Home ರಾಜ್ಯ ಉತ್ತರ ಕನ್ನಡ ಜಮೀನು ಮತ್ತು ಆಸ್ತಿಗಳ ನೊಂದಣಿ ಸಮಯದಲ್ಲಿ ಕಡಿಮೆ ಮುದ್ರಾಂಕ ನೀಡಿ ನೊಂದಾಯಿಸಿರುವವರಿಂದ ಹೆಚ್ಚುವರಿ ಮೊತ್ತ ವಸೂಲಿ:...

ಜಮೀನು ಮತ್ತು ಆಸ್ತಿಗಳ ನೊಂದಣಿ ಸಮಯದಲ್ಲಿ ಕಡಿಮೆ ಮುದ್ರಾಂಕ ನೀಡಿ ನೊಂದಾಯಿಸಿರುವವರಿಂದ ಹೆಚ್ಚುವರಿ ಮೊತ್ತ ವಸೂಲಿ: ಸಚಿವ ಕೃಷ್ಣ ಭೈರೇಗೌಡ

0

ಕಾರವಾರ, ಅ.8 (ಕರ್ನಾಟಕ ವಾರ್ತೆ):- ಉತ್ತರ ಕನ್ನಡ ಜಿಲ್ಲೆಯು ರಾಜ್ಯದ ಅತ್ಯಂತ ವಿಸ್ತಾರವಾದ ಜಿಲ್ಲೆಯಲ್ಲಿ ಒಂದಾಗಿದ್ದು, ಅರಣ್ಯ ಮತ್ತು ಸಮುದ್ರದಿಂದ ಕೂಡಿದ್ದು , ಜಿಲ್ಲೆಯಲ್ಲಿ ವಿಭಿನ್ನ ಸಮಸ್ಯೆಗಳಿದ್ದು, ಜಿಲ್ಲೆಯಲ್ಲಿ ಪ್ರಾಕೃತಿಕ ದುರ್ಘಟನೆಗಳು ನಡೆಯದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಅವರು ಮಂಗಳವಾರ, ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಅರಣ್ಯ ಸಂಬಂಧಿತ ಸಮಸ್ಯೆಗಳು ಅಧಿಕವಾಗಿದ್ದು, ಇವುಗಳಿಗೆ ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಲು ಕಷ್ಟವಾಗಿದ್ದು, ಕಂದಾಯ ಇಲಾಖೆಯ ಮೂಲಕ ಸಾಧ್ಯವಿರುವ ಎಲ್ಲಾ ಪರಿಹಾರ ಕಂಡುಕೊಳ್ಳಲು ನಿರಂತರವಾಗಿ ಪ್ರಯತ್ನಿಸುವುದರ ಮೂಲಕ ಸಾರ್ವಜನಿಕರಿಗೆ ನೆರವು ಒದಗಿಸುವಂತೆ ತಿಳಿಸಿದ ಸಚಿವರು, ಇತ್ತೀಚೆಗೆೆ ಅತಿವೃಷ್ಠಿಯಿಂದ ಸಂಭವಿಸಿದ ಅನಾಹುತಗಳನ್ನು ಜಿಲ್ಲಾಡಳಿತ ನಿರ್ವಹಿಸಿದ ರೀತಿಗೆ ಪ್ರಶಂಸೆ ವ್ಯಕ್ತಪಡಿಸಿದರು.

ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಶೇಖರಗೊಂಡಿರುವ ಮಣ್ಣು ಮತ್ತು ಕಲ್ಲುಗಳನ್ನು ತೆರವುಗೊಳಿಸುವ ಕುರಿತಂತೆ, ಈ ಕ್ಷೇತ್ರದಲ್ಲಿ ನುರಿತ ತಜ್ಞರ ನೆರವು ಪಡೆದುಕೊಳ್ಳುವಂತೆ ತಿಳಿಸಿದ ಅವರು, ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪ್ರಗತಿ ಕುರಿತಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವಂತೆ ಹಾಗೂ ನೇವಲ್ ಆಸ್ಪತ್ರೆ ಬಳಿ ಅಪೂರ್ಣವಾಗಿರುವ ರಸ್ತೆ ಕಾಮಗಾರಿ ಸೇರಿದಂತೆ , ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಕಿ ಇರುವ ಎಲ್ಲಾ ಕಾಮಗಾರಿಯನ್ನು ಶೀಘ್ರದಲ್ಲಿ ಸಂಪೂರ್ಣವಾಗುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು, ಜಿಲ್ಲೆಯಲ್ಲಿ ಗುಡ್ಡ ಕುಸಿತ ಪ್ರಕರಣಗಳನ್ನು ತಡೆಯಲು ರಾಜ್ಯ ಸರ್ಕಾರದಿಂದ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಆರ್.ಟಿ.ಸಿ ಗಳಿಗೆ ಆಧಾರ್ ಜೋಡಣೆ ಮಾಡುವ ಆಧಾರ್ ಸೀಡಿಂಗ್ ಕಾರ್ಯವನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ಸೂಚಿಸಿದ ಸಚಿವರು, ಸರ್ಕಾರಿ ಜಾಗದ ಸಂರಕ್ಷಣೆಗಾಗಿ ರೂಪಿಸಿರುವ ಲ್ಯಾಂಡ್ ಬೀಟ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಮತ್ತು ಬಗರ್ ಹುಕುಂ ನಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಆದಷ್ಟು ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಸೂಚಿಸಿದರು.

ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಮಂಜೂರು ಮಾಡುವಂತೆ ತಿಳಿಸಿದ ಅವರು, ಹಳಿಯಾಳ ಮತ್ತು ಮುಂಡಗೋಡು ನಲ್ಲಿನ ಕಂದಾಯ ಗ್ರಾಮಗಳ ಸಾರ್ವಜನಿಕರಿಗೆ ಡಿಜಿಟಲ್ ಹಕ್ಕುಪತ್ರಗಳನ್ನು ವಿತರಿಸುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಪೋಡಿ ಮುಕ್ತ ಆಭಿಯಾನ ಮತ್ತು ಪೌತಿ ಖಾತೆ ಆಂದೋಲನದ ಮೂಲಕ ಜಮೀನುಗಳ ಖಾತೆಗಳನ್ನು ಸಂಪೂರ್ಣ ವಿವಾದರಹಿತವಾಗಿ ವಾರಿಸುದಾರರಿಗೆ ದೊರಕಿಸುವ ನಿಟ್ಟಿನಲ್ಲಿ ಕಾಯೋನ್ಮೂಖರಾಗುವಂತೆ ತಿಳಿಸಿದ ಅವರು, ಕಂದಾಯ ಇಲಾಖೆ ವ್ಯಾಪ್ತಿಯ ಎಲ್ಲಾ ಕಚೇರಿಗಳಲ್ಲಿ ಇ- ಆಫೀಸ್ ತಂತ್ರಾಶವನ್ನು ಕಡ್ಡಾಯವಾಗಿ ಅಳವಡಿಸಿ ಆ ಮೂಲಕವೇ ಎಲ್ಲಾ ಕಡತಗಳ ನಿರ್ವಹಣೆ ಮಾಡುವಂತೆ ತಿಳಿಸಿದರು.

ಜಮೀನು ಮತ್ತು ಆಸ್ತಿಗಳ ನೊಂದಣಿ ಸಮಯದಲ್ಲಿ ಕಡಿಮೆ ಮುದ್ರಾಂಕ ನೀಡಿ ನೊಂದಾಯಿಸಿರುವವರನ್ನು ಗುರುತಿಸಿ, ಅವರಿಂದ ವ್ಯತ್ಯಾಸದ ಮೊತ್ತವನ್ನು ವಸೂಲಿ ಮಾಡುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ, ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಏಜೆನ್ಸಿ ಲಿಮಿಟೆಡ್ ಅಧ್ಯಕ್ಷ ಹಾಗೂ ಕಾರವಾರ ಶಾಸಕ ಸತೀಶ್ ಕೆ. ಸೈಲ್, ಶಿರಸಿ ಶಾಸಕ ಭೀಮಣ್ಣ ನಾಯ್ಕ್, ಜಿಲ್ಲಾಧಿಕಾರಿ ಕೆ.ಲಕ್ಷಿö್ಮಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಎಂ. ಹಾಗೂ ಜಿಲ್ಲೆಯ ಎಲ್ಲಾ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್ ಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಕಂದಾಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಿರೂರು ಗುಡ್ಡ ಕುಸಿತ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳನ್ನು ಸಚಿವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.

You cannot copy content of this page

Exit mobile version