ಟಿಎಂಸಿ, ಡಿಎಂಕೆ ಅಂತಹ ಪ್ರಾದೇಶಿಕ ಪಕ್ಷಗಳೊಂದಿಗೆ ಬಿಜೆಪಿ, ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ಅತ್ಯಂತ ನಿರ್ಣಾಯಕವಾಗಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಮತ ಎಣಿಕೆಯು ಸೋಮವಾರ ನಡೆಯಲಿದೆ.
ಮೂರು ಹಂತದ ಭದ್ರತಾ ವ್ಯವಸ್ಥೆ ಹೊಂದಿರುವ ಎಣಿಕಾ ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಪೋಸ್ಟಲ್ ಬ್ಯಾಲೆಟ್‌ಗಳೊಂದಿಗೆ ಪ್ರಕ್ರಿಯೆ ಆರಂಭವಾಗಲಿದೆ. ಮೊದಲ ಬಾರಿಗೆ ಎಣಿಕಾ ಕೇಂದ್ರಗಳೊಳಗೆ ಅನಧಿಕೃತ ಪ್ರವೇಶ ತಡೆಯಲು ಚುನಾವಣಾ ಆಯೋಗವು ‘ECINET’ ಮೂಲಕ ಕ್ಯೂಆರ್ ಕೋಡ್ ಆಧಾರಿತ ಫೋಟೋ ಗುರುತಿನ ಚೀಟಿ ವ್ಯವಸ್ಥೆಯನ್ನು ಪರಿಚಯಿಸಿದೆ. ಪಶ್ಚಿಮ ಬಂಗಾಳದ 293 ವಿಧಾನಸಭಾ ಕ್ಷೇತ್ರಗಳಿಗೆ 77 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.
ಈ ಬಾರಿ ಊಹಿಸಲಾಗದ ರೀತಿಯಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಫಲಿತಾಂಶದ ದಿನದವರೆಗೂ ತೀವ್ರ ವಾಗ್ವಾದಗಳು ನಡೆದಿವೆ. ಆಡಳಿತಾರೂಢ ಟಿಎಂಸಿ ಮತ್ತು ಪ್ರತಿಪಕ್ಷ ಬಿಜೆಪಿ ಎರಡೂ ಮತ ಎಣಿಕೆಯಲ್ಲಿ ಅಕ್ರಮಗಳು ನಡೆಯಬಹುದು ಎಂಬ ಆತಂಕ ವ್ಯಕ್ತಪಡಿಸಿವೆ. ಎರಡು ಹಂತಗಳಲ್ಲಿ ನಡೆದ ಮತದಾನವು ಏಪ್ರಿಲ್ 29ಕ್ಕೆ ಮುಕ್ತಾಯಗೊಂಡಿದೆ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ದಾಖಲೆಯ ಶೇ. 92.47 ರಷ್ಟು ಮತದಾನವಾಗಿದೆ. ದಕ್ಷಿಣ 24 ಪರಗಣ ಜಿಲ್ಲೆಯ ಫಲ್ತಾ ಕ್ಷೇತ್ರದಲ್ಲಿ ತೀವ್ರ ಚುನಾವಣಾ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ಅಲ್ಲಿನ ಚುನಾವಣೆಯನ್ನು ಆಯೋಗವು ರದ್ದುಗೊಳಿಸಿದೆ. ಆ ಕ್ಷೇತ್ರದ ಒಟ್ಟು 285 ಮತದಾನ ಕೇಂದ್ರಗಳಲ್ಲಿ ಮೇ 21 ರಂದು ಮರುಮತದಾನ ನಡೆಯಲಿದೆ.
ಬಂಗಾಳದಲ್ಲಿ ಜಿದ್ದಾಜಿದ್ದಿನ ಹೋರಾಟ ಪ್ರಮುಖ ಪ್ರತಿಪಕ್ಷ ಬಿಜೆಪಿಯಿಂದ ಪ್ರಬಲ ಸವಾಲು ಎದುರಿಸುತ್ತಿರುವ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸತತ ನಾಲ್ಕನೇ ಬಾರಿಗೆ ಗೆಲ್ಲುವ ನಿರೀಕ್ಷೆಯಲ್ಲಿದೆ. ಇತ್ತ 2021ರ ಚುನಾವಣೆಯಲ್ಲಿ ಭಾರಿ ಸೋಲು ಅನುಭವಿಸಿದ್ದ ಸಿಪಿಎಂ ಮತ್ತು ಕಾಂಗ್ರೆಸ್ ಮತ್ತೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿವೆ. ಹುಮಾಯೂನ್ ಕಬೀರ್ ನೇತೃತ್ವದ AJUP ಮತ್ತು ಅಸಾದುದ್ದೀನ್ ಓವೈಸಿ ನೇತೃತ್ವದ AIMIM ಕೂಡ ಕೆಲವು ಪ್ರಮುಖ ಪ್ರದೇಶಗಳಲ್ಲಿ ತಮ್ಮ ಅದೃಷ್ಟ ಪರೀಕ್ಷಿಸುತ್ತಿವೆ. ಈ ಮೊದಲು ಒಟ್ಟು 87 ಎಣಿಕಾ ಕೇಂದ್ರಗಳನ್ನು ಆಯೋಗ ಘೋಷಿಸಿತ್ತಾದರೂ, ಆ ಸಂಖ್ಯೆಯನ್ನು ಈಗ 77ಕ್ಕೆ ಇಳಿಸಿದೆ. 2021ರಲ್ಲಿ ಒಟ್ಟು 107 ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.
