ಮಾಜಿ ಹಿಂದೂ ಕಾರ್ಯಕರ್ತೆ ಹಾಗೂ ಹಾಲಿ ಸೆಲೆಬ್ರಿಟಿ ಚೈತ್ರ ಕುಂದಾಪುರ ಬಿಗ್ ಬಾಸ್ ಶೋ ನಂತರ ಹಿಂದುತ್ವ ಸಂಘಟನೆಯಿಂದ ದೂರ ಉಳಿದದ್ದು ಎಲ್ಲರಿಗೂ ತಿಳಿದ ವಿಷಯ. ಕಳೆದ ಕೆಲವು ದಿನಗಳಿಂದ ಆಕೆಯ ಮದುವೆ ಮಾಧ್ಯಮಗಳಲ್ಲಿ ಭರ್ಜರಿ ಪ್ರಚಾರ ಪಡೆದುಕೊಂಡಿತ್ತು. ಈಗ ಮದುವೆಗೆ ಸಂಬಂಧಿಸಿದಂತೆ ಚೈತ್ರ ತಂದೆಯ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಹೇಳಿಕೇಳಿ ಚೈತ್ರ ಕುಂದಾಪುರ ವಿವಾದದ ಮೂಲಕವೇ ಹೆಚ್ಚು ಪ್ರಚಾರಕ್ಕೆ ಬಂದಾಕೆ. ಹಿಂದುತ್ವ ಸಂಘಟನೆಯ ಪುಂಡ ಪೋಕರಿಗಳ ಸಹವಾಸದಿಂದ ಹಿಡಿದು, ಸಮಾಜದಲ್ಲಿ ಶಾಂತಿ ಕದಡುವ ಭಾಷಣ, ಜಗಳ ದೋಂಬಿಗಳಿಂದಲೇ ಈಕೆಯ ದೈನಂದಿನ ಚಟುವಟಿಕೆ ನಡೆಯುವುದಾಗಿತ್ತು. ಹೀಗಿರುವಾಗ ಬಿಗ್ ಬಾಸ್ ಆಕೆಗೊಂದು ದೊಡ್ಡ ವೇದಿಕೆಯಾಗಿ ಮಾರ್ಪಟ್ಟಿತ್ತು.
ಅದಕ್ಕೂ ಮುನ್ನ ಬಿಜೆಪಿ ಪಕ್ಷದ ಶಾಸಕ ಸ್ಥಾನದ ಆಕಾಂಕ್ಷಿಯೊಬ್ಬರಿಗೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಹಿನ್ನೆಲೆಯಲ್ಲಿ ಜೈಲು ಕಂಬಿ ಎಣಿಸಿದ್ದ ಚೈತ್ರಾ ಈಗ ಅದೇ ಪ್ರಕರಣದಲ್ಲಿ ಜೈಲು ಸೇರಿದ್ದ ಶ್ರೀಕಾಂತ್ ನಾಯ್ಕ್ ನನ್ನು ಮದುವೆ ಆಗಿ ಮತ್ತೊಮ್ಮೆ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಸೆಲೆಬ್ರಿಟಿಯ ಸೋಗಿನಲ್ಲಿರುವ ಚೈತ್ರ ಮದುವೆ ಮಾಧ್ಯಮಗಳಿಗೆ ಒಂದು ವಿಶೇಷವಾದರೆ, ಆಕೆಯ ಮದುವೆಗೆ ಆಕೆಯ ತಂದೆ ಬಾರದೇ ಇರುವುದು ಮತ್ತೊಂದು ವಿಶೇಷವಾಗಿತ್ತು.
