ರೈತರ ಆದಾಯ ಹೆಚ್ಚಿಸುವ ಹೆಸರಿನಲ್ಲಿ ಬಿಜೆಪಿ ಸರ್ಕಾರ ರೂಪಿಸಿದ ನೀತಿಗಳನ್ನೇ ಯಥಾವತ್ ಜಾರಿಗೊಳಿಸುವ ಮಾರ್ಗಸೂಚಿಯನ್ನೇ ಕಾಂಗ್ರೆಸ್ ಸರ್ಕಾರವೂ ಪಾಲಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ರೈತ ಸಂಘಟನೆ ಮತ್ತು ವಿವಿಧ ಜನಪರ ಸಂಘಟನೆಗಳು ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿವೆ.
ಈ ಹಿನ್ನೆಲೆಯಲ್ಲಿ ಪ್ರಮುಖ ಸಂಘಟನೆಗಳ ಮುಖ್ಯಸ್ಥರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ನಿಲುವೇ ಕಾಂಗ್ರೆಸ್ ಸರ್ಕಾರದ್ದೇ ಆಗಿದ್ದರೆ ಇದು ರೈತಕುಲಕ್ಕೆ ಮಾಡುತ್ತಿರುವ ಮಹಾದ್ರೋಹವಾಗಿದೆ. ನಾವಿದನ್ನು ಉಗ್ರವಾಗಿ ಪ್ರತಿಭಟಿಸಿ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿವೆ. ಅಷ್ಟೇ ಅಲ್ಲದೆ ಸರ್ಕಾರ ಇದೇ ನಿರ್ಧಾರದಲ್ಲಿ ಮುಂದುವರೆಯುವ ಮುನ್ನ ಸರ್ಕಾರದ ಕಡೆಯಿಂದ ಸ್ಪಷ್ಟನೆ ಬೇಕಾಗಿದೆ ಎಂದು ಎಚ್ಚರಿಸಿವೆ.
ರೈತರ ಆದಾಯವನ್ನು ದ್ವಿಗುಣಗೊಳಿಸುವ ಬೋಗಸ್ ಮಾತುಗಳೊಂದಿಗೆ ಬಿಜೆಪಿ ಪಕ್ಷವು ಕೃಷಿ ಭೂಮಿಯನ್ನು, ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಕಾರ್ಪೋರೇಟ್ ಕಂಪನಿಗಳಿಗೆ ಹಸ್ತಾಂತರಿಸುವ ಹುನ್ನಾರವನ್ನು ಮಾಡುತ್ತಿದೆ. ಅದರ ವಿರುದ್ಧವಾಗಿಯೇ ದೇಶದ 562 ರೈತ ಸಂಘಟನೆಗಳು ಒಗ್ಗೂಡಿ ಐತಿಹಾಸಿಕ ದೆಹಲಿ ರೈತ ಹೋರಾಟವನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಸಿದೆವು. ಈ ಹೋರಾಟದಲ್ಲಿ ಏಳು ನೂರಕ್ಕೂ ಹೆಚ್ಚು ರೈತರು ಪ್ರಾಣ ತ್ಯಾಗ ಮಾಡಿದರು. ಕಡೆಗೂ ಬಗ್ಗಿದ ಕೇಂದ್ರ ಸರ್ಕಾರ ಅದನ್ನು ವಾಪಾಸ್ ತೆಗೆದುಕೊಂಡಿತು. ಲಿಖಿತ ಭರವಸೆಗಳನ್ನು ರೈತರಿಗೆ ನೀಡಿತು. ಆದರೆ ಯಾವೊಂದು ಭರವಸೆಯನ್ನೂ ಈಡೇರಿಸಲಿಲ್ಲ. ಬದಲಿಗೆ ತಾನಿದ್ದ ರಾಜ್ಯ ಸರ್ಕಾರಗಳಲ್ಲಿ ಅವನ್ನು ಜಾರಿ ಮಾಡಿಸುವ ಕೆಲಸ ಮುಂದುವರೆಸಿತು. ಅದರ ಭಾಗವಾಗಿಯೇ ಕರ್ನಾಟಕದಲ್ಲಿಯೂ ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ಮಾಡಿತು. