Home ಅಂಕಣ ಬೊಗಸೆಗೆ ದಕ್ಕಿದ್ದು-36 : ಮನಬಂದಂತೆ ಬದಲಿಸಲು, ಊರ ಹೆಸರೇನು ಬಟ್ಟೆಯೇ?

ಬೊಗಸೆಗೆ ದಕ್ಕಿದ್ದು-36 : ಮನಬಂದಂತೆ ಬದಲಿಸಲು, ಊರ ಹೆಸರೇನು ಬಟ್ಟೆಯೇ?

0

ಹಲವರು ತಮ್ಮ ಜಾತಿಗಳ ಹೆಸರು ಬರೆಯಲು ಇಚ್ಚಿಸದೇ ಊರ ಹೆಸರು ಬರೆಯುತ್ತಾರೆ. ಅವುಗಳಲ್ಲಿ ತೆಂಡೂಲ್ಕರ್, ಕುಡಾಲ್ಕರ್, ಗೋಳ್ವಾಲ್ಕರ್ ಕೂಡ ಒಂದು. ಮುಸ್ಲಿಮರಲ್ಲೂ ಅಲಹಾಬಾದಿ, ಬದಾಯೂನಿ, ಲುಧಿಯಾನ್ವಿ ಮುಂತಾದವುಗಳಿವೆ. ಹೀಗಿರುವಾಗ ಬೇಕಾಬಿಟ್ಟಿ ಹೆಸರು ಬದಲಿಸಲು ಈ ಪುರೋಹಿತಶಾಹಿಗಳಿಗೆ ಯಾವ ಹಕ್ಕಿದೆ?


ಬ್ರಾಹ್ಮಣಶಾಹಿಗಳು ತಮ್ಮ ತಣ್ಣಗಿನ, ಮೇಲುಕೀಳಿನ ಕ್ರೌರ್ಯದಿಂದ ಹೇಗೆ ಶೂದ್ರರು ಮತ್ತು ದಲಿತರಲ್ಲಿ ತಮ್ಮ ಹೆಸರುಗಳ ಬಗ್ಗೆ ಕೀಳರಿಮೆ ಹುಟ್ಟುವಂತೆ ಮಾಡಿದ್ದರು ಎಂಬುದನ್ನು ಇಲ್ಲಿಯೇ ನೋಡಿದ್ದೇವೆ. ಅದನ್ನೇ ಅವರು ರಾಜಕೀಯ ಕಾರಣಗಳಿಗಾಗಿ ಊರಿನ ಹೆಸರುಗಳ ಬಗ್ಗೆಯೂ ಮೂಡಿಸಲು, ಮತ್ತು ಅವುಗಳನ್ನು ಬದಲಿಸಲು ಹೊರಟಿದ್ದಾರೆ. ಇದಕ್ಕೆ ಆಧಾರ ಸಂಸ್ಕೃತ ಉಳಿದ ಭಾಷೆಗಳಿಗಿಂತ ಶ್ರೇಷ್ಟ, ಅದು ಉಳಿದ ಭಾಷೆಗಳ ತಾಯಿ ಎಂಬ ಸುಳ್ಳು, ಭ್ರಮೆ. ಎರಡನೆಯದು ಕೋಮು ಅಂದರೆ, ಮುಸ್ಲಿಂ ದ್ವೇಷ. ಈ ಹುನ್ನಾರಕ್ಕೆ ಬಲಿಯಾಗುತ್ತಿರುವುದು ಮೊಗಲ್ ಮತ್ತಿತರ ಮುಸ್ಲಿಂ ಅರಸರ ಕಾಲದ ಹೆಸರುಗಳು ಮತ್ತು ತಲೆತಲಾಂತರಗಳಿಂದ ಚಾಲ್ತಿಯಲ್ಲಿರುವ ಗ್ರಾಮ್ಯ ಹೆಸರುಗಳು.

