ಸೆಪ್ಟೆಂಬರ್ 26 ರಂದು ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಹುಬ್ಬಳ್ಳಿಗೆ ಬೇಟಿ ನೀಡುತ್ತಿದ್ದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಇವರಿಗೆ ಪೌರಸನ್ಮಾನ ಮಾಡಿ ಗೌರವಿಸಲಿದೆ.
ಬೆಳಗ್ಗೆ 11 ಗಂಟೆಗೆ ಸನ್ಮಾನ ಕಾರ್ಯಕ್ರಮ ನಡೆಯಲಿರುವ ಹುಬ್ಬಳ್ಳಿಯ ಜಿಮ್ಖಾನ ಮೈದಾನ ಒಂದು ವಿವಾದಿತ ಸ್ಥಳವಾಗಿದೆ. ವಿವಾದಿತ ಮೈದಾನದಲ್ಲಿ ರಾಷ್ಟ್ರಪತಿಯವರಿಗೆ ಸನ್ಮಾನ ಏರ್ಪಡಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
ಏನು ಜಿಮ್ಖಾನ ಮೈದಾನ ವಿವಾದ?
1915 ರಲ್ಲಿ ಬ್ರಿಟಿಷ್ ಆಡಳಿತದಲ್ಲಿ ಆಟಕ್ಕಾಗಿ ಜಿಮ್ಖಾನ ಮೈದಾನವನ್ನು ಮೀಸಲಿಡಲಾಗಿತ್ತು. 2008 ರ ವರೆಗೆ ಈ ಮೈದಾನವನ್ನು ಸಾರ್ವಜನಿಕರು ಬಳಸುತ್ತಿದ್ದರು.
2011ರಲ್ಲಿ 200 ಕೋಟಿ ರೂಪಾಯಿ ಬೆಲೆ ಬಾಳುವ ಮೈದಾನದಲ್ಲಿ ಕರ್ನಾಟಕ ಜಿಮ್ಖಾನ ಅಸೋಸಿಯೇಶನ್ ಕಾನೂನು ಬಾಹಿರವಾಗಿ ಕ್ಲಬ್ ಒಂದನ್ನು ತೆರೆದಿದೆ. ನಗರದ ಹೃದಯ ಭಾಗದಲ್ಲಿ ಇರುವ ಈ ಮೈದಾನವನ್ನು ಉಳಿಸಲು ಕೆಜಿಎ ವಿರುದ್ಧ 2012ರಿಂದ ನಾಗರಿಕರು ಗ್ರೌಂಡ್ ಬಚಾವೋ ಸಮಿತಿಯ ಅಡಿಯಲ್ಲಿ ಪ್ರತಿಭಟನೆ ನಡೆಸಿತ್ತಾ ಬಂದಿದೆ. ಅಲ್ಲದೇ ನ್ಯಾಯಾಲಯದ ಮೊರೆ ಹೋಗಿತ್ತು.
ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುತ್ತಿರುವ ಅಕ್ರಮವನ್ನು ವಿರೋಧಿಸಿ
ಗ್ರೌಂಡ್ ಬಚಾವೋ ಸಮಿತಿ ಪ್ರತಿಭಟನೆಗಳನ್ನು ನಡೆಸಿತ್ತು. ಕ್ಲಬ್ ತೆರೆದು ಜನಸಾಮಾನ್ಯರಿಗೆ ಪ್ರವೇಶ ನೀಡದೆ ಕೇವಲ ಕ್ಲಬ್ ನ ಸದಸ್ಯರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. ಸದಸ್ಯರಲ್ಲದವರು ಈ ಕ್ಲಬನ್ನು ನೋಡಬಾರದು ಎಂಬ ಉದ್ದೇಶದಿಂದ ಸುತ್ತ ಮುಚ್ಚಗೆ ಹಾಕಲಾಗಿತ್ತು. ಐದು ಲಕ್ಷ ಸದಸ್ಯತ್ವ ಶುಲ್ಕ ನೀಡಿದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.
2013-2015 ರಲ್ಲಿ ನಡುವೆ ನಡೆದ ಸತತ ಪ್ರತಿಭಟನೆಯ ಕಾರಣದಿಂದಾಗಿ ಸಾರ್ವಜನಿಕರಿಗೆ ಮೈದಾನದ ಒಳಗಡೆ ಬೆಳಗ್ಗೆ ಹಾಗೂ ಸಂಜೆ 5 ರಿಂದ 7 ಗಂಟೆಯ ತನಕ ವಾಕಿಂಗ್ ಹೋಗಲು ಅವಕಾಶ ನೀಡಲಾಗಿದೆ.
