ಸ್ವರಾ ಭಾಸ್ಕರ್ ಅವರ ಅಂತರ್ ಧರ್ಮೀಯ ಪ್ರೇಮ ಮದುವೆ ಸಮಾಜಕ್ಕೆ ಅದ್ಭುತ ಸಂದೇಶವೊಂದನ್ನು ರವಾನಿಸಿದೆ. ಬೇರೆಯವರ ಬದುಕಿನಲ್ಲಿ ಕೈಹಾಕುವ ವಿಚ್ಛಿದ್ರಕಾರಿ ಶಕ್ತಿಗಳಿಗೆ ತಪರಾಕಿ ನೀಡಿ ಮುಖಭಂಗ ಉಂಟುಮಾಡುತ್ತಲೇ ‘ಹೆದರ ಬೇಡಿ ನಿಮ್ಮ ಬದುಕನ್ನು ನೀವೇ ಧೈರ್ಯದಿಂದ ನಿರ್ಧರಿಸಿ’ ಎಂದು ಭಾರತದ ಪ್ರೇಮಿಗಳಿಗೆ ಜಾತಿ ಮತ ಧರ್ಮ ಮೀರಿದ ಪ್ರೇಮದ ಮತ್ತು ಮದುವೆಯ ದಾರಿಯನ್ನೂ ತೋರಿದೆ. ಪೂರ್ಣ ಓದಿಗೆ ಶ್ರೀನಿ ಕಾಲಂ ನೋಡಿ.
ಖ್ಯಾತ ಸಾಮಾಜಿಕ ಹೋರಾಟಗಾರ್ತಿ, ಹಿಂದಿ ಚಿತ್ರರಂಗದ ತಾರೆ ಸ್ವರಾ ಭಾಸ್ಕರ್ ಇತ್ತೀಚೆಗೆ ಮತ್ತೆ ಸುದ್ದಿಯಾದರು; ಸಾಮಾಜಿಕ ಮಾಧ್ಯಮಗಳಲ್ಲಿ ದೀರ್ಘ ಕಾಲ ಟ್ರೆಂಡ್ ಆದರು. ಇದಕ್ಕೆ ಕಾರಣ ಸ್ವರಾ ಅವರ ಮದುವೆ. ಕೇವಲ ಮದುವೆಯಾಗುತ್ತಿದ್ದರೆ ಅದೊಂದು ದೊಡ್ಡ ಸುದ್ದಿಯಲ್ಲ. ಆದರೆ ಆಕೆ ಮದುವೆಯಾದುದು ಓರ್ವ ಮುಸ್ಲಿಂ ವ್ಯಕ್ತಿಯನ್ನು. ಅದೂ ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗನ ನಡುವಿನ ಸಹಜ ಪ್ರೇಮವನ್ನು, ಇಷ್ಟದ ಮದುವೆಯನ್ನು ಅದೇನೋ ಒಂದು ಮಹಾ ಅಪರಾಧ ಎಂದು ಪರಿಗಣಿಸಿ ಅದಕ್ಕೆ ನಿಷೇಧ ವಿಧಿಸುತ್ತಿರುವ, ಪ್ರೇಮಿಗಳನ್ನು ಬಡಿದು ಕೊಲ್ಲುತ್ತಿರುವ ಮತ್ತು ‘ಲವ್ ಜಿಹಾದ್’ ಎಂದು ಹೆಸರಿಸಿ ಅದನ್ನು ನಿಷೇಧಿಸಲು ಕಾನೂನುಗಳನ್ನೇ ತರುತ್ತಿರುವ ಕಾಲ ಮತ್ತು ದೇಶದಲ್ಲಿ!
