Home ರಾಜಕೀಯ ಸಂಚಲನ ಮೂಡಿಸಿದ ಅಜಿತ್ ಪವಾರ್-ಉದ್ಧವ್ ಠಾಕ್ರೆ ಭೇಟಿ: ಏನು ನಡೆಯುತ್ತಿದೆ ಮಹಾರಾಷ್ಟ್ರದಲ್ಲಿ?

ಸಂಚಲನ ಮೂಡಿಸಿದ ಅಜಿತ್ ಪವಾರ್-ಉದ್ಧವ್ ಠಾಕ್ರೆ ಭೇಟಿ: ಏನು ನಡೆಯುತ್ತಿದೆ ಮಹಾರಾಷ್ಟ್ರದಲ್ಲಿ?

0

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಶಿವಸೇನೆ (ಉದ್ಧವ್ ಬಣ) ನಾಯಕರನ್ನು ಭೇಟಿ ಮಾಡಿದ್ದಾರೆ. ಇದರಲ್ಲಿ ಶಿವಸೇನೆಯ ಉದ್ಧವ್ ಬಣದ ಶಾಸಕರೊಂದಿಗೆ ಸ್ವತಃ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಭಾಗಿಯಾಗಿದ್ದರು.

ಈ ಸಭೆಯ ನಂತರ ಮಹಾರಾಷ್ಟ್ರ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗುವ ಸಾಧ್ಯತೆಗಳ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಶಿವಸೇನೆ ಮತ್ತು ರಾಷ್ಟ್ರೀಯ ಪಕ್ಷಗಳ ನಡುವೆ ಒಡಕು ಉಂಟಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಈ ಸಭೆ ಮಹಾರಾಷ್ಟ್ರದ ರಾಜಕಾರಣಕ್ಕೆ ಯಾವ ರಂಗು ತರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.

ವಿಧಾನ ಭವನದಲ್ಲಿ ಅಜಿತ್ ಪವಾರ್ ಮತ್ತು ಉದ್ಧವ್ ಠಾಕ್ರೆ ಭೇಟಿಯ ನಂತರ ಉದ್ಧವ್ ಅವರು ಸಭೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಜಿತ್ ಪವಾರ್ ನನ್ನೊಂದಿಗೆ ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಮತ್ತು ಅವರ ಕಾರ್ಯಶೈಲಿ ನನಗೆ ತಿಳಿದಿದೆ ಎಂದು ಠಾಕ್ರೆ ಹೇಳಿದರು. ಈ ಕಾರಣಕ್ಕಾಗಿಯೇ ನಾನು ಸಭೆಯಲ್ಲಿ ರಾಜ್ಯದ ನಾಗರಿಕರು ಮತ್ತು ರೈತರ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದೆ. ಅಜಿತ್ ಪವಾರ್ ಅವರು ಪ್ರಸ್ತುತ ಉಪ ಮುಖ್ಯಮಂತ್ರಿಯಾಗಿ ಹಣಕಾಸು ಮತ್ತು ಯೋಜನಾ ಸಚಿವಾಲಯದ ಜವಾಬ್ದಾರಿಯನ್ನು ಹೊಂದಿದ್ದಾರೆ. ರಾಜ್ಯಕ್ಕಾಗಿ ಒಳ್ಳೆಯ ಕೆಲಸ ಮಾಡುವಂತೆ ನಾನು ಅವರನ್ನು ಕೇಳಿಕೊಂಡಿದ್ದೇನೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಖಜಾನೆಯ ಕೀಲಿಕೈಗಳು ಅಜಿತ್ ಪವಾರ್ ಬಳಿ ಇರುವುದರಿಂದ ರಾಜ್ಯದ ಜನತೆಗೆ ಸಾಕಷ್ಟು ನೆರವು ಸಿಗಲಿದೆ ಎಂದು ಠಾಕ್ರೆ ವಿಶ್ವಾಸ ವ್ಯಕ್ತಪಡಿಸಿದರು.

ಎರಡು ಹೋಳಾಗಿರುವ ಶಿವಸೇನೆ-ಎನ್‌ಸಿಪಿ

ಶಿವಸೇನೆಯ ಬಗ್ಗೆ ಮಾತನಾಡುವುದಾದರೆ ಹಾಲಿ ಸಿಎಂ ಏಕನಾಥ್ ಶಿಂಧೆಯವರು ಶಿವಸೇನೆ ವಿರುದ್ಧ ಬಂಡಾಯವೆದ್ದು ಬಿಜೆಪಿ ಜೊತೆ ಸೇರಿ ಹೊಸ ಸರ್ಕಾರ ರಚಿಸಿದ್ದಾರೆ. ಶಿಂಧೆ ಶಿವಸೇನೆ ಪಕ್ಷ ಮತ್ತು ಚುನಾವಣಾ ಚಿಹ್ನೆಯ ಮೇಲೆ ಹಕ್ಕು ಸಾಧಿಸಿದ್ದಾರೆ. ಮತ್ತೊಂದೆಡೆ, ಅಜಿತ್ ಪವಾರ್ ಕೆಲವು ದಿನಗಳ ಹಿಂದೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯವೆದ್ದು, ಪಕ್ಷದ ಹೆಚ್ಚಿನ ಶಾಸಕರೊಂದಿಗೆ ಬಿಜೆಪಿ ಸರ್ಕಾರಕ್ಕೆ ಸೇರಿದ್ದಾರೆ. ಅವರನ್ನು ರಾಜ್ಯದ ಉಪ ಮುಖ್ಯಮಂತ್ರಿಯನ್ನಾಗಿಯೂ ಮಾಡಲಾಗಿದೆ.

ಶರದ್ ಪವಾರ್ ಮತ್ತು ಉದ್ಧವ್ ನಡುವೆ ಏನಾದರೂ ನಡೆದಿದೆಯೇ?

ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ವಿರೋಧ ಪಕ್ಷಗಳ ಸಭೆಯಲ್ಲಿ ಎರಡನೇ ದಿನ ಶರದ್ ಪವಾರ್ ಕೂಡ ಭಾಗವಹಿಸಿದ್ದರು. ಈ ಸಭೆಯಲ್ಲಿ ಉದ್ಧವ್ ಠಾಕ್ರೆ ಈಗಾಗಲೇ ಉಪಸ್ಥಿತರಿದ್ದರು. ಇಬ್ಬರು ನಾಯಕರು ಸೇರಿ ರಾಜ್ಯಕ್ಕೆ ಹೊಸ ಸಮೀಕರಣ ಸಿದ್ಧಪಡಿಸಿರಬಹುದು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಈಗ ಉದ್ಧವ್ ಮತ್ತು ಅಜಿತ್ ಪವಾರ್ ಭೇಟಿಯ ನಂತರ, ಅಂತಹ ಚರ್ಚೆಗಳು ಬಲಗೊಳ್ಳಲು ಪ್ರಾರಂಭಿಸಿವೆ.

You cannot copy content of this page

Exit mobile version