Thursday, June 20, 2024

ಸತ್ಯ | ನ್ಯಾಯ |ಧರ್ಮ

ವಿಶ್ವವಿದ್ಯಾಲಯ ಉಳಿದರೆ ನಿಮ್ಮ ಮಕ್ಕಳ ಜೀವ, ಜೀವನ ಉಳಿದಂತೆ: ಎಸ್‌ಡಿಪಿಐ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವೆಂದರೆ ಅದೊಂದು ಧರ್ಮ ಜಾತಿಗಳ ಸಂಘರ್ಷದ ಕೊಂಪೆ ಎನ್ನುವ ಆರೋಪ ಹೇರಿ, ವಿಶ್ವವಿದ್ಯಾಲಯದ ಘನತೆ ಹಾಳುಮಾಡಿ, ಅಶಾಂತಿ ಸೃಷ್ಟಿಸಿ ವಿಶ್ವವಿದ್ಯಾಲಯವನ್ನು ವಿವಾದಿತ ಕೇಂದ್ರವನ್ನಾಗಿ ಮಾಡಿಬಿಡುವ ಸಂಚು ನಡೆಯುತ್ತಿದೆ ಎಂದು ಸೋಷಿಯಲ್‌ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (SDPI) ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ಭಾಸ್ಕರ್ ಪ್ರಸಾದ್  ಆರೋಪಿಸಿದ್ದಾರೆ.

ಕೇವಲ ಸಣ್ಣದೊಂದು ದೇವಸ್ಥಾನ ನಿರ್ಮಿಸಿದರೆ ಏನಾಗಿಬಿಡುತ್ತದೆ ?ಎಂದು ಪ್ರಶ್ನೆ ಮಾಡುವವರಿಗೆ ಗೊತ್ತಿರಲಿ. ಮುಂದೆ ಇದು ಕೇವಲ ಒಂದು ದೇವಸ್ಥಾನದ ಪ್ರಶ್ನೆಯಾಗಿ ಮಾತ್ರ ಉಳಿದು ಬಿಡಲ್ಲ.‌ ಈ ನಾಡಿನ ಸಮಸ್ತ ಬಡವರು, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮಕ್ಕಳ ಭವಿಷ್ಯದ ಪ್ರಶ್ನೆಯಾಗಲಿದೆ ಎಂದು ಭಾಸ್ಕರ್ ಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. 

ತಮ್ಮ ಮಕ್ಕಳನ್ನು ಬೇಕಿದ್ದರೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಅಥವಾ ಅದಕ್ಕೂ ಮೀರಿ ವಿದೇಶಗಳಿಗೆ ಕಳಿಸಿ ಅವರ ಬಾಳು ಹಸನು ಮಾಡಬಲ್ಲ  ಈ ದೇಶದ ಮನುವ್ಯಾದಿ ವ್ಯವಸ್ಥೆಯು, ಈ ಸಣ್ಣ ದೇವಸ್ಥಾನದ ವಿಚಾರವನ್ನೇ ಹಂತ ಹಂತವಾಗಿ ಬೆಳೆಸುತ್ತಾ, ಮುಂದೊಂದು ದಿನ ಇದೇ ಸಮಸ್ಯೆಯನ್ನು, ನಾಡಿನ ಸಮಸ್ತ ವಿದ್ಯಾರ್ಥಿಗಳ ಸಮಸ್ಯೆಯನ್ನಾಗಿ ಪರಿವರ್ತಿಸಿ, ಬೆಂಗಳೂರು ವಿಶ್ವವಿದ್ಯಾಲಯವೆಂದರೆ ಅದೊಂದು ದೇವರು ಧರ್ಮ ಜಾತಿಗಳ ಸಂಘರ್ಷದ ಕೊಂಪೆ ಎನ್ನುವಂತಹ ದಾರಿದ್ರ್ಯವನ್ನೇ  ಸೃಷ್ಟಿಸಿ, ವಿಶ್ವವಿದ್ಯಾಲಯದ ಘನತೆ, ಪ್ರಶಾಂತ ವಾತಾವರಣ ಹಾಗು ರಕ್ಷಣೆಯನ್ನು ಹಾಳು ಮಾಡಿ, ವಿಶ್ವವಿದ್ಯಾಲಯವನ್ನೊಂದು ಶಾಶ್ವತ ವಿವಾದಿತ ಕೇಂದ್ರವನ್ನಾಗಿ ಮಾಡಿ ಬಿಡುವ ಹುನ್ನಾರವಡಗಿದೆ ಎಂದಿದ್ದಾರೆ.

ಆ ಮೂಲಕ ದಲಿತ, ಶೂದ್ರ, ಅಲ್ಪಸಂಖ್ಯಾತ ಹಾಗು ಎಲ್ಲ ಬಡವರ ಮಕ್ಕಳ ಉನ್ನತ ವ್ಯಾಸಂಗದ ಹಕ್ಕು ಮತ್ತು ಅವಕಾಶವನ್ನು ಕಿತ್ತುಕೊಂಡು, ತಮ್ಮ ಮನುವಾದಿ ಜಾತಿಯ ಮಕ್ಕಳ ಅಡಿಯಾಳಾಗಿ ಇತರೆ ಜಾತಿ ಧರ್ಮದ ಮಕ್ಕಳು ಸಾಯಲೆಂಬುದೇ ಇದರ ಹಿಂದಿರುವ ಮನುವಾದಿ‌ ಸಂಘಟನೆಗಳ ಹುನ್ನಾರ‌ ಎಂದು ಭಾಸ್ಕರ್ ಪ್ರಸಾದ್ ದೂರಿದ್ದಾರೆ.

ದೇವರು ದಿಂಡಿರು ಯಾರಿಗೆ ಬೇಕಿದೆಯೋ ಅವರು ದೇವಸ್ಥಾನಗಳಿಗೆ ಹೋಗುತ್ತಾರೆ. ತಮ್ಮ ಮನೆ ಮಠಗಳಲ್ಲಿ ಆಚರಿಸಿಕೊಳ್ಳುತ್ತಾರೆ. ಇದನ್ಯಾರೂ ಬೇಡ ಎನ್ನುತ್ತಿಲ್ಲ. ವಿಶ್ವವಿದ್ಯಾಲಯ, ವಿಶ್ವವಿದ್ಯಾಲಯವಾಗಿ ಮಾತ್ರವೇ ಉಳಿಯಲಿ ಹೊರತು, ಮನುವಾದಿಗಳ ತಟ್ಟೆ ಕಾಸಿನ ಗಂಜಿ ಕೇಂದ್ರವಾಗದಿರಲಿ ಅಷ್ಟೇ. ಅಯ್ಯೋ ನಮಗ್ಯಾಕೆ ಬೇಕಪ್ಪ ಇದೆಲ್ಲಾ ಎಂದು ಜವಾಬ್ದಾರಿ ಮರೆತು ಮಾತಾಡುವವರಿಗೆ ಚೆನ್ನಾಗಿ ಗೊತ್ತಿರಲಿ. ನೀವು ನಿಮ್ಮ ಮಕ್ಕಳ ಭವಿಷ್ಯಕ್ಕೆ ಕಂಟಕರಾಗಲಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಹೋರಾಟದ ಪ್ರತಿರೋಧಕ್ಕೆ SDPI ನಿಮ್ಮ ಜೊತೆ ಇರಲಿದೆ ಎಂದು ಭರವಸೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು