ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು : ಗೊಂದಲಕ್ಕೆ ತೆರೆ ಎಳೆದ ಸ್ಪೀಕರ್ ಯುಟಿ ಖಾದರ್

ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಧಾರವಾಡ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ತಾಂತ್ರಿಕವಾಗಿ ಈಗಾಗಲೇ ರದ್ದಾಗಿದೆ ಎಂದು ವಿಧಾನಸಭಾಧ್ಯಕ್ಷ ಯುಟಿ ಖಾದರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ಈ ಪ್ರಕರಣದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರ ಪಾತ್ರ ಮತ್ತು ಅನರ್ಹತೆ ಸಂಬಂಧಿತ ನಿಯಮಗಳ ಬಗ್ಗೆ ಉದ್ಭವಿಸಿದ್ದ ಗೊಂದಲಗಳಿಗೆ ತೆರೆ ಎಳೆದರು.

“ಯಾವುದೇ ಜನಪ್ರತಿನಿಧಿಗೆ ನ್ಯಾಯಾಲಯದಿಂದ ಶಿಕ್ಷೆ ವಿಧಿಸಲ್ಪಟ್ಟ ಕ್ಷಣದಿಂದಲೇ, ಕಾನೂನು ಪ್ರಕಾರ ಅವರ ಸದಸ್ಯತ್ವ ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಇದನ್ನು ಪ್ರತ್ಯೇಕವಾಗಿ ರದ್ದುಪಡಿಸುವ ಅಧಿಕಾರ ಸಭಾಧ್ಯಕ್ಷರಿಗೆ ಇಲ್ಲ. ಆದರೆ ಮೇಲ್ಮನವಿ ನ್ಯಾಯಾಲಯವು ಶಿಕ್ಷೆಗೆ ತಡೆಯಾಜ್ಞೆ ನೀಡಿದಲ್ಲಿ ಮಾತ್ರ ಸದಸ್ಯತ್ವ ಮರುಸ್ಥಾಪನೆ ಸಾಧ್ಯ,” ಎಂದು ಅವರು ವಿವರಿಸಿದರು.

ಶಾಸಕರ ಅನರ್ಹತೆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಖಾದರ್, “ಇಂತಹ ವಿಚಾರಗಳಲ್ಲಿ ಪಕ್ಷಪಾತಕ್ಕೆ ಅವಕಾಶವೇ ಇಲ್ಲ. ಶಾಸಕ ಸ್ಥಾನ ರದ್ದಾದ ಬಳಿಕ ಅವರು ಸದನಕ್ಕೆ ಹಾಜರಾಗಲು ಸಾಧ್ಯವಿಲ್ಲ. ಕಾನೂನು ಅರಿವಿಲ್ಲದವರಿಗೆ ಮಾಹಿತಿ ನೀಡುತ್ತಿರುವುದಷ್ಟೇ,” ಎಂದು ಪ್ರತಿಕ್ರಿಯಿಸಿದರು.

ಈ ಪ್ರಕರಣದ ಕಾನೂನು ಅಂಶಗಳನ್ನು ಪರಿಶೀಲಿಸಲು ವಿಧಾನಸಭೆಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ ಅವರು, ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬವಾಗಿಲ್ಲ; ನಿಯಮಾವಳಿಗಳ ಪ್ರಕಾರವೇ ಕ್ರಮ ಜರುಗಲಿದೆ ಎಂದು ಸ್ಪಷ್ಟಪಡಿಸಿದರು.

ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯವು ವಿನಯ್ ಕುಲಕರ್ಣಿ ಅವರಿಗೆ ಶಿಕ್ಷೆ ವಿಧಿಸಿರುವ ಹಿನ್ನೆಲೆ, ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Related Articles

ಇತ್ತೀಚಿನ ಸುದ್ದಿಗಳು