ಮೊಗಲ್ ಮತ್ತಿತರ ಮುಸ್ಲಿಂ ರಾಜರು, ನವಾಬರು ಹಲವಾರು ನಗರಗಳನ್ನು ಕಟ್ಟಿದರು ಮತ್ತು ತಮ್ಮದೇ ಹೆಸರುಗಳನ್ನು ಇಟ್ಟರು. ಒಂದು ಕಡೆಯಲ್ಲಿ ಮೊಗಲರು ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡಿದರು ಎಂದು (ಇದು ನಿಜವಲ್ಲ, ಎಂದು ನಿಜ ಇತಿಹಾಸ ತಿಳಿಸುತ್ತದೆ) ಹೇಳುತ್ತಲೇ, ಇನ್ನೊಂದು ಕಡೆಯಲ್ಲಿ ಅವರು ಇರಲೇ ಇಲ್ಲ ಎಂಬ ಇಬ್ಬಗೆ ನೀತಿ ಸಂಘಪರಿವಾರಕ್ಕಷ್ಟೇ ಸಾಧ್ಯ. ಅವರೀಗ ಮೊಗಲ್ ಇತಿಹಾಸವನ್ನೇ ಪಠ್ಯಪುಸ್ತಕಗಳಿಂದ ಕಿತ್ತು ಹಾಕಲು ಹೊಟಿದ್ದಾರೆ. ಅದರ ಹಿಂದೆ ಮುಸ್ಲಿಂ ದ್ವೇಷ, ಅವರನ್ನು ಕೀಳುಗಾಣಿಸುವುದು, ಹೊರಗಿನಿಂದ ಬಂದವರು ಎಂದು ತೋರಿಸುವುದು ಹಾಗೂ ಆ ಮೂಲಕ ಸಾಂಸ್ಕೃತಿಕ ಆಕ್ರಮಣ ಮಾಡಿ ಓಟು ಗಳಿಸುವ ವ್ಯವಸ್ಥಿತ ಕುತಂತ್ರವಲ್ಲದೇ ಬೇರೇನೂ ಉದ್ದೇಶವಿಲ್ಲ. ಇದರಲ್ಲಿ ಯಾವ ನ್ಯಾಯವಿದೆ? ಯಾಕೆಂದರೆ, ನೂರಾರು ವರ್ಷಗಳಿಂದ ಈ ಹೆಸರುಗಳಿವೆ.

ಇನ್ನು ಬ್ರಿಟಿಷರ ಕಾಲದ ಊರುಗಳ ಹೆಸರುಗಳಿವೆ. ಹೌದು, ಬ್ರಿಟಿಷರು ಸ್ಥಳೀಯ ಉಚ್ಛಾರವನ್ನು ತಿರುಚಿದ್ದಾರೆ. ಚೆನ್ನೈ-ಮಡ್ರಾಸ್, ಮುಂಬಯಿ- ಬಾಂಬೆ, ಬೆಂಗಳೂರು- ಬ್ಯಾಂಗಲೋರ್… ಹೀಗೆ. ಅವರು ಎಲ್ಲಾ “ಡ”ಗಳನ್ನು ಕೂಡಾ “ರ” ಮಾಡಿದ್ದಾರೆ. ಗಢ (ಕೋಟೆ)ಗಳನ್ನು ಘರ್ (ಮನೆ) ಮಾಡಿದ್ದಾರೆ. ಉದಾ: ಚಂಡೀಗಢ, ಚಂಡೀಘರ್, ಅಲ್ಮೋಡಾ- ಅಲ್ಮೋರಾ… ಹೀಗೆ. ಅವರು ತಪ್ಪಾಗಿ ಬರೆದು ಉಚ್ಛರಿಸಿರುವ ಕೆಲವು ಹೆಸರುಗಳು ವಿಚಿತ್ರವಾಗಿವೆ: ಪುಣೆ-ಪೂನಾ, ಜಲಗಾಂವ್ ಜಲ್ಗಾಂ, ಕೊಲ್ಲಾಪುರ- ಕೊಲಾಪೊರೆ (Colapore), ಅಹ್ಮದಾಬಾದ್- ಅಹ್‌ಮ್ದಾವದ್ ಇತ್ಯಾದಿ. ಈ ಅಸಂಬದ್ಧಗಳನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ ಮತ್ತು ಅದು ಗುಲಾಮಿ ಕೂಡಾ. ಈ ಹೆಸರುಗಳನ್ನು ಮೂಲ ಹೆಸರುಗಳಿಗೆ ಬದಲಿಸಲು ಯಾರೂ ಆಕ್ಷೇಪ ಮಾಡಿಲ್ಲ. ಆದರೆ, ಬ್ರಿಟಿಷರಲ್ಲೇ ಸಾಧಕರ ಹೆಸರಿನಲ್ಲಿರುವ, ಅವರೇ ಕಟ್ಟಿದ ಊರು, ಕಟ್ಟಡ, ಸ್ಮಾರಕಗಳ ಹೆಸರುಗಳನ್ನು ಬದಲಿಸುವ ಅಗತ್ಯವೇನಿದೆ? ಉದಾ: ಕಬ್ಬನ್ ಪಾರ್ಕ್, ವೆಲ್ಲಿಂಗ್ಟನ್ ರೋಡ್ ಇತ್ಯಾದಿ.

