Monday, April 29, 2024

ಸತ್ಯ | ನ್ಯಾಯ |ಧರ್ಮ

ಅಮೆರಿಕಾ ಎಂಬ ಬಲೂನಿಗೆ ಹವಾಮಾನದ ಮಿಸೈಲುಗಳು| ಬಾಂಬ್ ಸೈಕ್ಲೋನ್

ಅಮೆರಿಕಾದ ಈಶಾನ್ಯ ದಿಕ್ಕಿನಲ್ಲಿ ಕೆನಡಾದ ಗಡಿಯ ಬಳಿ ಎದ್ದ ಬಾಂಬ್ ಸೈಕ್ಲೋನಿಗೆ ಅಲ್ಲಿರುವ ದೊಡ್ಡ ಸರೋವರಗಳ ನೀರಿನ ಸಂಪರ್ಕ ಸಿಕ್ಕಿಬಿಟ್ಟಿತು. ಮುಖ್ಯವಾಗಿ ಈರಿ ಸರೋವರದಿಂದ ಎಲಿಯಟ್ ಜೊತೆ ಕೂಡಿಕೆ ಮಾಡಿಕೊಂಡು ಎದ್ದು ಹಾರಿದ ನೀರು ಚಳಿಗಾಲವಾದ ಕಾರಣ ಹೆಪ್ಪುಗಟ್ಟಿ ಇಡೀ ಚಳಿಗಾಲದಲ್ಲಿ ಬೀಳಬಹುದಾದಷ್ಟು ಮಂಜನ್ನೆಲ್ಲ ನಾಲ್ಕೈದು ದಿನಗಳ ಗಡುವಿನಲ್ಲೆ ಸುರಿದುಬಿಟ್ಟಿತ್ತು!…..ರವಿಕುಮಾರ್‌ ಕೆ ಎಸ್‌ ಬರೆದ ಮೈ ನವಿರೇಳಿಸುವ  ಈ ಲೇಖನದ ಎರಡನೆಯ ಭಾಗ ನಿಮಗಾಗಿ.

