Friday, April 26, 2024

ಸತ್ಯ | ನ್ಯಾಯ |ಧರ್ಮ

ಹಿಂದೂ ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು

“ಹಿಂದೂ ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು” ಲತಾಮಾಲಾ ಅವರು ಬರೆದ ವಿಮರ್ಶಾ ಪುಸ್ತಕ. ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಹಿಂದುತ್ವ ರಾಜಕಾರಣ ಮತ್ತು ಅದು ತಗೆದುಕೊಂಡ ಹಿಂಸೆಯ ಹಾದಿಯ ಬಗ್ಗೆ ಪುಸ್ತಕದಲ್ಲಿ ಎಳೆ ಎಳೆಯಾಗಿ ಬರೆದಿದ್ದಾರೆ. ಡಾ.ವಾಸವಿ ಅವರು ಬರೆದ ಪುಸ್ತಕ ವಿಮರ್ಶೆಯನ್ನು ಅನುವಾದ ಮಾಡಿದ್ದಾರೆ ಲೇಖಕ ಸುನೈಫ್

೨೦೨೩ರ ಅಕ್ಟೋಬರ್‌ ತಿಂಗಳಲ್ಲಿ ಗೆಳೆಯರೊಬ್ಬರು ಇಮೇಲ್‌ ಮೂಲಕ ಒಂದು ಪುಸ್ತಕದ ಹಸ್ತಪ್ರತಿಯನ್ನು ಕಳುಹಿಸಿದರು, ವಿಮರ್ಶೆ ಬರೆಯಿರಿ ಎಂಬ ಒಕ್ಕಣೆಯೊಂದಿಗೆ. ನನಗೆ ಅದರ ಲೇಖಕಿಯ ಪರಿಚಯ ಇರಲಿಲ್ಲ. ಆದರೂ ಒಪ್ಪಿಕೊಂಡೆ. ಯಾಕೆಂದರೆ, ಅವರು ಒಬ್ಬ ಮಾಜಿ ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿದ್ದರು ಎಂಬ ಕಾರಣಕ್ಕೆ. ಅದರ ಪ್ರವೇಶಿಕೆಯಲ್ಲಿ, ಒಬ್ಬ ಚೆನ್ನಾಗಿ ಓದಿಕೊಂಡಿದ್ದ  ಆರ್‌ಎಸ್‌ಎಸ್‌ ಪ್ರಚಾರಕ ಲೇಖಕಿ ಲತಾಮಾಲರ ಮೇಲೆ ಬೀರಿದ ಪ್ರಭಾವದ ದಟ್ಟ ವಿವರಣೆಯಿತ್ತು. ಹಾಸನ ಜಿಲ್ಲೆಯ ಅರೇಹಳ್ಳಿ ಗ್ರಾಮದಲ್ಲಿ ಬೆಳೆದ ಆಕೆ ತನ್ನ ಹದಿಹರೆಯದಲ್ಲಿ ಗುರೂಜಿಯವರ ಪಾಂಡಿತ್ಯ ಮತ್ತು ಆಗಿನ ತುರ್ತು ಪರಿಸ್ಥಿತಿಯನ್ನು ಪ್ರಶ್ನಿಸುವ ಅವರ ಸ್ವಭಾವದಿಂದ ಬಹಳವೇ ಪ್ರಭಾವಿತಳಾಗಿದ್ದರು. ಆದರೆ, ತನ್ನ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದ ನಂತರ ದಶಕಗಳ ಕಾಲ ಅದರ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ ಲತಾಮಾಲಾ ಅವರು, ಸಂಘಪರಿವಾರದ ಪ್ರಭಾವ ಮತ್ತು ಪ್ರಜಾಪ್ರಭುತ್ವವನ್ನು ನಾಶಪಡಿಸಿಕೊಂಡು ದ್ವೇಷ ಮತ್ತು ಹಿಂಸಾಚಾರವನ್ನು ಉತ್ತೇಜಿಸುವ ಅದರ ಕಾರ್ಯಕ್ರಮಗಳನ್ನು ಟೀಕಿಸಲು ನಿರ್ಧರಿಸಿದರು. ಕೆ.ಪಿ.ಸುರೇಶ್, ಶಿವಸುಂದರ್ ಮತ್ತು ದೇವನೂರು ಮಹಾದೇವ ಅವರೊಂದಿಗೆ ಈ ವಿಚಾರವನ್ನು ಹಂಚಿಕೊಂಡಾಗ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆಯೂ ದೊರಕುತ್ತದೆ. ಹಿಂದುತ್ವದ ಅಜೆಂಡಾವನ್ನು ಹೇಗೆಲ್ಲ ಪ್ರಚಾರ ಮಾಡಲಾಗಿದೆ ಮತ್ತು ಅದು ಪೂರ್ತಿ ಭಾರತಕ್ಕೆ ಮತ್ತು ನಮ್ಮ ಸುತ್ತಲ ಸಮಾಜಕ್ಕೆ ಯಾವೆಲ್ಲ ತಂತ್ರಗಳನ್ನು ಬಳಸಿದೆ ಎಂಬುದನ್ನೆಲ್ಲ ಒಳಗೊಂಡಿರುವುದರಿಂದ ಇದು ಪ್ರಕಟಿಸಲೇಬೇಕಾದ ಸಮಯೋಚಿತ ಕೃತಿ ಎಂದು ಅವರೆಲ್ಲ ಅಭಿಪ್ರಾಯ ಪಟ್ಟರು. ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಸೂಕ್ಷ್ಮ ಮತ್ತು ಆಳ ಒಳನೋಟವುಳ್ಳ ಪರಿಚಯವನ್ನು ಬರೆದರು. ಅಭಿರುಚಿ ಪ್ರಕಾಶನದ ಗಣೇಶ್ ಅವರ ಬೆಂಬಲ ಮತ್ತು ತ್ವರಿತ ಪ್ರಕಟಣೆಯಿಂದಾಗಿ ಪುಸ್ತಕವು ಈಗ ಪ್ರಕಟವಾಗಿ ಮಾರ್ಚ್ 31, 2024 ರಂದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಬಿಡುಗಡೆಗೊಂಡಿತು.