ಸ್ವರಾ ತನ್ನ ಅಂತರ್ ಧರ್ಮೀಯ ಮದುವೆಯ ಮೂಲಕ ಏಕಕಾಲಕ್ಕೆ ಮತೀಯವಾದಿ ಶಕ್ತಿಗಳಿಗೆ ಹಾಗೆಯೇ ಅಂತರ್ ಧರ್ಮೀಯ ಮತ್ತು ಅಂತರ್ಜಾತೀಯ ಪ್ರೇಮಿಗಳಿಗೂ ಒಂದು ಪ್ರಬಲ ಸಂದೇಶವನ್ನು ರವಾನಿಸಿದ್ದಾರೆ. ‘ನಾವು ಯಾರನ್ನು ಪ್ರೀತಿಸಬೇಕು, ಯಾರನ್ನು ಮದುವೆಯಾಗಬೇಕು, ಯಾರೊಂದಿಗೆ ಲೈಂಗಿಕತೆ ಅನುಭವಿಸಬೇಕು ಎಂದು ಫತ್ವಾ ಹೊರಡಿಸಲು ನೀವು ಯಾರು?’ ಎಂಬ ಸವಾಲಿನ ಸಂದೇಶವನ್ನು ಮತೀಯವಾದಿ ಶಕ್ತಿಗಳಿಗೆ ರವಾನಿಸಿದರೆ, ‘ಹೆದರ ಬೇಡಿ, ನಿಮ್ಮ ದೇಹ ನಿಮ್ಮ ಹಕ್ಕು, ನಿಮ್ಮ ಪ್ರೇಮ ಮತ್ತು ದಾಂಪತ್ಯದ ಬದುಕನ್ನು ನೀವೇ ನಿರ್ಧರಿಸಿ ಅದನ್ನು ಮೂರನೆಯವರಿಗೆ ನಿರ್ಧರಿಸಲು ಬಿಡಬೇಡಿ’ ಎಂಬ ಧೈರ್ಯದ ಸಂದೇಶವನ್ನು ಅಂತರ್ ಧರ್ಮೀಯ ಮತ್ತು ಅಂತರ್ಜಾತೀಯ ಪ್ರೇಮಿಗಳಿಗೆ ರವಾನಿಸಿದ್ದಾರೆ. ಪ್ರೇಮಿಗಳ ಪಾಲಿಗೆ ಈ ಸಂದೇಶ ಬಹಳ ಮುಖ್ಯ ಯಾಕೆಂದರೆ, ಸಮಾಜದ ಒತ್ತಡ ಮತ್ತು ಪೋಷಕರ ಬಲವಂತದ ಕಾರಣವಾಗಿ ನಮ್ಮಲ್ಲಿ ಇಂತಹ ಪ್ರೇಮ ಸಂಬಂಧಗಳು ಮುರಿದು ಬೀಳುತ್ತಿರುವುದರ ಉದಾಹರಣೆಗಳು ಅಸಂಖ್ಯ.
ಸ್ವರಾ ಭಾಸ್ಕರ್ ಎಂಬ ದಿಟ್ಟ ಹೋರಾಟಗಾರ್ತಿ
ಸ್ವರಾ ಭಾಸ್ಕರ್ ಭಾರತೀಯ ಸಾಮಾಜಿಕ ಹೋರಾಟಗಳ ಕ್ಷೇತ್ರದಲ್ಲಿ ಹಾಗೆಯೇ ಚಲನಚಿತ್ರ ವಲಯದಲ್ಲಿ ಚಿರಪರಿಚಿತ ಹೆಸರು. ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ತೆಲುಗು ಮೂಲದ ಕಮಾಡೋರ್ ಸಿ ಉದಯ ಭಾಸ್ಕರ್ ಮತ್ತು ಬಿಹಾರಿ ಮೂಲದ ಇರಾ ಭಾಸ್ಕರ್ (ಜೆ ಎನ್ ಯು ನಲ್ಲಿ ಪ್ರೊಫೆಸರ್) ಅವರ ಮಗಳು, ಜೆ ಎನ್ ಯು ವಿನ ಹಳೆಯ ವಿದ್ಯಾರ್ಥಿನಿ ಸ್ವರಾ ಅವರು ಕೇವಲ ಅಭಿನೇತ್ರಿಯಾಗಿರುತ್ತಿದ್ದರೆ ಅದೇನೋ ದೊಡ್ಡ ಸಂಗತಿಯಲ್ಲ. ಅಭಿನೇತ್ರಿ ಎನ್ನುವುದಕ್ಕಿಂತಲೂ ಹೆಚ್ಚಾಗಿ ಸಂವಿಧಾನ, ಮಾನವ ಹಕ್ಕುಗಳ ಪರ, ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧದ ಹೋರಾಟಗಳಲ್ಲಿ ತುಂಬಾ ಅಸಕ್ತಿ ವಹಿಸಿದ್ದವರು ಅವರು. ಪ್ರಗತಿಪರ ಚಿಂತಕರು, ಹೋರಾಟಗಾರರು ಈಗ ಬಲಪಂಥೀಯ ಟ್ರೋಲ್ ಆರ್ಮಿಗಳ ತೇಜೋವಧೆಯ ಅಭಿಯಾನದ ಗುರಿಯಾಗುತ್ತಿರುವುದು ಹೊಸ ವಿಷಯವೇನಲ್ಲ. ಅದು ಜೆ ಎನ್ ಯು ವಿದ್ಯಾರ್ಥಿಗಳ ಚಳುವಳಿಯಿರಬಹುದು, ರೈತರ ಹೋರಾಟವಿರಬಹುದು ಅಥವಾ ಸಿಎಎ ವಿರುದ್ಧದ ಹೋರಾಟವಿರಬಹುದು ಅಲ್ಲೆಲ್ಲ ಮುಂಚೂಣಿಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದವರು ಸ್ವರಾ. ಹಾಗಿರುವಾಗ ಸಂಘಪರಿವಾರದ ಶಕ್ತಿಗಳ ಕಣ್ಣು ಎಷ್ಟು ಕೆಂಪಾಗಬೇಡ?
