ಬೊಗಸೆಗೆ ದಕ್ಕಿದ್ದು-97 : ಸರ್ವಾಧಿಕಾರಿ ಭೂತದ ಹತ್ತು ವಿಕ್ಷಿಪ್ತ ಮುಖಗಳು!

“..ತಮ್ಮನ್ನು ತಾವು ಧೀರರು, ಬಲಶಾಲಿಗಳು, ಬುದ್ಧಿವಂತರು ಎಂದು ಬಿಂಬಿಸಲು ಸರ್ವಾಧಿಕಾರಿಗಳು ಬಯಸುತ್ತಾರೆ. ಇಡೀ ಪ್ರಪಂಚದಲ್ಲಿ ತಾನೇ ಅತ್ಯಂತ ಮುಖ್ಯ ವ್ಯಕ್ತಿ; ಎಲ್ಲವೂ ತಮ್ಮ ಸುತ್ತಲೇ ತಿರುಗುತ್ತದೆ ಎಂಬ ಭ್ರಮೆ ಅವರಲ್ಲಿರುತ್ತದೆ..” ಲೇಖಕರಾದ ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಪ್ರಪಂಚದ ಆಗಿಹೋದ ಮತ್ತು ಈಗಿರುವ ಬಹುತೇಕ ಎಲ್ಲಾ ಸರ್ವಾಧಿಕಾರಿಗಳ ವೈಯಕ್ತಿಕ ಸ್ವಭಾವ ಹಾಗೂ ಗುಣಲಕ್ಷಣಗಳಲ್ಲಿ ಅಚ್ಚರಿಯೆಂಬಂತೆ ಅನೇಕ ಸಾಮ್ಯಗಳಿವೆ. ಅವುಗಳಲ್ಲಿ ಮುಖ್ಯವಾದದ್ದೆಂದರೆ ನಾರ್ಸಿಸಿಸಮ್ ಅಂದರೆ ತಮ್ಮನ್ನೇ ತಾವು ಮೋಹಿಸುವ ಪ್ರವೃತ್ತಿ. ಗ್ರೀಕ್ ಪುರಾಣದಲ್ಲಿ ಬರುವ ನಾರ್ಸಿಸಸ್ ಒಬ್ಬ ಬೇಟೆಗಾರ. ಸುಂದರನಾಗಿದ್ದ ಆತ ಒಂದು ತಿಳಿಯಾದ ಕೊಳದಲ್ಲಿ ತನ್ನ ಮುಖವನ್ನು ನೋಡಿ ಪ್ರತಿಬಿಂಬದಲ್ಲಿ ಮೋಹಗೊಳ್ಳುತ್ತಾನೆ. ಸರ್ವಾಧಿಕಾರಿಗಳು ಬಹುತೇಕ ಅದೇ ರೀತಿ ವರ್ತಿಸುತ್ತಾರೆ.

ತಮ್ಮನ್ನು ತಾವು ಧೀರರು, ಬಲಶಾಲಿಗಳು, ಬುದ್ಧಿವಂತರು ಎಂದು ಬಿಂಬಿಸಲು ಅವರು ಬಯಸುತ್ತಾರೆ. ಇಡೀ ಪ್ರಪಂಚದಲ್ಲಿ ತಾನೇ ಅತ್ಯಂತ ಮುಖ್ಯ ವ್ಯಕ್ತಿ; ಎಲ್ಲವೂ ತಮ್ಮ ಸುತ್ತಲೇ ತಿರುಗುತ್ತದೆ ಎಂಬ ಭ್ರಮೆ ಅವರಲ್ಲಿರುತ್ತದೆ. ಗಾಂಧಿಯವರಂತಹ ಅಥವಾ ಜನಸಾಮಾನ್ಯರಂತಹ ಸರಳತೆ ಅವರಲ್ಲಿ ಸುಳಿದಿರುವುದಿಲ್ಲ; ಬದಲಿಗೆ ಮಿಲಿಟರಿ ಸಮವಸ್ತ್ರಗಳು, ಅತ್ಯುತ್ತಮ ಸೂಟುಬೂಟುಗಳು ಮತ್ತು ದುಬಾರಿ ಫ್ಯಾಷನ್ ಅವರ ಹೈಲೈಟ್ ಆಗಿರುತ್ತವೆ. ಅವರು ಯಾವತ್ತೂ ಎತ್ತರದ ವೇದಿಕೆಗಳಲ್ಲಿ ಇರುತ್ತಾರೆ ಮತ್ತು ಹಿಂದೆ ಅವರದ್ದೇ ಭಾರೀ ಗಾತ್ರದ ಚಿತ್ರಗಳಿರುತ್ತವೆ. ಮಾಧ್ಯಮಗಳಲ್ಲಿ ಸದಾ ಅವರದ್ದೇ ವ್ಯಕ್ತಿಕೇಂದ್ರಿತ ಪ್ರಚಾರ ಮೊಳಗುತ್ತಿರುತ್ತದೆ.

