Home ರಾಜ್ಯ ಸಚಿವ ಸಂಪುಟದಲ್ಲಿ ಅಲೆಮಾರಿಗಳ ಬಗ್ಗೆ ತುಟಿ ಬಿಚ್ಚದ  ಸರ್ಕಾರಕ್ಕೆ ಎಚ್ಚರ; “ಬೆಳಗಾವಿ ಚಲೋ” ಹೋರಾಟಕ್ಕೆ ಸೂಚನೆ

ಸಚಿವ ಸಂಪುಟದಲ್ಲಿ ಅಲೆಮಾರಿಗಳ ಬಗ್ಗೆ ತುಟಿ ಬಿಚ್ಚದ  ಸರ್ಕಾರಕ್ಕೆ ಎಚ್ಚರ; “ಬೆಳಗಾವಿ ಚಲೋ” ಹೋರಾಟಕ್ಕೆ ಸೂಚನೆ

0

“4-12-2025  ರಂದು ನಡೆದ ಸಚಿವ ಸಂಪುಟದಲ್ಲಿ ಅನೇಕ ವಿಚಾರಗಳ ನಿರ್ಧಾರ ತೆಗೆದುಕೊಂಡಿದೆ. ಆದರೆ ಒಳ ಮೀಸಲಾತಿ ವಿಚಾರದಲ್ಲಿ ಅಲೆಮಾರಿಗಳ ಕುರಿತು ಯಾವುದೇ ಚರ್ಚೆಯಾಗಲಿ ತೀರ್ಮಾನವನ್ನು ತೆಗೆದುಕೊಳ್ಳದೆ ಸಚಿವ ಸಂಪುಟ ಮುಕ್ತಾಯಗೊಂಡಿರುವುದು ಅಲೆಮಾರಿಗಳಿಗೆ ಆತಂಕ ಹೆಚ್ಚು ಮಾಡಿದೆ” ಎಂದು ಅಲೆಮಾರಿ ಸಮುದಾಯಗಳ ಒಕ್ಕೂಟ ಸರ್ಕಾರದ ನಿಲುವಿನ ಬಗ್ಗೆ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