ಎಲಿಯಟ್ ಹೆಸರಿನ ಮಂಜಿನ ಸುಳಿಗಾಳಿಯನ್ನು ವೈಜ್ಞಾನಿಕವಾಗಿ ‘ಬಾಂಬ್ ಸೈಕ್ಲೋನ್’ ಎಂದು ಕರೆಯಲಾಗಿದೆ. ಒಂದು ಬಾಂಬು ಸಿಡಿದಾಗ ಅತಿ ಕಡಿಮೆ ಸಮಯದಲ್ಲಿ ಹೇಗೆ ಅದು ಮಿತಿಮೀರಿದ ಶಕ್ತಿಯನ್ನು ಹೊರಚೆಲ್ಲುವುದೊ ಹಾಗೆ ಬಿರುಗಾಳಿಯೊಂದು ಅತಿ ಕಡಿಮೆ ಸಮಯದಲ್ಲಿ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಂಡು ತಾನೆದ್ದ ಭೂಪ್ರದೇಶದ ತಾಪಕ್ಕನುಗುಣವಾಗಿ ವಿಪರೀತ ಮಳೆ ಅಥವಾ ಮಂಜನ್ನು ಸುರಿದುಬಿಡುತ್ತದೆ. ಬಾಂಬ್ ಸೈಕ್ಲೋನ್ ಏಳುವ ಮುನ್ನ ಭೂಮಿಯ ಮೇಲ್ಮೈಗೆ ಹತ್ತಿರವಿರುವ ಗಾಳಿಯು ವಾತಾವರಣದ ಮೇಲು ಸ್ತರಗಳಿಗೆ ಬಹಳ ವೇಗದಿಂದ ಏರುತ್ತದೆ. ಹಾಗೆ ಏರಿದಾಗ ನೆಲದ ಮೇಲಿನ ಸ್ತರದಲ್ಲಿ ಒತ್ತಡ ಕುಸಿಯುತ್ತದೆ. ಬಿರುಗಾಳಿಯ ನಡುಭಾಗದಲ್ಲಿ 24 ತಾಸುಗಳಲ್ಲಿ ಕನಿಷ್ಟ 24 ಮಿಲಿಬಾರುಗಳ ಮಿತಿಗೆ ಗಾಳಿಯ ಒತ್ತಡವು ಕುಸಿದಾಗ ಬಾಂಬ್ ಸೈಕ್ಲೋನ್ ಹುಚ್ಚೆದ್ದು ಸುರುಳಿಗಟ್ಟುತ್ತದೆ. ಸುರುಳಿಗಟ್ಟುವ ಗಾಳಿಗೆ ಒಂದು ವೇಳೆ ನೆಲದ ಮೇಲಿನ ನೀರಿನ ಆಸರೆ (ಕಡಲು, ಸರೋವರಗಳು ಯಾವುದೂ ಆಗಬಹುದು)ಗಳ ಸಂಪರ್ಕ ದಕ್ಕಿಬಿಟ್ಟರೆ ತನ್ನ ಶಕ್ತಿಗೆ ಅನುಗುಣವಾಗಿ ನೀರನ್ನೆಲ್ಲ ತನ್ನೊಂದಿಗೆ ಮೇಲಕ್ಕೆ ಒಯ್ದು ಬೆಚ್ಚಗಿನ ಪ್ರದೇಶವಾದರೆ ಮಳೆಯಾಗಿ ಸುರಿಸುತ್ತದೆ ಅಥವಾ ಶೀತವಲಯದ ಪ್ರದೇಶವಾದರೆ ಮಂಜಾಗಿ ಸುರಿಸುತ್ತದೆ. ಅಮೆರಿಕಾದ ಈಶಾನ್ಯ ದಿಕ್ಕಿನಲ್ಲಿ ಕೆನಡಾದ ಗಡಿಯ ಬಳಿ ಎದ್ದ ಬಾಂಬ್ ಸೈಕ್ಲೋನಿಗೆ ಅಲ್ಲಿರುವ ದೊಡ್ಡ ಸರೋವರಗಳ ನೀರಿನ ಸಂಪರ್ಕ ಸಿಕ್ಕಿಬಿಟ್ಟಿತು. ಮುಖ್ಯವಾಗಿ ಈರಿ ಸರೋವರದಿಂದ ಎಲಿಯಟ್ ಜೊತೆ ಕೂಡಿಕೆ ಮಾಡಿಕೊಂಡು ಎದ್ದು ಹಾರಿದ ನೀರು ಚಳಿಗಾಲವಾದ ಕಾರಣ ಹೆಪ್ಪುಗಟ್ಟಿ ಇಡೀ ಚಳಿಗಾಲದಲ್ಲಿ ಬೀಳಬಹುದಾದಷ್ಟು ಮಂಜನ್ನೆಲ್ಲ ನಾಲ್ಕೈದು ದಿನಗಳ ಗಡುವಿನಲ್ಲೆ ಸುರಿದುಬಿಟ್ಟಿತ್ತು.

ಬಾಂಬ್ ಸೈಕ್ಲೋನ್ ರೂಪುಗೊಳ್ಳುವ ಕ್ರಿಯೆಯನ್ನು ‘ಬಾಂಬೊಜೆನೆಸಿಸ್’ ಅಥವಾ ಬಾಂಬಿನ ಹುಟ್ಟು ಎನ್ನುತ್ತಾರೆ. ಹೆಸರು, ವಿವರಣೆ, ವಿಶೇಷಣಗಳೇನೆ ಇರಲಿ ಎಲಿಯಟ್ ಎಂಬ ಬಾಂಬ್ ಸೈಕ್ಲೋನ್ ಅಪ್ಪಳಿಸಿದ ಪ್ರದೇಶದ ಅಮೆರಿಕನ್ನರು ತಮ್ಮ ಜೀವನ ಪೂರ್ತಿ ಮರೆಯಲಾಗದಂತಹ ಕೆಟ್ಟ ಕನಸೊಂದನ್ನು ಬೇಡವೆಂದರೂ ನೆನಪಿಟ್ಟುಕೊಳ್ಳಬೇಕಾಗಿದೆ. ಹಾಗೆ ನೋಡಿದರೆ ಹಿಂದೆಲ್ಲ ಬೇಕಾದಷ್ಟು ಬಾಂಬ್ ಸೈಕ್ಲೋನುಗಳನ್ನು ಅಮೆರಿಕಾ ಕಂಡಿದೆ. ಆದರೆ ಈ ಬಾರಿಯದು ಹಿಂದೆಂದೂ ಕಾಣದ್ದು, ಕೇಳದ್ದು, ಅನುಭವಿಸದೆ ಇದ್ದದ್ದು.