ಮತ ಎಣಿಕೆ ಶಾಂತಿಯುತವಾಗಿ, ಪಾರದರ್ಶಕವಾಗಿ ನಡೆಯಲು ಸಮಗ್ರ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, 165 ಹೆಚ್ಚುವರಿ ಎಣಿಕಾ ವೀಕ್ಷಕರನ್ನು ಮತ್ತು 77 ಪೊಲೀಸ್ ವೀಕ್ಷಕರನ್ನು ನೇಮಿಸಲಾಗಿದೆ. ರಿಟರ್ನಿಂಗ್ ಆಫೀಸರ್‌ಗಳು ಮತ್ತು ವೀಕ್ಷಕರನ್ನು ಹೊರತುಪಡಿಸಿ ಉಳಿದವರಿಗೆ ಮೊಬೈಲ್ ಫೋನ್ ಬಳಸುವುದನ್ನು ನಿಷೇಧಿಸಲಾಗಿದೆ.
ಅಸ್ಸಾಂನಲ್ಲಿ ಎನ್‌ಡಿಎ ಹ್ಯಾಟ್ರಿಕ್? ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಹ್ಯಾಟ್ರಿಕ್ ಸಾಧಿಸುವ ನಿರೀಕ್ಷೆಯಲ್ಲಿದೆ. ರಾಜ್ಯದ 126 ವಿಧಾನಸಭಾ ಕ್ಷೇತ್ರಗಳ 722 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಇವಿಎಂಗಳನ್ನು 35 ಜಿಲ್ಲೆಗಳ 40 ಕೇಂದ್ರಗಳಲ್ಲಿ ಸೋಮವಾರ ಬೆಳಿಗ್ಗೆ ತೆರೆಯಲಾಗುವುದು. ಸ್ಟ್ರಾಂಗ್ ರೂಂಗಳ ಭದ್ರತೆಗಾಗಿ 25 ಕಂಪನಿಗಳ ಸಿಆರ್‌ಪಿಎಫ್ ದಳಗಳನ್ನು ನಿಯೋಜಿಸಲಾಗಿದೆ. ಏಪ್ರಿಲ್ 9 ರಂದು ನಡೆದ ಮತದಾನದಲ್ಲಿ ಶೇ. 85.96 ರಷ್ಟು ಮತದಾನವಾಗಿತ್ತು. ಕಣದಲ್ಲಿರುವ ಪ್ರಮುಖರಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೌರವ್ ಗೊಗೊಯ್ ಸೇರಿದ್ದಾರೆ.
ಎಲ್‌ಡಿಎಫ್‌ಗೆ ಹ್ಯಾಟ್ರಿಕ್ ಸಿಗುವುದೇ? ಕೇರಳದಲ್ಲಿ 2024ರ ಲೋಕಸಭಾ ಚುನಾವಣೆ ಮತ್ತು ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪ್ರದರ್ಶನದಿಂದ ಉತ್ಸಾಹದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಎರಡು ಅವಧಿಯಿಂದ ಅಧಿಕಾರದಲ್ಲಿರುವ ಎಲ್‌ಡಿಎಫ್ ಅನ್ನು ಕೆಳಗಿಳಿಸಲು ಬಯಸುತ್ತಿದೆ. ಎಲ್‌ಡಿಎಫ್ ಸೋತರೆ, 1960ರ ನಂತರ ಭಾರತದ ಯಾವುದೇ ರಾಜ್ಯದಲ್ಲಿ ಎಡಪಕ್ಷಗಳು ಅಧಿಕಾರದಲ್ಲಿಲ್ಲದ ಮೊದಲ ಸಂದರ್ಭ ಇದಾಗಲಿದೆ. ರಾಜ್ಯದ 140 ಸೀಟುಗಳಿಗಾಗಿ 883 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. 43 ಸ್ಥಳಗಳಲ್ಲಿ 140 ಎಣಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 2021ರಲ್ಲಿ ಒಂದು ಸೀಟು ಗೆಲ್ಲದ ಬಿಜೆಪಿ ನೇತೃತ್ವದ ಎನ್‌ಡಿಎ ತನ್ನ ಅಸ್ತಿತ್ವ ವಿಸ್ತರಿಸಿಕೊಳ್ಳಲು ಈ ಚುನಾವಣೆಯನ್ನು ಪ್ರಮುಖವೆಂದು ಪರಿಗಣಿಸಿದೆ.