ಅಭಿವೃದ್ಧಿ ತರಬೇತಿಯಲ್ಲಿ ಪರಿಣಿತರಾದ ಲತಾಮಾಲಾ ಅವರು ಆರ್‌ಎಸ್‌ಎಸ್-ಬಿಜೆಪಿ ಪ್ರಸಾ]ರ ಮಾಡುತ್ತಿರುವ ಸಿದ್ಧಾಂತ, ಅದರ ಸಂಸ್ಥೆಗಳು, ಜಾಲಗಳು ಮತ್ತು ಸಂಸ್ಕೃತಿಯ ಒಟ್ಟು ವಿಮರ್ಶೆಯನ್ನು ಒದಗಿಸಲು ತಮ್ಮ ಗಣನೀಯ ಸಂಶೋಧನೆ ಮತ್ತು ವಿಮರ್ಶಾತ್ಮಕ ಕೌಶಲ್ಯಗಳನ್ನು ಇಲ್ಲಿ ಬಳಸಿಕೊಂಡಿದ್ದಾರೆ. ಇದನ್ನು ಓದುವಾಗ ದೇಶದ ದಿಕ್ಕುದೆಸೆ ೧೯೯೨ರ ನಂತರ ಹೇಗೆ ಬದಲಾಯಿತು ಎಂಬುದರ ಸ್ಪಷ್ಟ ಚಿತ್ರಣ ನಮಗೆ ದೊರಕುತ್ತದೆ. ೧೯೯೨ ಅಂದರೆ ಬಾಬರಿ ಮಸೀದಿ ಧ್ವಂಸಗೊಳಿಸಲ್ಪಟ್ಟ ವರ್ಷ; ಈಗ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಹವ್ಯಾಹತವಾಗಿ ತರುತ್ತಿರುವ ಧಾರ್ಮಿಕ ರಾಷ್ಟ್ರೀಯತೆಯ ಆಗಮನದ ಸ್ಪಷ್ಟ ಮುನ್ಸೂಚನೆ ಕೊಟ್ಟ ವರ್ಷ. ಆದರೂ, ಆ ಕಾಲದಲ್ಲಿ ನಾವು ಅನೇಕರು ಸರ್ವಾಧಿಕಾರ ಮತ್ತು ಹಿಂದೂ ರಾಷ್ಟ್ರೀಯತೆ ಬಹಳ ದೂರದ ಸಂಗತಿಗಳು ಎಂದು ನಂಬಿಕೊಂಡಿದ್ದೆವು. ನಮ್ಮ ಸಾಂಸ್ಕೃತಿಕ ವೈವಿಧ್ಯತೆ, ಧಾರ್ಮಿಕ ವೈಶಿಷ್ಟ್ಯಗಳು, ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ನಮ್ಮ ಚುನಾವಣಾ ಪ್ರಜಾಪ್ರಭುತ್ವದಂತಹ ಶಕ್ತಿಶಾಲಿ ಆಡಳಿತ ಸಂಸ್ಥೆಗಳು ಈ ಧಾರ್ಮಿಕ ರಾಷ್ಟ್ರೀಯತೆಯ ವಿರುದ್ಧ ಶಕ್ತಿಶಾಲಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಭಾವಿಸಿದ್ದೆವು. ಆದರೆ, ಜನವರಿ 2024 ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯೊಂದಿಗೆ, ಕಳೆದ ದಶಕದಲ್ಲಿ ಪ್ರಜಾಪ್ರಭುತ್ವದ ಪ್ರಮುಖ ಸಂಸ್ಥೆಗಳ ನಿರಂತರ ಅವನತಿ, ಹಿಂದೂ ರಾಷ್ಟ್ರೀಯತೆಯನ್ನು ಬೆಂಬಲಿಸಲು ಕಾರ್ಪೊರೇಟ್ ಸಂಸ್ಥೆಗಳು ಮತ್ತು ಮಾಧ್ಯಮಗಳ ಸಹಯೋಗ ಎಲ್ಲವೂ ಸೇರಿಕೊಂಡು ಬಿಜೆಪಿಗೆ ಸರ್ವಾಧಿಕಾರವನ್ನು ದಯಪಾಲಿಸುತ್ತಿವೆ. ಇದೆಲ್ಲದರ ಜೊತೆಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು, ದಲಿತರು ಮತ್ತು ಮಹಿಳೆಯರ ವಿರುದ್ಧ ಹಿಂಸೆಯ ವಿವಿಧ ರೂಪಗಳನ್ನು ಅದು ಪ್ರಯೋಗಿಸುತ್ತಿದೆ. ಲತಾಮಾಲಾ ಅವರು ಸರಿಯಾಗಿ ಹೇಳುವಂತೆ, ಹಿಂದೂ ರಾಷ್ಟ್ರದೆಡೆಗಿನ ದಾರಿಗಳು ಹಿಂಸಾತ್ಮಕ ಹೆಜ್ಜೆಗುರುತುಗಳಿಂದಲೇ ಕೂಡಿವೆ.

