Home ಇನ್ನಷ್ಟು ಸೈನ್ಸ್ + ಟೆಕ್ನಾಲಜಿ ʼಬ್ರಹ್ಮಾಂಡʼ ಎಂಬ ಶಿವನ ವಿಸ್ತಾರವೆಷ್ಟು ?  

ʼಬ್ರಹ್ಮಾಂಡʼ ಎಂಬ ಶಿವನ ವಿಸ್ತಾರವೆಷ್ಟು ?  

0

ಶಿವರಾತ್ರಿಯ ಮಹತ್ವ ಸಾರುವ ಅನೇಕ ಪೌರಾಣಿಕ ಕತೆಗಳು ನಮ್ಮಲ್ಲಿವೆ. ಅವುಗಳಲ್ಲಿ ಕೆಲವು ಕಥೆಗಳಿಗೆ ವೈಜ್ಞಾನಿಕ ದೃಷ್ಟಿಕೋನ ಕೊಡಬಹುದು ಎನ್ನುತ್ತಾ “ಬ್ರಹ್ಮಾಂಡʼ ಕಲ್ಪನೆಯನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ವಿಶ್ಲೇಷಿಸಿದ್ದಾರೆ ಸಂಸ್ಕೃತಿ ಚಿಂತಕರಾದ ಪ್ರವೀಣ್ ಎಸ್ ಶೆಟ್ಟಿ.

ಒಮ್ಮೆ ವಿಷ್ಣು ಮತ್ತು ಬ್ರಹ್ಮ ಶಿವನ ‘ಆದಿ ಮತ್ತು ಅಂತ್ಯ’ ಅರಿಯಲು ಪ್ರಯತ್ನಿಸಿ  ಅದು ಸಾಧ್ಯವಾಗದೆ ಹೋದಾಗ ಶಿವನನ್ನು ಲಿಂಗ ರೂಪದಲ್ಲಿ ಪೂಜಿಸಿದ ದಿನವೇ ಶಿವ ರಾತ್ರಿಯಂತೆ. ಈ ಲಿಂಗ ಆದಿ ಅಂತ್ಯವಿಲ್ಲದ ಬ್ರಹ್ಮಾಂಡದ ಪ್ರತೀಕವಂತೆ!

ಹೌದು. ಬ್ರಹ್ಮಾಂಡದ ಆದಿ ಅಂತ್ಯ ಯಾರೂ ಅರಿತಿಲ್ಲ. ಬ್ರಹ್ಮಾಂಡದ ಪರಿಧಿ ಲೆಕ್ಕ ಮಾಡಿದವರಿಲ್ಲ. ನಮಗೆ ಭೂಮಿಯಿಂದ ಸೂರ್ಯನ ದೂರ ಎಷ್ಟೆಂದು ಶಾಲೆಯಲ್ಲಿ ಕಲಿಸಲಾಗುತ್ತದೆ.  ಆದರೆ ಒಂದು ಸೂರ್ಯನಿಂದ ಇನ್ನೊಂದು ಸೂರ್ಯನ ದೂರ ಎಷ್ಟೆಂದು ನಮಗೆ ಕಲಿಸುತ್ತಿಲ್ಲ.  ರಾತ್ರಿ ಆಕಾಶ ನೋಡಿದಾಗ ನಮಗೆ ಲಕ್ಷಾಂತರ ನಕ್ಷತ್ರಗಳು ಕಾಣಿಸುತ್ತವೆ. ಆ ಪ್ರತಿಯೊಂದು ನಕ್ಷತ್ರವೂ ಒಂದೊಂದು ಸೂರ್ಯ!  ಅವೆಲ್ಲಾ ನಮ್ಮ ಸೂರ್ಯನಿಗಿಂತ ನೂರಾರು ಪಟ್ಟು ದೊಡ್ಡದಿವೆ. (ಈ ಕುರಿತು ಯುಟ್ಯೂಬ್ ನಲ್ಲಿ ಲಭ್ಯವಿರುವ ಪರಿಣಾಮಕಾರಿ ಗ್ರಾಫಿಕ್ಸ್ ನೋಡಬಹುದು). ಆ ನಕ್ಷತ್ರವೆಂಬ ಸೂರ್ಯಗಳು ನಮಗಿಂತ ಎಷ್ಟು ದೂರ ಇವೆ ಎಂದರೆ ಅಲ್ಲಿಂದ ಹೊರಟ ಬೆಳಕು ನಮ್ಮ ಭೂಮಿಯ ವರೆಗೆ ಮುಟ್ಟಲು ಕನಿಷ್ಠ ನಾಲ್ಕು ವರ್ಷ ಬೇಕಾಗುತ್ತದೆ! ಕೆಲವು ನಕ್ಷತ್ರಗಳಂತೂ ನಮ್ಮಿಂದ ಎಷ್ಟು ದೂರ ಇವೆಯೆಂದರೆ ಅವುಗಳ ಬೆಳಕು ನಮ್ಮ ಭೂಮಿಗೆ ಮುಟ್ಟುವುದು ಒಂದು ಸಾವಿರ ವರ್ಷಗಳ ನಂತರ! ಇದಕ್ಕೆ ಹೊಲಿಸಿದರೆ ನಮ್ಮದೇ ಸೂರ್ಯನ ಬೆಳಕು ನಮ್ಮ ಭೂಮಿಗೆ ಮುಟ್ಟಲು ತೆಗೆದುಕೊಳ್ಳುವ ಸಮಯ ಕೇವಲ ಎಂಟು ನಿಮಿಷ ಮಾತ್ರ. ನಕ್ಷತ್ರಗಳು ಸೂರ್ಯನಿಗಿಂತ ನೂರಾರು ಪಟ್ಟು ಹೆಚ್ಚು ಶಾಖ ಹೊರ ಸೂಸುತ್ತವೆ, ಆದರೆ ಅದು ಭೂಮಿಯವರೆಗೆ ಮುಟ್ಟುವುದಿಲ್ಲ,  ಅಂದರೆ ಕೇವಲ ಆ ನಕ್ಷತ್ರಗಳ ಬೆಳಕು ಮಾತ್ರ ಭೂಮಿಯ ವರೆಗೆ ಮುಟ್ಟುತ್ತದೆ. 