ಪ್ರಚಾರದ ಪರಮ ಹುಚ್ಚರು!
​ಸರ್ವಾಧಿಕಾರಿಗಳ ಪ್ರಚಾರ ಎಂದಿಗೂ ಸ್ವಾಭಾವಿಕವಾಗಿರುವುದಿಲ್ಲ; ಅದೊಂದು ಹೈಟೆಕ್ ಕರಕುಶಲ ಕಲೆಯಂತಿರುತ್ತದೆ. ಪ್ರತಿಯೊಂದು ಹೆಜ್ಜೆಯೂ, ಪ್ರತಿಯೊಂದು ದೃಶ್ಯವನ್ನೂ ಅಚ್ಚುಕಟ್ಟಾಗಿ ಸ್ಕ್ರಿಪ್ಟ್ ಮಾಡಲಾಗಿರುತ್ತದೆ. ಇಂದು ಆಧುನಿಕ ಕಾಲದಲ್ಲಿಯೂ ನಾವು ಕಾಣುವಂತೆ, ನಾಯಕರು ಮಾಡುವ ಪ್ರತಿಯೊಂದು ಸಣ್ಣ ಕೆಲಸವೂ (ಉದಾಹರಣೆಗೆ: ಕಾಡಿನಲ್ಲಿ ನಡೆಯುವುದು, ಖಾಲಿ ಪರ್ವತಕ್ಕೆ ಕೈಬೀಸುವುದು, ನದಿ ತೀರದಲ್ಲಿ ಧ್ಯಾನಿಸುವುದು, ಅಥವಾ ದಿಢೀರ್ ಎಂದು ಬಡವರ ಗುಡಿಸಿಲಿಗೆ ಭೇಟಿ ನೀಡುವುದು, ಜಲ್ಮುರಿ ತಿನ್ನುವುದು….ಹೀಗೆ ನೂರಾರು!) ಕ್ಯಾಮೆರಾ ಕಣ್ಣುಗಳ ನಿಗಾದಲ್ಲಿ, ಪ್ರಚಾರದ ಉದ್ದೇಶಕ್ಕಾಗಿಯೇ ಪೂರ್ವಯೋಜಿತವಾಗಿ ರೂಪಿಸಲ್ಪಟ್ಟಿರುತ್ತವೆ. ಯಾರೂ ಸಾಯಲಿ, ಬದುಕಲಿ- ಕಣ್ಣುಗಳು ಕ್ಯಾಮರಾವನ್ನೇ ದಿಟ್ಟಿಸುತ್ತಿರುತ್ತವೆ- “ಧ್ಯಾನ” ಮಾಡುವಾಗಲೂ!

​ಈ ಹಿಂದೆ ಜರ್ಮನಿಯ ಹಿಟ್ಲರ್ ತನ್ನ ಪ್ರಚಾರಕ್ಕಾಗಿ ವಿಶೇಷವಾದ ಕ್ಯಾಮೆರಾ ಆಂಗಲ್ಸ್ ಮತ್ತು ಛಾಯಾಗ್ರಹಣ ತಂತ್ರಗಳನ್ನು ಬಳಸಿ, ಜನಸಾಮಾನ್ಯರ ಎದುರು ತಾನೊಬ್ಬ ಅತಿಮಾನುಷ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಿದ್ದ. ಇಂದು ಜಾಗತಿಕ ಮಟ್ಟದಲ್ಲಿ ಅಧಿಕಾರದಲ್ಲಿರುವ ಅನೇಕ ನಾಯಕರು ಅಥವಾ ಮಿನಿ ಸರ್ವಾಧಿಕಾರಿಗಳು ಇದೇ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಅವರ ಪ್ರತಿಯೊಂದು ಸಹಜ ಎನ್ನಿಸುವ ವೀಡಿಯೊಗಳೂ ಕೂಡ ಅತ್ಯಂತ ನಿಖರವಾಗಿ ನಿರ್ದೇಶಿಸಲ್ಪಟ್ಟ ನಾಟಕೀಯ ತುಣುಕುಗಳೇ ಆಗಿರುತ್ತವೆ.

ಹೊಗಳಿಕೆಯ ಲೋಲುಪರು!
​ಸರ್ವಾಧಿಕಾರಿಗಳ ಸುತ್ತ ಸದಾ ‘ಹೌದು ಗುರುಗಳೇ’ ಎನ್ನುವ ಭಟ್ಟಂಗಿಗಳ ದೊಡ್ಡ ದಂಡೇ ಇರುತ್ತದೆ. ಸ್ವತಃ ಸರ್ವಾಧಿಕಾರಿಗಳು ಸತ್ಯವನ್ನು ಅಥವಾ ತಮ್ಮ ಟೀಕೆಗಳನ್ನು ಕೇಳಿಸಿಕೊಳ್ಳಲು ಇಷ್ಟಪಡುವುದಿಲ್ಲ. ತಮ್ಮನ್ನು ನಿರಂತರವಾಗಿ ಹೊಗಳುವವರನ್ನು ಮಾತ್ರ ಅವರು ಆಯಕಟ್ಟಿನ ಸ್ಥಾನಗಳಲ್ಲಿ ಕೂರಿಸುತ್ತಾರೆ. ಜರ್ಮನಿಯ ಹಿಟ್ಲರ್ ತನ್ನ ಕೊನೆಯ ದಿನಗಳಲ್ಲಿ, ಸೋಲು ಖಚಿತವಾಗಿದ್ದರೂ ಜರ್ಮನ್ ಸೈನ್ಯವು ಅದ್ಭುತವಾಗಿ ಹೋರಾಡುತ್ತಿದೆ ಎಂದೇ ನಂಬಿದ್ದ. ಆದರೆ, ವಾಸ್ತವಿಕ ಪರಿಸ್ಥಿತಿ ಏನಿದೆ ಎಂದು ಅವನಿಗೆ ನೇರವಾಗಿ ಹೇಳುವ ಧೈರ್ಯ ಆತನ ಹತ್ತಿರದವರಿಗೂ ಇರಲಿಲ್ಲ. ಈ ಭಟ್ಟಂಗಿತನವೇ ಅಂತಿಮವಾಗಿ ಇಡೀ ದೇಶವನ್ನು ನಾಶದ ಅಂಚಿಗೆ ತಳ್ಳುತ್ತದೆ. ಇಂತಹ ವ್ಯವಸ್ಥೆಯಲ್ಲಿ ಯಾರಾದರೂ ಎದುರಾಡಿದರೆ ರಾಜೀನಾಮೆ ಕೊಡಬೇಕಾದೀತು ಅಥವಾ ಅವಕೃಪೆಗೆ ಪಾತ್ರರಾಗಬೇಕಾದೀತು. ಈ ಕಾರಣದಿಂದಲೇ ಸರ್ವಾಧಿಕಾರಿಯ ತಪ್ಪನ್ನು ಯಾರೂ ಬೆಟ್ಟುಮಾಡಲು ಹೋಗುವುದಿಲ್ಲ. ತನ್ನ ತಪ್ಪುಗಳನ್ನು ತಿಳಿದುಕೊಳ್ಳದ ಆತ ದೇಶವನ್ನೇ ವಿನಾಶಕ್ಕೆ ತಳ್ಳಿ ತಾನೂ ನಾಶವಾಗುವ ತನಕ ಮುಂದುವರಿಯುತ್ತಾನೆ.

ಪರೋಕ್ಷ ಭಯದ ಉತ್ಪಾದನೆ!
​ಸರ್ವಾಧಿಕಾರಿಗಳು ಕೇವಲ ದೃಶ್ಯಗಳ ಮೂಲಕ ಮಾತ್ರವಲ್ಲ, ಶಬ್ದ ಮತ್ತು ನಿರಂತರ ಪ್ರಚಾರದ ಮೂಲಕ ಜನಸಾಮಾನ್ಯರ ಮನಸ್ಸಿನಲ್ಲಿ ಒಂದು ಅಘೋಷಿತ ಭಯವನ್ನು ಹುಟ್ಟುಹಾಕುತ್ತಾರೆ. ಚಾರ್ಲಿ ಚಾಪ್ಲಿನ್ ಅವರ ಮೇರುಕೃತಿ ‘ದಿ ಗ್ರೇಟ್ ಡಿಕ್ಟೇಟರ್’ (The Great Dictator) ಚಿತ್ರದಲ್ಲಿ ಹಿಟ್ಲರ್‌ನ ಧ್ವನಿ ಸಾರ್ವಜನಿಕ ಸ್ಥಳಗಳಲ್ಲಿ, ಕಾರ್ಖಾನೆಗಳಲ್ಲಿ, ರಸ್ತೆಗಳಲ್ಲಿ ದೊಡ್ಡ ಲೌಡ್‌ಸ್ಪೀಕರ್‌ಗಳ ಮೂಲಕ ಏಕಾಏಕಿ ಮೊಳಗುವ ವಿಡಂಬನಾತ್ಮಕ ದೃಶ್ಯವಿದೆ. ಎಲ್ಲಿ ನೋಡಿದರೂ ಆತನದ್ದೇ ಮುಖ, ಕೇಳುವುದೆಲ್ಲವೂ ಆತನದೇ ಆದೇಶ ಎಂಬಂತಹ ವಾತಾವರಣ ಸೃಷ್ಟಿಸಲಾಗುತ್ತದೆ.

​”ನಾನು ನಿಮ್ಮನ್ನು ಎಚ್ಚೆತ್ತ ಕಣ್ಣಿನಿಂದ ನೋಡುತ್ತಿದ್ದೇನೆ, ಎಲ್ಲೆಲ್ಲೂ ನಾನೇ ಇದ್ದೇನೆ” ಎಂಬ ಭಾವನೆಯನ್ನು ಜನರ ಮನಸ್ಸಿನಲ್ಲಿ ಬಿತ್ತುವುದು ಇವರ ತಂತ್ರ. ಇರಾಕಿನಲ್ಲಿ ಸದ್ದಾಂ ಹುಸೇನ್ ಅಧಿಕಾರದಲ್ಲಿ ಇದ್ದಾಗ ಸಾರ್ವಜನಿಕ ಸ್ಥಳಗಳಲ್ಲಿ ಆತನ ಪ್ರತಿಮೆಗಳು, ಭಾವಚಿತ್ರಗಳು, ಕಟೌಟುಗಳು ಎಲ್ಲೆಲ್ಲೂ ರಾರಾಜಿಸುತ್ತಿದ್ದವು. ದಿನಪತ್ರಿಕೆಗಳ ಪ್ರತೀ ಮುಖಪುಟದಲ್ಲಿ ಆತನ ಫೋಟೋ ಕಡ್ಡಾಯವಾಗಿದ್ದು, ಟಿವಿ-ರೇಡಿಯೋಗಳ ಮೊದಲ ಸುದ್ದಿ ಅತನದ್ದೇ ಆಗಿರಬೇಕು ಎಂಬ ಕಠಿಣ ನಿಯಮವಿತ್ತು. ಇಂತಹ ವ್ಯವಸ್ಥೆಯಲ್ಲಿ ಜನರು ತಮ್ಮ ಮನೆಯ ಖಾಸಗಿ ಮಾತುಗಳಿಗೂ ಹೆದರಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. (ಕರ್ನಾಟಕದ ಮಾನಗೇಡಿ ಬಾಡಿಗೆಯ ಸುಳ್ಳು ಭಾಷಣಕೋರನೊಬ್ಬ “ಮೋದಿಯವರು ಲ್ಯಾಪ್‌ಟಾಪ್‌ನಲ್ಲಿ ಎಲ್ಲವನ್ನೂ ನೋಡುತ್ತಿರುತ್ತಾರೆ! ದೇಶದ ಯಾವ ಮೂಲೆಯಲ್ಲಿ ಏನೇ ಆದರೂ ಅವರಿಗೆ ಆ ಕ್ಷಣವೇ ಗೊತ್ತಾಗುತ್ತದೆ!” ಎಂದಿತ್ಯಾದಿಯಾಗಿ ಪುಂಗಿ ಊದುವುದನ್ನು ನೀವು ಕೇಳಿಯೇ ಇರುತ್ತೀರಿ.)

