ವಕ್ಫ್ ಆಸ್ತಿ ವಿವಾದ: ಬುಲ್ಡೋಜರ್ ಕ್ರಮಕ್ಕೆ ಕಲ್ಕತ್ತಾ ಹೈಕೋರ್ಟ್ ತಡೆ

ಕೋಲ್ಕತ್ತಾದ ಟಾಲಿಗಂಜ್ ಪ್ರದೇಶದಲ್ಲಿ ವಕ್ಫ್ ಆಸ್ತಿಗೆ ಸೇರಿದ ಜಾಗದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಬುಲ್ಡೋಜರ್ ಕ್ರಮ ಆರಂಭವಾಗುವುದಕ್ಕಿಂತ ಕೆಲವೇ ಕ್ಷಣಗಳ ಮುನ್ನ ಕಲ್ಕತ್ತಾ ಹೈಕೋರ್ಟ್ ಮಧ್ಯಪ್ರವೇಶಿಸಿದ್ದು, ಕಟ್ಟಡದ ನಿವಾಸಿಗಳಿಗೆ ಮಧ್ಯಂತರ ಪರಿಹಾರ ನೀಡಿ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ತಡೆ ನೀಡಿದೆ.

ಇದಕ್ಕೂ ಮುನ್ನ ಬೆಳಿಗ್ಗೆಯೇ ಸ್ಥಳಕ್ಕೆ ಬುಲ್ಡೋಜರ್‌ಗಳು ಬಂದಿಳಿದಿದ್ದು, ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್, ಕೇಂದ್ರ ಪಡೆಗಳು, ಕೋಲ್ಕತ್ತಾ ಮಹಾನಗರ ಪಾಲಿಕೆ (ಕೆಎಂಸಿ) ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.

ತೆರವು ಭೀತಿಯ ನಡುವೆ ಸಂತ್ರಸ್ತ ನಿವಾಸಿಯೊಬ್ಬರು ಮಾತನಾಡಿ, “ರಾತ್ರೋರಾತ್ರಿ ಮನೆ ಖಾಲಿ ಮಾಡುವಂತೆ ನಮಗೆ ಸೂಚಿಸಲಾಯಿತು. ಈಗ ನಾವು ಎಲ್ಲಿಗೆ ಹೋಗುವುದು?” ಎಂದು ತಮ್ಮ ಅಳಲು ತೋಡಿಕೊಂಡರು. ಹೈಕೋರ್ಟ್ ಮಧ್ಯಪ್ರವೇಶದ ನಂತರ ನಿವಾಸಿಗಳು ಸದ್ಯಕ್ಕೆ ನಿರಾಳರಾಗಿದ್ದಾರೆ.

ಕುಮಾರ್ ಸಾಹಾ ಎಂಬ ವ್ಯಕ್ತಿಯೊಬ್ಬರು ತೆರವು ಮಾಡಲಾಗುವ ಸ್ಥಳವನ್ನು ಪರಿಶೀಲಿಸಲು ಹೋದಾಗ ಸ್ಥಳೀಯರು ತಮ್ಮ ಮೇಲೆ ಹಲ್ಲೆ ನಡೆಸಿ ಬೆನ್ನಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. “ಇದು ವಕ್ಫ್ ಆಸ್ತಿಯಾಗಿದ್ದು, ಜನರು ಇಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ. ಈ ಹಿಂದೆ ಇದು ಟಿಎಂಸಿ ಪಕ್ಷದ ಕಚೇರಿಯಾಗಿತ್ತು. ಸ್ಥಳೀಯರು ನನ್ನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ,” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು. ಆದರೆ ಈ ಆಸ್ತಿಯೊಂದಿಗೆ ಅಥವಾ ಯಾವುದೇ ಸರ್ಕಾರಿ ಸಂಸ್ಥೆಯೊಂದಿಗೆ ಅವರ ಸಂಬಂಧದ ಬಗ್ಗೆ ಅಧಿಕೃತ ದೃಢೀಕರಣ ದೊರೆತಿಲ್ಲ.

ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜಾ ಬಸು ಚೌಧರಿ ಅವರಿದ್ದ ಏಕಸದಸ್ಯ ಪೀಠವು ತೆರವು ಕ್ರಮದ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಝೋಹೆಬ್ ರೌಫ್, “ಸತೀಶ್ ಮುಖರ್ಜಿ ರಸ್ತೆಯಲ್ಲಿರುವ ಆಸ್ತಿ ಸಂಖ್ಯೆ 51/1ಎ ಮತ್ತು 51/1ಬಿ ಅನ್ನು ತೆರವುಗೊಳಿಸಿ ಧ್ವಂಸಗೊಳಿಸಲು ಪಾಲಿಕೆ ಅಧಿಕಾರಿಗಳು ನೀಡಿದ್ದ ಕಾರಣ ಕೇಳಿ ನೋಟಿಸ್‌ ಅನ್ನು ಪ್ರಶ್ನಿಸಿ ಈ ಹಿಂದೆಯೇ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಆ ಪ್ರಕರಣವಿನ್ನೂ ನ್ಯಾಯಾಲಯದಲ್ಲಿ ಬಾಕಿ ಇದೆ,” ಎಂದು ತಿಳಿಸಿದರು.

ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವಾಗಲೇ, ಶನಿವಾರದಂದು ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೋಲ್ಕತ್ತಾ ಮಹಾನಗರ ಪಾಲಿಕೆ ಕಾಯ್ದೆ 1980ರ ಸೆಕ್ಷನ್ 544 ಮತ್ತು 546ರ ಅಡಿಯಲ್ಲಿ ತೆರವು ನೋಟಿಸ್ ಅಂಟಿಸಿದ್ದಾರೆ ಎಂದು ಅರ್ಜಿದಾರರು ದೂರಿದರು.

ಆ ನೋಟಿಸ್ ಪ್ರಕಾರ, ಭಾನುವಾರ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯ ನಡುವೆ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ನಿವಾಸಿಗಳಿಗೆ ತಿಳಿಸಲಾಗಿತ್ತು. ಸರ್ಕಾರದ ಪರ ಹಾಜರಾದ ವಕೀಲರು, ಪಾಲಿಕೆ ಅಧಿಕಾರಿಗಳ ಕೋರಿಕೆಯ ಮೇರೆಗೆ ಆಡಳಿತವು ಸಹಕಾರ ನೀಡುತ್ತಿದೆ ಎಂದು ತಿಳಿಸಿದರು.

ಎಲ್ಲಾ ಪಕ್ಷಗಳ ವಾದವನ್ನು ಆಲಿಸಿದ ಹೈಕೋರ್ಟ್, “ಕಟ್ಟಡದ ಹೊರಗೋಡೆಗೆ ನೋಟಿಸ್ ಅಂಟಿಸಿದ ಮೇಲಷ್ಟೇ ಅರ್ಜಿದಾರರಿಗೆ ಆದೇಶದ ಬಗ್ಗೆ ಮಾಹಿತಿ ತಿಳಿದಿದೆ ಎಂದು ಹೇಳಲಾಗಿದೆ. ಆದ್ದರಿಂದ, ಈ ಆದೇಶ ಹೊರಬಿದ್ದ ದಿನಾಂಕದಿಂದ ಮುಂದಿನ 30 ದಿನಗಳವರೆಗೆ ಪಾಲಿಕೆ ಅಧಿಕಾರಿಗಳು ತೆರವು ಆದೇಶವನ್ನು ಜಾರಿಗೊಳಿಸಬಾರದು. ಅರ್ಜಿದಾರರಿಗೆ ಆದೇಶದ ಮಾಹಿತಿ ಈಗ ತಿಳಿದಿರುವುದರಿಂದ, ಕಾನೂನಿನ ಪ್ರಕಾರ ಲಭ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಅವರಿಗೆ ಸ್ವಾತಂತ್ರ್ಯವಿದೆ,” ಎಂದು ಆದೇಶಿಸಿತು. ಅಲ್ಲದೆ, ಕೆಎಂಸಿಯ ವಿಶೇಷ ಅಧಿಕಾರಿ (ಕಟ್ಟಡ) ನೀಡಿದ ಆದೇಶದ ಸಾಧಕ-ಬಾಧಕಗಳ ಕುರಿತು ನ್ಯಾಯಾಲಯವು ಯಾವುದೇ ಪರಿಶೀಲನೆ ನಡೆಸಿಲ್ಲ ಮತ್ತು ತನಿಖೆ ನಡೆಸುವಾಗ ಸಂಬಂಧಪಟ್ಟ ಪ್ರಾಧಿಕಾರವು ಅದರ ವ್ಯಾಪ್ತಿ ಮತ್ತು ಪ್ರಭಾವವನ್ನು ಸ್ವತಂತ್ರವಾಗಿ ಪರಿಗಣಿಸಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು