ನವದೆಹಲಿ, ಅಕ್ಟೋಬರ್.16: ಸಂಸತ್ತಿನಲ್ಲಿ ಅದಾನಿ ಗೂಪ್ಸ್ ಬಗ್ಗೆ ಪ್ರಶ್ನೆಗಳನ್ನು ಕೇಳಲು ಮಹುವಾ ಮೊಯಿತ್ರಾ ಅವರಿಗೆ “ಹಣ” ಮತ್ತು “ಉಡುಗೊರೆಗಳನ್ನು” ಲಂಚವಾಗಿ ನೀಡಲಾಗಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅಕ್ಟೋಬರ್ 15 ರ ಭಾನುವಾರದಂದು ಆರೋಪಿಸಿದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ “ಸಿಬಿಐ ತನಿಖೆಗೆ ಸ್ವಾಗತ” ಎಂದು ಹೇಳಿದ್ದಾರೆ.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ದುಬೆ ಬರೆದ ಪತ್ರದಲ್ಲಿ, ಮಹುವಾ ಮೊಯಿತ್ರಾ ಮತ್ತು ಉದ್ಯಮಿ ದರ್ಶನ್ ಹಿರಾನಂದಾನಿ ನಡುವೆ ಲಂಚ ವಿನಿಮಯವಾಗಿದೆ ಎಂಬುದಕ್ಕೆ “ನಿರಾಕರಿಸಲಾಗದ ಪುರಾವೆ” ಯನ್ನು ಹಂಚಿಕೊಂಡಿದ್ದಾರೆ ಮತ್ತು ಅವರನ್ನು ತಕ್ಷಣವೇ ಸಂಸತ್ತಿನಿಂದ ಅಮಾನತುಗೊಳಿಸುವಂತೆ ಕೋರಿದ್ದಾರೆ. ಜೈ ಅನಂತ್ ದೇಹದ್ರಾಯಿ ಎಂಬ ವಕೀಲರು ಈ ಸಾಕ್ಷ್ಯವನ್ನು ನಿಶಿಕಾಂತ್ ದುಬೆಯವರಿಗೆ ನೀಡಿದ್ದಾರೆ ಎನ್ನಲಾಗಿದೆ.
“ಶ್ರೀ ಜೈ ಅನಂತ್ ದೇಹದ್ರಾಯ್ ಅವರು ವಿಸ್ತೃತ ಸಂಶೋಧನೆಯನ್ನು ಮಾಡಿ, ಅದರ ಆಧಾರದ ಮೇಲೆ ಇತ್ತೀಚಿನವರೆಗೂ ಶ್ರೀಮತಿ ಮೊಯಿತ್ರಾ ಅವರು ಸಂಸತ್ತಿನಲ್ಲಿ ಕೇಳಿದ ಒಟ್ಟು 61 ಪ್ರಶ್ನೆಗಳಲ್ಲಿ ಸರಿಸುಮಾರು 50 ಪ್ರಶ್ನೆಗಳನ್ನು ಪೋಸ್ಟ್ ಮಾಡಲಾಗಿದ್ದು, ಅವರುಗಳು ಶ್ರೀ ದರ್ಶನ್ ಹಿರಾನಂದನಿ ಮತ್ತು ಅವರ ಕಂಪನಿಯ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶವನ್ನು ಹೊಂದಿವೆ ಎಂದು ದುಬೆ ಪತ್ರದಲ್ಲಿ ತಿಳಿಸಿದ್ದಾರೆ.
ಅದಾನಿ ಸಮೂಹವನ್ನು ನಿರಂತರವಾಗಿ ಉಲ್ಲೇಖಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು “ಕಠಿಣವಾಗಿ” ಗುರಿಯಾಗಿಸಿರುವ ಮೊಹುವಾ ತಮ್ಮ ರಹಸ್ಯ ಕ್ರಿಮಿನಲ್ ಕಾರ್ಯಾಚರಣೆಯನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ದುಬೆ ಪತ್ರದಲ್ಲಿ ಆರೋಪಿಸಿದ್ದಾರೆ.
ಇದು ಡಿಸೆಂಬರ್ 2005 ರ ‘ಕ್ಯಾಶ್ ಫಾರ್ ಕ್ವೆರಿ’ ಪ್ರಕರಣವನ್ನು ನೆನಪಿಸುತ್ತದೆ ಎಂದು ಹೇಳಿರುವ ದುಬೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಎ ಅಡಿಯಲ್ಲಿ ದಂಡವಿಧಿಸುವಂತೆ ಕೇಳಿಕೊಂಡಿದ್ದಾರೆ.
2005ರ ಡಿಸೆಂಬರ್‌ನ ‘ಕ್ಯಾಶ್ ಫಾರ್ ಕ್ವೆರಿ’ (ದುಡ್ಡು ಕೊಟ್ಟರೆ ಪ್ರಶ್ನೆ) ಪ್ರಕರಣದಲ್ಲಿ ಬಿಜೆಪಿಯ 6, ಬಿಎಸ್‌ಪಿಯ 3, ಹಾಗೂ ಆರ್‌ಜೆಡಿ ಮತ್ತು ಕಾಂಗ್ರೇಸ್‌ನ ತಲಾ ಒಬ್ಬೊಬ್ಬರು ಎಂಪಿಗಳ ಮೇಲೆ ಪ್ರಕರಣ ದಾಖಲಾಗಿ, ಪಾರ್ಲಿಮೆಂಟಿನಿಂದ ಅಮಾನತು ಮಾಡಲಾಗಿತ್ತು.
ತನ್ನ ಮೇಲಿನ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮೊಹುವಾ ತಮ್ಮ X ಖಾತೆಯಲ್ಲಿ ಸಹ ಎಂದೆಂದಿಗೂ ಸ್ವಾಗತ ನಿಮಗೆ ಎಂದು ಸಿಬಿಐಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಕಡಲಾಚೆಗಿರುವ ಅದಾನಿಯವರ ಹಣದ ಜಾಡು, ಇನ್‌ವಾಯ್ಸ್, ಬೇನಾಮಿಗಳ ತನಿಖೆಯನ್ನು ಪೂರ್ಣಗೊಳಿಸಿದ ತಕ್ಷಣ ತನ್ನ ಮೇಲಿನ ಹಣ ವರ್ಗಾವಣೆಯ ಆರೋಪದ ವಿಚಾರಣೆ ನಡೆಸಲಿ. ಅದಾನಿ ಬಿಜೆಪಿಯನ್ನು ಇತರ ಏಜೆನ್ಸಿಗಳ ಪೈಪೋಟಿಯನ್ನು ಎದುರಿಸಲು ಮತ್ತು ವಿಮಾನ ನಿಲ್ದಾಣಗಳನ್ನು ಖರೀದಿಸಲು ಬಳಸಬಹುದು, ಆದರೆ ಇದೆಲ್ಲಾ ನನ್ನ ಜೊತೆಗೆ ನಡಿಯಲ್ಲ…ಎಂದು ಟ್ವೀಟ್ ಮಾಡಿದ್ದಾರೆ.
ಇದಲ್ಲದೇ, ಇನ್ನ ಮೇಲಿನ ಈ ದುಬೆಯವರ ಆರೋಪವನ್ನು ಟೀಕಿಸಿರುವ ಮೊಹುವಾ ತಾನು ಸಂಪಾಧಿಸಿದ ಈ ಅಕ್ರಮ ಹಣ-ಉಡುಗೊರೆಗಳನ್ನು ದುಬೆಯವರು ʼನಿಜವಾದ ಪದವಿʼಯನ್ನು ಪಡೆಯಬಹುದಾದ ಕಾಲೇಜು/ವಿಶ್ವವಿದ್ಯಾನಿಲಯವನ್ನು ಖರೀದಿಸಲು ಬಳಸುತ್ತಿದ್ದೇನೆ ಎಂದು ಕಿಚಾಯಿಸಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾರನ್ನು ಟ್ಯಾಗ್ ಮಾಡಿ ಸುಳ್ಳು ಅಫಿಡವಿಟ್ ಮಾಡಿರುವ ಅವರ ವಿರುದ್ಧ ವಿಚಾರಣೆಗಳನ್ನು ಮುಗಿಸಿದ ನಂತರ ನನ್ನ ವಿಚಾರಣಾ ಕಮಿಟಿಯನ್ನು ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.