ಸುಳ್ಳುಗಳ “ಎಂಟೈರ್” ಪದವೀಧರರು!
​ಸರ್ವಾಧಿಕಾರಿಗಳು ಸುಳ್ಳುಹೇಳುವುದರಲ್ಲಿ ನಿಷ್ಣಾತರಾಗಿರುತ್ತಾರೆ. ಆದರೆ ಅವರು ಹೇಳುವ ಸುಳ್ಳುಗಳು ಎಷ್ಟು ದೊಡ್ಡದಾಗಿರುತ್ತವೆಯೆಂದರೆ, ಜನರು ಅದನ್ನೇ ಸತ್ಯವೆಂದು ನಂಬಿಬಿಡುತ್ತಾರೆ (Big Lie Theory). ಅವರು ಹಿಟ್ಲರ್‌ನಂತೆ ಉತ್ತಮ ಭಾಷಣಕಾರರಾಗಿರುತ್ತಾರೆ. ಆದರೆ, ಅವರ ಭಾಷಣಗಳಲ್ಲಿ ಬೌದ್ಧಿಕ ಹುರುಳಿರುವುದಿಲ್ಲ; ಬದಲಿಗೆ ಘೋಷಣೆಗಳೇ ಅವರ ಬಂಡವಾಳವಾಗಿರುತ್ತವೆ. ಯಾವಾಗಲೂ ಧರ್ಮ, ಭಾಷೆ, ರಾಷ್ಟ್ರೀಯತೆ ಅಥವಾ ಭಾವನಾತ್ಮಕ ವಿಷಯಗಳನ್ನೇ ಕೆಣಕಿ ಜನರನ್ನು ಉದ್ರೇಕಿಸುತ್ತಾರೆ. ಹಿಂದಿನ ಆಡಳಿತಗಳ ವೈಫಲ್ಯಗಳೇ ಇಂದಿನ ಎಲ್ಲ ಕಷ್ಟಗಳಿಗೂ ಕಾರಣ ಎಂದು ನಿರಂತರವಾಗಿ ನಂಬಿಸುತ್ತಾ, ತಾವು ಮಾತ್ರ ದೇಶದ ಏಕೈಕ ರಕ್ಷಕರು ಎಂಬ ಭ್ರಮೆಯನ್ನು ಬಿತ್ತುತ್ತಾರೆ. ಹಿಂದಿನವರು ಏನೂ ಮಾಡಿಲ್ಲ ಎಂದು ಹೇಳುವ ಅವರು, ಅವರು ಮಾಡಿದ ಸರಕಾರಿ ಆಸ್ತಿಯನ್ನೇ ಖಾಸಗಿಗೆ ಮಾರುತ್ತಾರೆ, ಅವರ ಸಾಧನೆ, ಯೋಜನೆಗಳನ್ನೇ ಹೆಸರು ಬದಲಿಸಿ ತಮ್ಮದೆಂದು ಹೇಳಿಕೊಳ್ಳುತ್ತಾರೆ.

​ಮೇಲ್ನೋಟಕ್ಕೆ ಅತಿ ಧೈರ್ಯಶಾಲಿಗಳು, ಬಲಶಾಲಿಗಳಂತೆ ಬಿಂಬಿಸಿಕೊಳ್ಳುವ ಇವರು ಒಳಗೆ ಅಪ್ಪಟ ಪುಕ್ಕಲುಗಳಾಗಿರುತ್ತಾರೆ. ತಮ್ಮದೇ ನೆರಳಿಗೂ ಹೆದರುವಷ್ಟು ಅತೀ ಸಂಶಯ ಸ್ವಭಾವ (Paranoia) ಹೊಂದಿರುತ್ತಾರೆ. ಯಾರಾದರೂ ತಮ್ಮನ್ನು ಕೊಲ್ಲಬಹುದು, ತಾನು ಅಧಿಕಾರ ಕಳೆದುಕೊಳ್ಳಬಹುದು ಎಂಬ ಭಯ ಅವರನ್ನು ಕ್ಷಣಕ್ಷಣವೂ ಕಾಡುತ್ತಿರುತ್ತದೆ.
​ಅದಕ್ಕಾಗಿ ಸ್ವಲ್ಪ ಸಂಶಯ ಬಂದರೂ ಸ್ವಂತ ಸೈನಿಕರನ್ನೂ ಅಥವಾ ಹತ್ತಿರದವರನ್ನೂ ದಮನಿಸುತ್ತಾರೆ. ಉದಾಹರಣೆಗೆ, ಲಿಬಿಯಾದ ಸರ್ವಾಧಿಕಾರಿಯಾಗಿದ್ದ ಮುಹಮ್ಮದ್ ಗಡ್ಡಾಫಿ ಹೆಚ್ಚಾಗಿ ರಾಜಧಾನಿ ಟ್ರಿಪೋಲಿಯಲ್ಲಿ ವಾಸವಿರದೆ, ಮರುಭೂಮಿಗಳ ಗುಪ್ತಸ್ಥಳಗಳ ಟೆಂಟ್ ಕ್ಯಾಂಪ್‌ಗಳಲ್ಲಿ ಅಜ್ಞಾತವಾಗಿ ವಾಸವಿದ್ದುದನ್ನು ಗಮನಿಸಬಹುದು. ರೊಮಾನಿಯಾದ ಕಮ್ಯುನಿಸ್ಟ್ ಸೋಗಿನ ಸರ್ವಾಧಿಕಾರಿ ಚೌಸೆಸ್ಕು ತನಗೆ ಯಾರೂ ವಿಷ ಹಾಕಬಾರದೆಂದು ತನ್ನೊಂದಿಗೆ ಸದಾ ತನ್ನದೇ ವೈದ್ಯರನ್ನು ಮತ್ತು ಪ್ರತ್ಯೇಕ ಆಹಾರ ಪರೀಕ್ಷಕರನ್ನು ಕರೆದುಕೊಂಡು ಓಡಾಡುತ್ತಿದ್ದ. ಉಗಾಂಡಾದ ಇದಿ ಅಮೀನ್ ಕೂಡಾ ತನ್ನ ಹತ್ತಿರದವರೇ ತನಗೆ ದ್ರೋಹ ಬಗೆಯಬಹುದು ಎಂಬ ಭಯದಿಂದ ಸಾವಿರಾರು ಜನರನ್ನು ಹತ್ಯೆ ಮಾಡಿಸಿದ್ದ.