ಒಳ ಮೀಸಲಾತಿಯ ವಿಷಯದಲ್ಲಿ ಕರ್ನಾಟಕದ 49 ಅಲೆಮಾರಿ ಸಮುದಾಯಗಳಿಗೆ ಮತ್ತು 10 ಸೂಕ್ಷ್ಮ ಪರಿಶಿಷ್ಟ ಜಾತಿಗಳನ್ನು ಪ್ರತ್ಯೇಕವಾಗಿ ಗುರುತಿಸಿ ಈ ಸಮುದಾಯಗಳ ಶೇಕಡ ಒಂದು ಪರ್ಸೆಂಟ್ ಮೀಸಲಾತಿಯನ್ನು ಪ್ರತ್ಯೇಕ ಅಭಿವೃದ್ಧಿ ನಿಗಮ ಮತ್ತು ಅಲೆಮಾರಿಗಳ ಅಭಿವೃದ್ಧಿಯ ವಿಶೇಷ ಪ್ಯಾಕೇಜ್ ಅನ್ನು ನೀಡಬೇಕೆಂದು ನಾವು ಒತ್ತಾಯಿಸಿದ್ದೇವು. ಕರ್ನಾಟಕ ಸರ್ಕಾರವು ನಮ್ಮ ಬೇಡಿಕೆಯನ್ನು ಈಡೇರಿಸಿದ ಸಂದರ್ಭದಲ್ಲಿ ನಮ್ಮ ಮಹಾ ಒಕ್ಕೂಟವು ಅಕ್ಟೋಬರ್ 2ರಂದು ದೆಹಲಿ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರಾದ ಡಾ. ಎಚ್ ಸಿ ಮಹದೇವಪ್ಪನವರು ` ಅಲೆಮಾರಿಗಳಿಗೆ ಶೇಕಡ1%, ಪ್ರತ್ಯೇಕ ಅಭಿವೃದ್ಧಿ ನಿಗಮ ಮತ್ತು ಅಲೆಮಾರಿ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ಅನ್ನು ನೀಡಲು ನಮ್ಮ ಸರ್ಕಾರಕ್ಕೆ ತಾತ್ವಿಕ ಒಪ್ಪಿಗೆ ಇದೆ.´ ಎಂದು ಭರವಸೆ ನೀಡಿ ದೆಹಲಿಯಿಂದ ನಮ್ಮನ್ನು ವಾಪಸ್ಸು ಕರೆಸಿಕೊಂಡಿದ್ದರು. ನಂತರ ಅಕ್ಟೋಬರ್ 31 ರಂದು ಅಲೆಮಾರಿ ಸಮುದಾಯಗಳ ಮುಖಂಡರನ್ನು ಮಾನ್ಯ ಮುಖ್ಯಮಂತ್ರಿಗಳು ಸಭೆ ಕರೆದು ಶೇಕಡ 1% ಮೀಸಲಾತಿಯನ್ನು ನೀಡುವ ಭರವಸೆಯನ್ನು ಕೊಟ್ಟು ಮತ್ತು ನಮ್ಮ ಬದ್ಧತೆಯ ಬಗ್ಗೆ ಅನುಮಾನ ಬೇಡವೆಂದು ಸಭೆಯಲ್ಲಿ ತಿಳಿಸಿದ್ದರು. ಅವರ ಮಾತಿಗೆ ಬೆಲೆಕೊಟ್ಟು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಪ್ರತಿಭಟನೆಯನ್ನು ಕೈಬಿಟ್ಟೆವು. ಮತ್ತು ಕಾನೂನು ತಜ್ಞರು, ಕಾನೂನು ಸಲಹೆಗಾರರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಸಚಿವರು ಒಂದು ನಿರ್ಧಾರಕ್ಕೆ ಬಂದು ಚರ್ಚಿಸಿ ಅಲೆಮಾರಿಗಳಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಕರ್ನಾಟಕ ಸರ್ಕಾರವು ನಮ್ಮ ಜೊತೆ ಯಾವುದೇ ಸಭೆ ಸಮಲೋಚನೆ ಮಾಡದೆ ವಂಚಿಸುತ್ತಾ ಬಂದಿದೆ ಎಂದು ತಮ್ಮ ಸಮುದಾಯಗಳ ಬಗ್ಗೆ ಸರ್ಕಾರದ ನಿರ್ಲಕ್ಷ್ಯಕ್ಕೆ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.

ಕೋರ್ಟ್ನಲ್ಲಿ ಕೇಸ್ ಇದ್ದರು ಕನಿಷ್ಠ ಅಫಿಡೆವಟ್ ಕೂಡ ನೀಡಿಲ್ಲ. ಸರ್ಕಾರ ಅಲೆಮಾರಿ ಸಮುದಾಯಕ್ಕೆ ಕೊಟ್ಟ ಮಾತಿಗೆ ಬದ್ಧವಾಗಿದೆ ಎಂಬ ಅನುಮಾನ ನಮಗೆ ಇದೆ. 4-12-2025ರಂದು ನಡೆದ ಸಚಿವ ಸಂಪುಟದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಇರುವುದು ನಮ್ಮ ಆತಂಕವನ್ನು ಹೆಚ್ಚಿಸಿದೆ ಎಂದು ಅಲೆಮಾರಿಗಳ ಒಕ್ಕೂಟ ತಿಳಿಸಿದೆ.

