ದೆಹಲಿ: ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ (SIR) ಪ್ರಕ್ರಿಯೆಯ ಕುರಿತ ವಿವಾದಗಳ ನಡುವೆ, ಶೀಘ್ರದಲ್ಲೇ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ಸೇರಿದಂತೆ ಒಟ್ಟು 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಾರಾಂಶ ಪರಿಷ್ಕರಣೆ (SSR – Special Summary Revision) ನಡೆಸಲು ಭಾರತೀಯ ಚುನಾವಣಾ ಆಯೋಗ (ECI) ನಿರ್ಧರಿಸಿದೆ. ಈ ಪರಿಷ್ಕರಣಾ ಪ್ರಕ್ರಿಯೆಗೆ 2027ರ ಜನವರಿ 1 ದಿನವನ್ನು ಮೊದಲ ದಿನಾಂಕವನ್ನಾಗಿ ನಿಗದಿಪಡಿಸಲಾಗಿದೆ ಎಂದು ಚುನಾವಣಾ ಆಯೋಗವು ಆಯಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದೆ.
ಯುವಕರು ಮತ್ತು ಮೊದಲ ಬಾರಿಗೆ ಮತದಾನದ ಹಕ್ಕು ಪಡೆಯುವ ಹೊಸ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸುವುದು, ಹಾಲಿ ಮತದಾರರ ವಿವರಗಳಲ್ಲಿರುವ ದೋಷಗಳನ್ನು ಸರಿಪಡಿಸುವುದು ಹಾಗೂ ಪಟ್ಟಿಯನ್ನು ನವೀಕರಿಸಿ ನಿಖರವಾಗಿಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳ ಅವಧಿ ಮುಂದಿನ ವರ್ಷ ಮೇ 22ಕ್ಕೆ ಮುಕ್ತಾಯಗೊಳ್ಳಲಿದ್ದು, ಮಣಿಪುರ (60), ಗೋವಾ (40), ಪಂಜಾಬ್ (117) ಮತ್ತು ಉತ್ತರಾಖಂಡ (70) ವಿಧಾನಸಭೆಗಳ ಅವಧಿ ಮುಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ಅಂತ್ಯಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಈ ಪರಿಷ್ಕರಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ.
SIR ಮತ್ತು SSR ನಡುವಿನ ವ್ಯತ್ಯಾಸ:
ಸಾಮಾನ್ಯವಾಗಿ SSR ಅಡಿಯಲ್ಲಿ ಹೊಸ ಮತದಾರರ ನೋಂದಣಿ ಹಾಗೂ ವಿವರಗಳ ತಿದ್ದುಪಡಿಗೆ ಒತ್ತು ನೀಡಲಾಗುತ್ತದೆ; ಉದಾಹರಣೆಗೆ ವಿಳಾಸ ಬದಲಿಸಿದ ಮತದಾರರು ತಾವೇ ಖುದ್ದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆದರೆ SIR (ವಿಶೇಷ ತೀವ್ರ ಪರಿಷ್ಕರಣೆ) ಇದಕ್ಕಿಂತಲೂ ಆಳವಾದ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಅಧಿಕಾರಿಗಳು ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಾರೆ. ಬೂತ್ ಮಟ್ಟದ ಅಧಿಕಾರಿಗಳು (BLO) ಖುದ್ದು ಸ್ಥಳಕ್ಕೆ ಭೇಟಿ ನೀಡಿ ವ್ಯಕ್ತಿ ಅಲ್ಲಿಯೇ ವಾಸಿಸುತ್ತಿದ್ದಾರೆಯೇ ಎಂದು ದೃಢಪಡಿಸಿಕೊಳ್ಳುವುದರ ಜತೆಗೆ, ಮತದಾರರು ಅರ್ಜಿ ಸಲ್ಲಿಸುವವರೆಗೂ ಕಾಯದೆ ಕ್ಷೇತ್ರ ಮಟ್ಟದ ನೈಜ ಪರಿಶೀಲನೆಯ ಆಧಾರದ ಮೇಲೆ ಪಟ್ಟಿಯನ್ನು ನವೀಕರಿಸುತ್ತಾರೆ.
ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್:
ಮತ್ತೊಂದೆಡೆ, ಕಳೆದ ಚುನಾವಣೆಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ‘ಇಂಡಿಯಾ’ ಮೈತ್ರಿಕೂಟದ ೧೨ಕ್ಕೂ ಹೆಚ್ಚು ನಾಯಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಭಾರತೀಯ ಚುನಾವಣಾ ಆಯೋಗ ಮತ್ತು ಮೂವರು ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದೆ. ಚುನಾವಣಾ ವ್ಯವಸ್ಥೆ ಹಾಗೂ ಅಕ್ರಮಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕೆಂದು ಈ ಅರ್ಜಿಯಲ್ಲಿ ಕೋರಲಾಗಿದೆ. ಇದೇ ವೇಳೆ, ನವದೆಹಲಿಯ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಕೈಬಿಟ್ಟಿರುವ ಕುರಿತಂತೆ ವಿವರಣೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರಿಗೂ ನೋಟಿಸ್ ನೀಡಿದೆ.
