Tuesday, February 24, 2026

ಸತ್ಯ | ನ್ಯಾಯ |ಧರ್ಮ

ವಿಜಯೇಂದ್ರ ಯಾವತ್ತೂ ಸಿಎಂ ಆಗಲ್ಲ: ಯತ್ನಾಳ್ ಭವಿಷ್ಯ

ಕರ್ನಾಟಕ ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿ.ವೈ. ವಿಜಯೇಂದ್ರ ವಿರುದ್ಧ ಮತ್ತೆ ಗುಡುಗಿದ್ದಾರೆ. ಸೋಮವಾರ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಎಂದಿಗೂ ಕರ್ನಾಟಕದ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಕೇವಲ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದ ಯತ್ನಾಳ್, ದಾವಣಗೆರೆ, ಕಲಬುರಗಿ ಹಾಗೂ ಬೀದರ್ ಸೇರಿದಂತೆ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲು ಈ ತಂದೆ-ಮಗನೇ ಕಾರಣ ಎಂದು ನೇರವಾಗಿ ದೂರಿದ್ದಾರೆ.

ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ತಾವು ಹಮ್ಮಿಕೊಂಡಿದ್ದ ಪಾದಯಾತ್ರೆಗೆ ವಿಜಯೇಂದ್ರ ಅವರು ಅನುಮತಿ ನೀಡದಿದ್ದನ್ನು ಪ್ರಶ್ನಿಸಿದ ಯತ್ನಾಳ್, ವಿಜಯೇಂದ್ರ ಅವರ ರಾಜಕೀಯ ನಡೆಯನ್ನು ಟೀಕಿಸಿದ್ದಾರೆ.

ಸದನದ ಒಳಗೆ ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಲು ಮುಂದಾದ ಕೂಡಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಳೆಯ ‘ಫೈಲ್’ ತೆಗೆಯುವ ಬೆದರಿಕೆ ಹಾಕುತ್ತಾರೆ. ಆ ಬೆದರಿಕೆಗೆ ಹೆದರಿ ವಿಜಯೇಂದ್ರ ತಕ್ಷಣವೇ ಸುಮ್ಮನಾಗುತ್ತಾರೆ ಎಂದು ಯತ್ನಾಳ್ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಕರ್ನಾಟಕ ಬಿಜೆಪಿ ವಿಫಲವಾಗಿದೆ ಎಂದು ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page