ಹೀಗಿದ್ದರೂ, ಹಲವಾರು ಊರುಗಳ ಮುಸ್ಲಿಂ ಹೆಸರುಗಳನ್ನು ಬದಲಿಸಿ, ಸಂಘಪರಿವಾರ ಸೂಚಿಸಿದ ಹೆಸರುಗಳನ್ನು ಇಡಲಾಗಿದೆ. ಉದಾಹರಣೆಗೆ: ಅಲಹಾಬಾದ್- ಪ್ರಯಾಗ್ ರಾಜ್, ಮುಗಲ್‌ಸರಾಯ್- ಪಂಡಿತ್ ದೀನದಯಾಳ್ ಉಪಾಧ್ಯಾಯ ಜಂಕ್ಷನ್, ಫೈಜಾಬಾದ್- ಆಯೋಧ್ಯಾ, ಔರಂಗಜೇಬ್ ರೋಡ್- ಎಪಿಜೆ ಅಬ್ದುಲ್ ಕಲಾಂ ರೋಡ್ ಇತ್ಯಾದಿ.

ಸಂಘಪರಿವಾರವು ಬದಲಿಸಲು ಹವಣಿಸುತ್ತಿರುವ ಊರುಗಳ ಹೆಸರುಗಳ ಪಟ್ಟಿ ಬಹಳ ದೊಡ್ಡದಿದೆ. ಕೆಲವನ್ನು ಹೆಸರಿಸುವುದಾದರೆ: ಔರಂಗಾಬಾದ್- ಸಂಬಾಜಿ ನಗರ್, ತುಘಲಕಾಬಾದ್- ತ್ರಿಲೋಕಬಾದ್ ಅಥವಾ ತಿಲಕಾಬಾದ್, ಫಿರೋಜಾಬಾದ್- ಚಂದ್ರನಗರ್, ಹೈದರಾಬಾದ್- ಭಾಗ್ಯನಗರ್, ಓಸ್ಮಾನಾಬಾದ್- ಧಾರಾಶಿವ್… ಹೀಗೆ. ಈ ಚಂದ್ರ, ಭಾಗ್ಯ, ತ್ರಿಲೋಕ ಇತ್ಯಾದಿಗಳು ಯಾರು ಮತ್ತು ಏನು? ಆ ಊರುಗಳಿಗೆ ಏನು ಸಂಬಂಧ? ಒಟ್ಟಿನಲ್ಲಿ ಹುಸಿ ಹಿಂದೂತ್ವದ ಬಣ್ಣಬಳಿಯಬೇಕು ಅಷ್ಟೇ!

ಊರಿನ ಹೆಸರುಗಳಿಗೆ ಒಂದು ಹಿನ್ನೆಲೆ ಇರುತ್ತದೆ. ಅವುಗಳ ಹಿಂದೆ ಪ್ರಾದೇಶಿಕ, ಭಾಷಾ, ಸಾಂಸ್ಕೃತಿಕ, ಭೌಗೋಳಿಕ ಕಾರಣಗಳು, ಹಿರಿಯರ ಸ್ಮೃತಿಗಳಿರುತ್ತವೆ. ಹಲವರು ತಮ್ಮ ಜಾತಿಗಳ ಹೆಸರು ಬರೆಯಲು ಇಚ್ಚಿಸದೇ ಊರ ಹೆಸರು ಬರೆಯುತ್ತಾರೆ. ನನ್ನ ಹೆಸರಲ್ಲಿ ಇರುವ ಕೋಲ್ಪೆ ಕೂಡಾ ನಮ್ಮ ಹಿರಿಯರ ಊರು. ನಾನು ಇಷ್ಟು ವರ್ಷಗಳಲ್ಲಿ ಅಲ್ಲಿಗೆ ಹೋಗಿಲ್ಲ, ಅಲ್ಲಿ ನಮ್ಮ ಕುಟುಂಬಿಕರು ಯಾರೂ ಇಲ್ಲವಾದರೂ, ಆ ಊರಿನ ಹೆಸರು ನಮ್ಮ ಮನೆತನಕ್ಕೆ ಅಂಟಿಕೊಂಡಿದೆ.