ಬೆಳಕಿನ ವೇಗ ಮತ್ತು ಶಾಖದ ವೇಗ ಬೇರೆ ಬೇರೆ ಆಗಿರುತ್ತದೆ ಎಂದು ನಾವು ಹೈಸ್ಕೂಲಲ್ಲಿಯೇ ಕಲಿತಿರುತ್ತೇವೆ.  ಹೀಗೆ ಭಯಂಕರ ಶಾಖ ಮತ್ತು ಭಾರಿ ಬೆಳಕು ಹೊರಸೂಸುವ ಲಕ್ಷಾಂತರ ಸೂರ್ಯಗಳು ಅರ್ಥಾತ್ ನಕ್ಷತ್ರಗಳು ಈ ಬ್ರಹ್ಮಾಂಡದಲ್ಲಿ ಇವೆ. ಭೂಮಿ ಮೇಲೆ ಇರುವ ಅತಿ ಪವರ್ ಫುಲ್ ಟೆಲಿಸ್ಕೋಪ್ ಸಹಾ ನೋಡಲಾಗದಷ್ಟು ದೂರದಲ್ಲಿ ಆ ಸೂರ್ಯಗಳು/ನಕ್ಷತ್ರಗಳು ಇವೆ. ಹಾಗಾದರೆ ಬ್ರಹ್ಮಾಂಡದ ಅಂತಿಮ ಸೀಮೆ ಎಲ್ಲಿಯಾದರೂ ಇರಲು ಸಾಧ್ಯವೇ? ಇದಕ್ಕಾಗಿಯೇ ಅದನ್ನು ಅನಂತ (infinity) ಎಂದು ಕರೆದಿರುವುದು. ನಮ್ಮ ಸೂರ್ಯನಿಗಿಂತ ನೂರು ಪಟ್ಟು ದೊಡ್ಡದಿರುವ ನಕ್ಷತ್ರವನ್ನು ಟೆಲಿಸ್ಕೋಪ್ ನಲ್ಲಿ ನಮ್ಮ ವಿಜ್ಞಾನಿಗಳು ನೋಡುವುದು ಸಾಧ್ಯವಾಗಿದೆ. ಆದರೆ ಅದರ ಆಚೆಗೂ ಅದಕ್ಕಿಂತಲೂ ಹಲವು ಪಟ್ಟು ದೊಡ್ಡದಿರುವ ಸೂರ್ಯಗಳು ಇವೆ.  ಆದರೆ ಅವುಗಳ ಬಿಸಿ ಮತ್ತು ಬೆಳಕು ನಮ್ಮ ಸೂರ್ಯನಿಗಿಂತ ಎಷ್ಟು ಪಟ್ಟು ಹೆಚ್ಚಿರಬಹುದು ಎಂದು ನಮಗೆ ಊಹಿಸಲೂ ಸಾಧ್ಯವಿಲ್ಲ! (ಮಿಲ್ಕೀ-ವೇ ಮತ್ತು ಗೆಲಾಕ್ಸೀ ಕುರಿತು ಯುಟ್ಯೂಬ್ ನಲ್ಲಿ ಅದ್ಭುತ ಗ್ರಾಫಿಕ್ಸ್ ಇವೆ!)