ತಮಿಳುನಾಡಿನಲ್ಲಿ ತ್ರಿಕೋನ ಸ್ಪರ್ಧೆ ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ, ಅದರ ಪ್ರಮುಖ ಎದುರಾಳಿ ಎಐಎಡಿಎಂಕೆ ಜೊತೆಗೆ ನಟ-ರಾಜಕಾರಣಿ ವಿಜಯ್ ನೇತೃತ್ವದ ಟಿವಿಕೆ ಮತ್ತು ತಮಿಳು ರಾಷ್ಟ್ರೀಯವಾದಿ ಸೀಮಾನ್ ನೇತೃತ್ವದ ಎನ್‌ಟಿಕೆ ಅಂತಹ ಹೊಸ ಪಕ್ಷಗಳ ಭವಿಷ್ಯ ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ. ಸತತ ಎರಡನೇ ಬಾರಿಗೆ ಅಧಿಕಾರ ಹಿಡಿಯಲು ಡಿಎಂಕೆ ಹವಣಿಸುತ್ತಿದೆ. ರಾಜ್ಯದ 62 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಇವಿಎಂಗಳಿಗಾಗಿ 234 ಹಾಲ್‌ಗಳು ಮತ್ತು ಪೋಸ್ಟಲ್ ಬ್ಯಾಲೆಟ್‌ಗಳಿಗಾಗಿ 240 ವಿಶೇಷ ಹಾಲ್‌ಗಳನ್ನು ಸಿದ್ಧಪಡಿಸಲಾಗಿದೆ. ಎಐಎಡಿಎಂಕೆ, ಬಿಜೆಪಿ ಪಕ್ಷಗಳು ಎನ್‌ಡಿಎ ಕೂಟದಲ್ಲಿದ್ದರೆ, ಕಾಂಗ್ರೆಸ್, ಡಿಎಂಕೆ ಪಕ್ಷಗಳು ಇಂಡಿಯಾ ಕೂಟದ ಪರವಾಗಿವೆ. ವಿಜಯ್ ನೇತೃತ್ವದ ಟಿವಿಕೆ ಒಂಟಿಯಾಗಿ ಸ್ಪರ್ಧಿಸಿದೆ.
ಪುದುಚೇರಿಯಲ್ಲಿ ಜಯ ಯಾರದ್ದು? ಕೇಂದ್ರಾಡಳಿತ ಪ್ರದೇಶ ಪುದುಚೇರಿಯ 30 ವಿಧಾನಸಭಾ ಸ್ಥಾನಗಳಿಗೆ ಸೋಮವಾರ ಬೆಳಿಗ್ಗೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 9 ರಂದು ನಡೆದ ಮತದಾನದಲ್ಲಿ ದಾಖಲೆಯ ಶೇ. 91.23 ರಷ್ಟು ಮತದಾನವಾಗಿದೆ. 2021ರಲ್ಲಿ ಅಧಿಕಾರ ರಚಿಸಿದ್ದ ಎನ್‌ಡಿಎ ಮತ್ತೊಮ್ಮೆ ಅದೃಷ್ಟ ಪರೀಕ್ಷಿಸುತ್ತಿದ್ದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಕೂಡ ಗೆಲುವಿನ ನಿರೀಕ್ಷೆಯಲ್ಲಿದೆ.
8 ಸ್ಥಾನಗಳಲ್ಲಿ ಉಪಚುನಾವಣಾ ಎಣಿಕೆ ಗೋವಾ, ಕರ್ನಾಟಕ, ನಾಗಾಲ್ಯಾಂಡ್, ಗುಜರಾತ್ ಮತ್ತು ಮಹಾರಾಷ್ಟ್ರದ ಒಟ್ಟು 8 ವಿಧಾನಸಭಾ ಸ್ಥಾನಗಳಿಗೆ ಸೋಮವಾರ ಮತ ಎಣಿಕೆ ನಡೆಯಲಿದೆ. ಗೋವಾದ ಪೋಂಡಾ, ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ, ನಾಗಾಲ್ಯಾಂಡ್‌ನ ಕೋರಿದಾಂಗ್, ತ್ರಿಪುರಾದ ಧರ್ಮನಗರ, ಗುಜರಾತ್‌ನ ಉಮ್ರೆತ್, ಮಹಾರಾಷ್ಟ್ರದ ರಾಹೂರಿ ಮತ್ತು ಬಾರಾಮತಿ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆದಿದ್ದವು.