ಉದಾಹರಣೆಗೆ, ಮರಾಠಿ ಸರ್‌ನೇಮ್‌ಗಳನ್ನು ನೋಡೋಣ. ತೆಂಡೂಲ್ಕರ್, ಕುಡಾಲ್ಕರ್, ಗೋಳ್ವಾಲ್ಕರ್ ಹೆಸರುಗಳು ಅವರ ಹಿರಿಯರ ಊರನ್ನು ಸೂಚಿಸುತ್ತದೆ. ಅವುಗಳ ಹಿಂದೆ ತೆಂಡೂಲ್ (ವಾಸ್ತವದಲ್ಲಿ ತೆಂದೂಲ್), ಕುಡಾಲ್ ಮತ್ತು ಗೋಲ್ವಾಳ್ ಊರುಗಳು ಅಡಗಿವೆ. ಮುಸ್ಲಿಮರಲ್ಲೂ ಅಲಹಾಬಾದಿ, ಬದಾಯೂನಿ, ಲುಧಿಯಾನ್ವಿ ಮುಂತಾದ ಊರ ಸರ್‌ನೇಮ್‌ಗಳಿವೆ. ಹೀಗಿರುವಾಗ ಬೇಕಾಬಿಟ್ಟಿ ಹೆಸರು ಬದಲಿಸಲು ಈ ಪುರೋಹಿತಶಾಹಿಗಳಿಗೆ ಯಾವ ಹಕ್ಕಿದೆ?

ಒಂದು ಹೆಸರಿನ ಹಿಂದಿರಬಹುದಾದ ಹಿನ್ನೆಲೆಗಳನ್ನು ಅರ್ಥ ಮಾಡಿಕೊಳ್ಳಲು ಕೆಲವು ಉದಾಹರಣೆಗಳನ್ನು ನೋಡೋಣ. ನಮ್ಮಲ್ಲಿ ಕೊಪ್ಪಲು, ಕೇರಿ, ವಾಡಿ, ಪುರ, ಹುಂಡಿ, ಅಗ್ರಹಾರ…ಹೀಗೆ ಜನವಸತಿಗಳು ಅವುಗಳ ಸ್ಥಾಪಕರೋ, ಯಜಮಾನರೋ ಇತ್ಯಾದಿ ವ್ಯಕ್ತಿಗಳ ಹೆಸರಲ್ಲಿ, ಅವರ ನೆನಪಿನಲ್ಲಿ ಇರುತ್ತವೆ. ಉದಾಹರಣೆಗೆ: ಕನ್ನೇಗೌಡನ ಕೊಪ್ಪಲು, ಬೇಲೆಕೇರಿ, ಸಾವಂತವಾಡಿ, ನರಸೀಪುರ, ಬೀರಿಹುಂಡಿ, ಪರಪ್ಪನ ಆಗ್ರಹಾರ…ಹೀಗೆ. ಹೀಗಿರುವಾಗ ಅವುಗಳ ಹೆಸರುಗಳನ್ನು ಯದ್ವತದ್ವಾ ಸಂಸ್ಕೃತದ ಹೆಸರುಗಳಿಗೆ ಬದಲಿಸಲು ಇವರಿಗೆ ಹಕ್ಕು ಕೊಟ್ಟವರು ಯಾರು?

