Home ರಾಜ್ಯ ರಾಮನಗರ ‘ಒಂದಿಂಚು ಭೂಮಿಯ ಸ್ವಾಧೀನಕ್ಕೂ ಬಿಡುವುದಿಲ್ಲ’: ಜಿಬಿಐಟಿ ವಿರುದ್ಧ ಜೆಡಿಎಸ್ ಪ್ರತಿಭಟನೆ

‘ಒಂದಿಂಚು ಭೂಮಿಯ ಸ್ವಾಧೀನಕ್ಕೂ ಬಿಡುವುದಿಲ್ಲ’: ಜಿಬಿಐಟಿ ವಿರುದ್ಧ ಜೆಡಿಎಸ್ ಪ್ರತಿಭಟನೆ

0

ಬಿಡದಿ (ರಾಮನಗರ): ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (GBIT) ಯೋಜನೆಗೆ ಒಂದಿಂಚು ಭೂಮಿ ಸ್ವಾಧೀನಕ್ಕೆ ಬಿಡುವುದಿಲ್ಲ. ಯೋಜನೆಯನ್ನು ಕೈಬಿಡದಿದ್ದರೆ ವಿಧಾನಸೌಧ ಮತ್ತು ಮುಖ್ಯಮಂತ್ರಿ ನಿವಾಸದವರೆಗೆ ಪಾದಯಾತ್ರೆ ನಡೆಸಿ ಮುತ್ತಿಗೆ ಹಾಕಲಾಗುವುದು ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.

ಜಿಬಿಐಟಿ ವಿರೋಧಿಸಿ ಹೋಬಳಿಯ ಭೈರಮಂಗಲದಲ್ಲಿ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲಿಸಿ ಜೆಡಿಎಸ್ ಭಾನುವಾರ ಹಮ್ಮಿಕೊಂಡಿದ್ದ ‘ಬಿಡದಿ ಉಳಿಸಿ, ಜಿಬಿಐಟಿ ನಿಲ್ಲಿಸಿ’ ಪ್ರತಿಭಟನಾ ಸಭೆಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಈ ಎಚ್ಚರಿಕೆ ನೀಡಿದರು.

ಎತ್ತಿನಗಾಡಿಯಲ್ಲಿ ನಿಖಿಲ್ ಕುಮಾರಸ್ವಾಮಿ ಆಗಮನ

ನಿಖಿಲ್ ಕುಮಾರಸ್ವಾಮಿ ಅವರು ನಾಯಕರೊಂದಿಗೆ ಭೈರಮಂಗಲ ಕ್ರಾಸ್‌ನಿಂದ ಎತ್ತಿನಗಾಡಿಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಕಾರ್ಯಕರ್ತರು ಬೈಕ್ ಮತ್ತು ಇತರ ವಾಹನಗಳಲ್ಲಿ ಹಿಂಬಾಲಿಸಿದರು. ಮಾರ್ಗದುದ್ದಕ್ಕೂ ಜಿಬಿಐಟಿ ಯೋಜನೆ, ಸರ್ಕಾರ, ಡಿಸಿಎಂ ಮತ್ತು ಶಾಸಕ ಎಚ್.ಸಿ. ಬಾಲಕೃಷ್ಣ ವಿರುದ್ಧ ಘೋಷಣೆಗಳು ಮೊಳಗಿದವು.

ರೈತರ ಪರ ಕುಮಾರಸ್ವಾಮಿ ಧ್ವನಿ

ದೆಹಲಿಯಿಂದ ನೇರಪ್ರಸಾರದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, “ರೈತರ ಮೇಲಿನ ದಬ್ಬಾಳಿಕೆ, ಸರ್ವೆ ನಿಲ್ಲಿಸಬೇಕು. ರೈತರಿಗೆ ತೊಂದರೆಯಾದರೆ ನನ್ನ ಆರೋಗ್ಯವನ್ನೂ ಲೆಕ್ಕಿಸದೆ ಖುದ್ದು ಸ್ಥಳಕ್ಕೆ ಬಂದು ಹೋರಾಟದಲ್ಲಿ ಭಾಗವಹಿಸುತ್ತೇನೆ. ರೈತರು ಎದೆಗುಂದಬಾರದು. ನಿಮ್ಮೊಂದಿಗೆ ನಾನಿದ್ದೇನೆ,” ಎಂದು ಧೈರ್ಯ ತುಂಬಿದರು.

ಇದೇ ವೇಳೆ, ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದರು: “ಯೋಜನೆ ಕುರಿತು ರೈತರ ಜೊತೆ ಮೂರ್ನಾಲ್ಕು ಸಭೆ ನಡೆಸಿದ್ದೆ. ರೈತರು ವಿರೋಧಿಸಿದ್ದರಿಂದ ಭೂ ಸ್ವಾಧೀನಕ್ಕೆ ಮುಂದಾಗಲಿಲ್ಲ. ಯೋಜನೆ ಹೆಸರಲ್ಲಿ ಡಿ.ಕೆ. ಶಿವಕುಮಾರ್ ಆಡುತ್ತಿರುವ ಆಟ ಗೊತ್ತಿದೆ.”

ರಿಯಲ್ ಎಸ್ಟೇಟ್ ದಂಧೆಯ ಆರೋಪ

ನಿಖಿಲ್ ಕುಮಾರಸ್ವಾಮಿ ಅವರು ಸರ್ಕಾರದ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದರು: “ಇದು ನಿಜವಾಗಿಯೂ ಅಭಿವೃದ್ಧಿ ಯೋಜನೆಯಾಗಿದ್ದರೆ, ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿ ನಾಲ್ಕು ತಿಂಗಳಾದರೂ ಸಾಧಕ-ಬಾಧಕ ಕುರಿತು ಸ್ಥಳೀಯ ಶಾಸಕರು, ಡಿಸಿಎಂ ಹಾಗೂ ಅಧಿಕಾರಿಗಳು ರೈತರ ಜೊತೆ ಏಕೆ ಸಭೆ ನಡೆಸಿಲ್ಲ? ರೈತರ ಭೂಮಿ ಲಪಟಾಯಿಸುತ್ತಿರುವುದು ರಿಯಲ್ ಎಸ್ಟೇಟ್ ದಂಧೆಗೆ ಎಂಬುದು ಇದರಲ್ಲೇ ಗೊತ್ತಾಗುತ್ತದೆ,” ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಜವರಾಯಿ ಗೌಡ, ಮಾಜಿ ಶಾಸಕರಾದ ಎ. ಮಂಜುನಾಥ್, ಡಾ. ಕೆ. ಅನ್ನದಾನಿ, ರಮೇಶ್ ಗೌಡ ಹಾಗೂ ಇತರರು ಭಾಗವಹಿಸಿದ್ದರು.

You cannot copy content of this page

Exit mobile version