ಅಲ್ಲದೆ, ‘ವೀರೆ ದಿ ವೆಡ್ಡಿಂಗ್’ ಸಿನಿಮಾದಲ್ಲಿ ವೈಬ್ರೇಟರ್ ಮೂಲಕದ ಹಸ್ತಮೈಥುನ ದೃಶ್ಯವೊಂದನ್ನೂ ಸ್ವರಾ ದಿಟ್ಟವಾಗಿ ಅಭಿನಯಿಸಿದವರು. ಇದು ಟ್ರೋಲ್ ಮಾಡುವುದನ್ನೇ ಜೀವನೋಪಾಯ ಮಾಡಿಕೊಂಡಿರುವ ಸಂಸ್ಕಾರ ಹೀನರಿಗೆ ಒಳ್ಳೆಯ ಆಹಾರವಾಯಿತು. ಸ್ವರಾ ಏನೇ ಹೇಳಿಕೆ ನೀಡಲಿ ಅದಕ್ಕೆ ಸೊಂಟದ ಕೆಳಗಿನ ಭಾಷೆಯನ್ನು ಬಳಸಿ ಆಕೆಯ ತೇಜೋವಧೆಯ ಮೂಲಕವೇ ಟ್ರೋಲ್ ಆರ್ಮಿಗಳು ಉತ್ತರಿಸಲಾರಂಭಿಸಿದವು. ಸಿನಿಮಾ ಬಿಡುಗಡೆಯಾಗಿ ನಾಲ್ಕು ವರ್ಷ ಕಳೆದ ಬಳಿಕವೂ ಅವರ ಪಾಲಿಗೆ ವಿಷಯ ಇದೊಂದೇ. ಆಕೆಯ ಪ್ರತಿಯೊಂದು ಹೇಳಿಕೆಗೂ ಉತ್ತರಿಸುವುದು ಹಸ್ತಮೈಥುನ ವಿಷಯದ ಮೂಲಕವೇ.
ಸಿನಿಮಾ ನಿರ್ಮಾಣವೂ ಒಂದು ಉದ್ಯಮವಲ್ಲವೇ? ಅದೂ ಲಾಭವನ್ನೇ ಗುರಿಯಾಗಿರಿಸಿಕೊಂಡಿರುವ ವ್ಯವಹಾರ. ಹೀಗಾಗಿ ವಿವಾದ ಅವರಿಗೆ ಅಪಥ್ಯ. ಸ್ವರಾ ಕೇರೇ ಮಾಡದೆ ಒಂದಿಲ್ಲೊಂದು ವಿವಾದ ಮೈಮೇಲೆ ಎಳೆದುಕೊಳ್ಳುತ್ತಿದ್ದ ದಿಟ್ಟೆ. ಇದೇ ಕಾರಣದಿಂದ ಆಕೆ ಕಳೆದುಕೊಂಡ ಸಿನಿಮಾ ಅವಕಾಶಗಳಾದರೋ ಲೆಕ್ಕಕ್ಕೆ ಸಿಗದಷ್ಟು.