ಒಂದು ಪೀಳಿಗೆಯಲ್ಲಿ ಒಂದು ಬಾರಿ ಈ ತರದ ಭೀಕರ ಬಾಂಬ್ ಸೈಕ್ಲೋನ್ ಅಪ್ಪಳಿಸಬಹುದು ಎಂದು ಬಹುಪಾಲು ಅಮೆರಿಕನ್ನರು ಹೇಳುತ್ತಾರೆ. ಮೂಲನಿವಾಸಿ ರೆಡ್ ಇಂಡಿಯನ್ನರು, ಬಿಳಿಯರು ಅಮೆರಿಕಾದ ನೆಲವನ್ನು ಅತಿಕ್ರಮಿಸಿ ನೆಲೆಸುವಾಗಲೆ ದೊಡ್ಡಮಂಜಿನ ಕಠಿಣ ಚಳಿಗಾಲಗಳ ಬಗ್ಗೆ ಎಚ್ಚರಿಸಿದ್ದರು. ಅವರ ತಿಳುವಳಿಕೆಯ ಪ್ರಕಾರ ಪ್ರತೀ ಏಳು ವರುಷಗಳಿಗೊಮ್ಮೆ ಸಿಕ್ಕಾಪಟ್ಟೆ ಮಂಜು ಬೀಳುವ ಒಂದು ಕಠಿಣ ಚಳಿಗಾಲ ಬರುತ್ತದೆ. ಇಂತಹ ಎರಡು ಚಳಿಗಾಲದ ನಂತರ ಮೂರನೆಯ ಚಳಿಗಾಲ ಅಂದರೆ 21 ವರುಷಕ್ಕೊಂದು ಬಾರಿ ಬರುವ ಚಳಿಗಾಲವು ಏಳು ತಿಂಗಳಿನಷ್ಟು ನಿಡುಗಾಲ ಕಾಡುವ ಬಲುಕ್ರೂರ ಚಳಿಗಾಲವಾಗಿರುತ್ತದೆ. ಈ ಏಳು ತಿಂಗಳ ಚಳಿಗಾಲದ ಗಡುವಿನಲ್ಲಿ ಹಲವುಬಾರಿ ಬಿರುಸು ಸೈಕ್ಲೋನ್‍ಗಳು ಅಮೆರಿಕಾದ ಉತ್ತರ ರಾಜ್ಯಗಳ ಮೇಲೆ ಹಿಂದೆಲ್ಲ ಎರಗುತ್ತಿದ್ದವು. ದಕ್ಷಿಣದಿಂದ ‘ಚಿನೂಕ್’ ಹೆಸರಿನ ಬಿಸಿಗಾಳಿ ಬೀಸಿ ಮೇಲಿನ ಸಡಿಲ ಮಂಜನ್ನು ಉತ್ತರಕ್ಕೆ ಹಾರಿಸಿಕೊಂಡು ಹೋದಾಗ ಕ್ರೂರ ಚಳಿಗಾಲ ಕೊನೆಯಾಯಿತೆಂದು ಜನ ನೆಮ್ಮದಿಯ ನಿರಾಳ ಉಸಿರು ತೆಗೆಯುತ್ತಿದ್ದರು. ಧಮ್ಮಸ್ ಮಾಡಿದಂತೆ ಗಟ್ಟಿಸಿ ಬಿದ್ದಿರುತ್ತಿದ್ದ ಹಳೆಯ ಮಂಜು ಕ್ರಮೇಣ ಕರಗಿ ಹೆಪ್ಪುಗಟ್ಟಿದ್ದ ನೆಲ ಮತ್ತೆ ಎಳೆಯ ಬಿಸಿಲಿಗೆ ಹೊಳೆಯುವ ನೋಟಕ್ಕಾಗಿ ಜನ ಕಾದಿರುತ್ತಿದ್ದರು. ಆದರೆ ಈಗ ಹಾಗೆಲ್ಲ ಏಳು ತಿಂಗಳ ಚಳಿಗಾಲವನ್ನು ಅಮೆರಿಕಾ ಕಾಣುತ್ತಿಲ್ಲ. Thanks to climate change. ಚಳಿಗಾಲ ಈಗ ತುಣುಕು  ತುಣುಕುಗಳಾಗಿ ಒಡೆದುಹೋಗಿ ಮಂಜಿನ ಸುಳಿಗಾಳಿಗಳ ರೂಪದಲ್ಲಿ ದಿಡೀರ್ ಮುತ್ತಿಗೆ ಹಾಕುತ್ತಿದೆ. ಉಳಿದಂತೆ ಸಹನೀಯವಾದ ತಾಪ, ಕೆಲವೊಮ್ಮೆ ಬೆಚ್ಚಗೆನಿಸುವಂತಹ ಹವೆ ಇದ್ದು ಬಾಂಬ್ ಸೈಕ್ಲೋನ್‍ಗಳು ಬಂದು ಹೋದುವೆಂಬುದಕ್ಕೆ ಕುರುಹೇ ಇರುವುದಿಲ್ಲ.

