ಎರಡೆರಡು ಫೋನ್ ಹೊಂದಿರುವವರಿಗೆ ಇದುವರೆಗೆ ಎರಡೂ ಫೋನಿಗೆ ಒಂದೇ ಸಂಖ್ಯೆ ಬಳಸಿ ವಾಟ್ಸಾಪ್ ಬಳಸುವುದು ಸಾಧ್ಯವಿರಲಿಲ್ಲ. ಆದರೆ ಇನ್ನು ಮುಂದೆ ಅದು ಹಾಗಿರುವುದಿಲ್ಲ. ವಾಟ್ಸಾಪ್‌ನ ಮುಂಬರುವ ಅಪ್ಡೇಟಿನಲ್ಲಿ ನೀವು ಒಂದೇ ಸಂಖ್ಯೆಯ ವಾಟ್ಸಾಪ್ ಖಾತೆಯನ್ನು ಒಂದಲ್ಲ, ಎರಡಲ್ಲ ನಾಲ್ಕು ಕಡೆ ಒಂದೇ ಬಾರಿಗೆ ಬಳಸಬಹುದು. ವಾಟ್ಸಾಪ್ ಈ ಹೊಸ ಅನುಕೂಲಕ್ಕೆ ಕೊಟ್ಟಿರುವ ಹೆಸರು ʼಕಂಪ್ಯಾನಿಯನ್ ಮೋಡ್ʼ
ವಾಟ್ಸಾಪ್ ಅಧಿಕೃತವಾಗಿ ಹೊಸ ಫೀಚರ್ ಬಿಡುಗಡೆ ಮಾಡುವ ಮೊದಲು ಪ್ರಾಯೋಗಿವಾಗಿ ಕೆಲವು ಬಳಕೆದಾರರಿಗೆ ನೀಡುವ ಬೀಟಾ ಆವೃತ್ತಿಯಲ್ಲಿ ಈಗಾಗಲೇ ಈ ಕಂಪ್ಯಾನಿಯನ್ ಮೋಡ್ ಬಳಕೆಗೆ ಲಭ್ಯವಿದೆ. ಈ ಹೊಸ ಸೌಲಭ್ಯವನ್ನು ಬಳಸಲು ‘ಲಿಂಕ್ ಡಿವೈಸ್’ ಆಯ್ಕೆಯ ಮೂಲಕ ಎರಡನೇ ಸ್ಮಾರ್ಟ್‌ಫೋನನ್ನು ಲಿಂಕ್ ಮಾಡುವ ಆಯ್ಕೆಯನ್ನು ವಾಟ್ಸಾಪ್ ತನ್ನ ಬಳಕೆದಾರರಿಗೆ ನೀಡುತ್ತದೆ. ಈ ಮೂಲಕ ನೀವು ನಿಮ್ಮ ಇನ್ನೊಂದು ಫೋನಿನಲ್ಲಿ ನಿಮ್ಮ ವಾಟ್ಸಾಪ್ ಲಾಗಿನ್ ಆಗಬಹುದು. ಇದು ಮೊದಲು ಕಂಪ್ಯೂಟರ್‌ಗಳಿಗೆ ಮಾತ್ರ ಲಭ್ಯವಿತ್ತು. ಈಗ ಸಂಸ್ಥೆ ಈ ಸೌಲಭ್ಯವನ್ನು ಮೊಬೈಲ್ ಮತ್ತು ಟ್ಯಾಬ್‌ಗಳಿಗೂ ನೀಡುತ್ತಿದೆ.
ಮೂಲಗಳ ಪ್ರಕಾರ ಒಮ್ಮೆ ನೀವು ಇನ್ನೊಂದು ಸ್ಮಾರ್ಟ್‌ಫೋನಿಗೆ ನಿಮ್ಮ ವಾಟ್ಸಾಪನ್ನು ಕ್ಯೂ ಆರ್ ಕೋಡ್ ಮೂಲಕ ಕನೆಕ್ಟ್ ಮಾಡಿಕೊಂಡರೆ ನಿಮ್ಮ ಚಾಟ್ ಹಿಸ್ಟರಿ ಆ ಸಾಧನದಲ್ಲಿ ಕಾಣಿಸಿಕೊಳ್ಳುತ್ತದೆ. ನಂತರ ಆ ಫೋನಿನ ಮೂಲಕ ನೀವು ಸಂದೇಶಗಳಿಗೆ ಉತ್ತರಿಸುವುದು, ಕರೆಗಳಿಗೆ ಪ್ರತಿಕ್ರಿಯಿಸುವುದು ಇತ್ಯಾದಿ ಮಾಡಬಹುದು. ಪ್ರಸ್ತು ಬೀಟಾ ಆವೃತ್ತಿಯಡಿ ಒಂದು ವಾಟ್ಸಾಪ್ ಖಾತೆಯನ್ನು ನಾಲ್ಕು ಸಾಧನಗಳಿಗೆ ಎಂದರೆ – ಎರಡು ಸ್ಮಾರ್ಟ್‌ಫೋನ್‌ಗಳು, ಒಂದು ಟ್ಯಾಬ್ಲೆಟ್ ಮತ್ತು ಡೆಸ್ಕ್‌ಟಾಪ್ ಇವುಗಳಿಗೆ ಕನೆಕ್ಟ್ ಆಗಬಹುದು.
WhatsApp ಭಾರತದಲ್ಲಿ ಸುಮಾರು 50 ಕೋಟಿ ಬಳಕೆದಾರರನ್ನು ಹೊಂದಿದ್ದು, ಈ ವೈಶಿಷ್ಟ್ಯವನ್ನು ಪರೀಕ್ಷೆಯ ನಂತರ ಎಲ್ಲಾ ಬಳಕೆದಾರರಿಗೂ ನೀಡಲಿದೆ. ಈ ವೈಶಿಷ್ಟ್ಯವು ಒಂದೇ ಸಂಖ್ಯೆಯಿಂದ ಎರಡು ಫೋನುಗಳಲ್ಲಿ ವಾಟ್ಸಾಪ್ ಬಳಸಲು ಅನುಮತಿ ನೀಡುವುದಲ್ಲದೆ, ಡೇಟಾ ವರ್ಗಾವಣೆಗೂ ಸಹಾಯ ಮಾಡಲಿದೆ. ಈ ಮೂಲಕ ಇನ್ನೊಂದು ವಾಟ್ಸಾಪ್ ಬಳಕೆಗಾಗಿ ಇನ್ನೊಂದು ಫೋನ್ ನಂಬರ್ ಹೊಂದಬೇಕಾದ ಅನಿವಾರ್ಯತೆಯನ್ನು ಇದು ಇಲ್ಲವಾಗಿಸುತ್ತದೆ.
ವಾಟ್ಸಾಪ್ ತನ್ನ ಇತ್ತೀಚಿನ ಹೊಸ ಆವೃತ್ತಿಯಲ್ಲಿ ಗ್ರೂಪ್‌ಗಳಲ್ಲಿನ ಸದಸ್ಯರ ಸಂಖ್ಯೆಯ ಮಿತಿಯನ್ನು 1024ಕ್ಕೆ ಹೆಚ್ಚಿಸಿದ್ದಲ್ಲದೆ Whatsapp ಕಮ್ಯುನಿಟಿ ಎನ್ನುವ ಸುಮಾರು ಹನ್ನೆರಡು ಗುಂಪುಗಳನ್ನು ಒಂದೆಡೆ ಹೊಂದಬಹುದಾದ ಅನುಕೂಲವನ್ನೂ ಕೊಟ್ಟಿತ್ತು.