ಲತಾಮಾಲಾ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿ ಸೇರಿಕೊಂಡು ನಡೆಸತ್ತಿರುವ ವಿವಿಧ ಕಾರ್ಯಕ್ರಮಗಳು, ಅವರ ಅಜೆಂಡಾಗಳು ಮತ್ತು ಹರಡಿರುವ ತಪ್ಪು ಮಾಹಿತಿಗಳಿಗೆ ಸಂಬಂಧಿಸಿದಂತೆ ಒದಗಿಸುವ ಎಲ್ಲಾ ವಿವರಗಳು ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಸಂಕೀರ್ಣ ಮತ್ತು ವಿರೋಧಾತ್ಮಕ ವಿವರಗಳನ್ನು ತೆರೆದಿಡುತ್ತಾರೆ. ಇವುಗಳಲ್ಲಿ ಶ್ರೇಣೀಕೃತ ಮತ್ತು ಪ್ರತ್ಯೇಕತಾ ಸಂಸ್ಕೃತಿಯ ಜಾತಿ ವ್ಯವಸ್ಥೆಯನ್ನು ಮರುಸ್ಥಾಪಿಸುವುದು, ತಮ್ಮ ನ್ಯಾಯಯುತ ಸಂಪನ್ಮೂಲಗಳು ಮತ್ತು ಆಸ್ತಿ ಸಂಪಾದನೆಯಿಂದ ವಂಚಿತರಾದ, ಅಂಚಿಗೆ ತಳ್ಳಲ್ಪಟ್ಟವರನ್ನು ತಮ್ಮ ರಾಜಕಾರಣಕ್ಕಾಗಿ ಆರ್‌ಎಸ್‌ಎಸ್‌-ಬಿಜೆಪಿ ಅಜೆಂಡಾಗಳ ಸಕ್ರಿಯ ಪಾಲುದಾರರನ್ನಾಗಿಸುವುದು ಮುಖ್ಯವಾದವು . ಸುಳ್ಳುಸುದ್ದಿಗಳು ಮತ್ತು ತಪ್ಪು ಮಾಹಿತಿಗಳನ್ನು ಬಳಸಿಕೊಂಡು ಮುಸ್ಲಿಮರ ವಿರುದ್ಧ ದ್ವೇಷ ಬೆಳೆಸುವ ಹಸನಾದ ವ್ಯವಸ್ಥೆಯನ್ನು ಹೇಗೆ ರೂಪಿಸುತ್ತದೆ ಎಂದು ಲತಾಮಾಲಾ ಅವರು ಬಹಳ ವಿವರವಾಗಿ ಮತ್ತು ಸೂಕ್ಷ್ಮವಾಗಿ ಇಲ್ಲಿ ವಿವರಿಸಿದ್ದಾರೆ. ಮುಸ್ಲಿಮರ ವಿರುದ್ಧ ಮಾಡಿದ ‘ಲವ್ ಜಿಹಾದ್’, ‘ಕರೋನಾ ಜಿಹಾದ್’ ಮತ್ತು ‘ಆರ್ಥಿಕ ಜಿಹಾದ್’ ತರಹದ ಸುಳ್ಳು ಸುದ್ದಿಗಳನ್ನು ಉದಾಹರಿಸುತ್ತಾರೆ.