ನಂಬಿದ ಸಿದ್ಧಾಂತಕ್ಕೆ ಸದಾ ಬದ್ಧ
ಆದರೆ ಸ್ವರಾ ಯಾವತ್ತೂ ತಾನು ನಂಬಿದ ಜೀವಪರ ಸಿದ್ಧಾಂತದ ಹಾದಿಯಿಂದ ಹಿಂದೆ ಸರಿದವಳೇ ಅಲ್ಲ. ಟ್ರೋಲ್ ಗಳನ್ನು ಹೇಗೆ ಎದುರಿಸಬೇಕು ಎನ್ನುವುದಕ್ಕೆ ಆಕೆ ಒಂದು ಉದಾಹರಣೆಯಂತೆ ಬದುಕಿದರು, ತಮ್ಮ ಕೆಲಸ ಮಾಡುತ್ತಲೇ ಹೋದರು. ಮದುವೆಯ ವಯಸ್ಸೂ ಆಯಿತು (34). ಈಗ ಸಿಎಎ ವಿರೋಧಿ ಹೋರಾಟ ಸಂದರ್ಭದಲ್ಲಿ ಪರಿಚಿತನಾದ ಮುಸ್ಲಿಂ ಪ್ರಿಯಕರ, ಹೋರಾಟಗಾರ ಫಹಾದ್ ಅಹಮದ್ ಅವರನ್ನು, ಅದೂ ತೀರಾ ಸರಳವಾಗಿ, ‘ಸ್ಪೆಶಲ್ ಮ್ಯಾರೇಜ್ ಆಕ್ಟ್’ ಅನುಸಾರ ಮದುವೆಯಾದರು. ಆ ಮೂಲಕ ಏಕಕಾಲಕ್ಕೆ ಸಮಾಜಕ್ಕೆ ಅನೇಕ ಸಕಾರಾತ್ಮಕ ಸಂದೇಶಗಳನ್ನು ರವಾನಿಸಿದರು.
ಆಕೆಯ ಹಸ್ತಮೈಥುನ ದೃಶ್ಯದ ವಿರುದ್ಧ ಟೀಕೆಯಿರಬಹುದು ಅಥವಾ ಮುಸ್ಲಿಂ ಯುವಕನನ್ನು ಮದುವೆಯಾದ್ದರ ವಿರುದ್ಧದ ಟೀಕೆಯಿರಬಹುದು. ಅದರ ಹಿಂದೆ ಇರುವುದು ಸ್ಪಷ್ಟವಾಗಿ ಗಂಡಾಳ್ವಿಕೆಯ ಕೆಟ್ಟ ಮತ್ತು ದುಷ್ಟ ಮನಸ್ಥಿತಿ. ಗಂಡಿಗೆ ತನ್ನ ಹೆಣ್ಣನ್ನು ಲೈಂಗಿಕವಾಗಿ ತೃಪ್ತಗೊಳಿಸುವ ಸಾಮರ್ಥ್ಯ ಇಲ್ಲದಿದ್ದರೂ ಸರಿ, ಆಕೆ ತನ್ನದೇ ರೀತಿಯಲ್ಲಿ ಹಸ್ತಮೈಥುನವೋ ಅಥವಾ ಇನ್ಯಾವುದಾದರೂ ರೀತಿಯಲ್ಲಿಯೋ ತೃಪ್ತಿ ಪಡೆಯುವುದನ್ನು ಸಂಕುಚಿತ ಮನಸಿನ ಗಂಡಾಳ್ವಿಕೆಯ ಸಮಾಜ ಎಂದೂ ಒಪ್ಪಿಕೊಳ್ಳುವುದಿಲ್ಲ. ಆಕೆಯೂ ಒಂದು ಜೀವ ಆಕೆಗೂ ಜೀವಸಹಜವಾದ ಬಯಕೆಗಳು ಇರುತ್ತವೆ ಎನ್ನುವುದನ್ನು ಒಪ್ಪಿಕೊಳ್ಳದೆಯೇ ಅದು ತನ್ನ ಆಲೋಚನೆಗಳನ್ನು ಕ್ರಿಯೆಗಳನ್ನು ರೂಪಿಸುತ್ತದೆ ಮತ್ತು ಹೆಣ್ಣಿನ ಮೇಲೆ ಹೇರುತ್ತದೆ.