ಕೆಜಿಎ ಜಿಮ್ಖಾನ ಮೈದಾನದ ಏಳು ಎಕರೆ ಭೂಮಿಯಲ್ಲಿ ಕ್ರಿಕೆಟ್ ಆಟಕ್ಕೆ ಹಾಗೂ ತರಬೇತಿ ಶಿಬಿರಗಳು ಮೀಸಲಿಟ್ಟಿತ್ತು. ಈಗ ಈ ಮೈದಾನದಲ್ಲಿ ಬಾರ್ ತೆರೆದಿದ್ದಾರೆ. ಇದಲ್ಲದೆ ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಪಾ ಮಸಾಜ್ ಸೆಂಟರ್, ಪಾರ್ಟಿ ಹಾಲ್, ಅತಿಥಿ ಕೋಣೆಗಳು, ಟೆನ್ನಿಸ್ ಕೋರ್ಟ್, ಟೇಬಲ್ ಟೆನ್ನಿಸ್ ಕೋರ್ಟ್ ತೆರೆದಿದ್ದಾರೆ. ಝುಂಬಾ, ಏರೋಬಿಕ್, ಯೋಗ, ಸ್ವಿಮ್ಮಿಂಗ್ ಪೂಲ್ ಇತ್ಯಾದಿಗಳಿವೆ. ಮೈದಾನದಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಕಾನೂನು ಬಾಹಿರವಾಗಿ ಕ್ಲಬ್ ನ ಒಳಗಡೆ ಬಾರ್ ತೆರೆಯಲಾಗಿದೆ.
ಪ್ರಭಾವಿಗಳ ಕೈವಾಡದಿಂದಾಗಿ ಆಟದ ಮೈದಾನದಲ್ಲಿ ಲಕ್ಸುರಿ ಕ್ಲಬ್!
ಸಾರ್ವಜನಿಕರ ಬಳಕೆಗಾಗಿ ಪಾಲಿಕೆಯಲ್ಲಿ ಮೀಸಲಿಟ್ಟಿದ್ದ
ಆಟದ ಮೈದಾನದಲ್ಲಿ ಕೆಜಿಎ ತೆರೆದಿರುವ ಲಕ್ಸುರಿ ಕ್ಲಬ್ ನಲ್ಲಿ ಮಾಜೀ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಹಾಗೂ ಅನಂತ್ ಕುಮಾರ್ ಸಹೋದರ ನಂದಕುಮಾರ್ ಅವರ ಕೈವಾಡವಿದೆ ಎಂಬ ಆರೋಪವಿದೆ.
2013ರಲ್ಲಿ ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಶಿ ತಮಗೆ ಕ್ಲಬ್ ನ ಗೌರವ ಹುದ್ದೆ ಹೊಂದಿದ್ದರು. ಪತ್ರಕರ್ತ, ಸಾಹಿತಿ ಪಾಟೀಲ್ ಪುಟ್ಟಪ್ಪ ಅವರ ನೇತೃತ್ವದಲ್ಲಿ ಗ್ರೌಂಡ್ ಬಚಾವೋ ಸಮಿತಿ ನಡೆಸಿದ ಪ್ರತಿಭಟನೆಯ ನಂತರ ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಶಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಹಾಗೂ ಕ್ಲಬ್‌ನ ಚಟುವಟಿಕೆಗಳೊಂದಿಗೆ ಯಾವುದೇ ಸಂಬಂಧವಿಲ್ಲವೆಂದು ಘೋಷಿಸಿದ್ದರು.
ಕೋರ್ಟ್ ನ ತಡೆಯಾಜ್ಞೆ ಇದ್ದರೂ ಈ ವಿವಾದಿತ ಸ್ಥಳದಲ್ಲಿ ಸೆಪ್ಟೆಂಬರ್ 26 ರಂದು ರಾಷ್ಟ್ರಪತಿ ದ್ರೌಪದಿ ಮರ್ಮು ಅವರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಇವರಿಗೆ ಪೌರಸನ್ಮಾನ ಏರ್ಪಡಿಸಿದೆ. ಜನ ಹಿತಕ್ಕೆ ವಿರುದ್ಧವಾಗಿ ಆಟದ ಮೈದಾನವನ್ನು ಖಾಸಗಿ ಕ್ಲಬ್ ಮಾಡಿರುವ ಈ ಮೈದಾನದಲ್ಲಿ ರಾಷ್ಟ್ರಪತಿಗಳಿಗೆ ಸನ್ಮಾನ ಏರ್ಪಡಿಸುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.