ನವದೆಹಲಿ: ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ (BRICS Summit) ಭಾಗವಹಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ (Xi Jinping), ಫೆಬ್ರವರಿ ಕೊನೆಯಲ್ಲಿ ಆರಂಭವಾದ ಮಧ್ಯಪೂರ್ವ ಸಂಘರ್ಷವು ಯಾವುದೇ ಉದ್ದೇಶವನ್ನಾಗಲಿ ಅಥವಾ ಜಾಗತಿಕ ಹಿತಾಸಕ್ತಿಯನ್ನಾಗಲಿ ಈಡೇರಿಸುತ್ತಿಲ್ಲ ಎಂದು ಹೇಳುವ ಮೂಲಕ ಅಮೆರಿಕ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಈ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಮತ್ತು ಇರಾನ್ ಅಧ್ಯಕ್ಷ ಡಾ. ಮಸೂದ್ ಪೆಜೆಶ್ಕಿಯನ್ ಸೇರಿದಂತೆ ಹಲವು ಜಾಗತಿಕ ನಾಯಕರು ಈ ಶೃಂಗಸಭೆಯಲ್ಲಿ ಉಪಸ್ಥಿತರಿದ್ದಾರೆ.ಮಧ್ಯಪೂರ್ವ ಮತ್ತು ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ಈ ಯುದ್ಧವು ಇಡೀ ಪ್ರದೇಶದ ಜನರಿಗೆ ತೀವ್ರ ನಷ್ಟವನ್ನುಂಟು ಮಾಡಿದೆ ಎಂದು ಶಿನಾ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ. ಇದು ಅಂತರರಾಷ್ಟ್ರೀಯ ಸಮುದಾಯದ ಸಾಮಾನ್ಯ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಸಾರ್ವಭೌಮತೆಯ ಉಲ್ಲಂಘನೆಯನ್ನು ವಿರೋಧಿಸಬೇಕು ಮತ್ತು ಜಾಗತಿಕ ಶಾಂತಿ ಕಾಪಾಡಲು ಒಟ್ಟಾಗಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದ್ದಾರೆ. ಎರಡು ದಿನಗಳ ಭಾರತದ ಭೇಟಿಯಲ್ಲಿರುವ ಕ್ಸಿ ಜಿನ್ಪಿಂಗ್, ಯಾವುದೇ ದೇಶವು ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪವನ್ನು ಸಹಿಸಬಾರದು ಎಂದರು. ಅಲ್ಲದೆ, ಜಾಗತಿಕ ಬಿಕ್ಕಟ್ಟುಗಳನ್ನು ಪರಿಹರಿಸುವಲ್ಲಿ ರಚನಾತ್ಮಕವಾಗಿ ಪಾಲ್ಗೊಳ್ಳುವಂತೆ ಒತ್ತಾಯಿಸಿದರು.ಜತೆಗೆ ಎಲ್ಲಾ ರೂಪದ ರಕ್ಷಣಾತ್ಮಕ ವ್ಯಾಪಾರ ನೀತಿಯನ್ನು ಬ್ರಿಕ್ಸ್ ರಾಷ್ಟ್ರಗಳು ಬಲವಾಗಿ ವಿರೋಧಿಸಬೇಕು ಎಂದ ಅವರು, ವಿಶ್ವ ವ್ಯಾಪಾರ ಸಂಸ್ಥೆಯನ್ನು (WTO) ಕೇಂದ್ರವಾಗಿಟ್ಟುಕೊಂಡು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ಬೆಂಬಲಿಸಬೇಕಿದೆ ಎಂದು ಪ್ರತಿಪಾದಿಸಿದರು.
ಅಮೆರಿಕ-ಚೀನಾ ವಾಣಿಜ್ಯ ಪೈಪೋಟಿ ಹಾಗೂ ಇರಾನ್ ಬಿಕ್ಕಟ್ಟು
ಚೀನಾ ಅಧ್ಯಕ್ಷರು ಸುಮಾರು ಎರಡು ವಾರಗಳಲ್ಲಿ ವಾಷಿಂಗ್ಟನ್ಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆಯು ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಚೀನಾ ಮತ್ತು ಅಮೆರಿಕ ದೀರ್ಘಕಾಲದಿಂದ ವ್ಯಾಪಾರಿ ಪ್ರತಿಸ್ಪರ್ಧಿಗಳಾಗಿದ್ದು, ಇರಾನ್ ಜತೆಗಿನ ಸಂಘರ್ಷದ ವಿಚಾರವಾಗಿ ಬೀಜಿಂಗ್ ಈಗಾಗಲೇ ವಾಷಿಂಗ್ಟನ್ ಅನ್ನು ಬಹಿರಂಗವಾಗಿ ಟೀಕಿಸುತ್ತಾ ಬಂದಿದೆ.ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಇರಾನ್ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡಿದೆ. ಇರಾನ್ಗೆ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರ ಹೊಂದಲು ಅವಕಾಶ ನೀಡುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ವಿಶ್ವದ ಒಟ್ಟು ಕಚ್ಚಾ ತೈಲ ಪೂರೈಕೆಯ ಐದನೇ ಒಂದು ಭಾಗ ಸಾಗುವ, ಇರಾನ್ ಮತ್ತು ಒಮಾನ್ ನಡುವಿನ ಕಿರಿದಾದ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವಂತೆ ಟ್ರಂಪ್ ಆಡಳಿತ ಇರಾನ್ಗೆ ತಾಕೀತು ಮಾಡಿದೆ.ಆದರೆ, ಹಾರ್ಮುಜ್ ಜಲಸಂಧಿ ತನ್ನ ನಿಯಂತ್ರಣದಲ್ಲಿದೆ ಎಂದು ಇರಾನ್ ಸಮರ್ಥಿಸಿಕೊಂಡಿದೆ. ಜತೆಗೆ ತನ್ನ ಪರಮಾಣು ಕಾರ್ಯಕ್ರಮವು ಸಂಪೂರ್ಣವಾಗಿ ನಾಗರಿಕ ಬಳಕೆಗೆ ಮಾತ್ರ ಎಂದು ಸ್ಪಷ್ಟಪಡಿಸಿರುವ ಇರಾನ್, ತನ್ನ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸದಂತೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.