ಅದೇ ರೀತಿಯಲ್ಲಿ ಆಕೆ ಇಷ್ಟ ಪಟ್ಟು ಮುಸ್ಲಿಂ ಯುವಕನನ್ನು ಮದುವೆಯಾದರೆ ಅದು ಲವ್ ಜಿಹಾದ್.! ಅವರ ಪ್ರಕಾರ ಮುಸ್ಲಿಮರು ಹಿಂದೂ ಹುಡುಗಿಯನ್ನು ಮದುವೆಯಾಗುವುದು ಅಂದರೆ ಅಲ್ಲಿ ಇರುವುದು ವಂಚನೆ, ಮತಾಂತರ ಮತ್ತು ಸಾಲು ಸಾಲು ಮಕ್ಕಳನ್ನು ಹೆರುವುದು. ಭಯೋತ್ಪಾದನೆಗೆ ಬಳಕೆಯಾಗುವುದು. ಅಂದರೆ ಹೆಣ್ಣಿಗೆ ತನ್ನ ಬದುಕನ್ನು ತಾನೇ ನಿರ್ಧರಿಸುವ ಸ್ವಂತ ಬುದ್ಧಿ ಸ್ವಂತ ಶಕ್ತಿ ಇದೆ ಎನ್ನುವುದನ್ನು ನಿರಾಕರಿಸುತ್ತಲೇ ಈ ಗಂಡಾಳ್ವಿಕೆಯ ಎಲ್ಲ ಆಲೋಚನೆಗಳು ಹೊರಡುತ್ತವೆ. ಆಕೆ ಅಬಲೆ, ಆಕೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ, ಆಕೆಯನ್ನು ಎಲ್ಲಾ ಕಾಲದಲ್ಲೂ ಗಂಡೇ ರಕ್ಷಿಸಬೇಕು ಎಂಬುದು ಈ ಮನಸ್ಥಿತಿಯ ಮೂಲ ನಿಲುವು.
ಪ್ರೇಮ, ಮದುವೆ, ಲೈಂಗಿಕತೆ ಸಂವಿಧಾನ ದತ್ತ ಹಕ್ಕು
ಪ್ರಾಯ ಪ್ರಬುದ್ಧರಾಗಿದ್ದಲ್ಲಿ ನಾವು ಜಾತಿ, ಮತ, ಲಿಂಗ ಭೇದವಿಲ್ಲದೆ ಯಾರನ್ನು ಬೇಕಾದರೂ ಪ್ರೀತಿಸಬಹುದು, ಮದುವೆಯಾಗಬಹುದು, ಲೈಂಗಿಕ ಸಂಬಂಧವನ್ನು ಹೊಂದಬಹುದು ಎಂದು ಭಾರತದ ಸಂವಿಧಾನ ಹೇಳುತ್ತದೆ. ಭಾರತ ಸಂವಿಧಾನದ ಪರಿಚ್ಛೇದ 21 ರ ಬದುಕುವ ಹಕ್ಕಿನ ಅಡಿಯಲ್ಲಿ ಈ ಹಕ್ಕು ಬರುತ್ತದೆ. ‘ನಮ್ಮ ಇಷ್ಟದ ವ್ಯಕ್ತಿಯನ್ನು ಮದುವೆಯಾಗುವುದು ಭಾರತ ಸಂವಿಧಾನದ ಪರಿಚ್ಛೇದ 21 ರ ಅಭಿನ್ನ ಅಂಗ, ಅಲ್ಲದೆ ಅಂತರ್ ಜಾತಿ ಮತ್ತು ಅಂತರ್ ಧರ್ಮೀಯ ಮದುವೆಗಳಿಂದ ಜಾತಿ ಮತ್ತು ಕೋಮು ಉದ್ವಿಗ್ನತೆಗಳು ಕಡಿಮೆಯಾಗುತ್ತವೆ’ ಎಂದು ನಮ್ಮ ನ್ಯಾಯಾಲಯಗಳು ಅನೇಕ ಬಾರಿ ಹೇಳಿವೆ.
