“..ಪ್ರಪಂಚದಲ್ಲಿ 820 ಕೋಟಿಗಿಂತಲೂ ಹೆಚ್ಚಿನ ಜನರು ಬದುಕುತ್ತಿದ್ದಾರೆ. ವಿಶ್ವ ಜನಸಂಖ್ಯೆಯ ಹಸಿವಿನ ಪ್ರಮಾಣ 733 ಮಿಲಿಯನ್ ಜನರಷ್ಟು. ಅಂದರೆ 11 ಜನರಲ್ಲಿ ಒಬ್ಬ ಹಸಿವಿನಿಂದ ಇದ್ದಾನೆ..” ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ದರ್ಶನ್ ಕುರುಬಾಸ್ ಅವರ ಬರಹದಲ್ಲಿ..
ಈ ಭೂಮಿಯು ಬಿಲಿಯನ್ ವರ್ಷಗಟ್ಟಲೆ ವಿಕಾಸ ಹೊಂದಿದ್ದು, ಆನಂತರ ಮೊದಲ ಮಾನವ ಕಾಣಿಸಿದ್ದು ಆರು ಮಿಲಿಯನ್ ವರ್ಷಗಳ ಹಿಂದೆ, ಮುಂದುವರೆದು ಹೋಮೋ ಕುಲದ ಮಾನವ ಕಾಣಿಸಿದ್ದು 1.5 – 2 ಮಿಲಿಯನ್ ವರ್ಷಗಳ ಹಿಂದೆ. ಆ ಮಾನವ ಸಂಕುಲ ವಿಕಾಸಗೊಳ್ಳುತ್ತ ಬದುಕುಳಿದ ಕಾರಣ ನಾವುಗಳು ಇಂದು ಬದುಕುತ್ತಿರುವುದು.
ನಾವುಗಳು ಇಂದು ಬದುಕುತ್ತಿರಲು ಮತ್ತು ಮಾನವ ಕುಲ ಮುಂದುವರೆಯಲು ಆಹಾರ ಮತ್ತು ಸಂತಾನೋತ್ಪತ್ತಿಯೇ ಕಾರಣ. ನಾವಿಂದು ಆಹಾರದ ಬಗ್ಗೆ ಮಾತನಾಡುವುದಾದರೆ :- ಆಗಿನ ಕಾಲದ ಆದಿಮಾನವ ಒಂದು ರಾಜ್ಯದ ವ್ಯಾಪ್ತಿಗೊ ಇಲ್ಲ ಒಂದು ಆಡಳಿತರೂಢ ಸರ್ಕಾರದ ಸುಪರ್ದಿಗೆ ಒಳಪಡದ ಕಾರಣ ಯಾವುದೇ ಕಾನೂನು ಕಟ್ಟಳೆಗಳು ಇರದೇ ಸರ್ವ ಸ್ವತಂತ್ರನಾಗಿದ್ದ.(ಕಾನೂನು ನೀತಿಗೆ ಒಳಪಟ್ಟ ನಾವುಗಳು ಸ್ವತಂತ್ರರೇ. ಕೆಲವು ಇತಿಮಿತಿಗಳಿವೆಯಷ್ಟೇ) ಆತನಿಗೆ/ಅವಳಿಗೆ ಮೊದಲು ತನ್ನ ಹಸಿವನ್ನು ನೀಗಿಸಿಕೊಳ್ಳುವುದೇ ಮುಖ್ಯವಾದ ಗುರಿಯಾಗಿತ್ತು. ಆದಿಮಾನವರಿಗೆ ನೈಸರ್ಗಿಕವಾಗಿ ಸಿಕ್ಕಂತಹ ತಿಂದು ಬದುಕಲು ಯೋಗ್ಯವಾದಂತಹ ಆಹಾರವನ್ನು ತಿನ್ನುತ್ತಿದ್ದರು. ಅವು ಗೆಡ್ಡೆ ಗೆಣಸು ಸೊಪ್ಪು ತರಕಾರಿ ಹಣ್ಣುಗಳು ಇವುಗಳಷ್ಟೆಯಲ್ಲದೆ ಕರಕುಶಲತೆಯೊಂದಿಗೆ ಆಯುಧಗಳನ್ನುಪಯೋಗಿಸಿ ಕಂಡಂತಹ ಪ್ರಾಣಿಯನ್ನು ಬೇಟೆಯಾಡಿ ತಿನ್ನುತ್ತಿದ್ದ. ಆ ಪ್ರಾಚೀನ ಕಾಲದಲ್ಲಿ ಯಾವುದೇ ಪ್ರಾಣಿಯನ್ನು ಬೇಟೆಯಾಡಬಾರದೆಂದು, ಅಭಯಾರಣ್ಯದ ಪ್ರಾಣಿಗಳೆಂದು ಗುರುತಿಸಿರಲಿಲ್ಲ ತನ್ನಿಚ್ಛೆ ಮೇರೆಗೆ ಬೇಟೆಯಾಡಿ ಅದುವೇ ಬೃಹತ್ ಆಕಾರದ ಮಾಮತ್ ಆನೆಗಳನ್ನು ಬಿಡದೆ ಬೇಟೆಯಾಡಿ ತಿಂದು ಬದುಕಿದ್ದ. ಲಕ್ಷಾಂತರ ವರ್ಷಗಳ ನಂತರ ಪಶುಪಾಲನೆಯನ್ನು ಕಲಿತ, ನಂತರ ಕೃಷಿ ಮಾಡುವುದನ್ನು ಕಂಡುಕೊಂಡ, ಅದಲ್ಲದೆ ಬೆಳೆದಂತ ಪಸಲನ್ನು ಶೇಖರಣೆ ಮಾಡುವುದನ್ನು ಅರಿತುಕೊಂಡ. ಅಲೆಮಾರಿ ಜೀವನ ಶೈಲಿಯನ್ನು ತ್ಯಜಿಸಿ ಒಂದು ಕಡೆ ನೆಲೆನಿಂತು. ನುಡಿ ಕಲಿತು ನಾಗರಿಕತೆ ಕಟ್ಟಿ ತನಗೆ ಬೇಕಾದಂತಹ ಅಗತ್ಯಗಳನ್ನು ತಾನಿರುವಲ್ಲಿಯೇ ಪೂರೈಸಿಕೊಳ್ಳಲು ಯಶಸ್ವಿಯಾದ. ಇಂದು ನಾಗರಿಕತೆ ಬೃಹದಾಕಾರವಾಗಿ ಬೆಳೆದಿದೆ ಇಂದು ಮಾನವನ ಜೀವನಶೈಲಿ ನಡವಳಿಕೆಗಳೆಲ್ಲ ನಯಾನಾಜೂಕಿನಿಂದ ಕೂಡಿವೆ. ಹಿಂದಿನ ಪ್ರಕೃತಿಗೆ ಸವಾಲೆಸೆಯುವ ಮಟ್ಟಕ್ಕೆ ಮಾನವ ಬೆಳೆದಿದ್ದಾನೆ. ಉದಾ- ನೀರು ಹಳ್ಳ ಇದ್ದ ಕಡೆ ಮಾತ್ರ ಹರಿಯುತ್ತಿತ್ತು ತಗ್ಗುಪ್ರದೇಶದಲ್ಲಿ ಶೇಖರಣೆಯಾಗಿ ನಿಲ್ಲುತ್ತಿತ್ತು. ಈಗ ಮಾನವ ವಿಜ್ಞಾನ ತಂತ್ರಜ್ಞಾನವನ್ನು ಕೈಗೂಡಿಸಿಕೊಂಡು ನೀರಿನಳಗೆ ಮೋಟಾರ್ ಅಳವಡಿಸಿ ಬೆಟ್ಟದ ತುದಿಗೆ ನೀರನ್ನು ಕೊಂಡೊಯ್ಯಬಲ್ಲ, ಅಂತರ್ಜಲವನ್ನು ತೆಗೆದು ಬಳಸಬಲ್ಲ ಜಗತ್ತಿನಲ್ಲಾಗುವ ಬದಲಾವಣೆಗಳನ್ನು, ಘಟನೆಗಳನ್ನು ಕ್ಷಣಾರ್ಧದಲ್ಲಿ ಅರಿಯಬಲ್ಲ, ಸಮುದ್ರದ ಆಳಕ್ಕೂ ಇಳಿಯಬಲ್ಲ, ಆಕಾಶಕ್ಕೂ ಹಾರಬಲ್ಲ, ಅಂತರಿಕ್ಷಕ್ಕೂ ಹೋಗಿ ಸಾಧಿಸಬಲ್ಲ. ಇಷ್ಟೆಲ್ಲಾ ಪ್ರಗತಿಯಲ್ಲಿ ಮುನ್ನಡೆ ಕಂಡಿದ್ದರು ಮಾನವ ಕುಲಕ್ಕೆ ತೊಡಕುಗಳಿಗೇನು ಬರವಿಲ್ಲ.
ಮಾನವ ಕುಲಕ್ಕೆ ಕಂಟಕ ಪ್ರಾಯವಾದ ಯುದ್ಧಗಳು, ಕಣ್ಣನ್ನು ಮಿಟುಕಿಸುವಷ್ಟರಲ್ಲಿ ಜಗತ್ತನ್ನೇ ನಾಶಗೊಳಿಸುವ ಅಣು ಬಾಂಬುಗಳು. ಕೆಲವರ ಬಳಿಯಷ್ಟೇ ಶೇಖರಣೆಯಾದ ಅಗಾಧ ಸಂಪತ್ತು. ಬಹುವ್ಯಾಪ್ತಿಯಾಗಿ ಹಬ್ಬಿರುವ ಕಿತ್ತುತಿನ್ನುವ ಬಡತನ ಮುಂತಾದವುಗಳು. ನಾವು ಬದುಕುತ್ತಿರುವ ಈ ಸಮಾಜದಲ್ಲಿ ಸಾವಿರಾರು ಲಕ್ಷಾಂತರ ತರಹದ ಬದುಕುಗಳಿವೆ. ಒಂದು ಕಡೆ ಲೂಟಿಕೋರರ ಅಟ್ಟಹಾಸ ಮತ್ತೊಂದೆಡೆ ನಿರ್ಗತಿಕರ ಧಾರುಣ ವ್ಯಥೆ.
ನಮ್ಮ ಇಂಡಿಯಾ ಒಕ್ಕೂಟದ ಸ್ಥಿತಿಯನ್ನು ನೋಡುವುದಾದರೆ, ಇಲ್ಲಿನ ಬಹುಸಂಖ್ಯಾಜನರು ತಮ್ಮ ದಿನನಿತ್ಯ ಜೀವನದಲ್ಲಿ ದೇವರು ಎಂಬುದಕ್ಕೆ ಅಗಾಧವಾದ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಆ ದೇವರನ್ನು ಒಲಿಸಿಕೊಳ್ಳಲು ಹರಕೆ ಜಪತಪಗಳನ್ನು ಆಚರಿಸುವುದು ಉಂಟು ಅವುಗಳ ಜೊತೆ ನೈವೇದ್ಯಾ ಮತ್ತು ಹೋಮ ಹವನಗಳು ಅಭಿಷೇಕಗಳೆಲ್ಲವೂ ಸೇರಿವೆ. ಸಾರ್ವಜನಿಕವಾಗಿ ದೇವರೆಂದು ಕರೆಸಿಕೊಳ್ಳುವ ಕಲ್ಲಿನ ಮೂರ್ತಿಗೆ ಹಾಲು ತುಪ್ಪ ಮೊಸರು ಸಕ್ಕರೆಯಂತಹ ಆಹಾರ ಪದಾರ್ಥಗಳನ್ನು ಸುರಿಯುವುದು, ಮತ್ತೆ ದೇವಸ್ಥಾನದಲ್ಲಿ ಮತ್ತು ಗೃಹಪ್ರವೇಶ ಕಾರ್ಯಗಳಲ್ಲಿ ಆಹಾರ ಪದಾರ್ಥಗಳನ್ನು ಹೋಮಕ್ಕೆ ಬಳಸುತ್ತಾರೆ ಅಂದರೆ ಬೆಂಕಿಯಲ್ಲಿ ಸುಡುತ್ತಾರೆ. ಯಥೇಚ್ಛವಾಗಿ ಆಹಾರವನ್ನು ವ್ಯರ್ಥ ಮಾಡುವುದನ್ನೇ ಭಕ್ತಿಯೆಂದುಕೊಂಡಿದ್ದಾರೆ. ಇವುಗಳನ್ನೆಲ್ಲ ಮಾಡಿದರೆ ಜೀವನದಲ್ಲಿ ಕಷ್ಟ ಕಾರ್ಪಣ್ಯಗಳು ದೂರವಾಗಿ, ಶಾಂತಿ ನೆಮ್ಮದಿ ನೆಲೆಸುವುದೆಂದು ನಂಬಿದ್ದಾರೆ. ಇದು ಒಂದು ಕಡೆಯಾದರೆ ಆಗರ್ಭ ಶ್ರೀಮಂತರೆನಿಸಿಕೊಂಡವರು ಮಾಡುವ ಕಾರ್ಯಗಳಲ್ಲಿ ಅಗಾಧವಾದ ದುಂದು ವೆಚ್ಚವಲ್ಲದೆ ಆಹಾರವನ್ನು ವ್ಯರ್ಥ ಮಾಡುತ್ತಾರೆ. ಮಧ್ಯವರ್ಗದ ಕುಟುಂಬದವರು ಮತ್ತು ಬಡವರ್ಗದವರು ವಿದ್ಯಾಭ್ಯಾಸಕ್ಕಿಂತ ಹೆಚ್ಚಿನ ಹಣವನ್ನು ಮದುವೆಗೆ ಖರ್ಚು ಮಾಡುತ್ತಾರೆ. ಆ ಮದುವೆಗಳಲ್ಲಿ ಸಾಕಷ್ಟು ಆಹಾರವನ್ನು ಪೋಲು ಮಾಡುತ್ತಾರೆ. ನಮಗೆ ಆಹಾರವನ್ನು ತಿನ್ನುವ ಹಕ್ಕಿದೆ ಆದರೆ ಬಿಸಾಡುವ, ಸುಡುವ ಹಕ್ಕಿಲ್ಲ. ಹಾಗಾಗಿ ಆಹಾರ ಸಂರಕ್ಷಣಾ ನೀತಿಯನ್ನು ಜಾರಿಗೊಳಿಸಬೇಕು ಆಹಾರ ಸಂರಕ್ಷಿಸುವ ಬಗ್ಗೆ ಕ್ರಮ ಕೈಗೊಂಡು ಹೋಮ-ಹವನ ಅಭಿಷೇಕ ನೈವೇದ್ಯ, ಇನ್ನಿತರ ಕಾರ್ಯಕ್ರಮಗಳಲ್ಲಿ ವ್ಯರ್ಥವಾಗುವ ಆಹಾರವನ್ನು ಕಾನೂನು ಬದ್ಧವಾಗಿ ತಡೆಯಸಬೇಕು.
ಇದೊಂದು ಕಡೆಯಾದರೆ ಪ್ರಪಂಚದಲ್ಲಿ 820 ಕೋಟಿಗಿಂತಲೂ ಹೆಚ್ಚಿನ ಜನರು ಬದುಕುತ್ತಿದ್ದಾರೆ. ವಿಶ್ವ ಜನಸಂಖ್ಯೆಯ ಹಸಿವಿನ ಪ್ರಮಾಣ 733 ಮಿಲಿಯನ್ ಜನರಷ್ಟು. ಅಂದರೆ 11 ಜನರಲ್ಲಿ ಒಬ್ಬ ಹಸಿವಿನಿಂದ ಇದ್ದಾನೆ. 36 ದೇಶಗಳು ಗಂಭೀರವಾಗಿ ಹಸಿವಿನ ಸಮಸ್ಯೆಯನ್ನು ಎದುರಿಸುತ್ತಿವೆ. 6 ದೇಶಗಳು ಆತಂಕಕಾರಿ ಹಸಿವಿನಮಟ್ಟವನ್ನು ತಲುಪಿವೆ. ಪ್ರಪಂಚದ 35 ಭಾಗದಷ್ಟು ಜನರು ಆರೋಗ್ಯಕರ ಆಹಾರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರತಿ ವರ್ಷ 9 ಮಿಲಿಯನ್ ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಇಷ್ಟೊಂದು ತಾರತಮ್ಯ ಬೂಟಾಟಿಕೆ ಕ್ರೂರತೆಯನ್ನು ಹೊಂದಿರುವ ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗುವುದಾದರೂ ಹೇಗೆ?