ಕ್ರೌರ್ಯಕ್ಕೆ ಮಾನವೀಯತೆಯ ಮುಖವಾಡ!
​ಸರ್ವಾಧಿಕಾರಿಗಳದ್ದು ಮೇಲ್ನೋಟಕ್ಕೆ ಒಂದು ಮುಖವಾದರೆ, ಒಳಗಿನಿಂದ ಸಂಪೂರ್ಣ ಭಿನ್ನವಾಗಿರುತ್ತದೆ. ತಮ್ಮ ಕ್ರೌರ್ಯವನ್ನು ಮರೆಮಾಚಲು ಅವರು ಸಾರ್ವಜನಿಕವಾಗಿ ಮಕ್ಕಳನ್ನು ಎತ್ತಿಕೊಳ್ಳುವುದು, ಕಣ್ಣೀರು ಹಾಕುವುದು ಅಥವಾ ಬಡವರೊಂದಿಗೆ ಊಟ ಮಾಡುವ ಫೋಸುಗಳನ್ನು ನೀಡುತ್ತಾರೆ. ಆದರೆ ಇದರ ಹಿಂದೆ ನಡೆಯುವ ದಬ್ಬಾಳಿಕೆ ಅಮಾನವೀಯವಾಗಿರುತ್ತದೆ. ಕೆಲವು ಸರ್ವಾಧಿಕಾರಿಗಳು ತಮ್ಮ ವಿರೋಧಿಗಳನ್ನು ಸಾರ್ವಜನಿಕವಾಗಿ ಶಿಕ್ಷಿಸುವ ಮೂಲಕ ಇಡೀ ಸಮಾಜದಲ್ಲಿ ಹೆದರಿಕೆಯ ವಾತಾವರಣ ಸೃಷ್ಟಿಸುತ್ತಾರೆ. ಇರಾಕಿನ ಸದ್ದಾಂ ಹುಸೇನ್ ಅಧಿಕಾರಕ್ಕೆ ಬಂದ ತಕ್ಷಣವೇ ತನ್ನ ಪಕ್ಷದ ಸಭೆಯಲ್ಲಿ ವಿರೋಧಿಗಳ ಪಟ್ಟಿಯನ್ನು ಓದಿ, ಅವರನ್ನು ಒಂದೊಂದಾಗಿ ಹೊರ ಕರೆಸಿ ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲುವಂತೆ ಆದೇಶಿಸಿದ್ದ ಆಘಾತಕಾರಿ ನಿದರ್ಶನಗಳಿವೆ. ರೋಮಾನಿಯಾದ ಚೌಸೆಸ್ಕು ಮತ್ತು ಆತನ ಹೆಂಡತಿಯನ್ನು ಕ್ರಾಂತಿಯ ನಂತರ ಸಾರ್ವಜನಿಕವಾಗಿ ವಿಚಾರಣೆ ನಡೆಸಿ ಗಲ್ಲಿಗೇರಿಸಲಾಗಿತ್ತು.

ಉತ್ತರ ಕೊರಿಯಾದ ಕಿಮ್ ಜೋಗ್-ಉನ್ ಕೆಲವೊಮ್ಮೆ ಸಾರ್ವಜನಿಕವಾಗಿ ಭಾವುಕರಾಗಿ ಕಣ್ಣೀರು ಹಾಕುವುದನ್ನು ಅಥವಾ ಕಾರ್ಖಾನೆಗಳಿಗೆ ಭೇಟಿ ನೀಡಿ ಕಣ್ಣೀರಿಡುತ್ತಿರುವುದನ್ನು ಸರ್ಕಾರಿ ಮಾಧ್ಯಮಗಳು ಬಿಂಬಿಸುತ್ತವೆ. ಆದರೆ ಅದೇ ಸಮಯದಲ್ಲಿ ಅಲ್ಲಿನ ಕಠಿಣ ಯಾತನಾಶಿಬಿರಗಳಲ್ಲಿ (Concentration Camps) ಲಕ್ಷಾಂತರ ಜನ ಅಮಾನವೀಯ ಚಿತ್ರಹಿಂಸೆ ಅನುಭವಿಸುತ್ತಿರುತ್ತಾರೆ.

ಜನರ ಅಸಮಾಧಾನವೇ ಮೂಲ ಬಂಡವಾಳ
​ಸರ್ವಾಧಿಕಾರಿಗಳು ಆರಂಭದಲ್ಲಿ ಜನಪ್ರಿಯರೇ ಆಗಿರುತ್ತಾರೆ. ಹಿಂದಿನ ಆಡಳಿತಗಳ ವೈಫಲ್ಯಗಳಿಂದ ಅಸಮಾಧಾನ ಹೊಂದಿದ ಜನರು ಭವಿಷ್ಯದ ಆಶಾವಾದದಿಂದ ಇಂತವರನ್ನು ಬೆಂಬಲಿಸುತ್ತಾರೆ. ಅವರಾದರೋ ಹಿಂದಿನವರನ್ನು ನಿರಂತರ ದೂರುತ್ತಾ, ಎಲ್ಲದಕ್ಕೂ ಹಿಂದಿನವರೇ ಕಾರಣ ಎಂದು ನಂಬಿಸುತ್ತಾರೆ. ಇರಾಕಿನ ಸದ್ದಾಂ ಹುಸೇನ್ ಕೇವಲ ಸೇನೆಯ ಜನರಲ್ ಅಗಿದ್ದಾತ. 1979ರಲ್ಲಿ ಅಧ್ಯಕ್ಷ ಮಹಮ್ಮದ್ ಹಸನ್ ಅಲ್ ಬಖ್ರ್ ನಿಧನ ಹೊಂದಿದಾಗ ಜನರಲ್ಲಿ ಅಸಮಾಧಾನವಿತ್ತು. ಅದನ್ನೇ ಬಂಡವಾಳ ಮಾಡಿಕೊಂಡು ಸದ್ದಾಂ ಅಧ್ಯಕ್ಷನಾದಾಗ, ಬಾತ್ ಪಕ್ಷ ಆತನನ್ನು ಬೆಂಬಲಿಸಿತ್ತು. ಜನರೂ ಕುಷಿಯನ್ನೇಪಟ್ಟಿದ್ದರು. ಅದಕ್ಕೆ ಅನುಗುಣವಾಗಿ ಸದ್ದಾಂ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡದ್ದೂ ಹೌದು. ಅನೇಕ ಸರ್ವಾಧಿಕಾರಿಗಳು ಆಗ ಇದ್ದ ಆಡಳಿತದ ಕುರಿತು ಜನರಿಗಿದ್ದ ಅಸಮಾಧಾನವನ್ನೇ ಬಂಡವಾಳ ಮಾಡಿಕೊಂಡು ಅಧಿಕಾರಕ್ಕೆ ಏರಿದ್ದಾರೆ.