ಎಲಿಯಟ್ ಎದ್ದದ್ದು ಈಶಾನ್ಯ ಭಾಗದಲ್ಲಾದರೂ ಅದರ ಪ್ರಭಾವ ಅಮೆರಿಕಾದ ಶೇಕಡಾ 80ರಷ್ಟು ಪ್ರದೇಶದ ಮೇಲಾಯಿತು. ಬಹುಪಾಲು ಎಲ್ಲ ರಾಜ್ಯಗಳಲ್ಲೂ ವಿಪರೀತ ಚಳಿ ಕವಿಯಿತು. ಸುಳಿಗಾಳಿಯ ತೀವ್ರತೆ ಅತಿಹೆಚ್ಚು ಇದ್ದ ಪ್ರದೇಶಗಳಲ್ಲಿ ಒಂದು ಮೀಟರ್ ದಪ್ಪನಾಗಿ ಮಂಜು ಬಿತ್ತು. 20 ಕೋಟಿ ಅಮೆರಿಕನ್ನರಿಗೆ ಎಲಿಯಟ್‍ನ ಪರಿಣಾಮಗಳ ಕುರಿತು ಮುನ್ನೆಚ್ಚರಿಕೆ ನೀಡಲಾಯಿತು. National Weather Service (NWS) ಪ್ರಕಾರ ಇಷ್ಟು ದೊಡ್ಡ ಸಂಖ್ಯೆಯ ಅಮೆರಿಕನ್ನರಿಗೆ ಹೀಗೆ ಮುನ್ನೆಚ್ಚರಿಕೆ ನೀಡಿದ್ದು ಅಮೆರಿಕಾದ ಚರಿತ್ರೆಯಲ್ಲೆ ಇದೇ ಮೊದಲ ಸಲವಾಗಿತ್ತು. ಪಶ್ಚಿಮದ ಪೆಸಿಫಿಕ್ ಹೆಗ್ಗಡಲಿನಿಂದ ಹಿಡಿದು ಪೂರ್ವದ ಅಟ್ಲಾಂಟಿಕ್ ಹೆಗ್ಗಡಲಿನ ತನಕ, ಉತ್ತರದ ಕೆನಡಾ ಗಡಿಯಿಂದ ದಕ್ಷಿಣದ ಮೆಕ್ಸಿಕೋ ಗಡಿಯ ತನಕ ಅಮೆರಿಕಾ ಎಲಿಯಟ್ ಜೊತೆ ಏಗಬೇಕಾಯಿತು. ಮಂಜು ಮತ್ತು ಥಂಡಿಯನ್ನು ಕನಸಿನಲ್ಲೂ ಕಲ್ಪಿಸಿಕೊಳ್ಳದ, ಬೆಚ್ಚನೆಯ ಬಿಸಿಲಿನಲ್ಲಿ ಮೀಯುವ ಫ್ಲಾರಿಡಾ ರಾಜ್ಯ ಕೂಡಾ ಚಳಿಗೆ ಹಲ್ಲುಕಡಿಯಿತು. ನೆರೆಯ ಕೆನಡಾ ಕೂಡಾ ಎಲಿಯಟ್‍ನಿಂದ ಗುರುತರ ಹೊಡೆತ ತಿಂದಿತು. ಎರಡೂ ದೇಶಗಳಲ್ಲಿ ಆಸ್ತಿಪಾಸ್ತಿ ಮತ್ತಿತರ ಹಾನಿಗಳನ್ನು ಪೂರ್ತಿಯಾಗಿ ಲೆಕ್ಕ ಹಾಕಲು ಬಹಳ ಸಮಯ ಹಿಡಿದಿರಬಹುದು. ಮಂಜಿನ ನಡುವೆ ಸಿಕ್ಕಿಬಿದ್ದವರನ್ನು ಕಾಪಾಡುವ, ಕಾಣೆಯಾದವರ ಕಳೇಬರ ಹುಡುಕುವ ಕಾರ್ಯಾಚರಣೆಗಳು ಕ್ರಿಸ್ಮಸ್ ತರುವಾಯವು ಬಿರುಸಾಗಿ ಸಾಗಿದವು. 2023ರ ಹೊಸ ವರುಷ ಅಮೆರಿಕಾದ ಮಂದಿಗೆ ಶುರುವಾದದ್ದು ಹೀಗೆ.