ನಮ್ಮ ಸೂರ್ಯನ ಸುತ್ತ ಇರುವ ಒಂಬತ್ತು ಗ್ರಹಗಳಂತೆಯೇ ನಮಗೆ ರಾತ್ರಿ ಕಾಣುವ ಪ್ರತಿಯೊಂದು ಬೃಹತ್ ನಕ್ಷತ್ರಗಳ ಸುತ್ತಲೂ ನೂರಾರು ಗ್ರಹಗಳು ಇವೆ ಎನ್ನುತ್ತಾರೆ ಖಗೋಳ ವಿಜ್ಞಾನಿಗಳು. ಅಂದರೆ ಲಕ್ಷಾಂತರ ಗ್ರಹಗಳ ಸುತ್ತ ಕೋಟ್ಯಾಂತರ ಗ್ರಹಗಳು ಇವೆ ಎಂದಾಯಿತು.  ಆ ಕೋಟ್ಯಾಂತರ ಗ್ರಹಗಳಲ್ಲಿ ಒಂದು ಗ್ರಹದಲ್ಲಿಯಾದರೂ ಭೂಮಿಯಂತಹಾ ವಾತಾವರಣ ಇದ್ದಿರಲೂ ಬಹುದು! ಭೂಮಿಗೆ ಎಲ್ಲಿಂದ ಮೊಟ್ಟಮೊದಲ ಜೀವಿಗಳು ಬಂದವೋ ಆ ಮೂಲದಿಂದಲೇ ಆ ಬೇರೆ ಬೇರೆ ಸೂರ್ಯಗಳ/ನಕ್ಷತ್ರಗಳ ಸುತ್ತ ಇರುವ ಕೋಟ್ಯಾಂತರ ಗ್ರಹಗಳ ಮೇಲೆಯೂ ಜೀವಿಗಳ ಉಗಮ ಆಗಿರಬಹುದು ಅಲ್ಲವೇ?  ಭೂಮಿಯ ಮೇಲೆ ಎಲ್ಲಾ ಜೀವಿಗಳ ಉಗಮವನ್ನು ನಮ್ಮ ಮನುಷ್ಯರೂಪದ ಅಥವಾ ಅರೆಪ್ರಾಣಿ ರೂಪದ ದೇವರು ಮಾಡಿದ್ದರೆ ಆ ನಕ್ಷತ್ರಗಳ ಸುತ್ತ ಇರುವ ಗ್ರಹಗಳ ಮೇಲೆಯೂ ಆ ಮನುಷ್ಯ ರೂಪದ/ಪ್ರಾಣಿ ರೂಪದ ದೇವರು ಜೀವಿಗಳನ್ನು ಹುಟ್ಟಿಸಿರಲು ಸಾಧ್ಯವೇ?  ದೇವರಿಗೆ ಮನುಷ್ಯ  ರೂಪ ಅಥವಾ ಪ್ರಾಣಿ ರೂಪ ಇದೆಯೆಂದು ನಿರ್ಧರಿಸಿದವರು ಯಾರು? ನಾವು ಮನುಷ್ಯರೇ ತಾನೇ!