ಸಧ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಚೈತ್ರ ತಂದೆಯ ಮಾತನಾಡಿಸಿದ ಮಾಧ್ಯಮಗಳು, ಆಕೆಯ ಮದುವೆಗೆ ಯಾಕೆ ಬರಲಿಲ್ಲ ಎಂಬ ಪ್ರಶ್ನೆಯನ್ನು ಎತ್ತಿವೆ. ಚೈತ್ರಾ ಕುಂದಾಪುರ ಅವರು ತನ್ನ ಮದುವೆಗೆ ತಂದೆಯವರನ್ನ ಆಹ್ವಾನಿಸಿಲ್ಲ. ಜೊತೆಗೆ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗೋಕೂ ಅವರ ತಂದೆ ಅನುಮತಿ ಕೊಟ್ಟಿರಲಿಲ್ಲವಂತೆ. ಈ ಕುರಿತು ವಿವರವಾಗಿ ಮಾತನಾಡಿರುವ ಚೈತ್ರಾ ಕುಂದಾಪುರ ಅವರ ತಂದೆ ತನ್ನ ಸಿಟ್ಟು, ಆಕ್ರೋಶವನ್ನೆಲ್ಲಾ ಹೊರ ಹಾಕಿದ್ದಾರೆ.
“ಚೈತ್ರಾ ಕುಂದಾಪುರ ಮದುವೆಗೆ ನಾನು ಹೋಗಿಲ್ಲ. ಯಾಕಂದ್ರೆ ಅವರಿಬ್ಬರು ಕಳ್ಳರು. ಕಳ್ಳರು, ಕಳ್ಳರು ಮದುವೆ ಆಗೋದು. ಅದರ ಬಗ್ಗೆ ನಾನು ಏನು ಹೇಳೋದು. 12 ವರ್ಷದಿಂದ ಚೈತ್ರಾ ಕುಂದಾಪುರ ಗಂಡ ನಮ್ಮ ಮನೆಯಲ್ಲೇ ಇದ್ದವ. ಅವನು ಕಳ್ಳ. ಇವರು ಕಳ್ಳರು. ಕಳ್ಳ, ಕಳ್ಳರು ಇಬ್ಬರು ಮದುವೆ ಆಗಿದ್ದಾರೆ.” ಎಂದು ಚೈತ್ರ ಕುಂದಾಪುರ ತಂದೆ ಬಾಲಕೃಷ್ಣ ನಾಯಕ್ ಮಗಳ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.
“ದರೋಡೆ ಮಾಡೋದು, ದೇಶಕ್ಕೆ ದ್ರೋಹ, ವಂಚನೆ ಮಾಡೋದೇ ಇವರ ಕಸುಬು. ನಮ್ಮ ಕುಟುಂಬದ ಮಾನ, ಮರ್ಯಾದೆಯನ್ನು ತೆಗೆದಿದ್ದಾರೆ. ಅವಳನ್ನ ಕಂಡ್ರೆ ನನಗೆ ಆಗೋದಿಲ್ಲ. ಅವಳು ಎಂದಿಗೂ ಉದ್ಧಾರ ಆಗಲ್ಲ. ಅವರು ಮಾಡೋ ಕೆಟ್ಟ ಕೆಲಸಗಳಿಗೆ ನಾನು ಒಪ್ಪಿಗೆ ಕೊಡಲಿಲ್ಲ. ಅವರು ಮೋಸ, ವಂಚನೆಯಲ್ಲಿದ್ದರು. ನಾನು ಸತ್ಯ, ನ್ಯಾಯ, ಧರ್ಮದಲ್ಲಿ ಇರುವವನು. ತಾನೇ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದೇನೆ ಅನ್ನೋ ಸುಳ್ಳು, ಸುಳ್ಳು ಮಾತನಾಡುತ್ತಾರೆ” ಎಂದು ಹೇಳಿದ ಬಾಲಕೃಷ್ಣ ನಾಯಕ್, ಈ ಹಿಂದೆ ಮಗಳು ನಡೆಸಿದ ಪ್ರಮುಖ ಅಪರಾಧ ಪ್ರಕರಣಗಳನ್ನೂ ಉಲ್ಲೇಖಿಸಿ ಆರೋಪ ಮಾಡಿದ್ದಾರೆ.
ಮದುವೆಯಾಗಿ ಕೇವಲ ಆರೇ ದಿನಗಳಲ್ಲಿ ಅವರ ಮನೆಯೊಳಗೆ ಇರುವ ಒಡಕು ಈಗ ಜಗಜ್ಜಾಹೀರಾಗಿದೆ. ಮದುವೆಯಾದ ಖುಷಿಯಲ್ಲಿರುವ ಚೈತ್ರಾ ಕುಂದಾಪುರ ಅವರಿಗೆ ತಂದೆಯ ಮಾತುಗಳು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.