ಈ ಪುಸ್ತಕದ ಕೊನೆಯ ಅಧ್ಯಾಯ ಮೋದಿಯವರಿಗೆ ಸಾರ್ವಜನಿಕ ಪತ್ರವಾಗಿದೆ. ಅದರಲ್ಲಿ ಲತಾಮಾಲಾ ಅವರು ಜನರ ಮನದ ಮಾತುಗಳನ್ನು ಕೇಳಿಸಿಕೊಳ್ಳುವಂತೆ ಕೇಳಿಕೊಳ್ಳುತ್ತಾರೆ. ಜೊತೆಗೆ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ, ಪತನಮುಖಿ ಪ್ರಜಾಪ್ರಭುತ್ವ, ಕಾನೂನಿನ ಬದಲಿಗೆ ʼಬುಲ್ಟೋಜರ್‌ʼಗಳ ಬಳಕೆ, ಬಿಲ್ಕೀಸ್ ಬಾನು ತರಹದ ಹೆಣ್ಣನ್ನು ಮುಸ್ಲಿಂ ಎಂದು ನೋಡದೆ ಒಬ್ಬ ಹೆಣ್ಣು ಮಗಳಾಗಿ ನೋಡಬೇಕಾದ ಅಗತ್ಯತೆ, ದೇಶಕ್ಕೆ ಮತ್ತು ನಮ್ಮ ಸುತ್ತಲ ಸಮಾಜಕ್ಕೆ ಹಿಂದುತ್ವದಿಂದ ಬಂದರೆಗುವ ಅಪಾಯ ಮತ್ತು ಕೊನೆಯದಾಗಿ, ನಮ್ಮ ಮಕ್ಕಳು ಅವರ ಕಾಲಾಳುಗಳಾಗಿಯೋ ಬಲಿಪಶುಪಶುಗಳಾಗಿಯೋ ಬದಲಾಗದಿರುವಂತೆ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ನಮಗೆಲ್ಲರಿಗೂ ಈ ಅಧ್ಯಾಯದಲ್ಲಿ ಕರೆ ನೀಡುತ್ತಾರೆ. ಈ ಪುಸ್ತಕವನ್ನು ಬರೆದಿರುವ ಲತಾಮಾಲ ಅವರು ತಮ್ಮ ಪ್ರತಿರೋಧವನ್ನು ದಾಖಲಿಸಿರುವುದಕ್ಕೆ ಮಾತ್ರವಲ್ಲ, ಪ್ರಭುತ್ವಕ್ಕೆದುರಾಗಿ ಸತ್ಯವನ್ನು ನುಡಿದಿರುವುದಕ್ಕಾಗಿಯೂ ಅಭಿನಂದನಾರ್ಹರು. ಭಯಾಂತಕ ಮತ್ತು ಉದಾಸೀನತೆಗಳು ನಮ್ಮಲ್ಲಿ ಅನೇಕರನ್ನು ಮೂಕರನ್ನಾಗಿಸಿರುವಾಗ ಲತಾಮಾಲಾ ಅವರು  ದ್ವೇಷ ಮತ್ತು ಹಿಂಸೆಯ ಪ್ರಭುತ್ವಕ್ಕೆ ನಮ್ಮೆಲ್ಲರ ವೈಯಕ್ತಿಕ ಮತ್ತು ಸಾಮೂಹಿಕ ಪ್ರತಿರೋಧದ ಕರೆಯನ್ನು ನೀಡಿದ್ದಾರೆ.

ಏ.ಆರ್.‌ ವಾಸವಿ

Translated by: ಸುನೈಫ್‌ ವಿಟ್ಲ

Related Articles

ಇತ್ತೀಚಿನ ಸುದ್ದಿಗಳು