ಸೌರಮಂಡಲ ಅಂದರೆ ನಮ್ಮ ಸೂರ್ಯ ಮತ್ತು ಪೃಥ್ವಿ ಸಹಿತ ಎಲ್ಲಾ ಗ್ರಹಗಳ ರಚನೆ ಆಗಿದ್ದು 450 ಕೋಟಿ ವರ್ಷಗಳ ಹಿಂದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.  ಮೊದಮೊದಲು ಪೃಥ್ವಿಯ ತುಂಬೆಲ್ಲಾ ಕೇವಲ ಲಾವಾ ಉಗುಳುವ ಅಗ್ನಿ ಪರ್ವತಗಳೆ ತುಂಬಿದ್ದವು, ಅದರ ನಂತರ ಪೃಥ್ವಿ ತಣ್ಣಗಾಗಿ, ನೀರು ಮತ್ತು ಗಾಳಿಯುಳ್ಳ ವಾತಾವರಣ ಸೃಷ್ಟಿಯಾಗಿ ಪ್ರಕೃತಿ ಮತ್ತು ಜೀವಗಳ ಉಗಮವಾಗಿದ್ದು ಸುಮಾರು 300 ಕೋಟಿ ವರ್ಷಗಳ ಹಿಂದೆಯಂತೆ.  ಮೊಟ್ಟಮೊದಲು ಒಂಟಿ ಸೆಲ್ಲಿನ ಜೀವಿಗಳು (ಮೈಕ್ರೋಬ್ ಗಳು) ಉಗಮವಾದವಂತೆ. ಅದರ ನಂತರ ಮೊಟ್ಟೆ ಇಕ್ಕುವ ಜೀವಿಗಳ ಉಗಮವಾಯಿತು. ಕೊನೆಗೆ ಕೇವಲ 25 ಕೋಟಿ ವರ್ಷಗಳ ಹಿಂದೆಯಷ್ಟೆ ಮರಿ ಹಾಕುವ ‘ಸಸ್ತನಿ’ಗಳ ಉಗಮವಾಯಿತು. ಅವುಗಳಲ್ಲೂ ಎರಡು ಕಾಲ ಮೇಲೆ ನಡೆಯುವ ವಾನರ ಜೀವಿಯ ವಿಕಾಸ ಆಗಿದ್ದು ಕೇವಲ 60 ಲಕ್ಷ ವರ್ಷಗಳ ಹಿಂದೆ, ಹಾಗೂ ಮಾನವನ ಅತಿ ಹತ್ತಿರದ ಪೂರ್ವಜ ಹೊಮೊಸೇಪಿಯನ್ ವಿಕಸನಗೊಂಡಿದ್ದು ಎರಡು ಲಕ್ಷ ವರ್ಷಗಳ ಹಿಂದೆ ಅಷ್ಟೇ. ಅದರಲ್ಲೂ ಮೊದಲ 58 ಲಕ್ಷ ವರ್ಷ  ವಾನರ/ಮಾನವ ಉಳಿದ ಕಾಡು ಪ್ರಾಣಿಗಳಂತೆಯೇ ಜೀವಿಸುತ್ತಿದ್ದ. ಕೇವಲ ಎರಡು ಲಕ್ಷ ವರ್ಷಗಳ ಹಿಂದೆ ಮಾನವ ಅಲೆಮಾರಿ ಬೇಟೆಗಾರ, ಸಂಗ್ರಹಕಾರ ಆಗಿ ಪ್ರಗತಿ ಹೊಂದಿದನು.  ಹೆಚ್ಚೆಂದರೆ ಐವತ್ತು ಸಾವಿರ ವರ್ಷಗಳ ಹಿಂದೆಯಷ್ಟೆ ಮನುಷ್ಯ ನದಿ ದಡಗಳಲ್ಲಿ ಒಂದೆಡೆ ನೆಲೆ ನಿಂತು ಕೃಷಿ, ಹೈನು, ಮೀನುಗಾರಿಕೆಯಲ್ಲಿ ತೊಡಗಿಕೊಂಡನು, ಜತೆಗೆ ಬೆಂಕಿಯ ಸರಿಯಾದ ಬಳಕೆಯನ್ನು ಅರಿತುಕೊಂಡನು. ಆ ಘಟ್ಟದಲ್ಲಿಯೂ ಅವನಿಗೆ ‘ದೇವರು’ ಎಂಬ ಕಲ್ಪನೆ ಹುಟ್ಟಿಯೇ ಇರಲಿಲ್ಲ. ಒಂದು ವೇಳೆ ಮನುಷ್ಯ ರೂಪದ ಅಥವಾ ಅರೆಪ್ರಾಣಿ ರೂಪದ ದೇವರು ನಿಜವಾಗಿ ಇದ್ದಿದ್ದೇ ಆಗಿದ್ದರೆ 60 ಲಕ್ಷ ವರ್ಷಗಳ ಹಿಂದೆಯೇ ವಾನರ/ಮಾನವ ಜೀವಿ ಮೊದಲು ವಿಕಾಸಗೊಂಡ ಕೂಡಲೇ ದೇವರು ತನ್ನ ಮಹಿಮೆಯಿಂದ ಮನುಷ್ಯನಿಗೆ ಭಾಷೆ ಕಲಿಸಿ, ಬೆಂಕಿಯ ಬಳಕೆಯನ್ನು ಕಲಿಸಿ, ಈಗಿನ ಮಟ್ಟದ ಸುಸಂಸ್ಕೃತ ನಾಗರೀಕ ಸಮಾಜವನ್ನು ಆಗಲೇ ನಿರ್ಮಿಸಬೇಕಿತ್ತಲ್ಲವೇ?  ಭೂಮಿಯ ಮೇಲಿನ ಮನುಷ್ಯರಿಗೆ ಹಾಗೂ ಇತರ ನಕ್ಷತ್ರಗಳ ಸುತ್ತ ಇರುವ ಗ್ರಹಗಳಲ್ಲಿ ಇರಬಹುದಾದ ಜೀವಿಗಳ ಜತೆ ಮಾನವನಿಗೆ ಯಾಕೆ ಸಂವಹನ ಸಂಪರ್ಕ ದೇವರು ಒದಗಿಸಲಿಲ್ಲ?  60 ಲಕ್ಷ ವರ್ಷಕ್ಕೆ ಮುಂಚೆ ವಾನರ/ಮಾನವ ಜಾತಿಯೇ ಈ ಭೂಮಿ ಮೇಲೆ ಇರದಿದ್ದಾಗ ಆ ಮಾನವ ರೂಪಿ ದೇವರು ಎಲ್ಲಿದ್ದ? ಏನು ಮಾಡುತ್ತಿದ್ದ?