ಜಗತ್ತಿನ ಹವಾಮಾನ ಪರಿಣಿತರು ಅಮೆರಿಕಾದ ಬಾಂಬ್ ಸೈಕ್ಲೋನಿಗೂ ಹವಾಮಾನ ಬದಲಾವಣೆಗೂ ಇರುವ ನಂಟಿನ ಬಗ್ಗೆ ಇನ್ನೂ ಷರಾ ಬರೆದಿಲ್ಲ. ಆದರೂ ಅಲ್ಲಲ್ಲಿ ಕೇಳಿಬರುತ್ತಿರುವ ಗೊಣಗಾಟಗಳ ಪ್ರಕಾರ ಇನ್ನೂ ಮುಂದೆಯೂ ಎಲಿಯಟ್ ತರದ ಮಂಜಿನ ಸುಳಿಗಾಳಿಗಳು ಅಮೆರಿಕಾ, ಯುರೋಪ್, ಏಷ್ಯಾಗಳಲ್ಲಿ ಕಾಣಬಹುದು ಎನ್ನಲಾಗುತ್ತಿದೆ. ‘ಜಾಗತಿಕ ತಾಪ ಏರಿಕೆ’ ಖಚಿತವಾಗಿ ಧ್ರುವ ಪ್ರದೇಶಗಳಲ್ಲೇಳುವ ಸುಳಿಗಾಳಿಗಳಿಗೆ ತನ್ನದೇ ಕೊಡುಗೆ ನೀಡತೊಡಗಿದೆ. ಭೂಮಿಯ ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳ ವಾತಾವರಣದ ತಾಪ ಸಹಜ ಮಿತಿಗಿಂತ ಏರುತ್ತ ಹೋದಾಗ ಧ್ರುವ ಪ್ರದೇಶಗಳಿರುವ ಶೀತವಲಯಕ್ಕೂ ಅದು ಹರಡಿಕೊಳ್ಳುತ್ತದೆ. ಎರಡೂ ಧ್ರುವ ಪ್ರದೇಶಗಳ ಮೇಲ್ಮೈನ ವಾತಾವರಣದಲ್ಲಿ, ಸ್ತರಗೋಲ (Stratosphere)ದ ಮೇಲುಭಾಗದಲ್ಲಿ ಜಗತ್ತಿನಲ್ಲೆ ಅತಿತಂಪು ಎನ್ನಬಹುದಾದ ಥಂಡಿಗಾಳಿ ಆಚೀಚೆ ಸರಿಯದೆ ತನ್ನಷ್ಟಕ್ಕೆ ಸ್ಥಿರ ವೇಗದಲ್ಲಿ ಸುರುಳಿಯಾಗಿ ಚಲಿಸಿಕೊಂಡಿರುತ್ತದೆ. ಈ ಸು(ರು)ಳಿಗಾಳಿಯನ್ನು Polar Vortex ಎಂದು ಕರೆಯುತ್ತಾರೆ.