ಇದನ್ನು ಸ್ಪಷ್ಟಪಡಿಸಲು ನಾನಿಲ್ಲಿ ಕರಾವಳಿಯ ಊರುಗಳ ಉದಾಹರಣೆಗಳನ್ನು ನೀಡುತ್ತೇನೆ. ಇಲ್ಲಿನ ಹೆಚ್ಚಿನ ಹೆಸರುಗಳು ಭೌಗೋಳಿಕ ಮತ್ತು ಕೃಷಿ ಸಂಬಂಧಿಯಾಗಿವೆ.
ಇಲ್ಲಿನ ಕೃಷಿ ಭೂಮಿಗಳು ನೀರಿನ ಹರಿವಿಗಿಂತ ಎತ್ತರದ ಆಧಾರದಲ್ಲಿ ಮೂರು ವಿಧ: ಬೈಲ್ (ಬಯಲು, ಹೊಲ) ಮಜಲ್ ಮತ್ತು ಬೊಟ್ಟು. ಹಾಗೆಯೇ ಬೆಳೆಬೆಳೆಯದೇ ಪಾಳು ಬಿಟ್ಟದ್ದು ಪಡೀಲ್ (ಮಂಗಳೂರಿನಲ್ಲಿ ಸೇರಿದಂತೆ ಈ ಹೆಸರಿನ ಹಲವು ಊರುಗಳಿವೆ). ಇದರ ಆಧಾರದಲ್ಲಿ ಕೆಲವು ಹೆಸರುಗಳು: ಕೊಡಿಯಾಲಬೈಲ್, ಬಾಕ್ರಬೈಲ್, ಉರಿಮಜಲ್, ಮೇರಮಜಲ್, ಇರ್ಂದೊಟ್ಟು, ಕರ್ಬೊಟ್ಟು ಇತ್ಯಾದಿ. ಅಡ್ಕ ಎಂದರೆ ಸಮತಟ್ಟು ಬಯಲು: ಕಲ್ಲಡ್ಕ, ಕುಕ್ಕುಜಡ್ಕ ತೋಟ: ಮಿತ್ತೋಟ, ಅಂಗಡಿ: ನೈತಂಗಡಿ, ಬೆಳ್ತಂಗಡಿ, ಕಟ್ಟೆ: ಕಾವಳಕಟ್ಟೆ, ತೆಕ್ಕಟ್ಟೆ, ಕೋಡಿ (ಕೊನೆ): ದಾಸಕೋಡಿ, ಕೆದುಕೋಡಿ, ಕಲ್ಲ್: ನಿಂತಿಕಲ್ಲ್, ಕೆತ್ತಿಕಲ್ಲ್, ಊರು: ಬಾರ್ಕೂರು, ಕಾಣಿಯೂರು, ಪಾಡಿ (ಹಾಡಿ): ಕೆದಂಬಾಡಿ, ಬೈಕಂಪಾಡಿ. ಇದೇ ರೀತಿ ಗಿಡ, ಮರಗಳೂ ಹೊರತಲ್ಲ. ಪೆಲತ್ತಡಿ (ಹಲಸಿನ ಅಡಿ), ಕುಕ್ಕುದಡಿ (ಮಾವಿನ ಅಡಿ) ಪೆಲತ್ತಕಟ್ಟೆ, ಕುಕ್ಕುದ ಕಟ್ಟೆ, ಕಾಡ್: ದಡ್ಡಲಕಾಡ್, ಕಾಪಿಕಾಡ್… ಹೀಗೆ ಸಾವಿರಾರು ಹೆಸರುಗಳನ್ನು ಉದಾಹರಿಸಬಹುದು. ಕೆಲವು ವಿಚಿತ್ರ ಎನಿಸುವ ಹೆಸರುಗಳೂ ಇವೆ. ಉದಾಹರಣೆಗೆ ನನ್ನ ಊರಾದ ನಾಯಿಲ ಮತ್ತು ಗ್ರಾಮವಾದ ನರಿಕೊಂಬು. ನರಿಗೆ ಕೊಂಬು ಎಲ್ಲಿಂದ ಬಂತು ಎಂದು ನಿಮಗೆ ಆಶ್ಚರ್ಯವಾಗಬಹುದು. ನರಿಗೆ ತುಳುವಿನಲ್ಲಿ ಕುದುಕ ಎನ್ನುವುದರಿಂದ ಕನ್ನಡದ ನರಿಗೂ, ಈ ಹೆಸರಿಗೂ ಸಂಬಂಧ ಇರಲಾರದು. ಪ್ರಾಣಿಗಳ ಹೆಸರೂ ಇವೆ: ಪಿಲಿಕಲ್ಲ್, ಕುದುಕಪಾಡಿ, ಕುದ್ಕೋರಿ (ನರಿ-ಕೋಳಿ) ಗುಡ್ಡೆ, ಆನೆಕೆರೆ ಇತ್ಯಾದಿ. ಇವೆಲ್ಲವೂ ಹೆಸರುಗಳ ಹಿಂದಿರುವ ಸಾಂಸ್ಕೃತಿಕ ಹಿನ್ನೆಲೆಯನ್ನು ತೋರಿಸುತ್ತವೆ.

