ಹೊಸದೆಹಲಿ: ಮುಂದಿನ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಆಪ್ ರಾಷ್ಟ್ರೀಯ ವಕ್ತಾರರಾದ ಪ್ರಿಯಾಂಕಾ ಕಕ್ಕರ್ ಬುಧವಾರ ಘೋಷಿಸಿದ್ದಾರೆ.
“ಒಂದೆಡೆ ಕಾಂಗ್ರೆಸ್‌ನ ಅತಿಯಾದ ಆತ್ಮವಿಶ್ವಾಸ ಮತ್ತು ಇನ್ನೊಂದು ಕಡೆ ಬಿಜೆಪಿಯ ದುರಹಂಕಾರವನ್ನು ನಾವು ನೋಡುತ್ತಿದ್ದೇವೆ. ಆದರೆ, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಏಕಾಂಗಿಯಾಗಿ ಸ್ಪರ್ಧಿಸುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ನಾವು ಮಾಡಿರುವ ಅಭಿವೃದ್ಧಿಯೇ ನಮ್ಮ ಕುರಿತು ಹೇಳುತ್ತದೆ. ನಾವೇ ತಲೆ ಬಾಗಿ ಜನರ ಮುಂದೆ ಹೋಗುತ್ತೇವೆ,’’ ಎಂದರು.
2025ರ ಆರಂಭದಲ್ಲಿ ದೆಹಲಿ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆಯಿದೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 70ರಲ್ಲಿ 62 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ 8 ಸ್ಥಾನ ಗೆದ್ದಿದೆ.
ಹರಿಯಾಣ ವಿಧಾನಸಭಾ ಚುನಾವಣೆ ಒಂದು ದೊಡ್ಡ ಪಾಠ ಎಂದು ಎಎಪಿ ಅಧ್ಯಕ್ಷ ಕೇಜ್ರಿವಾಲ್ ಫಲಿತಾಂಶದ ನಂತರ ಪ್ರತಿಕ್ರಿಯಿಸಿದ್ದಾರೆ. ಕಾರ್ಯಕರ್ತರು ಅತಿಯಾದ ಆತ್ಮವಿಶ್ವಾಸದೊಂದಿಗೆ ಚುನಾವಣೆಗೆ ಹೋಗಬೇಡಿ ಮುಂಬರುವ ವಿಧಾನಸಭಾ ಚುನಾವಣೆಗೆ ಎಲ್ಲರೂ ಶ್ರಮಿಸಬೇಕು ಎಂದು ಎಚ್ಚರಿಸಿದರು.
“ಚುನಾವಣೆಗಳು ಬರುತ್ತಿವೆ. ಅವರನ್ನು ಲಘುವಾಗಿ ಪರಿಗಣಿಸಬೇಡಿ. ಅತಿಯಾದ ಆತ್ಮವಿಶ್ವಾಸ ಬೇಡ. ಪ್ರತಿ ಚುನಾವಣೆಯಲ್ಲೂ ಸ್ಥಾನ ಗೆಲ್ಲುವುದು ಕಷ್ಟ’’ ಎಂದು ಮಂಗಳವಾರ ನಡೆದ ಎಎಪಿ ಕೌನ್ಸಿಲರ್‌ಗಳ ಸಭೆಯಲ್ಲಿ ಹೇಳಿದರು.