ಈ ಮೇಲಿನ ಪ್ರಶ್ನೆಯನ್ನು ಎತ್ತಿಕೊಂಡು ಈ ಶಿವರಾತ್ರಿಯಂದು ರಾತ್ರಿಯಿಡೀ ಪೂಜೆ ಜಪತಪ ಮಾಡುವಾಗ ನಡುವೆ ಭಕ್ತರು ಸ್ವಲ್ಪ ಅವಕಾಶ ಮಾಡಿಕೊಂಡು ಮನೆಯಿಂದ ಹೊರಬಂದು ಆಕಾಶದಲ್ಲಿ ಮಿಂಚುವ ಲಕ್ಷಾಂತರ ತಾರೆಗಳನ್ನು ವೀಕ್ಷಿಸಿ ಸೀಮಾತೀತ ಶಿವನ (ಬ್ರಹ್ಮಾಂಡದ) ಕಲ್ಪನೆ ಮಾಡಿಕೊಳ್ಳಿ. ಅವುಗಳ ಸುತ್ತ ಇರಬಹುದಾದ ಕೋಟ್ಯಂತರ ಗ್ರಹಗಳನ್ನು ಊಹಿಸಿಕೊಳ್ಳಿ. ಕೊನೆಗೆ ನಿಮ್ಮನ್ನೆ ನೀವು ಒಂದು ಪ್ರಶ್ನೆ ಕೇಳಿಕೊಳ್ಳಿ- ನಮ್ಮ ಮನುಷ್ಯ ರೂಪದ ದೇವರು ಆ ತಾರಾಲೋಕದ ಗ್ರಹಗಳಿಗೆ ಯಾವ ರೂಪದಲ್ಲಿ ಹೋಗಿರಬಹುದು ಎಂದು? ಈ ಸಂದರ್ಭದಲ್ಲಿ ಮಹಾವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ ಹೇಳಿದ ಒಂದು ಮಾತು ನೆನಪಿಟ್ಟು ಕೊಳ್ಳಬೇಕು. ಅದೇನೆಂದರೆ “ಈ ಜಗತ್ತಿನಲ್ಲಿ ಎರಡು ವಿಷಯಕ್ಕೆ ಸೀಮೆ ಎಂಬುದೇ ಇಲ್ಲ, ಅವೆಂದರೆ ಒಂದನೆಯದು ಈ ಬ್ರಹ್ಮಾಂಡ, ಹಾಗೂ ಎರಡನೆಯದು ಮನುಷ್ಯನ ಮೂರ್ಖತನ”! ಮನುಷ್ಯ ರೂಪದ ಅಥವಾ ಅರೆಪ್ರಾಣಿ ರೂಪದ ದೇವರ ನಂಬಿಕೆಯು ಐನ್ಸ್ಟೈನ್ ಹೇಳಿದ ಎರಡನೇ ಸೀಮಾತೀತ ವರ್ಗಕ್ಕೆ ಸೇರಿರಬಹುದೇ? ಜ್ಯೋತಿಷಿಗಳಿಗೆ ಸೂರ್ಯನ ಚಲನೆ ಮತ್ತು ಸೂರ್ಯನ ಸುತ್ತ ತಿರುಗುವ ಗ್ರಹಗಳ ಚಲನೆ ಕರಾರುವಾಕ್ಕಾಗಿ ಗೊತ್ತಿದೆಯಂತೆ, ಹಾಗಾದರೆ ಅವರಿಗೆ ಬ್ರಹ್ಮಾಂಡ ಎಂಬ ಶಿವನ ಪರಿಧಿ ಹಾಗೂ ಸೀಮೆಯ ಜ್ಞಾನವಿದೆಯೇ?  