ಆದರೆ, ಹಳೆಯ ಹೆಸರುಗಳ ಕುರಿತು ಕೀಳರಿಮೆ ಮೂಡಿಸಿ, ಅರಿವಿಗೇ ಬರದಂತೆ ಹೆಸರುಗಳನ್ನು ಮೊದಲು ಕನ್ನಡೀಕರಿಸಿ, ನಂತರ ಆ ಜಾಗಕ್ಕೆ ಸಂಸ್ಕೃತ ತರುವ ಹುನ್ನಾರಗಳು ಹಿಂದಿನಿಂದಲೂ ನಡೆದಿವೆ. ಇದಕ್ಕೆ ಕನ್ನಡ ಪ್ರೇಮ ಕಾರಣವಲ್ಲ. ಇಲ್ಲಿನ ಬಹುತೇಕ ಶೂದ್ರರು ತುಳುವರಾಗಿರುವುದರಿಂದ ಅವರ ಸಾಂಸ್ಕೃತಿಕ ಪರಂಪರೆಯನ್ನು ಅಳಿಸಿಹಾಕುವುದೇ ಈ ಸಂಚು. ಈಗ ಹೆಸರಾಗಿರುವ ಕೆಲವು ಊರುಗಳ ಹಳೆಯ ಹೆಸರುಗಳನ್ನು ನೋಡೋಣ: ಉಡುಪಿ- ಒಡಿಪು, ಧರ್ಮಸ್ಥಳ- ಕುಡುಮ, ಬೆಳ್ತಂಗಡಿ- ಬೊಲ್ತೇರ್ (ಬಿಳಿತೇರು), ಉಪ್ಪಿನಂಗಡಿ- ಉಬಾರ್, ನಮ್ಮ ಪೇಟೆಯಾದ ಪಾಣೆಮಂಗಳೂರು- ಪಾಣೇರ್.

ಇನ್ನೂ ಕೆಲವು ಪದಗಳ ಆಟಗಳನ್ನು ಆಡಿ ಹೆಸರು ಬದಲಾಯಿಸಿದ ಉದಾಹರಣೆಗಳು: ಸೊರ್ನಾಡು- ಸುವರ್ಣನಾಡು, ಮನಿತ್ತಾರ್- ಮಣಿಹಳ್ಳ. ಜೊತೆಗೆ ಯದ್ವಾತದ್ವಾ ಸ್ಥಳಪುರಾಣಗಳನ್ನು ಕಟ್ಟಿ ಹೆಸರು ಬದಲಿಸುವ ಪ್ರಯತ್ನಗಳೂ ನಡೆದಿವೆ.

ಜೊತೆಗೆ, ಊರುಗಳಲ್ಲಿರುವ ಅಪ್ಪಟ ತುಳು ಪದಗಳನ್ನು ಕನ್ನಡಕ್ಕೆ ಬದಲಿಸುವ ಚಾಳಿ. ಬೊಟ್ಟುಗಳು ಬೆಟ್ಟುಗಳಾಗಿವೆ (ಪೊಸಬೊಟ್ಟು- ಹೊಸಬೆಟ್ಟು). ಕುಕ್ಕುದಕಟ್ಟೆ, ಪೆಲತ್ತಕಟ್ಟೆ- ಮಾವಿನ ಕಟ್ಟೆ, ಹಲಸಿನಕಟ್ಟೆಗಳಾಗಿವೆ. ಬೈಲ್- ಬೈಲು ಆಗಿದೆ. ಇದಕ್ಕೆ ಕಲಶವಿಟ್ಟಂತೆ ಒಂದು ಉದಾಹರಣೆಯಿದೆ. ಪೂಪಾಡಿಕಲ್ಲ್ ಎಂಬ ಊರಿದೆ. ಅಲ್ಲಿ ಒಂದು ಕಲ್ಲಿನ ಮೇಲೆ ಭೂತಕ್ಕೆ ಎಂದು ಹೂ ಹಾಕುತ್ತಾರೆ. ಅದನ್ನು ಹೂ ಹಾಕುವ ಕಲ್ಲು ಎಂದು ಬದಲಾಯಿಸಲಾಯಿತು. ವಿಚಿತ್ರವೆಂದರೆ ಅದು ಈಗ ಮಂಗಳೂರಿನ ಸಿಟಿ ಬಸ್ಸುಗಳಲ್ಲಿ ಎಚ್.ಎಚ್.ಕಲ್ ಆಗಿದೆ. ಅಲ್ಲಿಗೆ ಒಂದು ಊರಿನ ಹೆಸರು, ಅದರ ಸ್ಮೃತಿ, ಗುರುತು ಎಲ್ಲವೂ ಮಣ್ಣುಪಾಲು!

