“ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸದಿದ್ದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಚೀನಾ ಸೇರಿದಂತೆ ಮಾಸ್ಕೋದ ವ್ಯಾಪಾರ ಪಾಲುದಾರರ ಮೇಲೆ ಭಾರೀ ಸುಂಕ ವಿಧಿಸುತ್ತಾರೆ” ಎದು ಯುಎಸ್ ಸೆನೆಟರ್ ಲಿಂಡ್ಸೆ ಗ್ರಹಾಂ ಎಚ್ಚರಿಸಿದ್ದಾರೆ.
ತೈಲ ಸಂಬಂಧಿತ ಆಮದುಗಳ ಮೇಲೆ ಟ್ರಂಪ್ ಆಡಳಿತವು 100 ಪ್ರತಿಶತ ಸುಂಕ ವಿಧಿಸಲು ಯೋಜಿಸುತ್ತಿದೆ ಎಂದು ರಿಪಬ್ಲಿಕನ್ ಪಕ್ಷದ ಶಾಸಕರು ಹೇಳಿದ್ದಾರೆ.
ಭಾರತ ಮತ್ತು ಚೀನಾ ಸೇರಿದಂತೆ ರಷ್ಯಾದೊಂದಿಗೆ ವ್ಯಾಪಾರ ಮುಂದುವರಿಸುವ ದೇಶಗಳ ಸರಕುಗಳ ಮೇಲೆ ಶೇ. 500 ರಷ್ಟು ಸುಂಕ ವಿಧಿಸುವ ಮಸೂದೆಯನ್ನು ಗ್ರಹಾಂ ಈ ಹಿಂದೆ ಪ್ರಸ್ತಾಪಿಸಿದ್ದರು. “ನಾನು ಚೀನಾ, ಭಾರತ ಮತ್ತು ಬ್ರೆಜಿಲ್‌ಗೆ ಹೇಳುವುದೇನೆಂದರೆ: ಈ ಯುದ್ಧ ಮುಂದುವರಿಯಲು ನೀವು ಅಗ್ಗದ ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸಿದರೆ, ನಾವು ನಿಮ್ಮನ್ನು ಮುಗಿಸುತ್ತೇವೆ ಮತ್ತು ನಿಮ್ಮ ಆರ್ಥಿಕತೆಯನ್ನು ನಾವು ಪುಡಿಮಾಡುತ್ತೇವೆ” ಎಂದು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಗ್ರಹಾಂ ಹೇಳಿದ್ದಾರೆ.
ರಷ್ಯಾದ ಕಚ್ಚಾ ತೈಲ ರಫ್ತಿನಲ್ಲಿ ಈ ಮೂರು ದೇಶಗಳು ಸುಮಾರು ಶೇ. 80 ರಷ್ಟನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ, ಇದು “ಪುಟಿನ್ ಅವರ ಯುದ್ಧ ಯಂತ್ರವನ್ನು” ಮುಂದುವರಿಸುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ರಷ್ಯಾಕ್ಕೆ ನೇರ ಎಚ್ಚರಿಕೆ ನೀಡುತ್ತಾ ಗ್ರಹಾಂ, “ಅಧ್ಯಕ್ಷ ಪುಟಿನ್, ನಿಮ್ಮ ವಿಷಯಕ್ಕೆ ಬಂದಾಗ ಆಟ ಬದಲಾಗಿದೆ. ನೀವು ನಿಮ್ಮ ಸ್ವಂತ ಗಂಡಾಂತರದಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಆಡಿಕೊಂಡಿದ್ದೀರಿ. ನೀವು ಪ್ರಮುಖ ವ್ಯಾಪಾರಿ ಒಪ್ಪಂದದಲ್ಲಿ ತಪ್ಪು ಮಾಡಿದ್ದೀರಿ ಮತ್ತು ಇದರ ಪರಿಣಾಮ ನಿಮ್ಮ ಆರ್ಥಿಕತೆಯು ಪುಡಿಪುಡಿಯಾಗುತ್ತಲೇ ಇರುತ್ತದೆ” ಎಂದು ಹೇಳಿದರು.
ಮುಂದುವರೆದು, “90 ರ ದಶಕದ ಮಧ್ಯಭಾಗದಲ್ಲಿ, ಉಕ್ರೇನ್ ತನ್ನ ಸಾರ್ವಭೌಮತ್ವವನ್ನು ರಷ್ಯಾ ಗೌರವಿಸುತ್ತದೆ ಎಂಬ ಭರವಸೆಯೊಂದಿಗೆ 1,700 ಪರಮಾಣು ಶಸ್ತ್ರಾಸ್ತ್ರಗಳನ್ನು ತ್ಯಜಿಸಿತು. ಆದರೆ ಪುಟಿನ್ ಆ ಭರವಸೆಯನ್ನು ಮುರಿದಿದ್ದಾರೆ” ಎಂದು ಲಿಂಡ್ಸೆ ಗ್ರಹಾಂ ಆರೋಪಿಸಿದ್ದಾರೆ.