ಮೂರು ಸಾವಿರ ವರ್ಷಗಳ ಹಿಂದೆ ಇದ್ದ ಭಾರತದ ಮೂಲ ಧರ್ಮಗಳಾದ ಆಜೀವಿಕಾ ಮತ್ತು ಶ್ರಮಣ ಸಂಸ್ಕೃತಿಗಳಲ್ಲಿ ದೇವರ ಕಲ್ಪನೆಯೇ ಇರಲಿಲ್ಲವಂತೆ! 2,200 ವರ್ಷಗಳ ಹಿಂದೆ ವೈದಿಕ ಧರ್ಮ ಬೆಳೆದ ಮೇಲೆಯೇ ದೇವರ ಕಲ್ಪನೆ ಭಾರತದೆಲ್ಲೆಡೆ ಹರಡಿದ್ದು. ಈಗಿನ ಬಹಳಷ್ಟು ವಿಚಾರವಾದಿಗಳು ಮನುಷ್ಯ ರೂಪದ ಅಥವಾ ಅರೆಪ್ರಾಣಿ ರೂಪದ ದೇವರನ್ನು ನಂಬದಿದ್ದರೂ ಈ ಜಗತ್ತಿನಲ್ಲಿ ಒಂದು ನಿರ್ದಿಷ್ಟ ಲೆಕ್ಕಾಚಾರದಂತೆಯೇ ಪ್ರಕೃತಿಯೊಳಗಿನ ಸಮಸ್ತ ವಿದ್ಯಮಾನಗಳು ನಡೆಯುತ್ತಿರುವುದನ್ನು ನೋಡಿದಾಗ ಯಾವುದೋ ಒಂದು “ಅದೃಶ್ಯ ದಿವ್ಯ ಶಕ್ತಿ” ಎಲ್ಲವನ್ನೂ ಕರಾರುವಾಕ್ಕಾಗಿ ನಿಯಂತ್ರಿಸುತ್ತಿದೆಯೆಂದು ಅನಿಸುತ್ತದೆ ಎಂದು ವಿಚಾರವಾದಿಗಳೂ ಒಪ್ಪುವುದನ್ನು ನಾನು ಕೇಳಿದ್ದೇನೆ. ಈಗಿನ ಜಟಿಲ ಜೀವನದಲ್ಲಿ ಎದುರಾಗುವ ಕಷ್ಟಗಳಿಂದ ಮುಖ್ಯವಾಗಿ ಮಹಿಳೆಯರು ಸ್ಥೈರ್ಯ ಕುಂದಿ ಮಾನಸಿಕ ವ್ಯಾಧಿಗೆ ಖಿನ್ನತೆಗೆ ಬೇಗ ಬಲಿಯಾಗುತ್ತಾರೆ. ಇದರಿಂದ ಅವರ ಕೌಟಂಬಿಕ ಜೀವನ ಅಸ್ತವ್ಯಸ್ತವಾಗುತ್ತದೆ. ಈ ಖಿನ್ನತೆಯಿಂದ ಹೊರಬರಲು ಮನೋವೈದ್ಯರು ಅವರಿಗೆ ಕೆಲವು ಸಿಂಥೆಟಿಕ್ ಡ್ರಗ್ ಗಳನ್ನು ಕೊಡುತ್ತಾರೆ. ಈ ಡ್ರಗ್ ಗಳಿಂದ ಆ ಮನೋರೋಗಿಯ ಮೆದುಳಲ್ಲಿ ರಾಸಾಯನಿಕ ಪ್ರಕ್ರಿಯೆ ನಡೆದು ಅವರಲ್ಲಿ ಉತ್ಸಾಹ ಮತ್ತು ಸ್ಥೈರ್ಯ ಮೂಡುತ್ತದೆ. ಅದೇ ಪ್ರಕಾರ ಹರಕೆ ಪೂಜೆ ಭಜನೆ ಜಪತಪಗಳಿಂದ (ಯಾವುದೇ ದೇವರು ಒಲಿಯದಿದ್ದರೂ) ಸುಪ್ತವಾಗಿ ಮನೋರೋಗಿಗಳ ಮೆದುಳಲ್ಲಿ ಒಂದು ರೀತಿಯ ರಾಸಾಯನಿಕ ಪ್ರಕ್ರಿಯೆ ನಡೆದು ಅವರಲ್ಲಿ ಧೈರ್ಯ ಮತ್ತು ಉತ್ಸಾಹ ಮೂಡುತ್ತದೆಯಂತೆ. ಮನೋರೋಗದಿಂದ ಬಳಲುತ್ತಿರುವವರಿಗೆ ದೇವರ ನಂಬಿಕೆ ಮತ್ತು ಪೂಜೆ ಭಜನೆ ಹರಕೆಗಳು ಹೆಚ್ಚು ಕಡಿಮೆ ಸಿಂಥೆಟಿಕ್ ಡ್ರಗ್ ಕೊಡುವಷ್ಟೇ ಶಮನಕಾರಿ ಪರಿಣಾಮ ಕೊಡುತ್ತದೆಯೆಂದು ಮನೋವಿಜ್ಞಾನಿಗಳ ಅಭಿಪ್ರಾಯ. ಮನುಷ್ಯನಿಗೆ ದೇವರ ನಂಬಿಕೆಯೊಂದು ಇದ್ದಿರದಿದ್ದರೆ ನಮಗೆ ಸಮಾಜದಲ್ಲಿ ಹೆಜ್ಜೆ ಹೆಜ್ಜೆಗೆ ಮನೋರೋಗಿಗಳು ಸಿಗುತ್ತಿದ್ದರು ಎಂಬುದು ಕೆಲವು ಮನಃಶಾಸ್ತ್ರಿಗಳ ಧೃಡ ಅಭಿಪ್ರಾಯ. ಇದನ್ನು ಕೆಲ ಮಟ್ಟಿಗೆ ಒಪ್ಪಲೇ ಬೇಕಾಗುತ್ತದೆ. ಆ ಕಾರಣಕ್ಕಾಗಿ ಒಮ್ಮೆಲೇ ಸಮಾಜದ ಮೇಲೆ ಚಾರ್ವಾಕನಂತೆ  ನಾಸ್ತಿಕವಾದ ಹೇರಲು ಸಾಧ್ಯವಿಲ್ಲ ಎಂಬ ಮಾತಲ್ಲಿ ಹುರುಳಿದೆ.