ಹಸಿವು ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಆಫ್ರಿಕಾದ ಜಿಂಬಾಬ್ವೆಯಲ್ಲಿ ದಶಕದಿಂದ ಇರುವ ಬರಗಾಲದ ಕಾರಣ ದೇಶದ ಅರ್ಧದಷ್ಟು ಜನರಿಗೆ ಆಹಾರದ ಕೊರತೆ ಉಂಟಾಗಿದೆ. ಹಾಗಾಗಿ ಅಲ್ಲಿನ ಸರಕಾರ ಜನರ ಹಸಿವನ್ನು ನೀಗಿಸಲು 200 ಆನೆಗಳನ್ನು ಕೊಂದು ಅದರ ಮಾಂಸವನ್ನು ವಿತರಿಸುವುದರ ಬಗ್ಗೆ ನಿರ್ಧರಿಸಿದೆ. ಆಫ್ರಿಕಾದ ನಮಿಬಿಯ ದೇಶದಲ್ಲಿ 1988ರಲ್ಲಿ ಉಂಟಾದ ಬರಗಾಲದಿಂದ ಅಲ್ಲಿನ ಜನರಿಗೆ ಆಹಾರದ ಕೊರತೆಯುಂಟಾಗಿ 700 ಪ್ರಾಣಿಗಳನ್ನು ಕೊಂದು (ಅದರಲ್ಲಿ 83 ಆನೆಗಳು ಸಹ) ಮಾಂಸವನ್ನು ಅಲ್ಲಿನ ಜನರಿಗೆ ವಿತರಿಸಲಾಗಿತ್ತು. ಅ ತರಹದ ನಿರ್ಧಾರವನ್ನೇ ಜಿಂಬಾಂಬೆ ಸರ್ಕಾರವು ಸಹ ಈಗ ತೆಗೆದುಕೊಂಡಿದೆ.
ನಮ್ಮ ಒಕ್ಕೂಟದಲ್ಲಿ ಮಧ್ಯಮ ವರ್ಗದವರು ಮತ್ತು ಬಡವರೇ ಹೆಚ್ಚಿನವರು ಇದ್ದಾರೆ ಅವರು ವಿದ್ಯಾಭ್ಯಾಸಕ್ಕಿಂತ ಮದುವೆ ಇನ್ನು ಮುಂತಾದ ಕಾರ್ಯಕ್ರಮಗಳಿಗೆ ಹಣಕಾಸನ್ನು ದುಂದು ವೆಚ್ಚ ಮಾಡುತ್ತಾರೆ ತಮ್ಮ ಮಿತಿನ್ನು ಮೀರಿ ಸಾಲಸೋಲ ಮಾಡಿ ಮದುವೆ ಮಾಡುತ್ತಾರೆ. ಇದರಿಂದದಾಗಿ ಆರ್ಥಿಕವಾಗಿಯೂ ಪೆಟ್ಟುಬೀಳುತ್ತದೆ ಮತ್ತೊಂದು ಇಂತ ಸಮಾರಂಭಗಳಲ್ಲಿ ಅತಿಯಾದ ಆಹಾರ ಉಳಿದು ಪೋಲಾಗುತ್ತದೆ.
