ಪುಣೆ: ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ ಮತ್ತು ಪಾಕಿಸ್ತಾನ ನಡುವೆ ಕಳೆದ ಶನಿವಾರ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಆದರೆ, ಇದಕ್ಕೆ ಕೆಲವು ವಿರೋಧಗಳನ್ನು ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಮಾಜಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ನರವಾಣೆ ಪ್ರತಿಕ್ರಿಯಿಸಿದ್ದಾರೆ.
ಯುದ್ಧವೆಂದರೆ ಬಾಲಿವುಡ್ ಸಿನಿಮಾದಂತಲ್ಲ. ಇದರಲ್ಲಿ ಅನೇಕ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು. ಈ ವಿಷಯದಲ್ಲಿ ಸದಾ ರಾಜತಾಂತ್ರಿಕತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನರವಾಣೆ, ಕದನ ವಿರಾಮ ಒಪ್ಪಂದದ ಕುರಿತು ಮಾತನಾಡಿದರು. “ಯುದ್ಧದಿಂದಾಗಿ ಗಡಿ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರ ಪರಿಸ್ಥಿತಿ ಹೇಳಲಸಾಧ್ಯವಾಗಿದೆ. ರಾತ್ರಿ ವೇಳೆ ಶೆಲ್ ದಾಳಿ ಕಂಡಾಗ ಚಿಕ್ಕ ಮಕ್ಕಳು ಸಹ ಸುರಕ್ಷಿತ ಪ್ರದೇಶಗಳಿಗೆ ಓಡಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖ ತಲೆಮಾರುಗಳನ್ನು ಕಾಡುತ್ತದೆ” ಎಂದು ಮಾಜಿ ಸೇನಾ ಮುಖ್ಯಸ್ಥರು ಹೇಳಿದರು.
“ಯುದ್ಧ ಅಷ್ಟು ರೋಮ್ಯಾಂಟಿಕ್ ಅಲ್ಲ. ಅದು ಬಾಲಿವುಡ್ ಸಿನಿಮಾವಲ್ಲ. ತುಂಬಾ ಗಂಭೀರವಾದ ವಿಷಯ. ಯುದ್ಧ ನಮ್ಮ ಕೊನೆಯ ಆಯ್ಕೆಯಾಗಿರಬೇಕು. ಇದೇ ಕಾರಣಕ್ಕಾಗಿ ಪ್ರಧಾನಿ ಮೋದಿ ಇದು ಯುದ್ಧಗಳ ಯುಗವಲ್ಲ ಎಂದು ಹೇಳಿದರು. ಮೂರ್ಖರ ಕಾರಣಕ್ಕಾಗಿ ನಾವು ಯುದ್ಧಕ್ಕೆ ಹೋಗಬೇಕಾದ ಪರಿಸ್ಥಿತಿ ಎದುರಾದರೂ, ನಾವು ಅದನ್ನು ತಪ್ಪಿಸಲು ಒಲವು ತೋರಬೇಕು.
ಈಗ ಅನೇಕರು ಪೂರ್ಣ ಪ್ರಮಾಣದ ಯುದ್ಧಕ್ಕೆ ಏಕೆ ಹೋಗುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಯಾಗಿ, ನಾನು ಯುದ್ಧಕ್ಕೆ ಹೋಗಲು ಸಿದ್ಧನಿದ್ದೇನೆ. ಆದರೆ, ನಾನು ಮೊದಲ ಆಯ್ಕೆಯಾಗಿ ರಾಜತಾಂತ್ರಿಕತೆಯನ್ನು ಆರಿಸಿಕೊಳ್ಳುತ್ತೇನೆ. ಚರ್ಚೆಯ ಮೂಲಕ ಸಮಸ್ಯೆಯನ್ನು ಪರಿಹರಿಸಬೇಕೆಂದು ಬಯಸುತ್ತೇನೆ” ಎಂದು ನರವಾಣೆ ಪ್ರತಿಕ್ರಿಯಿಸಿದ್ದಾರೆ.