ಇವಿಎಂ ರದ್ದು ಪಡಿಸಿ, ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ನ್ಯಾಯಪೀಠ ತಿರಸ್ಕರಿಸಿದೆ. ಇತ್ತ ಇವಿಎಂ ವಿರುದ್ಧ ತಮ್ಮ ಹೋರಾಟ ಮುಂದುವರೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ವಿದ್ಯುನ್ಮಾನ ಮತ ಯಂತ್ರದ ಬಳಕೆ ಬಗ್ಗೆ ಕಾಂಗ್ರೆಸ್ ಪಕ್ಷದ ವಿರೋಧದ ಬಗ್ಗೆ ಎತ್ತಿ ಹಿಡಿದು ಮಾತನಾಡಿದ್ದಾರೆ.
‘ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಮಾದರಿಯಲ್ಲಿ ಇವಿಎಂ ತಿರಸ್ಕರಿಸುವ ಅಭಿಯಾನಕ್ಕೆ ಕೈ ಇಡಬೇಕು. ಆ ಮೂಲಕ ಚುನಾವಣಾ ಆಯೋಗ ಮತ್ತೊಮ್ಮೆ ವಿಪಕ್ಷಗಳ ಬೇಡಿಕೆಯ ಬಗ್ಗೆ ಗಮನ ಹರಿಸಬೇಕು. ಇದೊಂದು ರಾಷ್ಟ್ರವ್ಯಾಪಿ ದೊಡ್ಡ ಅಭಿಯಾನ ಆಗಲಿ’ ಎಂದು ಮಲ್ಲಿಕಾರ್ಜುನ ಖರ್ಗೆಯವರು ಕರೆ ನೀಡಿದ್ದಾರೆ.