2024 ರ ಪ್ಯಾರಿಸ್ ಒಲಿಂಪಿಕ್ಸ್ ಗೆ ಅಧಿಕೃತ ತೆರೆ ಬಿದ್ದಿದೆ. ಆದರೆ ಭಾರತದಲ್ಲಿ ಪದಕ ವಂಚಿತೆ ವಿನೇಶ್ ಪೋಗಟ್ ತೂಕ ಹೆಚ್ಚಿದ ಪ್ರಕರಣದ ಬಿಸಿ ಇನ್ನೂ ಸಹ ದೇಶಾದ್ಯಂತ ದೊಡ್ಡ ಸುದ್ದಿಯಲ್ಲಿದೆ. ಹೀಗಿರುವಾಗ ವಿನೇಶ್ ಅವರ ಮೇಲ್ಮನವಿಗೆ ಸಂಬಂಧಿಸಿದಂತೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ನಾಳೆ ಅಂದರೆ ಆಗಸ್ಟ್ 13 ರಂದು ತೀರ್ಪು ನೀಡಲಿದೆ ಎಂದು ತಿಳಿದು ಬಂದಿದೆ.
ವಿನೇಶ್ ಪೋಗಟ್ ಒಂದೇ ರಾತ್ರಿಯಲ್ಲಿ 2 ಕೆಜಿ ತೂಕ ಹೆಚ್ಚಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಬಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಹಿಂದೆ ಭಾರಿ ಪಿತೂರಿ ನಡೆದಿದೆ ಎಂದು ಕೆಲವರು ವಾದಿಸುತ್ತಿದ್ದರೆ, ಇನ್ನು ಕೆಲವರು ವಿನೇಶ್ ಮೇಲೆಯೇ ಬೊಟ್ಟು ಮಾಡುತ್ತಿದ್ದಾರೆ. ತನ್ನ ದೇಹ ತೂಕದ ಸಮತೋಲನ ಕಾಪಾಡಿಕೊಳ್ಳುವುದು ವಿನೇಶ್ ಗೆ ಹೆಚ್ಚು ಜವಾಬ್ದಾರಿ ಬೇಕು ಎಂದೂ ಹಲವರು ಆರೋಪಿಸಿದ್ದಾರೆ.
ಈ ನಡುವೆ ವಿನೇಶ್ ಮೇಲೆಯೇ ಆರೋಪ ಹೊರಿಸಿರುವ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿಟಿ ಉಷಾ ಅವರು, ವಿನೇಶ್ ಫೋಗಟ್ ಕಡೆಗೆ ಬೆರಳು ತೋರಿಸಿದ್ದಾರೆ. ಅಥ್ಲೀಟ್ಗಳು ಸ್ಪರ್ಧೆಗೆ ಬೇಕಾದ ತೂಕವನ್ನು ಕಾಪಾಡಿಕೊಳ್ಳುವುದು ಅಥ್ಲೀಟ್ ಮತ್ತು ಅವರ ತರಬೇತುದಾರರ ಜವಾಬ್ದಾರಿಯೇ ಹೊರತು ಐಒಎ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ದಿನ್ಶಾ ಪರ್ದಿವಾಲಾ ಮತ್ತು ಅವರ ತಂಡವಲ್ಲ ಎಂದು ದೂರಿದ್ದಾರೆ.
ಈಗಾಗಲೇ ಡಾ. ದಿನ್ಶಾ ಪರ್ದಿವಾಲಾ ಮೇಲೆ ಬಂದಿರುವ ಗಂಭೀರ ಆರೋಪದ ಪ್ರಕಾರ ಅವರು ಸೂಚಿಸಿದ ಆಹಾರ/ನ್ಯೂಟ್ರಿಷನ್ ಸೇವಿಸಿಯೇ ಇಷ್ಟು ವೇಗವಾಗಿ ತೂಕ ಹೆಚ್ಚಲು ಕಾರಣ ಎಂಬ ಆರೋಪ ಕೂಡ ಅವರ ಮೇಲಿದೆ. ವಾಸ್ತವದಲ್ಲಿ ಕುಸ್ತಿ, ಬಾಕ್ಸಿಂಗ್ ಮತ್ತು ಜೂಡೋದಂತಹ ಕ್ರೀಡೆಗಳಲ್ಲಿ ಸ್ಪರ್ಧಿಗಳು ತನ್ನ ತೂಕವನ್ನು ನಿಗದಿಗಿಂತ ಹೆಚ್ಚಿಸಿಕೊಳ್ಳಲು ಮತ್ತು ಕುಗ್ಗಿಸಲು ಐಒಎ ವೈದ್ಯಕೀಯ ತಂಡ ಸೂಚಿಸುವ ಆಹಾರವೇ ಮುಖ್ಯ ಕಾರಣ ಎನ್ನುವ ವಾದ ಇದೆ. ಇದೇ ಕಾರಣಕ್ಕೆ ಡಾ. ದಿನ್ಶಾ ಪರ್ದಿವಾಲಾ ಮೇಲೆ ಸ್ವತಃ ವಿನೇಶ್ ಪೋಗಟ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿಟಿ ಉಷಾ ಅವರು, ಡಾ. ಪಾರ್ದಿವಾಲಾ ವಿರುದ್ಧ ಟೀಕಾ ಪ್ರಹಾರ ನಡೆಸುವುದು ಸ್ವೀಕಾರಾರ್ಹವಲ್ಲ. ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಎಲ್ಲಾ ಸಂಗತಿಗಳನ್ನು ಪರಿಗಣಿಸಬೇಕು ಎಂದಿದ್ದಲ್ಲದೇ ಪದಕ ವಂಚಿತೆ ವಿನೇಶ್ ಪೋಗಟ್ ಅವರೇ ಇದರ ಹೊಣೆ ಹೊರಬೇಕು ಎಂದು ಹೇಳಿದ್ದಾರೆ.