ಬೆಂಗಳೂರು: ʼಪ್ರದೀದ್ ಈಶ್ವರ್ ಅವರ ಕೈಗಳಿಗೆ ಏನಾಗಿದೆ ನೋಡಿ. ಅವರಿಗೆ ಕೈಗೆ ಕಬ್ಬಿಣ ಕೊಡಿʼ ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ತಮಾಷೆಯಾಗಿ ಹೇಳಿದ ಪ್ರಸಂಗ ಶುಕ್ರವಾರದ ಸದನದಲ್ಲಿ ನಡೆಯಿತು.
ವಿರೋಧ ಪಕ್ಷ ಬಿಜೆಪಿ ಸದಸ್ಯರು ವಾಲ್ಮಿಕಿ ನಿಗಮ ಮತ್ತು ಮೂಡಾ ಹಗರಣಗಳ ಬಗ್ಗೆ ಗಲಾಟೆ ಮಾಡುತ್ತಿರುವಾಗ ಖಾದರ್ ಅವರು ಪ್ರದೀಪ್ ಈಶ್ವರ್ ಅವರಿಗೆ ಮಾತನಾಡಲು ಆವಕಾಶ ನೀಡಿದರು. ಪ್ರದೀಪ್ ಈಶ್ವರ್ ಮಾತಾಡಲು ಶುರು ಮಾಡಿದಾಗ ಇನ್ನಷ್ಟು ಗದ್ದಲ ಶುರುವಾಯಿತು.
ʼರಾಜ್ಯದಲ್ಲಿ ಮಳೆ ಪ್ರವಾಹ ಬಂದು ಜನ ಸಂಕಷ್ಟದಲ್ಲಿದ್ದಾರೆ. ರೈತರ ಬೆಳೆಗಳು ನಾಶ ಆಗಿವೆ ಈ ಕುರಿತು ಚರ್ಚೆ ಮಾಡುವುದು ಬಿಟ್ಟು ಹೀಗೆ ಸದನದಲ್ಲಿ ಗಲಾಟೆ ಮಾಡುವುದು ಸರಿಯೇ? ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯೇ?ʼ ಎಂದು ಪ್ರದೀಪ್ ಈಶ್ವರ್ ಪ್ರಶ್ನಿಸಿದರು.
ನಮ್ಮ ಸರ್ಕಾರ ಜನರ ಸಂಕಷ್ಟಕ್ಕೆ ಸಾಕಷ್ಟು ಸ್ಪಂದಿಸುತ್ತಿದೆ. ನಮ್ಮ ಸಿದ್ದರಾಮಯ್ಯ ಸಾಹೇಬರು ಪ್ರತಿ ವಿಧಾನಸಬಾ ಕ್ಷೇತ್ರಕ್ಕೂ 25 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಮಳೆ ಪ್ರವಾಹದ ಪರಿಹಾರಕ್ಕೂ ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದೆ. ಇದರ ಬಗ್ಗೆ ವಿರೋಧ ಪಕ್ಷದವರು ಚರ್ಚೆ ನಡೆಸಬೇಕು ಎಂದಾಗ ವಿರೋಧ ಪಕ್ಷದ ಸದಸ್ಯರು ಮತ್ತಷ್ಟು ಗಲಾಟೆ ತೀವ್ರಗೊಳಿಸಿದರು.
ಇನ್ನೊಂದು ಬದಿಯಿಂದ ಆರ್. ಆಶೋಕ್ ಅವರು ಕಾಂಗ್ರೆಸ್ಸಿನ ಭ್ರಷ್ಟಾಚಾರ ಕುರಿತು ಕೂಗುತ್ತಿದ್ದುದರಿಂದ ʼಅಶೋಕಣ್ಣ ಇಲ್ಲಿ ಕೇಳಿ ನೀವೇನು ಕಡಿಮೆಯೇ? ಕೃಷಿ ಮಾರುಕಟ್ಟೆ ಮಂಡಳಿಯಲ್ಲಿ 47 ಕೋಟಿ ರೂ ಹಗರಣ, ಕರಕುಶಲ ಅಭಿವೃದ್ಧಿ ನಿಗಮದಲ್ಲಿ ಹತ್ತಾರು ಕೋಟಿ, ದೇವರಾಜ್ ಅರಸ್ ಅಭಿವೃದ್ಧಿ ನಿಗಮದಲ್ಲಿ 36 ಕೋಟಿ ಕರ್ನಾಟಕ ಮಾಲಿನಿ ನಿಯಂತ್ರಣ ಮಂಡಳಿಯಲ್ಲಿ 10 ಕೋಟಿ ಲೂಟಿ ಹೊಡೆದವರು ನೀವು? ಈ ನಿಮ್ಮ ಪ್ರಕರಣಗಳ ಬಗ್ಗೆ ಯಾಕೆ ಸಿಬಿಐಗೆ ವಹಿಸಿಲ್ಲ? ಎಂದು ಪ್ರದೀಪ್ ಜೋರಾಗಿ ಕೂಗತೊಡಗಿದರು.
ಬಂಡಲ್ ಬಂಡಲ್ ಪ್ರದೀಪ್ ಈಶ್ವರ್ ಬಂಡಲ್: ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು “ಬಂಡಲ್ ಬಂಡಲ್ ಪ್ರದೀಪ್ ಈಶ್ವರ್ ಬಂಡಲ್” ಎಂದು ಗಲಾಟೆ ಹೆಚ್ಚಿಸಿದರು. ಸ್ಪೀಕರ್ ಖಾದರ್ ಅವರು ಪ್ರದೀಪ್ ಈಶ್ವರ್ ಅವರಿಗೆ ಕುಳಿತುಕೊಳ್ಳಿ ಎಂದು ಹೇಳಿದರು. ಆದರೆ, ಈಶ್ವರ್ ಆ ಕಡೆಯಿಂದ ಜೋರಾಗಿ ಕೂಗುತ್ತಲೇ ಇದ್ದರು. ಈ ಸಂದರ್ಭದಲ್ಲಿ ಸ್ಪೀಕರ್ ಅವರು ತಮಾಷೆಯಾಗಿ ಪ್ರದೀಪ್ ಈಶ್ವರ್ ಅವರ ಕೈಗಳಿಗೆ ಏನಾಗಿದೆ ನೋಡಿ. ಅವರ ಕೈಗೆ ಕಬ್ಬಿಣ ಕೊಡಿ ಎಂದು ತಮಾಷೆಯಾಗಿ ಹೇಳಿದ ಪ್ರಸಂಗ ನಡೆಯಿತು.