6-12-2025ರಂದು ಒಳ ಮೀಸಲಾತಿ ಕುರಿತು ತೀರ್ಮಾನ ತೆಗೆದುಕೊಳ್ಳಲು ಮತ್ತೊಂದು ಸಮಾಲೋಚನೆ ಸಭೆಯನ್ನು ಅಧಿಕಾರಿಗಳು ಮತ್ತು ಸಚಿವರುಗಳ ಸಮಾಲೋಚನೆ ಸಭೆಯನ್ನು ಸಂಜೆ 6-00 ಗಂಟೆಗೆ ಕರೆದಿದ್ದಾರೆ ಎಂದು ತಿಳಿದುಬಂದಿದೆ. ಈ ಸಭೆಯನ್ನು ಸಹ ಅಲೆಮಾರಿಗಳ ಒಂದು ಪರ್ಸೆಂಟ್ ಮೀಸಲಾತಿ ಕುರಿತು ಚರ್ಚೆ ಮಾಡುತ್ತಾರೋ ಇಲ್ಲದೆ, ಪರಿಶಿಷ್ಟ ಜಾತಿಯ ಮೀಸಲಾತಿ 15% ಅಥವಾ 17% ಬಗ್ಗೆ ಚರ್ಚೆ ಮಾಡುತ್ತಾರಾ ಎಂಬ ದೊಡ್ಡ ಪ್ರಶ್ನೆ ನಮಗೆ ಇದೆ. ನಾವು ಈ ವಿಚಾರದಲ್ಲಿ ಸ್ಪಷ್ಟಪಡಿಸ  ಬಯಸುವುದೇನೆಂದರೆ 15% ಮತ್ತೆ 17% ವಿಚಾರ ಕೂಡ ತುಂಬಾ ಗಂಭೀರ ವಾದ ವಿಚಾರಗಳೇ ಇದೇ ಸಂದರ್ಭದಲ್ಲಿ ಅಲೆಮಾರಿಗಳ ಕುರಿತು ಏನು ನಿಲುವು ತೆಗೆದುಕೊಳ್ಳುತ್ತಾರೆ ಎಂಬುದು ಕೂಡ ತುಂಬಾ ಗಂಭೀರವಾದ ವಿಚಾರವಾಗಿರುತ್ತದೆ. ಈಗ ನ್ಯಾಯಾಂಗದಿಂದ ತಡೆಯಾಜ್ಞ ಇದೆ ಎಂದು ಒಕ್ಕೂಟ ತಿಳಿಸಿದೆ.

ಈ ಸಂದರ್ಭದಲ್ಲಿ ಸರ್ಕಾರವು ಯಾವುದೇ ತೀರ್ಮಾನ ತೆಗೆದುಕೊಂಡರು, ಬಿಲ್ ತಂದರು ಕೂಡ ಅಲೆಮಾರಿಗಳು ಹಾಕಿರುವ ತಡೆಯಜ್ಞೆಯನ್ನು ವಾಪಸ್ ತೆಗೆದುಕೊಳ್ಳದಿದ್ದರೆ ಯಾವುದೇ ಒಳಮಿಸಲಾತಿ ಜಾರಿಯಾಗುವುದಿಲ್ಲ,ಅಷ್ಟೇ ಅಲ್ಲದೆ ಇಡೀ ನೇಮಕಾತಿ ಪ್ರಕ್ರಿಯೆಯು ಜಾರಿಯಾಗುವುದಿಲ್ಲ ಎಂದು ಒಕ್ಕೂಟ ತಿಳಿಸಿದೆ.