ಆಹಾರಕ್ಕೆ ಸಮನಾರ್ಥಕ ಪದವ ಅನ್ನವಲ್ಲ, ಅನ್ನವು ಆಹಾರದ ಒಂದು ಪದಾರ್ಥವಷ್ಟೇ, ಇಂದು ನಮ್ಮ ರಾಜ್ಯದಲ್ಲಿ ಬಡವರ ಹಸಿವನ್ನು ನೀಗಿಸಲು ಸರ್ಕಾರದ ವತಿಯಿಂದ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಪ್ರತಿ ತಿಂಗಳು ಐದು ಕೆಜಿ ಅಕ್ಕಿಯನ್ನು ನೀಡುತ್ತಾರೆ. ಇದೊಂದು ಉತ್ತಮವಾದ ಯೋಜನೆ. ಕೆಲವರು ತಿನ್ನುವಾಗ ಅನ್ನ ವ್ಯರ್ಥ ಮಾಡಬೇಡಿ, ಅನ್ನ ವ್ಯರ್ಥ ಮಾಡಬೇಡಿ ಎನ್ನುತ್ತಾರೆ. ಅನ್ನ ಒಂದೇ ಸಂಪೂರ್ಣ ಆಹಾರವಲ್ಲ. ದೇವಸ್ಥಾನಗಳಲ್ಲಿ ಅಭಿಷೇಕ ನೈವೇದ್ಯವೆಂದು ಹೋಮ ಹವನ ವೆಂದು ತರಾತರಿ ಆಹಾರ ಪದಾರ್ಥಗಳನ್ನು ಬಿಸಾಡುತ್ತಾರೆ ಬೆಂಕಿಯಲ್ಲಿ ಸುಡುತ್ತಾರೆ. ನಮಗೆ ಆಹಾರವನ್ನು ತಿನ್ನು ಆಗ್ತಿದೆ ಆದರೆ ಬಿಸಾಡುವ ಹಕ್ಕಿಲ್ಲ ಹಾಗಾಗಿ ಆಹಾರ ಸಂರಕ್ಷಣ ನೀತಿ ಜಾರಿಯಾಗಿ, ಇವುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು.
ಪ್ರಾಚೀನ ಕಾಲದಲ್ಲಿ ಆದಿಮಾನವನು ಇಂದು ನಾವು ತಿನ್ನುವ ತರಹ ಅನ್ನ, ಚಪಾತಿ, ಇಡ್ಲಿ ದೋಸೆಯನ್ನಷ್ಟೆ ತಿನ್ನುತ್ತಿರಲಿಲ್ಲ. ಗೆಡ್ಡೆ ಗೆಣಸು ಅಷ್ಟೇ ಅಲ್ಲದೆ ಬೇಟೆಯಾಡಿ ಮಾಂಸವನ್ನು ತಿನ್ನುತ್ತಿದ್ದ. ಮಾಂಸಹಾರ ಮಾನವನ ಪ್ರಾಚೀನ ಕಾಲದಿಂದಲೂ ರೂಢಿಯಿಂದ ಬಂದ ಆಹಾರವಾಗಿದೆ. ಸಸ್ಯಹಾರವನ್ನು ಶ್ರೇಷ್ಠವಂತಲೂ ಮಾಂಸಹಾರವನ್ನು ಕನಿಷ್ಠವೆಂತಲೂ ವಾದಮಾಡುವ ಮೂರ್ಖರು ನಮ್ಮ ಸಮಾಜದಲ್ಲಿದ್ದಾರೆ. ಬಾಡೂಟ ಬಾಡಿಲ್ಲದ ಊಟ ಎರಡು ಸಹ ಮಾನವನಿಗೆ ಬಹು ಅಗತ್ಯ.
