ದೆಹಲಿ: ಸಿನಿಮಾ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದಾರೆ. ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ವಿರುದ್ಧ ಹಿಂಡೆನ್‌ಬರ್ಗ್ ಆರೋಪದ ಹಿನ್ನೆಲೆಯಲ್ಲಿ ಅವರು ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ನಿರಾಕರಿಸಿದರು.
”ರಾಹುಲ್ ಗಾಂಧಿ ತುಂಬಾ ಅಪಾಯಕಾರಿ ವ್ಯಕ್ತಿ. ಅವರು ಪ್ರಧಾನಿಯಾಗಲಿಲ್ಲವೆನ್ನುವ ಹತಾಶೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಹಿಂಡೆನ್‌ಬರ್ಗ್ ವರದಿಯನ್ನು ಆಧರಿಸಿ, ಷೇರು ಮಾರುಕಟ್ಟೆಯ ಬಗ್ಗೆ ಅತೃಪ್ತಿಕರ ಹೇಳಿಕೆಗಳನ್ನು ನೀಡಲಾಗುತ್ತಿದೆ. ಜನರು ಅವರನ್ನು ಎಂದಿಗೂ ಗೆಲ್ಲಿಸುವುದಿಲ್ಲ. ರಾಹುಲ್ ಯಾವಾಗಲೂ ವಿರೋಧ ಪಕ್ಷದಲ್ಲೇ ಇರುತ್ತಾರೆ” ಎಂದು ಕಂಗನಾ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.
ರಾಹುಲ್ ಹೇಳಿಕೆಗೆ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಭಾರತೀಯ ಷೇರು ಮಾರುಕಟ್ಟೆಯನ್ನು ಧ್ವಂಸ ಮಾಡಲು ಮತ್ತು ಆರ್ಥಿಕತೆಯನ್ನು ನಾಶಮಾಡಲು ಬಯಸಿದೆ ಎಂದು ಅವರು ಹೇಳಿದರು.