ಉತ್ತರಧ್ರುವದ Polar Vortex ಬಗ್ಗೆ ಹೇಳುವುದಾದರೆ ಅದರ ಕೆಳಗಿನ ಅಕ್ಷಾಂಶಗಳಲ್ಲಿ ಕಡಲಿನ ಮಟ್ಟದಿಂದ 8-15 ಕಿ.ಮೀ. ಎತ್ತರದಲ್ಲಿ ‘ಜೆಟ್ ಸ್ಟ್ರೀಮ್’ ಎಂದು ಕರೆಯಲ್ಪಡುವ ಗಾಳಿಯ ಹೊನಲೊಂದು ಪಶ್ಚಿಮದಿಂದ ಪೂರ್ವಕ್ಕೆ ಋತುಮಾನಕ್ಕನುಗುಣವಾಗಿ ತಾಸಿಗೆ 129-443 ಕಿ.ಮೀ. ವೇಗದಲ್ಲಿ ಬೀಸುತ್ತಿರುತ್ತದೆ (ಚಳಿಗಾಲದಲ್ಲಿ ವೇಗ ಗರಿಷ್ಠ ಮಟ್ಟ ಮುಟ್ಟುತ್ತದೆ). ಉತ್ತರಧ್ರುವದ ಥಂಡಿ ಸುಳಿಗಾಳಿ ದಕ್ಷಿಣದ ಕಡೆಗೆ ಬೀಸಿ ಹಬ್ಬಿಹರಡದಂತೆ ಈ ಜೆಟ್‍ಸ್ಟ್ರೀಮ್ ಸಾಮಾನ್ಯ ಸನ್ನಿವೇಶದಲ್ಲಿ ತಡೆಗೋಡೆಯಂತೆ ಕೆಲಸಮಾಡುತ್ತದೆ (ಇದೇ ರೀತಿ ದಕ್ಷಿಣಧ್ರುವದ ಥಂಡಿ ಸುಳಿಗಾಳಿಯು ಉತ್ತರದ ಕಡೆಗೆ ಹಬ್ಬಿಕೊಳ್ಳದಂತೆ ಅಲ್ಲೂ ಒಂದು ಜೆಟ್‍ಸ್ಟ್ರೀಮ್ ತನ್ನ ಪಾತ್ರವನ್ನು ನಿರ್ವಹಿಸುತ್ತದೆ. ಈ ಎರಡು ಜೆಟ್ ಸ್ಟ್ರೀಮ್‍ಗಳಲ್ಲದೆ ಸಮಭಾಜಕ ವರ್ತುಲದ ತುಸು ಉತ್ತರ ಮತ್ತು ದಕ್ಷಿಣಕ್ಕಿರುವಂತೆ ಬೀಸುವ ಇನ್ನೆರಡು sub-tropical ಜೆಟ್ ಸ್ಟ್ರೀಮ್‍ಗಳಿವೆ).

