ಬೆಂಗಳೂರು: ಬಿಜೆಪಿ ಜೊತೆ ಸೇರಿ ಚುನಾವಣಾ ಆಯೋಗವು “ಮತ ಕಳ್ಳತನ” ಮಾಡಿದೆ ಎಂಬ ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗದ ಮೇಲೆ ಸುಳ್ಳಿನ ಆರೋಪ ಮಾಡುವುದು ಪ್ರಜಾಪ್ರಭುತ್ವಕ್ಕೆ ಕತ್ತು ಹಿಸುಕುವ ದ್ರೋಹದ ಹುನ್ನಾರವಾಗಿದೆ ಮತ್ತು ಇದು ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ ಎಂದು ಅವರು ತೀವ್ರವಾಗಿ ಟೀಕಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, “ಸಾಂವಿಧಾನಿಕ ಸಂಸ್ಥೆಗಳ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಅನುಮಾನದ ಲಾಭ ಪಡೆಯುವ ಕಿಡಿಗೇಡಿಗಳ ಪಿತೂರಿ ಇದು. ಚುನಾವಣೆಯಲ್ಲಿ ಮಾಡಿದ ಪಾಪವನ್ನು ಸುಳ್ಳುಗಳ ಮೂಲಕ ಮುಚ್ಚಿಕೊಳ್ಳುವ ಗೂಬೆಲ್ಸ್ ರಾಜಕಾರಣವನ್ನು ಮಾಡಲಾಗುತ್ತಿದೆ,” ಎಂದು ಹೇಳಿದ್ದಾರೆ.
ಮತ ಕಳ್ಳತನಕ್ಕೆ ಇರುವ ಏಕೈಕ ಪರಿಹಾರವೆಂದರೆ, ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವುದು. ಹಾಗೆ ಮಾಡಿದರೆ, ಮತ ಕಳ್ಳರ ಆಟಕ್ಕೆ ತಡೆ ಬೀಳುವುದು ಖಚಿತ ಎಂದು ಅವರು ಹೇಳಿದ್ದಾರೆ. “ಕೇಂದ್ರೀಯ ಚುನಾವಣಾ ಆಯೋಗಕ್ಕೆ ನನ್ನ ಮನಃಪೂರ್ವಕ ಒತ್ತಾಯವಿದು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಿರಿ,” ಎಂದು ಅವರು ತಿಳಿಸಿದ್ದಾರೆ.