​ಹಿಟ್ಲರ್ ಕೂಡಾ ನೇರವಾಗಿ ಅಧಿಕಾರ ಕಸಿದುಕೊಂಡು ಸರ್ವಾಧಿಕಾರಿಯಾದವನಲ್ಲ. ಚುನಾವಣೆಯಲ್ಲಿ ಅವನ ಪಕ್ಷ ಎರಡನೇ ಸ್ಥಾನ ಗಳಿಸಿತ್ತು. ಆತನನ್ನು ಅಧ್ಯಕ್ಷ ಪೌಲ್ ವೊನ್ ಲಿಂಡೆನ್‌ಬರ್ಗ್ ಅವರು ಚಾನ್ಸಲರ್ ಆಗಿ ನೇಮಿಸಿದ್ದರು. ನಂತರ ಆತ ಅಧ್ಯಕ್ಷ ಮತ್ತು ಚಾನ್ಸಲರ್ ಎರಡೂ ಅಧಿಕಾರ ಇರುವ ಫ್ಯುರರ್ ಎಂದು ಘೋಷಿಸಿಕೊಂಡಾಗ ಬಹುತೇಕ ಜರ್ಮನರು ಅತ “ವಿಶ್ವಗುರು” ಆಗುವನೆಂದೇ ನಂಬಿ ಬೆಂಬಲಿಸಿದ್ದರು. ಯಾಕೆಂದರೆ, ಮೊದಲ ಮಹಾಯುದ್ಧದ ಸೋಲಿನಿಂದ ಜರ್ಮನಿ ತತ್ತರಿಸಿತ್ತು, ಆರ್ಥಿಕತೆ ಹದಗೆಟ್ಟಿತ್ತು ಮತ್ತು ನಿರುದ್ಯೋಗ ತಾಂಡವವಾಡುತ್ತಿತ್ತು.

ಪ್ರಜಾಪ್ರಭುತ್ವದ ಪರೋಕ್ಷ ಅವಹೇಳನ
​ಎಲ್ಲಾ ಸರ್ವಾಧಿಕಾರಿಗಳು ತಮಗೆ ಯಾವುದೇ ವಿರೋಧ ಇರಬಾರದೆಂದು ಬಯಸುತ್ತಾರೆ. ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ಅವರಿಗೆ ನಂಬಿಕೆಯೇ ಇರುವುದಿಲ್ಲ. ಸಂಸತ್ತಿನಂತಹ ಯಾವುದೇ ಚುನಾಯಿತ ನಿಯಂತ್ರಕ ಸಂಸ್ಥೆಯನ್ನು ಅವರು ಕಡೆಗಣಿಸುತ್ತಾರೆ. ಅಂತಹ ಸಂಸ್ಥೆಗಳಲ್ಲಿ ತಮ್ಮ ಭಟ್ಟಂಗಿಗಳೇ ಆಯಕಟ್ಟಿನ ಸ್ಥಾನಗಳಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ. ಹಿಟ್ಲರ್ ಕೂಡ ಜರ್ಮನ್ ಸಂಸತ್ತನ್ನು ವಿಸರ್ಜಿಸಿದ್ದ. ಪ್ರಜಾಸತ್ತಾತ್ಮಕ ನಿಯಮಗಳು, ಸಂವಿಧಾನ, ಸಂಸತ್ತು, ನ್ಯಾಯಾಲಯಗಳು ಮತ್ತು ಸ್ವತಂತ್ರ ಮಾಧ್ಯಮಗಳನ್ನು ಇವರು ಅತ್ಯಂತ ಕೀಳಾಗಿ, ಕೇವಲ ತಮ್ಮ ಕೈಗೊಂಬೆಗಳಂತೆ ಕಾಣುತ್ತಾರೆ. ಇಟಲಿಯ ಮುಸ್ಸೋಲಿನಿ ಪ್ರಜಾಪ್ರಭುತ್ವವನ್ನು “ಒಂದು ಕೊಳೆತ ಶವ” ಎಂದು ಕರೆಯುತ್ತಿದ್ದ.

​ಸರ್ವಾಧಿಕಾರದಲ್ಲಿ ನ್ಯಾಯಾಂಗ ವ್ಯವಸ್ಥೆಯ ಅಧಿಕಾರಗಳನ್ನು ಸಂಪೂರ್ಣವಾಗಿ ಮೊಟಕುಗೊಳಿಸಲಾಗುತ್ತದೆ. ನ್ಯಾಯಾಧೀಶ ಹುದ್ದೆಗಳಿಗೂ ಹಿಂಬಾಗಿಲಿನಿಂದ ತಮ್ಮವರೇ ಆದ ಕೈಗೊಂಬೆಗಳನ್ನು ತುರುಕಲಾಗುತ್ತದೆ. ತೀರ್ಪುಗಳು ವಿವಾದಾತ್ಮಕವಾಗಿದ್ದರೂ ಯಾರೂ ಪ್ರಶ್ನಿಸುವಂತಿಲ್ಲ. ಇನ್ನು ಸೇನೆ ಮತ್ತು ಪೊಲೀಸ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹೈಜಾಕ್ ಮಾಡಿ, ದೇಶಕ್ಕಾಗಿ ಹೋರಾಡಬೇಕಾದ ಸೇನೆಯು ಒಬ್ಬ ವ್ಯಕ್ತಿ ಅಥವಾ ಸರಕಾರದ ಪರವಾಗಿ ಹೋರಾಡುತ್ತಿದೆ ಎಂಬಂತೆ ಬಿಂಬಿಸಲಾಗುತ್ತದೆ. ಸೈನ್ಯದ ವೈಯಕ್ತಿಕ ಸಾಧನೆಗಳನ್ನು ತನ್ನದೇ ವೈಯಕ್ತಿಕ ಸಾಧನೆ ಎಂದು ಆಡಳಿತಗಾರರು ಕೊಚ್ಚಿಕೊಳ್ಳುತ್ತಾರೆ.