ವಲಸಿಗರ ನಾಡಾದ ಭಾರತದ್ದು ಮೂಲತಃ ಮಿಶ್ರ ಸಂಸ್ಕೃತಿ. ಇಲ್ಲಿ ಇತಿಹಾಸದ ಪ್ರತಿಯೊಂದು ಕಾಲಘಟ್ಟದಲ್ಲಿಯೂ ವರ್ಣ ಸಂಕರ ನಡೆದು ಈಗ ಇಲ್ಲಿ ಯಾವ ಜಾತಿ, ಗೋತ್ರ, ಧರ್ಮಗಳೂ ಪರಿಶುದ್ಧವಾಗಿ ಉಳಿದಿಲ್ಲ. ಇದು ಇರಬೇಕಾದುದೂ ಹೀಗೆಯೇ. ವಿಜ್ಞಾನವೂ ಇದನ್ನು ಬಲವಾಗಿ ಬೆಂಬಲಿಸುತ್ತದೆ. ಅದು ರಕ್ತ ಸಂಬಂಧದೊಳಗಿನ, ಜಾತಿಯೊಳಗಿನ ದಾಂಪತ್ಯಗಳನ್ನು ನಾನಾ ಜೆನೆಟಿಕ್ ಸಮಸ್ಯೆಗಳ ಕಾರಣಕ್ಕೆ ಬೇಡ ಎನ್ನುತ್ತದೆ. ಈ ಅರ್ಥದಲ್ಲಿ ಅಂತರ್ಜಾತೀಯ ಮದುವೆಗಳು, ಅಂತರ್ ಧರ್ಮೀಯ ಮದುವೆಗಳು ನಮ್ಮಲ್ಲಿ ಹೆಚ್ಚು ಹೆಚ್ಚು ನಡೆಯಬೇಕು. ಜಾತಿವಿನಾಶಕ್ಕೆ ಇಂತಹ ಮದುವೆ ಸಂಬಂಧಗಳು ಅತ್ಯಗತ್ಯ ಕೂಡಾ.
ಹೀಗೆ, ಎರಡು ಜೀವಗಳ, ಹೆಚ್ಚೆಂದರೆ ಎರಡು ಕುಟುಂಬಗಳ ನಡುವೆ ನಡೆಯುವ ಯಕಃಶ್ವಿತ್ ಮದುವೆ ಸಂಬಂಧಗಳೂ ದೊಡ್ಡ ಮಟ್ಟದ ಕೋಲಾಹಲ ಮತ್ತು ಕೋಮುಗಲಭೆ, ಸಾವು ನೋವುಗಳಿಗೆ ಕಾರಣವಾಗುತ್ತಿರುವ ವಿಚಿತ್ರ ಸಂದರ್ಭದಲ್ಲಿ, ಸ್ವರಾ ಭಾಸ್ಕರ್ ಅವರ ಅಂತರ್ ಧರ್ಮೀಯ ಪ್ರೇಮ ಮದುವೆ ಸಮಾಜಕ್ಕೆ ಅದ್ಭುತ ಸಂದೇಶವೊಂದನ್ನು ರವಾನಿಸಿದೆ. ಬೇರೆಯವರ ಬದುಕಿನಲ್ಲಿ ಕೈಹಾಕುವ ವಿಚ್ಛಿದ್ರಕಾರಿ ಶಕ್ತಿಗಳಿಗೆ ತಪರಾಕಿ ನೀಡಿ ಮುಖಭಂಗ ಉಂಟುಮಾಡುತ್ತಲೇ ‘ಹೆದರ ಬೇಡಿ ನಿಮ್ಮ ಬದುಕನ್ನು ನೀವೇ ಧೈರ್ಯದಿಂದ ನಿರ್ಧರಿಸಿ’ ಎಂದು ಭಾರತದ ಪ್ರೇಮಿಗಳಿಗೆ ಜಾತಿ ಮತ ಧರ್ಮ ಮೀರಿದ ಪ್ರೇಮದ ಮತ್ತು ಮದುವೆಯ ದಾರಿಯನ್ನೂ ತೋರಿದೆ. ನುಡಿದಂತೆ ನಡೆವ ಮತ್ತು ಸಮಕಾಲೀನ ಸಮಾಜದ ದಿಟ್ಟ ದನಿ ಸ್ವರಾ ಎಲ್ಲ ರೀತಿಯಲ್ಲಿಯೂ ಅಭಿನಂದನೆಗೆ ಅರ್ಹರು. ಮದುವೆಯ ಶುಭಾಶಯಗಳು ಸ್ವರಾ ಭಾಸ್ಕರ್.
ಶ್ರೀನಿವಾಸ ಕಾರ್ಕಳ
ಚಿಂತಕರು, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.