ನವದೆಹಲಿ: “ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿರುವ ಎನ್‌ಡಿಎ ಸರ್ಕಾರದೊಂದಿಗೆ ನಮ್ಮ ಪಕ್ಷವು ಅಧಿಕಾರ ಹಂಚಿಕೊಳ್ಳಲಿದೆ. ಆದ̧ರೆ ಅವರು ಮುಸ್ಲಿಂ ವಿರೋಧಿ ನಿಲುವು ತಾಳಿದರೆ ನಾವು ಅದನ್ನು ಸಹಿಸಲ್ಲ̤ ಮೈತ್ರಿ ಸರ್ಕಾರಕ್ಕೆ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ದ ನಿಲುವು ತಾಳಲು ಜೆಡಿಯು ಅವಕಾಶ ನೀಡುವುದಿಲ್ಲ” ಎಂದು ಜೆಡಿಯು ಪಕ್ಷದ ರಾಷ್ಟ್ರೀಯ ವಕ್ತಾರ ಕೆಸಿ ತ್ಯಾಗಿ ಹೇಳಿದ್ದಾರೆ.
ಶುಕ್ರವಾರ ಡಿಜಿಟಲ್ ಸುದ್ದಿ ವಾಹಿನಿ ರೆಡ್ ಮೈಕ್ ಜೊತೆ ಮಾತಾಡಿ, ನಾವು ಬಿಜೆಪಿಯೊಂದಿಗೆ ಅಧಿಕಾರಕ್ಕೇರಿದರೂ, ಮುಸ್ಲಿಮರು ಸೇರಿದಂತೆ ಇತರ ಅಲ್ಪಸಂಖ್ಯಾತರ ವಿರೋಧಿ ನಿಲುವನ್ನು ಒಪ್ಪುದಿಲ್ಲ” ಎಂದು ತ್ಯಾಗಿ ಹೇಳಿದ್ದು, “ಮುಸ್ಲಿಮರು ನಮ್ಮ ಪಕ್ಷದ ಮೇಲೆ ವಿಶ್ವಾಸ ಇಟ್ಟಿರುವುದರ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ಮುಸ್ಲಿಮರನ್ನು ಗುರಿಯಾಗಿಸಿ ದ್ವೇಷ ಭಾಷಣ ಮಾಡಿರುವುದನ್ನು ಉಲ್ಲೇಖಿಸಿ, “ಜೆಡಿಯು ಈ ಸರ್ಕಾರದಲ್ಲಿ ಜಾತ್ಯಾತೀತ ತತ್ವವನ್ನು ಎತ್ತಿ ಹಿಡಿಯಲಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ತ್ಯಾಗಿ, “ಚುನಾವಣೆಯಲ್ಲಿ ಕೆಸರೆರಚಲು ಬಳಸಿದ ವಿಷಯಗಳನ್ನು ಮರೆತುಬಿಡಬೇಕು” ಎಂದಿದ್ದಾರೆ.
“ನಮ್ಮ ಪಕ್ಷದ ಅಭ್ಯರ್ಥಿ ಮುಜಾಹಿದ್ ಆಲಂ ಅವರು ಬಿಹಾರದ ಮುಸ್ಲಿಂ ಬಾಹುಳ್ಯದ ಕಿಶನ್‌ಗಂಜ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದಿಂದ ಕಣಕ್ಕಿಳಿದಿದ್ದ ಅಭ್ಯರ್ಥಿಗಿಂತ ಹೆಚ್ಚು ಮತ ಗಳಿಸಿದ್ದಾರೆ” ಎಂದು ಕೆಸಿ ತ್ಯಾಗಿ ಹೇಳಿದ್ದು, ಮುಸ್ಲಿಮರು ಓವೈಸಿ ಪಕ್ಷಕ್ಕಿಂತ ಜೆಡಿಯು ಮೇಲೆ ವಿಶ್ವಾಸವಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಕಿಶನ್‌ಗಂಜ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಜಾವೇದ್ ಗೆಲುವು ದಾಖಲಿಸಿದ್ದಾರೆ.
ಜೆಡಿಯು ಎಲ್ಲಾ ಜಾತಿ, ಧರ್ಮಗಳನ್ನು ಒಟ್ಟಿಗೆ ಮುನ್ನಡೆಸಲು ಭಯಸುತ್ತದೆ. ಜನರ ಮೇಲೆ ನೀತಿಗಳನ್ನು ಹೇರುವ ಮೊದಲು ಅವುಗಳ ಕುರಿತು ವಿಸ್ಕೃತವಾದ ಚರ್ಚೆ ನಡೆಸಲು ನಮ್ಮ ಪಕ್ಷ ಸಲಹೆ ನೀಡುತ್ತದೆ” ಎಂದು ಕೆಸಿ ತ್ಯಾಗಿ ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆ ಜಾರಿಯ ಬಗ್ಗೆ ಪ್ರತಿಕ್ರಿಯಿಸಿದ ತ್ಯಾಗಿ, “ನಮ್ಮ ಪಕ್ಷ ‘ಸುಧಾರಣೆ ವಿರೋಧಿಯಲ್ಲ’. ಆದರೆ ಸಂಹಿತೆಯ ಕರಡು ತಯಾರಿಸಲು ಎಲ್ಲಾ ಪಾಲುದಾರರು, ಮುಖ್ಯಮಂತ್ರಿಗಳು, ರಾಜಕೀಯ ಪಕ್ಷಗಳು ಮತ್ತು ಪಂಗಡಗಳನ್ನು ಸಂಪರ್ಕಿಸಬೇಕು” ಎಂದಿದ್ದಾರೆ.