ಪ್ರಜಾಪ್ರಭುತ್ವದ ಮುಖವಾಡ; ಮೋಸದ ಚುನಾವಣೆ!
​ಒಂದು ಸರಕಾರ ನಡೆಯಲು ಹಲವಾರು ಸಂಸ್ಥೆಗಳು ಇರಲೇಬೇಕಾಗುತ್ತದೆ. ಬ್ಯಾಕಿಂಗ್, ಕೈಗಾರಿಕೆ, ಕೃಷಿ, ಅರೋಗ್ಯ, ಗೃಹ, ರಕ್ಷಣೆ ಹೀಗೆ ಆಡಳಿತ ಯಂತ್ರವನ್ನು ಮುನ್ನಡೆಸಲು ಅಧಿಕಾರಶಾಹಿ ಇದ್ದೇ ಇರುತ್ತದೆ. ಹೆಸರಿಗಾದರೂ ಪ್ರಜಾಪ್ರಭುತ್ವದ ಮುಖವಾಡ ಉಳಿಸಿಕೊಳ್ಳಲು ಕೆಲವು ದೇಶಗಳಲ್ಲಿ ನಕಲಿ ಚುನಾವಣೆಗಳು ನಡೆಯುತ್ತವೆ. ಈ ಹೊತ್ತಿನಲ್ಲಿ- ಯುಎಸ್‌ಎಯಲ್ಲಿ ಭಾರತದ ರಾಯಭಾರಿಯಾಗಿದ್ದ ಹಿರಿಯ ರಾಜತಾಂತ್ರಿಕ ಅಬಿದ್ ಹುಸೇನ್ ಅವರು ಕೆಲವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದಿದ್ದ ಪಂಚಾಯತಿ ರಾಜ್ ಸಮಾರಂಭವೊಂದರಲ್ಲಿ ಆಫ್ರಿಕಾದ ದೇಶವೊಂದರಲ್ಲಿ ನಡೆಯುತ್ತಿದ್ದ ಚುನಾವಣೆಗಳ ಕುರಿತು ಉದಾಹರಣೆಯಾಗಿ ಹೇಳಿದ ಜೋಕೊಂದು ನೆನಪಿಗೆ ಬರುತ್ತದೆ.

ಒಬ್ಬ ವ್ಯಕ್ತಿ ಅಧ್ಯಕ್ಷರ ವಿರುದ್ಧವಾಗಿ ಮತ ಚಲಾಯಿಸಿ ಮನೆಗೆ ಬಂದು ಹೆಂಡತಿಯ ಬಳಿ ಹೇಳಿದಾಗ ಆಕೆ ಕಂಗಾಲಾಗುತ್ತಾಳೆ. “ನಿಮಗೆ ಬುದ್ದಿ ಇಲ್ಲವೆ?! ಸರಕಾರಕ್ಕೆ ಗೊತ್ತಾದರೆ ನಾಳೆ ನೀವು ಕೆಲಸ ಕಳಕೊಳ್ಳಬಹುದು, ಜೈಲಿಗೂ ಹೋಗಬಹುದು, ಗೂಂಡಾಗಳು ಹಲ್ಲೆ ನಡೆಸಬಹುದು; ಮಗಳನ್ನು ಅತ್ಯಾಚಾರ ಮಾಡಬಹುದು! ಈಗಲೇ ಹೋಗಿ ಮತ ಬದಲಿಸಿ ಬನ್ನಿ!” ಎಂದು ಅಂಗಲಾಚುತ್ತಾಳೆ. ಆತ ಭಯಗೊಂಡು ಮತಗಟ್ಟೆಗೆ ದೌಡಾಯಿಸಿ ಅಧಿಕಾರಿಗೆ ಹೇಳುತ್ತಾನೆ—”ಸ್ವಾಮಿ ನಾನು ತಪ್ಪಾಗಿ ಅಧ್ಯಕ್ಷರ ವಿರುದ್ಧ ಮತ ಚಲಾಯಿದ್ದೇನೆ, ಅದನ್ನು ಅವರ ಪರವಾಗಿ ಸರಿಪಡಿಸಿ”. ಆಗ ಅಧಿಕಾರಿಗಳು ನಗುತ್ತಾ ಹೇಳುತ್ತಾರೆ—”ನಿನಗೇನೂ ಭಯ ಬೇಡ. ನಾವು ಈಗಾಗಲೇ ನಿನ್ನ ಮತವನ್ನು ಅಧ್ಯಕ್ಷರ ಪರ ತಿದ್ದಿಯಾಗಿದೆ!”

ವೋಟ್ ಚೋರಿಯ ಪೆಡಂಭೂತ!
​ಇಂದು ನಮ್ಮ ದೇಶದ ಇಲೆಕ್ಟ್ರಾನಿಕ್ ಮತಯಂತ್ರಗಳ (EVM) ಬಗ್ಗೆಯೂ ವಿರೋಧ ಪಕ್ಷಗಳು ಮತ್ತು ಜನಸಾಮಾನ್ಯರಲ್ಲಿ ಇಂತಹದ್ದೇ ಆತಂಕಗಳು ಮೂಡುವುದರ ಹಿಂದೆ ವ್ಯವಸ್ಥೆಯ ಮೇಲೆ ವಿಶ್ವಾಸಾರ್ಹತೆ ಕುಸಿದಿರುವುದೇ ಕಾರಣವಾಗಿದೆ. ಇಂದಿನ ಆಧುನಿಕ ಹಾಗೂ ಮೃದು ಸರ್ವಾಧಿಕಾರಿ ವ್ಯವಸ್ಥೆಗಳಲ್ಲಿ ನೇರವಾದ ಸೇನಾ ದಂಗೆಗಳು ಅಥವಾ ಬಹಿರಂಗ ರಕ್ತಪಾತಗಳೇ ಆಗಬೇಕೆಂದಿಲ್ಲ. ಇದು ಅಕ್ಷರಶಃ ಒಂದು ರಕ್ತರಹಿತ, ಸೇನಾರಹಿತ ಕ್ರಾಂತಿಯಂತಹದ್ದೇ ಆಡಳಿತಾತ್ಮಕ ಹೈಜಾಕ್ ಆಗಿದೆ. ಸಾಂವಿಧಾನಿಕ ಸಂಸ್ಥೆಗಳನ್ನು, ಚುನಾವಣಾ ಪ್ರಕ್ರಿಯೆಗಳನ್ನು ಹಾಗೂ ಕಾನೂನುಗಳನ್ನು ಬಳಸಿಕೊಂಡೇ ಪ್ರಜಾಪ್ರಭುತ್ವವನ್ನು ಒಳಗಿನಿಂದಲೇ ಕೊಲ್ಲಲಾಗುತ್ತದೆ.

​ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ, ಜನರ ಧ್ವನಿಯನ್ನು ಅಡಗಿಸಲು ಅಥವಾ ವಿರೋಧ ಪಕ್ಷಗಳ ಹಾಗೂ ಸಾರ್ವಜನಿಕರ ಪ್ರತಿಭಟನೆಗಳನ್ನು ಹತ್ತಿಕ್ಕಲು ಪೊಲೀಸರ ಜೊತೆಗೆ ಗಡಿ ಭದ್ರತಾ ಪಡೆಗಳು (BSF) ಅಥವಾ ಕೈಗಾರಿಕಾ ಭದ್ರತಾ ಪಡೆಗಳಂತಹ (CISF) ಕೇಂದ್ರದ ಸಶಸ್ತ್ರ ಪಡೆಗಳನ್ನು ರಸ್ತೆಗಿಳಿಸುವುದು. ದೇಶದ ಆಂತರಿಕ ಅಶಾಂತಿಯನ್ನು ಎದುರಿಸಲು ಅಥವಾ ನಮ್ಮದೇ ದೇಶದ ಜನಸಾಮಾನ್ಯರ ಪ್ರಜಾಸತ್ತಾತ್ಮಕ ಹೋರಾಟಗಳನ್ನು ದಮನ ಮಾಡಲು ರಕ್ಷಣಾ ಪಡೆಗಳನ್ನು ರಾಜಕೀಯ ದಾಳಗಳಂತೆ ಬಳಸಿಕೊಳ್ಳಲಾಗುತ್ತಿರುವುದು ತೀರಾ ಅಪಾಯಕಾರಿ ಎಂದು ಹಿಂದೊಮ್ಮೆ ಇಲ್ಲಿಯೇ ನೆನಪಿಸಿದ್ದೆ.

ಗವಾಕ್ಷಿಯಿಂದ ಸರ್ವಾಧಿಕಾರದ ಭೂತ!
​ಮತದಾನದ ಹಕ್ಕಿನ ಮೇಲೆ ನಡೆಯುತ್ತಿರುವ ಅತ್ಯಾಚಾರಗಳು, ‘ವೋಟ್ ಚೋರಿ’ ಅಂದರೆ ವ್ಯವಸ್ಥಿತವಾಗಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವ ಅಥವಾ ತಿರುಚುವ ಪ್ರಯತ್ನಗಳು (ಉದಾಹರಣೆಗೆ ಇತ್ತೀಚಿನ ಎಸ್‌ಐಆರ್ – SIR ಮಾದರಿಯ ವಿಶೇಷ ತನಿಖೆ ಅಥವಾ ಪರಿಷ್ಕರಣೆಗಳ ಹೆಸರಿನಲ್ಲಿ ನಿರ್ದಿಷ್ಟ ಸಮುದಾಯ ಅಥವಾ ವಿರೋಧಿಗಳ ಮತಗಳನ್ನು ಕಡಿತಗೊಳಿಸುವ ತಂತ್ರಗಳು) ಇಂದು ಪ್ರಜಾಪ್ರಭುತ್ವದ ಹೊಸ ಸ್ವರೂಪದ ಸರ್ವಾಧಿಕಾರದ ಮುಖಗಳಾಗಿವೆ. ಯಾವುದೇ ಗುಂಡು ಹಾರಿಸದೆ, ಸೈನ್ಯದ ನೇರ ಹಸ್ತಕ್ಷೇಪವಿಲ್ಲದೆ ಕೇವಲ ಆಡಳಿತ ಯಂತ್ರದ ದುರುಪಯೋಗ ಮತ್ತು ಕಣ್ಗಾವಲಿನ ಮೂಲಕವೇ ಇಡೀ ಸಮಾಜವನ್ನು ಅಂಜಿಕೆ ಹಾಗೂ ಅಲಿಖಿತ ತುರ್ತು ಪರಿಸ್ಥಿತಿಯ ನೆರಳಿನಲ್ಲಿ ಇಡುವ ಪ್ರಯತ್ನ ಮಾಡಲಾಗುತ್ತಿದೆ.

​ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಎಲ್ಲಾ ಗುಣಲಕ್ಷಣಗಳು ಕೇವಲ ಇತಿಹಾಸದ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಂದಿಗೂ ಜಾಗತಿಕ ರಾಜಕಾರಣದಲ್ಲಿ ಹಾಗೂ ನಮ್ಮ ಸುತ್ತಮುತ್ತಲಿನ ಸಣ್ಣಪುಟ್ಟ ರಾಜಕೀಯ ವ್ಯವಸ್ಥೆಗಳಲ್ಲಿ ಇಂತಹ ‘ಮಿನಿ ಸರ್ವಾಧಿಕಾರಿಗಳು’ ಹುಟ್ಟಿಕೊಳ್ಳುವುದನ್ನು ನಾವು ಕಾಣಬಹುದು. ಈ ಗುಣಲಕ್ಷಣಗಳು ನಮ್ಮ ಸುತ್ತಲೂ ಕಾಣಿಸಿಕೊಳ್ಳುತ್ತಿವೆ ಎಂಬುದು ಸ್ಪಷ್ಟವಾಗಿದೆ. ಇವೆಲ್ಲವುಗಳನ್ನು ಓದುಗರು ಈಗಲಾದರೂ ಸೂಕ್ಷ್ಮವಾಗಿ ಪರಿಶೀಲಿಸಬೇಕು. ಒಂದು ವೇಳೆ ಮೇಲೆ ಹೇಳಿರುವ ಲಕ್ಷಣಗಳು ನಿಮಗೂ ಕಾಣಿಸುತ್ತಿರುವುದು ಹೌದಾದಲ್ಲಿ, ನಾವು ತೀರಾ ಅಪಾಯದ ಅಂಚಿನಲ್ಲಿದ್ದೇವೆ ಎಂದೇ ಅರ್ಥ.

Related Articles

ಇತ್ತೀಚಿನ ಸುದ್ದಿಗಳು