿಂದ, ಹೈಕಮಾಂಡ್ ಗೆ ಮಂಕುಬೂದಿ ಎರಚಿ ರಾಜ್ಯಾಧ್ಯಕ್ಷರಾಗಿದ್ದಾರೆ. ವಿಜಯೇಂದ್ರ ಕೈಯಲ್ಲಿ ಇದೀಗ ಪಕ್ಷ ಇವರ ಕೈಯಲ್ಲಿ ಸಿಕ್ಕು ಹಾಳಾಗುತ್ತಿದೆ” ಎಂದು ಕೆಂಡ ಕಾರಿದ್ದಾರೆ.
ತಾನು ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಕಟ್ಟುವುದು ಪಕ್ಕಾ ಎಂದಿರುವ ಈಶ್ವರಪ್ಪ ಈ ಕುರಿತು ಅ.20 ರಂದು ಬಾಗಲಕೋಟೆಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಹಿಂದುಳಿದ, ದಲಿತ ಸೇರಿದಂತೆ ಎಲ್ಲ ಸಮಾಜದವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯಾಗಲು ಸಾಧು ಸಂತರ ನೇತೃತ್ವದಲ್ಲಿ ಈ ಸಂಘಟನೆಯನ್ನು ಕಟ್ಟುವುದಾಗಿ ಅವರು ಹೇಳಿದ್ದಾರೆ.
ಹುಬ್ಬಳ್ಳಿಯ ಖಾಸಗಿ ಹೊಟೆಲ್ ನಲ್ಲಿ ವಿವಿಧ ಸಮಾಜದ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರಿಗೆ ಹಿಂದುಳಿದ ವರ್ಗದ ಜನರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹೊಸ ಸಂಘಟನೆ ಹುಟ್ಟುಹಾಕಲಾಗಿದೆ. ಈ ಸಭೆಯಲ್ಲಿ 25 ಕ್ಕೂ ಹೆಚ್ಚು ಸಾಧು-ಸಂತರು, ಸಾವಿರಕ್ಕೂ ಅಧಿಕ ವಿವಿಧ ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಮುಡಾ ಹಗರಣ ಮುಚ್ಚಿ ಹಾಕಲು ಜಾತಿಗಣತಿ ಮುನ್ನಲೆಗೆ
ಸಿಎಂ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಮುಡಾ ಹಗರಣ ಮುಚ್ಚಿ ಹಾಕಲು ಜಾತಿಗಣತಿ ವಿಷಯವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಜಾತಿಗಣತಿ ವರದಿಯನ್ನು ಬಹಿರಂಗಪಡಿಸುವುದಾಗಿ ಹೇಳಿದ್ದರು. ಈ ಮಾತು ಹೇಳಿ ಎಂಟು ವರ್ಷ ಕಳೆದರೂ ಕಾರ್ಯರೂಪಕ್ಕೆ ಬಂದಿಲ್ಲ. ಇದೀಗ ಅಲುಗಾಡುತ್ತಿರುವ ಸಿಎಂ ಕುರ್ಚಿ ಉಳಿಸಿಕೊಳ್ಳಲು ತಮ್ಮ ಪಕ್ಷದ ಶಾಸಕರ, ಸಚಿವರ ಮೂಲಕ ಜಾತಿಗಣತಿ ವಿಷಯವನ್ನು ಮುನ್ನಲೆಗೆ ತರುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