Monday, June 17, 2024

ಸತ್ಯ | ನ್ಯಾಯ |ಧರ್ಮ

ಮಣಿಪುರ ಲೈಂಗಿಕ ದೌರ್ಜನ್ಯ ಪ್ರಕರಣ: ಹದಿನಾಲ್ಕು ದಿನಗಳ ತನಕ ಪೊಲೀಸರು ಏನು ಮಾಡುತ್ತಿದ್ದರು? ಸುಪ್ರೀಂ ಕೋರ್ಟ್ ಪ್ರಶ್ನೆ

ಇತರ ರಾಜ್ಯಗಳಲ್ಲಿ ಇದೇ ರೀತಿಯ ಪ್ರಕರಣಗಳು ನಡೆಯುತ್ತಿವೆ ಎಂಬ ಆಧಾರದ ಮೇಲೆ ಮಣಿಪುರದಲ್ಲಿ ಮಹಿಳೆಯರ ಮೇಲಿನ ಹಿಂಸಾಚಾರವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಹೊಸದೆಹಲಿ:  ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಮೇ 4ರಂದು ಮೂವರು ಕುಕಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸುವಲ್ಲಿ ಮಾಡಿದ ವಿಳಂಬವನ್ನು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

“ಪೊಲೀಸರು 14 ದಿನಗಳ ತನಕ ಏನು ಮಾಡುತ್ತಿದ್ದರು? ಜೀರೋ FIR ದಾಖಲಿಸಲು ಹದಿನಾಲ್ಕು ದಿನಗಳು ಏಕೆ?” ಎಂದು ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಪ್ರಶ್ನಿಸಿದರು.

ಮೇ ತಿಂಗಳಲ್ಲಿ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಜನಸಮೂಹದಿಂದ ಬೆತ್ತಲೆಯಾಗಿ ಮೆರವಣಿಗೆ ಮಾಡಲ್ಪಟ್ಟ ಇಬ್ಬರು ಕುಕಿ ಮಹಿಳೆಯರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಸೋಮವಾರ ವಿಚಾರಣೆ ನಡೆಸಿತು. ಈ ಘಟನೆಯ ವೀಡಿಯೊವನ್ನು ಜುಲೈ 19ರಂದು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿತ್ತು.

ಮೇ 4ರಂದು ಕಾಂಗ್ಪೋಕ್ಪಿಯ ಬಿ ಫೈನೋಮ್ ಗ್ರಾಮದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆಗಳು ಭುಗಿಲೆದ್ದ ಒಂದು ದಿನದ ನಂತರ ವೀಡಿಯೊದಲ್ಲಿ ಕಾಣಿಸಿಕೊಂಡ ಇಬ್ಬರು ಸೇರಿದಂತೆ ಮೂವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಓರ್ವ ಮಹಿಳೆಯ ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಈ ಪ್ರಕರಣದಲ್ಲಿ ಜೀರೋ FIR ಮೇ 18ರಂದು ದಾಖಲಿಸಲಾಗಿತ್ತು. ಆದಾಗ್ಯೂ, ವಿಡಿಯೋ ವೈರಲ್‌ ಆಗುವ ತನಕ ಯಾವುದೇ ಬಂಧನ ಕಾರ್ಯ ನಡೆದಿರಲಿಲ್ಲ.

ಜುಲೈ 20ರಂದು ಸುಪ್ರೀಮ್‌ ಕೋರ್ಟ್‌ ವಿಷಯವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡು ಈ ಘಟನೆಯು ಸ್ವೀಕಾರರ್ಹವಲ್ಲ ಮತ್ತು ಈ ಕುರಿತು ತಕ್ಷಣ ಕ್ರಮಗಳನ್ನು ಕೈಗೊಳ್ಳುವಂತೆ ಅದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಿಳಿಸಿತ್ತು.

ಇತರ  ರಾಜ್ಯಗಳಲ್ಲಿ ಇದೇ ರೀತಿಯ ಪ್ರಕರಣಗಳು ನಡೆಯುತ್ತಿವೆ ಎಂಬ ಆಧಾರದ ಮೇಲೆ ಮಣಿಪುರದಲ್ಲಿ ಮಹಿಳೆಯರ ಮೇಲಿನ ಹಿಂಸಾಚಾರವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸೋಮವಾರ ಹೇಳಿದೆ.

