Home ಬ್ರೇಕಿಂಗ್ ಸುದ್ದಿ ದೌರ್ಜನ್ಯ ಮತ್ತು ತಾರತಮ್ಯದ ಕಾರಣದಿಂದಲೇ, ಲಿಂಗತ್ವ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಅಡ್ಡಿ – ವರದಿ ಬಹಿರಂಗ

ದೌರ್ಜನ್ಯ ಮತ್ತು ತಾರತಮ್ಯದ ಕಾರಣದಿಂದಲೇ, ಲಿಂಗತ್ವ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಅಡ್ಡಿ – ವರದಿ ಬಹಿರಂಗ

ಬೆಂಗಳೂರು: ರಾಜ್ಯದಲ್ಲಿ 10,365 ಲಿಂಗತ್ವ ಅಲ್ಪಸಂಖ್ಯಾತರನ್ನು ‘ಲಿಂಗತ್ವ ಅಲ್ಪಸಂಖ್ಯಾತರ ಮೂಲಹಂತದ ಸಮೀಕ್ಷೆ’ಯು ಗುರುತಿಸಿದ್ದು, ಆ ಪೈಕಿ 9,701 ಮಂದಿಯು ಶಾಲೆಗಳಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆದಿದೆ ಹಾಗೂ ಶಾಲೆಗಳಲ್ಲಿ ತಮ್ಮನ್ನು ತಾರತಮ್ಯದಿಂದ ನೋಡಿಕೊಳ್ಳಲಾಗಿದೆ ಎಂದು ಹೇಳಿಕೊಂಡಿದ್ದಾರೆ. ದೌರ್ಜನ್ಯ ಮತ್ತು ತಾರತಮ್ಯದ ಕಾರಣದಿಂದಲೇ 2,589 ಮಂದಿ ಶಾಲೆ ಬಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ ಎಂಬ ಮಾಹಿತಿ ಸಮೀಕ್ಷಾ ವರದಿಯಲ್ಲಿದೆ. 

1,142 ಮಂದಿ ಪಿಯುಸಿ ಅಥವಾ ಡಿಪ್ಲೊಮಾ, 34 ಮಂದಿ ವೃತ್ತಿಪರ ಕೋರ್ಸ್‌, ಏಳು ಮಂದಿ ಕಾನೂನು ಪದವಿ, ಐವರು ಎಂಬಿಬಿಎಸ್‌, 350 ಜನರು ವಿವಿಧ ಪದವಿ ಪಡೆದಿದ್ದಾರೆ. ಸ್ನಾತಕೋತ್ತರ ಪದವಿ ಪಡೆದವರು 120 ಜನರಾದರೆ, ಡಾಕ್ಟರೇಟ್‌ ಪದವೀಧರರ ಸಂಖ್ಯೆ 3ರಷ್ಟಿದೆ. ಉಳಿದವರು ವಿವಿಧ ಅಸಂಪ್ರದಾಯಿಕ ಶಿಕ್ಷಣ–ಇತರ ಕೋರ್ಸ್‌ಗಳನ್ನು ಪೂರೈಸಿದ್ದಾರೆ.ಸಮೀಕ್ಷೆಯು ಗುರುತಿಸಿದ 10,365 ಮಂದಿಯ ಪೈಕಿ 10,250 ಜನರ ಶೈಕ್ಷಣಿಕ ವಿವರಗಳು ಲಭ್ಯವಾಗಿವೆ. 1,769 ಮಂದಿ ಅನಕ್ಷರಸ್ಥರು. 1,472 ಮಂದಿ ಪ್ರಾಥಮಿಕ ಹಂತದಲ್ಲೇ ಶಾಲೆ ಬಿಟ್ಟಿದ್ದರೆ, 1,327 ಮಂದಿ ಹಿರಿಯ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ತೊರೆದಿದ್ದಾರೆ. 1,603 ಮಂದಿ ಪ್ರೌಢಶಿಕ್ಷಣ ಹಂತದಲ್ಲಿ ಶಾಲೆಯಿಂದ ಹೊರಬಂದರೆ, ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ್ದು 1,123 ಲಿಂಗತ್ವ ಅಲ್ಪಸಂಖ್ಯಾತರು ಮಾತ್ರ.   

ಇವರಲ್ಲಿ 48 ಜನರು ರಾಜ್ಯ ಸರ್ಕಾರಿ ನೌಕರಿ, 13 ಮಂದಿ ಕೇಂದ್ರ ಸರ್ಕಾರಿ ನೌಕರಿ ಮತ್ತು 1,373 ಮಂದಿ ಖಾಸಗಿ ಉದ್ಯೋಗದಲ್ಲಿ ಇದ್ದಾರೆ. 689 ಮಂದಿ ಸ್ವಯಂ ಉದ್ಯೋಗಿಗಳಾಗಿದ್ದರೆ, 278 ಜನರು ವಿವಿಧ ಸ್ವಯಂಸೇವಾ ಸಂಸ್ಥೆಗಳಲ್ಲಿ ದುಡಿಯುತ್ತಿದ್ದಾರೆ. 7,849 ಮಂದಿಗೆ ನಿರ್ದಿಷ್ಟ ಉದ್ಯೋಗವಿಲ್ಲ ಮತ್ತು ತಾವು ಮಾಡುತ್ತಿರುವ ಉದ್ಯೋಗದ ಸ್ವರೂಪ ವಿವರಿಸಲು ಅವರು ಮುಂದೆ ಬಂದಿಲ್ಲ. ಈ ಸಮುದಾಯದಲ್ಲಿ ಶಿಕ್ಷಣದ ಪ್ರಮಾಣ ಕಡಿಮೆ ಇರುವ ಕಾರಣಕ್ಕೆ ಔದ್ಯೋಗಿಕ ಭದ್ರತೆಯೂ ಇಲ್ಲ. ಜತೆಗೆ ದೌರ್ಜನ್ಯ ಅಥವಾ ತಾರತಮ್ಯದ ಭಯವೂ ಅವರನ್ನು ಉದ್ಯೋಗದಿಂದ ದೂರ ಇರಿಸಿವೆ ಎಂಬ ಮಾಹಿತಿ ವರದಿಯಲ್ಲಿದೆ. 

ಈ ಸಮುದಾಯಕ್ಕೆ ಶಿಕ್ಷಣ ಮತ್ತು ಆ ಮೂಲಕ ಔದ್ಯೋಗಿಕ ಭದ್ರತೆ ಒದಗಿಸುವುದು ಅವಶ್ಯ. ಅದಕ್ಕಾಗಿ ಸಾಮಾನ್ಯ ಮಕ್ಕಳಲ್ಲಿ, ಶಿಕ್ಷಕರಲ್ಲಿ ಲಿಂಗತ್ವ ಅಲ್ಪಸಂಖ್ಯಾತತ್ವದ ಬಗ್ಗೆ ಅರಿವು ಮೂಡಿಸಬೇಕು. ದೌರ್ಜನ್ಯ ಮತ್ತು ತಾರತಮ್ಯಕ್ಕೆ ಅವಕಾಶ ಇಲ್ಲದಂತಹ ವಾತಾವರಣವನ್ನು ಶಾಲೆಗಳಲ್ಲಿ ರೂಪಿಸಬೇಕು. ಇದಕ್ಕಾಗಿ ಪರಿಣಾಮಕಾರಿ ಕಾರ್ಯಕ್ರಮ ರೂಪಿಸಬೇಕು ಎಂದು ವರದಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.

You cannot copy content of this page

Exit mobile version