ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಿನ ದಿನಗಳಲ್ಲಿ ತಿಹಾರ್ ಜೈಲಿಗೆ ಹೋಗಲಿದ್ದಾರೆ.. ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ.. ನಮ್ಮನ್ನು ಹಾಸನಕ್ಕೆ ಓಡಿಸಬಹುದು, ಆದರೆ ಅವರು ಜೈಲಿಗೆ ಹೋಗುವುದು ತಪ್ಪಲ್ಲ.. ಹೀಗೆ ಡಿಕೆ ಬ್ರದರ್ಸ್ ಮೇಲೆ ರಾಜಕೀಯ ದಾಳಿ ನಡೆಸುತ್ತಿರುವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಡಿಕೆ ಸುರೇಶ್ ಖಡಕ್ ಆಗಿ ಉತ್ತರಿಸಿದ್ದಾರೆ.
ಏನಂದ್ರು ಕುಮಾರಸ್ವಾಮಿ?
ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ತಿರುಗಿ ಬಿದ್ದಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ತಮ್ಮ ಅಸ್ತ್ರಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲೆ ತಿರುಗಿಸಿದ್ದಾರೆ.
ನನ್ನ ಜೀವನದಲ್ಲಿ ಡಿ.ಕೆ. ಶಿವಕುಮಾರ್ ಅವರ ಜತೆ ಎಂದೂ ರಾಜಿ ಆಗಲ್ಲ. ಒಮ್ಮೆ ಅವರ ಜತೆ ಸರ್ಕಾರ ಮಾಡಿದ್ದರಿಂದ ನಾನು ಈಗಲೂ ನೋವು ಅನುಭವಿಸುತ್ತಾ ಇದ್ದೇನೆ. ಜೆಡಿಎಸ್ ಜೊತೆಗಿನ ಮೈತ್ರಿ ಸರ್ಕಾರವನ್ನು ಉರುಳಿಸಿದ್ದೇ ಡಿ.ಕೆ.ಶಿವಕುಮಾರ್. ಅವರು ಒಮ್ಮೆ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ. ಅವರು ಮತ್ತೆ ಅಲ್ಲಿಗೆ ಪರ್ಮನೆಂಟಾಗಿ ಹೋದರೂ ಅಚ್ಚರಿ ಅಲ್ಲ. ನಮ್ಮನ್ನು ಹಾಸನಕ್ಕೆ ಓಡಿಸಬಹುದು, ಆದರೆ ಅವರು ತಿಹಾರ್ ಜೈಲಿಗೆ ಓಡುವ ಕಾಲ ಹತ್ತಿರದಲ್ಲಿ ಇದೆ.. ಹೀಗೆ ಒಂದೊಂದಾಗಿ ಕುಮಾರಸ್ವಾಮಿ ಡಿ.ಕೆ.ಶಿವಕುಮಾರ್ ಮೇಲೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕುಮಾರಸ್ವಾಮಿಯವರ ಈ ರೀತಿಯ ರಾಜಕೀಯ ದಾಳಿಗೆ ಕಾಂಗ್ರೆಸ್ ನ ಹಲವು ಮುಖಂಡರು ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ತಮ್ಮ ತೃತೀಯ ದರ್ಜೆಯ ರಾಜಕೀಯ ಆರೋಪವನ್ನು ಮತ್ತೆ ಇಲ್ಲಿ ತಿರುಗಿಸಿದ್ದು ಖಂಡನೀಯ ಎಂದು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ತಿರುಗಿ ಬಿದ್ದಿದ್ದಾರೆ.
ಹೆಚ್ಡಿಕೆ ಆರೋಪಕ್ಕೆ ಏನಂತಾರೆ ಡಿ.ಕೆ.ಸುರೇಶ್?