ಕಮ್ಯೂನಿಷ್ಟ್ ಆಡಳಿತದ ದೇಶಗಳಲ್ಲಿ ಅಲ್ಲಿಯ ಸರ್ವಾಧಿಕಾರಿಗಳ 50-60 ವರ್ಷಗಳ ಶತಪ್ರಯತ್ನದ ಹೊರತಾಗಿಯೂ ಅಲ್ಲಿಯ ಜನರಲ್ಲಿ, ಹುಟ್ಟಿನಿಂದ ಬಂದಿದ್ದ ಧರ್ಮಬೀರು ಆಸ್ತಿಕ ಮನಸ್ಥಿತಿಯನ್ನು ತೆಗೆದು ಹಾಕುವುದು ಸಾಧ್ಯವಾಗಿಲ್ಲವೆಂಬುದನ್ನು ನಾವು ಗಮನಿಸಬಹುದು. ಆದರೆ ಜನರಲ್ಲಿ ಕ್ರಮೇಣ ವೈಜ್ಞಾನಿಕ ಮನೋಭಾವ ಹೆಚ್ಚಿಸಲು ಸೀಮೆಯಿಲ್ಲದ ಶಿವನ (ಬ್ರಹ್ಮಾಂಡದ) ಅಗಣಿತ ವಿಸ್ತಾರದ ಕುರಿತು ಯುವ ಜನರಲ್ಲಿ ಕುತೂಹಲವನ್ನು ಹುಟ್ಟಿಸುವುದು ಕೂಡ ಅವಶ್ಯವಾಗಿದೆ. ಮುಂದೊಂದು ದಿನ ನಮ್ಮ ದೇಶದ ಮೂಲ ಜೀವನ ಶೈಲಿ ಹೊಂದಿದ್ದ ಆಜೀವಿಕಾ, ಚಾರ್ವಾಕ, ಶ್ರಮಣ ಸಂಸ್ಕೃತಿಗಳು ಮರಳಿ ಬರಬಹುದೇನೋ!.

ಪ್ರವೀಣ್ ಎಸ್ ಶೆಟ್ಟಿ

ಲೇಖಕರು

You cannot copy content of this page

Exit mobile version