ಎಲ್ಲವೂ ಕೂಡ ನಿಂತು ಹೋಗಿವೆ, ಈ ಎಲ್ಲಾ ಪ್ರಕ್ರಿಯೆ ನಡೆಯಬೇಕಾದರೆ ಅಲೆಮಾರಿಗಳ ವಿಚಾರದಲ್ಲಿ ಸರ್ಕಾರ ಒಂದು ತೀರ್ಮಾನಕ್ಕೆ ಬರಲೇಬೇಕಾಗಿದೆ. ಅಲೆಮಾರಿಗಳ 1% ವಿಚಾರದಲ್ಲಿ ಉಡಾಫೆ ಮಾಡಿ ಸರ್ಕಾರವು  ಸಂಪೂರ್ಣ ಒಳ ಮೀಸಲಾತಿಯನ್ನು ಮತ್ತು ಇಡೀ ನೇಮಕಾತಿಯನ್ನು ಬಿಕ್ಕಟ್ಟಿಗೆ ಸಿಕ್ಕಿಸಿದೆ. ಅಲೆಮಾರಿಗಳಿಗಂತೂ ಅನ್ಯಾಯ ಮಾಡಿದೆ. ಇದು ಮಾತ್ರವಲ್ಲ ಒಳ ಮೀಸಲಾತಿಯ ಅನುಷ್ಠಾನವನ್ನು ಮತ್ತು ನೇಮಕಾತಿಯ ಪ್ರಕ್ರಿಯೆಗೆ ಒಟ್ಟು ಅಡ್ಡಗಾಲಾಗಿ ಪರಿವರ್ತನೆಯಾಗಿ ಸರ್ಕಾರವಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಇದನ್ನು ಸೂಕ್ತ ರೀತಿಯಲ್ಲಿ ಪರಿಹರಿಸುವುದಕ್ಕೆ ಹೆಜ್ಜೆ ಹಾಕಬೇಕು. ಈ ರೀತಿ ವಿಳಂಬ ನೀತಿ ಮತ್ತು ನಿರ್ಲಕ್ಷ ನೀತಿ ಇದು ನಮಗೂ, ಕರ್ನಾಟಕಕ್ಕೂ, ಎಲ್ಲರಿಗೂ ಒಂದು ರೀತಿಯ ಬಹಳ ಅನ್ಯಾಯವಾಗುತ್ತೆ ಎನ್ನುವುದನ್ನು ಸ್ಪಷ್ಟ ಪಡಿಸಲು ಬಯಸುತ್ತೇವೆ. ಸರ್ಕಾರ ಅಲೆಮಾರಿಗಳ ಬಗ್ಗೆ ಮತ್ತೆ ಯಾವುದೇ ರೀತಿಯ ಪ್ರಕ್ರಿಯೆ ಮುಂದುವರಿಸದೆ ಇರುವುದರಿಂದ ಇದನ್ನು ಪ್ರತಿಭಟಿಸಿ ಸರ್ಕಾರದ ಮತ್ತು ಸಮಾಜದ ಗಮನಕ್ಕೆ ಅಲೆಮಾರಿ ಸಮುದಾಯಗಳ ಹಕ್ಕೊತ್ತಾಯವನ್ನು ಮುನ್ನಲೆಗೆ ತರುವುದಕ್ಕೆ `ಬೆಳಗಾವಿ ಚಲೋ´ ಗೆ ಕರೆ ಕೊಡುತ್ತಿದ್ದೇವೆ ಎಂದು ಅಲೆಮಾರಿಗಳ ಒಕ್ಕೂಟ ಮುಂದಿನ ತಮ್ಮ ಹೋರಾಟಗಳ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ನಾವು ಅನಿರ್ದಿಷ್ಟ ಅವಧಿ ಹೋರಾಟವನ್ನು ಬೆಳಗಾವಿಯಲ್ಲಿ ಮುಂದುವರಿಸುತ್ತೇವೆ. ನಾವು ನ್ಯಾಯಾಂಗ ಹೋರಾಟ ಮತ್ತು ಬೀದಿ ಹೋರಾಟ ಎರಡನ್ನು ಕೂಡ ಮುಂದುವರಿಸುತ್ತೇವೆ. ಯಾವುದೇ ಕಾರಣಕ್ಕೂ ಕೂಡ ಅಲೆಮಾರಿಗಳಿಗೆ ಆಗಿರುವಂತಹ ಅನ್ಯಾಯವನ್ನು ಸರಿಪಡಿಸದೆ ಇದ್ದರೆ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಸರ್ಕಾರಕ್ಕೆ ಅಲೆಮಾರಿಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

You cannot copy content of this page

Exit mobile version