Home ವಿದೇಶ ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರದ ಜ್ವಾಲೆ: ವಿದ್ಯಾರ್ಥಿ ನಾಯಕ ಹದಿ ಶರೀಫ್ ಉಸ್ಮಾನ್ ಹತ್ಯೆಗೆ ದೇಶವೇ ಅಸ್ತವ್ಯಸ್ತ

ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರದ ಜ್ವಾಲೆ: ವಿದ್ಯಾರ್ಥಿ ನಾಯಕ ಹದಿ ಶರೀಫ್ ಉಸ್ಮಾನ್ ಹತ್ಯೆಗೆ ದೇಶವೇ ಅಸ್ತವ್ಯಸ್ತ

0

ಢಾಕಾ/ದೆಹಲಿ: ಬಾಂಗ್ಲಾದೇಶದ ಯುವಜನತೆಯಲ್ಲಿ ಅಪಾರ ಪ್ರಭಾವ ಹೊಂದಿದ್ದ ಮತ್ತು ಭಾರತ ವಿರೋಧಿ ನಿಲುವುಗಳಿಗೆ ಹೆಸರಾಗಿದ್ದ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹದಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ದೇಶ ಮತ್ತೆ ಅಶಾಂತಿಯ ಗೂಡಾಗಿದೆ.

ಕಳೆದ ಡಿಸೆಂಬರ್ 12ರಂದು ಢಾಕಾದಲ್ಲಿ ಚುನಾವಣಾ ಪ್ರಚಾರದ ವೇಳೆ ಅಪರಿಚಿತ ಬಂದೂಕುಧಾರಿಗಳಿಂದ ದಾಳಿಗೊಳಗಾಗಿದ್ದ ಹದಿ, ಸಿಂಗಾಪುರದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ. ಹದಿ ಅವರ ಸಾವಿನ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಆಕ್ರೋಶಗೊಂಡ ಪ್ರತಿಭಟನಾಕಾರರು ಬೀದಿಗಿಳಿದು ಭಾರೀ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದಾರೆ.

ಹದಿ ಅವರ ಹಂತಕರು ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಭಾರತದ ವಿರುದ್ಧದ ಘೋಷಣೆಗಳೊಂದಿಗೆ ಢಾಕಾದಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ, ಬಾಂಗ್ಲಾದೇಶದ ಪತ್ರಿಕಾ ಸಂಸ್ಥೆಗಳಾದ ‘ಪ್ರೊಥೋಮ್ ಅಲೋ’ ಮತ್ತು ‘ಡೈಲಿ ಸ್ಟಾರ್’ ಕಚೇರಿಗಳ ಮೇಲೆ ದಾಳಿ ನಡೆಸಿ ಪೀಠೋಪಕರಣಗಳಿಗೆ ಬೆಂಕಿ ಹಚ್ಚಲಾಗಿದೆ. ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ನಿವಾಸವನ್ನೂ ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದಾರೆ.

ಈ ಹಿಂಸಾಚಾರದ ನಡುವೆ ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದಿರುವ ವರದಿಯಾಗಿದೆ. ಮೈಮೆನ್‌ಸಿಂಗ್ ನಗರದಲ್ಲಿ 25 ವರ್ಷದ ದೀಪು ಚಂದ್ರ ದಾಸ್ ಎಂಬ ಕಾರ್ಮಿಕನನ್ನು ಅತಿಮಾನುಷವಾಗಿ ಹತ್ಯೆ ಮಾಡಿ, ಆತನ ಮೃತದೇಹವನ್ನು ಸುಟ್ಟುಹಾಕಲಾಗಿದೆ. ದೈವದೂಷಣೆಯ ಸುಳ್ಳು ಆರೋಪ ಹೊರಿಸಿ ಈ ಅಮಾನುಷ ಕೃತ್ಯ ಎಸಗಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಘಟನೆಯನ್ನು ಬಾಂಗ್ಲಾದ ತಾತ್ಕಾಲಿಕ ಸರ್ಕಾರವು ಖಂಡಿಸಿದೆ.

ದೇಶದಾದ್ಯಂತ ಭುಗಿಲೆದ್ದಿರುವ ಹಿಂಸಾಚಾರವನ್ನು ನಿಯಂತ್ರಿಸಲು ತಾತ್ಕಾಲಿಕ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರು ಜನತೆಯಲ್ಲಿ ಸಂಯಮಕ್ಕೆ ಮನವಿ ಮಾಡಿದ್ದಾರೆ. ಹದಿ ಅವರ ಹಂತಕರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸುವುದಾಗಿ ಭರವಸೆ ನೀಡಿರುವ ಅವರು, ಶನಿವಾರವನ್ನು ರಾಷ್ಟ್ರೀಯ ಶೋಕಾಚರಣೆಯ ದಿನವನ್ನಾಗಿ ಘೋಷಿಸಿದ್ದಾರೆ. ಫೆಬ್ರವರಿ 12ಕ್ಕೆ ನಿಗದಿಯಾಗಿರುವ ಸಾರ್ವತ್ರಿಕ ಚುನಾವಣೆಗಳು ಈ ಹಿಂಸಾಚಾರದಿಂದಾಗಿ ಮುಂದೂಡಲ್ಪಡುವ ಸಾಧ್ಯತೆಗಳು ದಟ್ಟವಾಗಿವೆ.

You cannot copy content of this page

Exit mobile version