ಕುಮಾರಸ್ವಾಮಿ ಏನು ಹೇಳಿದ್ದಾರೋ ಗೊತ್ತಿಲ್ಲ, ಅವರು ದೊಡ್ಡವರು. ಅವರ ನುಡಿಮುತ್ತುಗಳನ್ನು ನೋಡಿ ಉತ್ತರ ಕೊಡುತ್ತೇನೆ. ನನ್ನನ್ನು ಜೈಲಿಗೆ ಕಳುಹಿಸುವ ಬಗ್ಗೆ ಅವರ ಪ್ಲ್ಯಾನ್ ಏನಿದೆ ಎಂದು ಹೇಳುತ್ತಿದ್ದಾರೆ. ಅವರು ಬಿಜೆಪಿ ಜೊತೆಗೆ ಕೈ ಜೋಡಿಸಿದ್ದೇ ಈ ಉದ್ದೇಶಕ್ಕೆ ಇರಬಹುದು. ಇನ್ನೂ ಏನೆಲ್ಲ ಮಾಡಲು ಸಾಧ್ಯವೋ ಎಲ್ಲವನ್ನೂ ಹೇಳುತ್ತಿದ್ದಾರೆ. ಹಿಂದೆಯೂ ಪಾಪ ಮಾಡಿದ್ದರಲ್ಲ. ನನ್ನ ತಂಗಿ, ನನ್ನ ತಮ್ಮ, ನನ್ನ ಹೆಂಡತಿ ಮೇಲೂ ಕೇಸ್ ಹಾಕಿದ್ದರು. ಈ ಹಿಂದೆ ಸಿಎಂ ಆಗಿದ್ದನ್ನು ಈಗ ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಈ ಬಗ್ಗೆ ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದು, ‘ಡಿ.ಕೆ. ಶಿವಕುಮಾರ್ ಅವರನ್ನು ತಿಹಾರ್ ಜೈಲಿಗೆ ಕಳುಹಿಸಿ ಅಂತ ದೆಹಲಿಗೆ ಹೋದಾಗ ಬಹುಶಃ ಇವರೇ ಅಮಿತ್ ಶಾಗೆ ರಿಕ್ವೆಸ್ಟ್ ಮಾಡಿಕೊಂಡು ಬಂದಿರಬೇಕು. ಇವರ ಗೊಡ್ಡು ಬೆದರಿಕೆಗಳಿಗೆ ಹೆದರುವ ಜಾಯಮಾನ ನಮ್ಮದಲ್ಲ. ಇವರ ದಾಖಲೆಗಳನ್ನು ಬಿಚ್ಚಿಡುವ ಸಮಯ ಬಂದರೆ ನಾವೂ ಸಿದ್ಧ. ಇವರ ಕನಸು ನನಸಾಗುವುದಿಲ್ಲ, ಕನಸು ಕನಸಾಗಿಯೇ ಉಳಿಯುತ್ತದೆ’ ಎಂದು ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಜೆಡಿಎಸ್ ನಾಯಕರು ಎಲ್ಲೋ ಒಂದು ಕಡೆ ಮಾನಸಿಕವಾಗಿ ಕುಗ್ಗಿದ್ದಾರೆ. ಅವರ ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕಿದೆ. ಅವರ ಆಲೋಚನೆಗಳೆಲ್ಲ ಒಂದು ಕಡೆ ಕೇಂದ್ರಿಕೃತ ಆದಂತೆ ಕಾಣುತ್ತಿದೆ. ಕಾರ್ಯಕರ್ತರು ಇವರ ನಡೆ ನುಡಿ ನೋಡಿ ಅವರ ದಾರಿಯನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಎಚ್‌ಡಿಕೆ ಹೇಳುವುದು ಸುಳ್ಳಿನ ಮಹಾ ಭಾಗ. ಸುಳ್ಳಿನಲ್ಲಿ ಎಚ್‌ಡಿಕೆ ಎಕ್ಸ್‌ಪರ್ಟ್” ಎಂದು ಹೇಳಿದ್ದಾರೆ.