Tuesday, April 15, 2025

ಸತ್ಯ | ನ್ಯಾಯ |ಧರ್ಮ

ಹಕ್ಕುಗಳನ್ನು ಕೇಳುವ ಮನಸ್ಥಿತಿಯನ್ನು ಹೊಂದಬೇಕು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ – ದೂದ್ ಪೀರ್

ಹಾಸನ :  ಸಂವಿಧಾನದ ಮೂಲಕ ನಮಗೆ ಬೇಕಾದಂತಹ ಹಕ್ಕುಗಳನ್ನು ಕೇಳುವ ಮನಸ್ಥಿತಿಯನ್ನು ಹೊಂದಬೇಕು. ಅದಕ್ಕೆ ಫಲ ದಕ್ಕದೆ ಹೋದಾಗ ಹೋರಾಟ ಮಾಡುವಂತಹ ಮನೋಭಾವವನ್ನ ಬೆಳೆಸಿಕೊಳ್ಳಬೇಕು ಎಂಬುದನ್ನು   ಡಾ.ಬಿ.ಆರ್ ಅಂಬೇಡ್ಕರ್ ಅವರು ತಿಳಿಸಿಕೊಟ್ಟಿದ್ದಾರೆ ಎಂದು  ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ  ದೂದ್ ಪೀರ್ ತಿಳಿಸಿದರು.

ನಗರದ ಸಮಾಜ ಕಲ್ಯಾಣ ಇಲಾಖೆ   ಡಾ.ಬಿ.ಆರ್ ಅಂಬೇಡ್ಕರ್ ಸರ್ಕಾರಿ  ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ (ಮುಖ್ಯ ಕಟ್ಟಡ ಭಾಗ 1 ) ರಲ್ಲಿ  ನಡೆದ ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಹಾಗೂ 134 ನೇ ಜನುಮದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಬಾ ಸಾಹೇಬರು  ಕಾನೂನು ತಜ್ಞರಾಗಿ, ಬರವಣಿಗೆಗಾರರಾಗಿ, ಸ್ಕಾಲರ್ ಆಗಿ, ಸಂಪಾದಕರಾಗಿ, ತತ್ವಜ್ಞಾನಿಯಾಗಿ ಹೀಗೆ ಅನೇಕ ವಿಷಯಗಳಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದವರಾಗಿದ್ದಾರೆ.  ಡಾ.ಬಿ.ಆರ್ ಅಂಬೇಡ್ಕರ್  ಅವರ ಪುಸ್ತಕಗಳನ್ನು ಓದುವ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಬೇಕು. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪ್ರತಿಯೊಂದು ವರ್ಗಗಳಿಗೂ ಮೀಸಲಾತಿಯನ್ನು ಕೊಡದಿದ್ದರೆ ನಾವುಗಳು ಸಮಾಜದಲ್ಲಿ ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ದಲಿತ ಮುಖಂಡ ಹೆಚ್.ಕೆ ಸಂದೇಶ್ ಅವರು ಮಾತನಾಡಿ,  ಅದೊಂದು ಕಾಲದಲ್ಲಿ ಇಡೀ ಜಿಲ್ಲೆಗೆ ಒಂದೇ ಒಂದು ವಿದ್ಯಾರ್ಥಿ ನಿಲಯ ಇತ್ತು.ಚಂದ್ರ ಪ್ರಸಾದ್ ತ್ಯಾಗಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿ ದೇವೇಗೌಡರಿಗೆ ಮನವಿ ಮಾಡಿದ್ದೆವು. ಅಂದು ವಿದ್ಯಾರ್ಥಿ ನಿಲಯಕ್ಕೆ ಚಾಲನೆ ದೊರೆತು ಆರಂಭಗೊಂಡಿದೆ.  ನಮಗೆ ಹೋರಾಟ ಮಾಡಲು ಅಡಿಪಾಯ ಹಾಕಿದ ನಮ್ಮ  ಬಾಬಾ ಸಾಹೇಬರ  ಆದರ್ಷಗಳೊಂದಿಗೆ, ಅವರ ತತ್ವ ಸಿದ್ಧಾಂತಗಳೊಂದಿಗೆ  ವಿಧ್ಯಾರ್ಥಿಗಳು ತಮ್ಮ ಬದುಕನ್ನು ಶಿಕ್ಷಣದ ಮೂಲಕ ಹೋರಾಟ ನಡೆಸಿ  ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮನು ಕುಮಾರ್  ಅವರು ಮಾತನಾಡಿ,  ಈ ವಿದ್ಯಾರ್ಥಿ ನಿಲಯದಲ್ಲಿ ಎಲ್ಲರ ಪರಿಶ್ರಮದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣವಾಗಿದೆ. ಎಲ್ಲರ ಪರಿಶ್ರಮದಿಂದ ಪ್ರತಿಮೆ ಅನಾವರಣ ಗೊಂಡಿದ್ದು, ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಬಾಬಾ  ಸಾಹೇಬರ ಹಾದಿಯಲ್ಲಿ ಬೆಳೆಯಬೇಕು, ಮುಂದಿನ ಬದುಕನ್ನು ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮುವ ಮೂಲಕ  ತಮ್ಮ ಪರಿಶ್ರಮ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ನಿಲಯ ಪಾಲಕರಾದ ದ್ಯಾವಯ್ಯ ಅವರು ಮಾತನಾಡಿ, ಸತತ ಹತ್ತು ವರ್ಷಗಳ ಹೋರಾಟದ ಫಲವಾಗಿ ಇಂದು ನಮ್ಮ ನಿಲಯದಲ್ಲಿ ಬಾಬಾ ಸಾಹೇಬರ ಪ್ರತಿಮೆ ಅನಾವರಣಗೊಂಡಿದೆ. ಪ್ರತಿಮೆ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಈ ನಿಲಯದಲ್ಲಿ ಇಪ್ಪತ್ತು  ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಈ ಇಪ್ಪತ್ತು ವರ್ಷಗಳಲ್ಲಿ ಅನೇಕ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗ ಪಡೆದಿದ್ದಾರೆ. ಖಾಸಗಿ ಕಂಪೆನಿಗಳು ಅನೇಕ ಉನ್ನತ ಹುದ್ದೆಗಳನ್ನು ಪಡೆದು ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಅಂಬೇಡ್ಕರ್ ಅವರ ಕನಸಿನಂತೆ ಉತ್ತಮ ಶಿಕ್ಷಣ ಪಡೆದು ಉನ್ನತ ಮಟ್ಟಕ್ಕೆ ಏರಬೇಕು ಎಂದು ಅಭಿಪ್ರಾಯಪಟ್ಟರು.ಈ  ವೇಳೆ ಪತ್ರಕರ್ತರಾದ ರಾಮು ಕುಮಾರ್ ಹಾಗೂ ಅಡುಗೆ ಸಿಬ್ಬಂದಿಗಳ ಹಾಗೂ ನಿಲಯದ ವಿದ್ಯಾರ್ಥಿಗಳು ಇದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page