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷ ಇದನ್ನು ವಿರೋಧಿಸಿತು. ರೈತರಂತೂ ಬೀದಿಯ ಮೇಲಿದ್ದೆವು. ನೀವೂ ಸಹ ಬಂದು ಬೀದಿಯಲ್ಲಿ ನಮ್ಮ ಜೊತೆ ಕೂತಿರಿ. ‘ಇಬ್ಬರೂ ಸೇರಿ ಹೋರಾಟ ಮಾಡೋಣ ಎಂದಿರಿ”, 2023 ರ ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ‘ಬಿಜೆಪಿ ಸರ್ಕಾರ ತಂದ ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವ, ರೈತರ ಮೇಲೆ ಹಾಕಿರುವ ರಾಜಕೀಯ ಪ್ರೇರಿತ ಕೇಸುಗಳನ್ನು ತೆಗೆಯುವ, ಎಂ.ಎಸ್ ಪಿ ಯನ್ನು ಜಾರಿ ಮಾಡುವ, ಬಡ್ಡಿ ರಹಿತ ಸಾಲದ ಪ್ರಮಾಣ ಹೆಚ್ಚಿಸುವ… ಮುಂತಾದ ಅನೇಕ ವಾಗ್ದಾನಗಳನ್ನು ಮಾಡಿದಿರಿ. ಆದರೆ ಈ ಯಾವ ಭರವಸೆಗಳನ್ನೂ ಸರ್ಕಾರ ಈವರೆಗೂ ಈಡೇರಿಸಿಲ್ಲ ಎಂದು ಸಂಘಟನೆಗಳು ದೂರಿವೆ.
ಬಿಜೆಪಿ ದೂರಿಕೊಂಡೇ ಬಂದ ಕಾಂಗ್ರೆಸ್ ಈಗ ಬಿಜೆಪಿ ಕಾಯ್ದೆಗಳನ್ನು ಹಾಗೇ ಮುಂದುವರೆಸಿದೆ, ಬಿಜೆಪಿ ನೇಮಿಸಿದ ಬೆಲೆ ಆಯೋಗವನ್ನೇ ಮುಂದಿನ ಮೂರು ವರ್ಷಗಳಿಗೆ ವಿಸ್ತರಿಸಿದೆ, ಬಿಜೆಪಿ ನೀಡಿದ ಮಾರ್ಗ ಸೂಚಿಗಳನ್ನೇ ಕಾಂಗ್ರೆಸ್ ಸರ್ಕಾರವು ನೀಡಿದೆ. ಅದರಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮಾಡಿದ್ದ ರೈತರ ಹೋರಾಟದಿಂದಾಗಿ ಹಿಂದಕ್ಕೂ ತೆಗೆದುಕೊಂಡಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ತಿದ್ದುಪಡಿ ಕಾಯ್ದೆಗಳನ್ನೇ ಉಲ್ಲೇಖಿಸಿ ಇವನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಏನೆಲ್ಲಾ ಮಾಡಬೇಕು ಎಂದು ಅಧ್ಯಯನ ಮಾಡಿ ಶಿಫಾರಸು ಮಾಡಿ ಎಂದು ಕೇಳಿದ್ದೀರಿ. ಎಂ ಎಸ್ ಪಿ ಜಾರಿ ಮಾಡುವ, ಸರ್ಕಾರ ರೈತರ ಸಹಾಯಕ್ಕೆ ಬರುವ ಒಂದೇ ಒಂದು ಮಾತೂ ಸಹ ಇದರಲ್ಲಿ ಇಲ್ಲ. ಇದು ನಮಗೆ ಅಪಾರ ನೋವು ಮತ್ತು ಅಘಾತ ತಂದಿದೆ. ಇದಕ್ಕೆ ಕೂಡಲೇ ಸರ್ಕಾರ ಉತ್ತರ ನೀಡಲೇಬೇಕಿದೆ ಎಂದು ಸಂಘಟನೆಗಳು ಆಗ್ರಹಿಸಿವೆ.