“ಇತರ ರಾಜ್ಯಗಳಲ್ಲಿಯೂ ಮಹಿಳೆಯರ ವಿರುದ್ಧ ಇಂತಹ ಅಪರಾಧಗಳು ಎಸಗಲ್ಪಡುತ್ತಿವೆಯೆನ್ನುವುದರಲ್ಲಿ ಅನುಮಾನವಿಲ್ಲ. ಅದು ನಮ್ಮ ದೇಶದ ಸಾಮಾಜಿಕ ವಾಸ್ತವ” ಎಂದು ಚಂದ್ರಚೂಡ್‌ ಹೇಳಿದರು. “ಆದರೆ ನಾವು ಇಲ್ಲಿ ಈ ಹಿಂದೆನೋಡಿರದಷ್ಟು ಕ್ರೂರ ವಿಷಯದ ವಿರುದ್ಧ ಕ್ರಮ ಕೈಗೊಳ್ಳುವುದರ ವಿರುದ್ಧ ಮಾತನಾಡುತ್ತಿದ್ದೇವೆ. ಎಂದರೆ ಕೋಮು ಮತ್ತು ಗುಂಪುಗಳ ಕಲಹದ ಪರಿಸ್ಥಿತಿಯಲ್ಲಿ ಮಹಿಳೆಯರ ಮೇಲೆ ಎಸಗಲಾಗುತ್ತಿರುವ ಕ್ರೌರ್ಯದ ಕುರಿತು ಮಾತನಾಡುತ್ತಿದ್ದೇವೆ” ಎಂದರು.

ಪಶ್ಚಿಮ ಬಂಗಾಳ, ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ಹಿಂಸಾಚಾರದ ಬಗ್ಗೆ ಗಮನ ಹರಿಸುವಂತೆ ವಕೀಲ ಬಾನ್ಸುರಿ ಸ್ವರಾಜ್ ನ್ಯಾಯಾಲಯವನ್ನು ಒತ್ತಾಯಿಸಿದ ನಂತರ ಮುಖ್ಯ ನ್ಯಾಯಮೂರ್ತಿ ಈ ಹೇಳಿಕೆ ನೀಡಿದ್ದಾರೆ ಎಂದು ಬಾರ್ ಅಂಡ್ ಬೆಂಚ್ ತಿಳಿಸಿದೆ.

ಮೇ 4 ರಂದು ನಡೆದ ಲೈಂಗಿಕ ದೌರ್ಜನ್ಯವನ್ನು ಪ್ರತ್ಯೇಕ ಅಪರಾಧವೆಂದು ನೋಡಲಾಗುವುದಿಲ್ಲ, ಆದರೆ ವ್ಯವಸ್ಥಿತ ಹಿಂಸಾಚಾರದ ಭಾಗವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು. “ಇಂತಹ ಸಂದರ್ಭದಲ್ಲಿ, ನೀವು (ಮಣಿಪುರ ಸರ್ಕಾರ) ವಿಶೇಷ ತಂಡವನ್ನು ಹೊಂದಿರುವುದು ಮುಖ್ಯವಲ್ಲವೇ?” ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದರು. “ಮಣಿಪುರ ರಾಜ್ಯದಲ್ಲಿ ಈಗ ಶಾಂತಿ ಸ್ಥಾಪಿಸುವ ಅಗತ್ಯವಿದೆ. ಏಕೆಂದರೆ ಹಿಂಸಾಚಾರವು ಅಡೆತಡೆಯಿಲ್ಲದೆ ಮುಂದುವರಿಯುತ್ತಿದೆ.” ಎಂದು ಅವರು ಹೇಳಿದ್ದಾರೆ

ಮಣಿಪುರ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ರಾಜ್ಯದಾದ್ಯಂತ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 6,000 ಕ್ಕೂ ಹೆಚ್ಚು FIRಗಳನ್ನು ದಾಖಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಈ ಪ್ರಕರಣಗಳಲ್ಲಿ ಎಷ್ಟು ಪ್ರಕರಣಗಳು ಮಹಿಳೆಯರ ವಿರುದ್ಧದ ಅಪರಾಧಗಳನ್ನು ಒಳಗೊಂಡಿವೆ ಮತ್ತು ಎಷ್ಟು ಪ್ರಕರಣಗಳು ಕೊಲೆ ಮತ್ತು ಅಗ್ನಿಸ್ಪರ್ಶದಂತಹ ಗಂಭೀರ ಅಪರಾಧಗಳಿಗೆ ಸಂಬಂಧಿಸಿವೆ ಎಂದು ತಿಳಿಸುವಂತೆ ನ್ಯಾಯಾಲಯ ಮೆಹ್ತಾ ಅವರನ್ನು ಕೇಳಿದೆ. ಎಲ್ಲಾ ಪ್ರಕರಣಗಳನ್ನು ಸಿಬಿಐ ವಹಿಸಿಕೊಳ್ಳುವ ಸ್ಥಿತಿಯಲ್ಲಿದೆಯೇ ಎಂದು ನ್ಯಾಯಪೀಠ ಕೇಳಿದೆ. ಅರ್ಜಿಯ ಮುಂದಿನ ವಿಚಾರಣೆ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

Related Articles

ಇತ್ತೀಚಿನ ಸುದ್ದಿಗಳು