ಹಿಂದೂತ್ವದ ಅಮಲು ಹತ್ತಿರುವವರಿಗೆ ತಮ್ಮ ಮೂಲ ಹೆಸರುಗಳ ಬಗ್ಗೆ ಎಷ್ಟು ಕೀಳರಿಮೆ ಇದೆಯೆಂದರೆ, ನಮ್ಮದೇ ಊರಿನ ಉದಾಹರಣೆ ಕೊಡುತ್ತೇನೆ. ಇಲ್ಲಿ ಕುರ್ಚಿಪಳ್ಳ (ಕುರ್ಚಿ ಮೀನಿನ ಹಳ್ಳ) ಎಂಬ ಜಾಗವಿದೆ. ಕೆಲವರು ಇದಕ್ಕೆ ನಾಚಿಕೆಪಟ್ಟು ಅನಧಿಕೃತವಾಗಿ ವಿದ್ಯಾನಗರ ಎಂದು ಬೋರ್ಡು ಹಾಕಿದ್ದಾರೆ. ಪುತ್ರೋಟಿಬೈಲಿಗೆ ಸರಸ್ವತಿ ನಗರದ ಬೋರ್ಡು. ರಾಜಕೀಯ ದ್ವೇಷವೂ ಇದೆ. 1974ರ ನೇತ್ರಾವತಿ ಮಹಾನೆರೆಯ ಸಂತ್ರಸ್ತರ ಪುನರ್ವಸತಿ ಬಡಾವಣೆ ನೆಹರೂ ನಗರ. ಅದಕ್ಕೆ ಹನುಮಾನ್ ನಗರ ಎಂಬ ಹೆಸರಿಡಲು ಕೆಲವರು ಹೆಣಗುತ್ತಿದ್ದಾರೆ. ಒಟ್ಟಿನಲ್ಲಿ ದೇಶದಲ್ಲೆಡೆ ಹೆಜ್ಜೆ ಹೆಜ್ಜೆಗೆ ಅಯೋಧ್ಯಾ ನಗರ, ದ್ವಾರಕಾನಗರ, ರಾಮನಗರ, ಹನುಮಾನ್ ನಗರಗಳೇ ತುಂಬಲಿವೆಯೋ ಏನೋ! ಆಗ ಒಂದನ್ನು ಇನ್ನೊಂದರಿಂದ ಪ್ರತ್ಯೇಕಿಸಿ ಗುರುತಿಸುವುದಾದರೂ ಹೇಗೆ?!

ನಾವು ಈ ರೀತಿಯ ಸಾಂಸ್ಕೃತಿಕ ಆಕ್ರಮಣವನ್ನು, ಅದರ ಹಿಂದಿರುವ ಸೂಕ್ಷ್ಮವಾದ ವಿಷವನ್ನು ಗುರುತಿಸಬೇಕಾಗಿದೆ. ಇರುವ ಉಪಾಯಗಳೆಂದರೆ, ಇಂತಹ ಹೆಸರು ಬದಲಾವಣೆಯ ಪ್ರಯತ್ನಗಳನ್ನು ವಿರೋಧಿಸುವುದು ಮತ್ತು ಹಳೆಯ ಹೆಸರುಗಳನ್ನೇ ಪಟ್ಟುಬಿಡದೇ ಬಳಸುವುದು.

You cannot copy content of this page

Exit mobile version