ಭೂಮಿಯ ಸಹಜ ತಾಪಕ್ಕೆ ಹೊಂದಿಕೊಂಡಂತೆ ವಾತಾವರಣದ ಗಾಳಿಯ ಹೊನಲುಗಳು ತಮ್ಮಷ್ಟಕ್ಕೆ ಇದ್ದುಬಿಟ್ಟರೆ ಹವಾಮಾನದ ಎಲ್ಲ ವಿದ್ಯಮಾನಗಳು ಹೀಗೆ ಬಂದು ಹಾಗೆ ಹೋಗಿಬಿಡಬಹುದು. ಆದರೆ ಜಾಗತಿಕ ತಾಪ ಏರಿಕೆಯ ಕಾರಣವಾಗಿ ಉಷ್ಣವಲಯದ ಬಿಸಿಗಾಳಿ ಉತ್ತರ ಹಾಗೂ ದಕ್ಷಿಣದ ಧ್ರುವ ಪ್ರದೇಶಗಳ ಕಡೆಗೆ ಚಲಿಸಿ ಅಲ್ಲಿನ ವಾತಾವರಣವನ್ನು ಅಗತ್ಯ ಮೀರಿ ಬಿಸಿಗೊಳಿಸಿದಾಗ sub-tropical ಹೆಚ್ಚುವರಿ ತಾಪ ಪಡೆದು ವೇಗದಿಂದ ಹಿಗ್ಗುತ್ತದೆ. ಅದು ಜೆಟ್‍ಸ್ಟ್ರೀಮ್‍ಗಳ ಕಡೆ ನುಗ್ಗಿ ಅವು ಕೂಡಾ ತಮ್ಮ ಮಾಮೂಲಿ ದಾರಿಯಿಂದ ಹೊರಕ್ಕೆ ಚಲಿಸಿ ಅತಿಥಂಡಿಯಾದ Polar Vortex ಎಲ್ಲೆಡೆ ಹರಡಿಕೊಳ್ಳಲು ಅವಕಾಶ ಮಾಡಿಕೊಡುತ್ತವೆ. ಅಮೆರಿಕಾದ ಬಾಂಬ್ ಸೈಕ್ಲೋನ್ ಹುಟ್ಟಿದ್ದು ಹೀಗೆ, ದಕ್ಷಿಣದ ಕಡೆ ಹಬ್ಬಿ ಅಪ್ಪಳಿಸಿದ ಉತ್ತರಧ್ರುವದ ಸುಳಿಗಾಳಿಯಿಂದ (ದಕ್ಷಿಣಧ್ರುವದ ಸುಳಿಗಾಳಿ ಉತ್ತರದ ಕಡೆ ಚಲಿಸಿ ದಾಂಧಲೆ ಎಬ್ಬಿಸಿದಾಗ ಅದನ್ನು ಆಸ್ಟ್ರೇಲಿಯಾದಲ್ಲಿ ಬಾಂಬ್ ಸೈಕ್ಲೋನ್ ಎನ್ನುವ ಬದಲು ‘ಪೋಲಾರ್ ಬ್ಲಾಸ್ಟ್’ ಎಂದು ಕರೆಯುತ್ತಾರೆ). ವರುಷಗಟ್ಟಲೆ ಯುದ್ಧಮಾಡಬಲ್ಲಷ್ಟು ತರತರಹದ ಹತಾರಗಳನ್ನು ಪೇರಿಸಿಟ್ಟುಕೊಂಡಿರುವ ಅಮೆರಿಕಾ ನಿಸರ್ಗದ ‘ಬಾಂಬ್’ ದಾಳಿಗೆ ನಜ್ಜುಗುಜ್ಜಾಗಿದೆ. ಮುಂದಿನ ಸರದಿ ಯಾರದ್ದೋ…!ಎಲ್ಲೋ…!

ರವಿಕುಮಾರ್‌ ಕೆ ಎಸ್‌

ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.

Related Articles

ಇತ್ತೀಚಿನ ಸುದ್ದಿಗಳು