ಹೊಸ ದೆಹಲಿ: 2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ಸಾಮಾನ್ಯ ಜಾಮೀನು ಮಂಜೂರು ಮಾಡಿದೆ.
ಇಂದು ನಡೆದ ಮಹತ್ವದ ವಿಚಾರಣೆಯಲ್ಲಿ ತೀಸ್ತಾ ಸೆಟಲ್ವಾಡ್ ವಿರುದ್ಧದ ಪ್ರಕರಣದಲ್ಲಿ ಈಗಾಗಲೇ ಚಾರ್ಜ್ ಶೀಟ್ ದಾಖಲಾಗಿರುವುದರಿಂದ ಕಸ್ಟಡಿ ವಿಚಾರಣೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್ ಅವರಿಗೆ ಸಾಮಾನ್ಯ ಜಾಮೀನು ಮಂಜೂರು ಮಾಡಿದೆ.
ಹಾಗೆಯೇ ಜಾಮೀನು ನೀಡುವಾಗ, ಪ್ರಕರಣದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೆ ತೀಸ್ತಾ ಸೆಟಲ್ವಾಡ್ ಅವರನ್ನು ಕೂಡಲೇ ಶರಣಾಗುವಂತೆ ಆದೇಶ ನೀಡಿ, ಜಾಮೀನು ನಿರಾಕರಿಸಿದ್ದ ಗುಜರಾತ್ ಹೈಕೋರ್ಟಿನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಯಾವುದೇ ಪ್ರಯತ್ನವನ್ನು ಮಾಡುವುದಿಲ್ಲ ಮತ್ತು ಗುಜರಾತ್ನಲ್ಲಿರುವ ಸಾಕ್ಷಿಗಳಿಂದ ದೂರ ಉಳಿಯಬೇಕು ಎಂಬ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ. ಒಂದು ವೇಳೆ ಈ ಷರತ್ತನ್ನು ಉಲ್ಲಂಘಿಸಿರುವುದು ಕಂಡುಬಂದರೆ, ಗುಜರಾತ್ ಪೊಲೀಸರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸುವ ಮೂಲಕ ಜಾಮೀನು ರದ್ದುಗೊಳಿಸಲು ಕೋರ್ಟ್ ಅನುಮತಿ ನೀಡಿದೆ.