ಸಮಾಜದಲ್ಲಿ ಹೆಚ್ಚುತ್ತಿರುವ ಆರ್ಥಿಕ ತಾರತಮ್ಯದಿಂದ ಬಡತನ ಹಸಿವು ಕೂಡ ಹೆಚ್ಚುತ್ತಿದೆ. ನಾನು ಒಮ್ಮೆ ಲೇಖಕಿ ‘ನೇಮಿಚಂದ್ರ’ರವರು ಬರೆದಿರುವ “ಬದುಕು ಬದಲಿಸಬಹುದು” ಎಂಬ ಪುಸ್ತಕವನ್ನು ಓದುತ್ತಿರುವಾಗ ಅದರಲ್ಲಿ ಬರುವ ಒಂದು ಲೇಖನದಲ್ಲಿ ಆಫ್ರಿಕಾದ ಜೊಹಾನ್ಸ್ ಬರ್ಗ್ ಎಂಬ ಸಿಟಿಯಲ್ಲಿ, ಕೆಲವರು ಅಗರ್ಭ ಶ್ರೀಮಂತರು, ಹಲವರು ನೀರ್ಗತಿಕರು ಅಲ್ಲಿ ದುಡಿಯುವ ಜನರಿಗೆ ಕೆಲಸ ಸಿಗದೇ ಬಡತನದಿಂದ ಕಳ್ಳತನ ಸುಲಿಗೆ ಹೆಚ್ಚಾಗಿವೆಯಂತೆ. ಹಾಗಾಗಿ ಸರ್ಕಾರಗಳು ಜನರಲ್ಲಿ ಇರುವ ಆರ್ಥಿಕ ಅಂತರ ಕಡಿಮೆಯಾಗಿ ಸಮಾನವಾದ ಆರ್ಥಿಕತೆ ಬರುವಂತೆ ಮಾಡಬೇಕು. ಅದನ್ನು ಬಿಟ್ಟು ಸರ್ಕಾರಗಳು ಬಂಡವಾಳಶಾಹಿಗಳಿಗೆ ಅತಿ ವಿಧೇಯತೆಯಿಂದ ನಡೆದುಕೊಳ್ಳುತ್ತವೆ. ಅವರಿಗೆ ಅನುಕೂಲವಾಗುವಂತೆ ಅವರ ಕೈಗಾರಿಕೆಗಳಿಗೆ ಬೇಕಾದ ಜಾಗಕ್ಕೆ, ಜನರೆಲ್ಲನ್ನು ವಕ್ಕಲೆಬ್ಬಿಸಿ ಅವರತ್ರ ಇದ್ದ ತುಂಡು ಭೂಮಿಯನ್ನು ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ಜಾಗವನ್ನಲ್ಲದೆ ಬ್ಯಾಂಕುಗಳಿಂದ ಸಾಲವನ್ನು ಸಹ ಕೊಡುತ್ತಾರೆ. ಅಲ್ಲಿ ಬದುಕುತ್ತಿದ್ದ ಜನರು ಬಡವರಾಗಿದ್ದರು ತುಂಡು ಭೂಮಿಯನ್ನು ಕಳೆದುಕೊಂಡ ಮೇಲೆ ಅವರು ನಿರ್ಗತಿಕರಾಗುತ್ತಾರೆ. ಹೀಗೆ ಆರ್ಥಿಕ ಅಂತರ ಹೆಚ್ಚುತಲೆ ಹೋಗುತ್ತದೆ.
ಜೋಹನ್ಸ್ ಬರ್ಗ್ ನ ಸ್ಥಿತಿಯನ್ನು ಅರಿತುಕೊಂಡು ನಾವುಗಳು ನಮ್ಮ ಸಮಾಜವನ್ನು ಸರಿಪಡಿಸುವುದು ಉತ್ತಮ ಇಲ್ಲದಿದ್ದರೆ ಕನ್ನಡ ನಾಡು ಮತ್ತು ಇಂಡಿಯಾ ಒಕ್ಕೂಟವು ಮತ್ತೊಂದು ಜೊಹಾನ್ಸ್ ಬರ್ಗ್ ಆಗುವುದರಲ್ಲಿ ಅನುಮಾನವೇ ಇಲ್ಲ.
ಮನುಷ್ಯ ತನ್ನ ಹಸಿವನ್ನು ನೀಗಿಸಿಕೊಳ್ಳಲು ಮತ್ತು ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ಬದುಕಲು ಆಹಾರ ಬಹುಮುಖ್ಯ. ನಾವು ಆಹಾರದಲ್ಲಿ ಸಮಾನತೆ ಸಾಧಿಸಿದರೆ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕವಾಗಿಯು ಸಮಾನತೆ ಸಾಧಿಸಬಹುದು.