Saturday, April 27, 2024

ಸತ್ಯ | ನ್ಯಾಯ |ಧರ್ಮ

ಡಿ ಕೆ ಸುರೇಶ್ ದಿಢೀರ್ ಹಾರ್ಟ್ ಸರ್ಜನ್ ಆದಾಗ..!

  • ಹೀಗೊಮ್ಮೆ ಕಲ್ಪಿಸಿಕೊಂಡು ನೋಡಿ… ಡಿ ಕೆ ಶಿವಕುಮಾರ್ ಅವರ ತಮ್ಮ ಡಿ ಕೆ ಸುರೇಶ್ ದಿಢೀರ್ ಹಾರ್ಟ್ ಸರ್ಜನ್ ಆಗಿ ಜಯದೇವ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿಬಿಡುತ್ತಾರೆ ಎಂದಿಟ್ಟುಕೊಳ್ಳಿ. ಆಗ ನಾವದನ್ನು ಹೇಗೆ ಸ್ವೀಕರಿಸುತ್ತೇವೆ?

ಯಾವುದೇ ವ್ಯಕ್ತಿ, ಯಾವುದೇ ವಯಸ್ಸಿನಲ್ಲಿ, ಈ ನೆಲದ ಕಾನೂನು ಸಮ್ಮತವಾದ ಯಾವುದೇ ವೃತ್ತಿಪರ ಉದ್ಯೋಗ ಆಯ್ಕೆ ಮಾಡಿಕೊಳ್ಳುವುದು ನಮ್ಮ ದೇಶದಲ್ಲಿ ನಿಷಿದ್ಧವಲ್ಲ. ಅಂತಹ ನಿರ್ಬಂಧವನ್ನು ನಮ್ಮ ಸಂವಿಧಾನವೂ ಹೇರಿಲ್ಲ. ಹೆಚ್ಚೆಂದರೆ, ಆ ಉದ್ಯೋಗಕ್ಕೆ ಬೇಕಾದ ಶಿಕ್ಷಣ, ತರಬೇತಿ, ಮಾನ್ಯತೆ ಪತ್ರವನ್ನಷ್ಟೇ ಪರಿಗಣಿಸಲಾಗುತ್ತದೆ. ವ್ಯಕ್ತಿಯ ವಯಸ್ಸನ್ನಲ್ಲ. ಹಿಂದಿಯ ಹೆಸರಾಂತ ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾ ನಿಮಗೆ ಈ ಸಂದರ್ಭದಲ್ಲಿ ನೆನಪಾಗಬಹುದು.

ಇವತ್ತು ನಮ್ಮ ದೇಶದಲ್ಲಿ ಶಿಕ್ಷಣವನ್ನು ಮಾರಾಟದ ಸರಕನ್ನಾಗಿ ಮಾಡಲಾಗಿದೆ. ದುಡ್ಡು ಸುರಿದು ಸರ್ಟಿಫಿಕೇಟುಗಳನ್ನು ಕೊಳ್ಳುವ ಕಾಲ. ಈ ಆಯಾಮದಿಂದ ನೋಡಿದಾಗ, ಡಿಕೆ ಸೋದರರ ಬಳಿ ಒಂದು ಯಕಶ್ಚಿತ್ ಎಂಬಿಬಿಎಸ್ ಪದವಿಯನ್ನೂ, ಕಾರ್ಡಿಯಾಲಜಿ ಸ್ಪೆಷಲಿಸಂನ ಮಾಸ್ಟರ್ ಡಿಗ್ರಿಯನ್ನೂ ಖರೀದಿಸಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ ಮತ್ತು ಇವತ್ತಿನ ಸಂದರ್ಭದಲ್ಲಿ ಅದು ಆಲ್ಮೋಸ್ಟ್ ಕಾನೂನುಬದ್ಧ ವಹಿವಾಟೂ ಹೌದು.

ಈಗ ಅಸಲೀ ವಿಚಾರಕ್ಕೆ ಬರೋಣ. ಹಾಗೊಮ್ಮೆ ಡಿ ಕೆ ಸುರೇಶ್ ಈ ವಯಸ್ಸಲ್ಲಿ ದಿಢಿರ್ ಹಾರ್ಟ್ ಸರ್ಜನ್ ಆಗಿ ಅವತರಿಸಿಬಿಟ್ಟರೆ, ನಾವು ಆ ವಿದ್ಯಮಾನವನ್ನ ಹೇಗೆ ಸ್ವೀಕರಿಸುತ್ತೇವೆ. ಎಲ್ಲವೂ ನ್ಯಾಯಸಮ್ಮತವಾಗಿಯೇ ನಡೆದಿರಬಹುದು, ಆದರೆ ನಾವದನ್ನು ಖಂಡಿತ ಒಪ್ಪುವುದಿಲ್ಲ. ಯಾಕೆಂದರೆ ವೈದ್ಯಕೀಯ ಅಂತಲ್ಲ, ಯಾವುದೇ ಕ್ಷೇತ್ರಕ್ಕಾಗಲಿ ಒಬ್ಬ ವ್ಯಕ್ತಿ ಪಾದಾರ್ಪಣೆ ಮಾಡಬೇಕೆಂದರೆ ಕೇವಲ ಕಾಗದಪತ್ರಗಳು ಸರಿ ಇದ್ದರೆ ಮಾತ್ರ ಸಾಲದು; ಆ ಕ್ಷೇತ್ರದಲ್ಲಿ ಆ ವ್ಯಕ್ತಿಗೆ ನಿಪುಣತೆ ಇರಬೇಕು, ಪ್ರಾಮಾಣಿಕ ಅಧ್ಯಯನವಿರಬೇಕು, ತನ್ನ ಕೆಲಸದ ಬಗ್ಗೆ ಕಾಳಜಿ ಇರಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಆ ಕ್ಷೇತ್ರದ ಕುರಿತು ಆತನಿಗೆ ಆಸಕ್ತಿಯಿರಬೇಕು. ಅದ್ಯಾವುದೂ ಇಲ್ಲದ ಡಿ.ಕೆ. ಸುರೇಶ್ ಅವರು ದಿಢೀರ್ ಹಾರ್ಟ್ ಸರ್ಜನ್ ಆಗುವುದನ್ನು ನಾವು ಒಪ್ಪುವುದಿಲ್ಲ ಎನ್ನುವುದಾದರೆ, ರಾಜಕೀಯ ಕ್ಷೇತ್ರದೆಡೆಗೆ ಇದ್ಯಾವುದೂ ಇಲ್ಲದ ಡಾ.ಸಿ.ಎನ್. ಮಂಜುನಾಥ್ ಅವರನ್ನು ರಾಜಕಾರಣಿಯಾಗಿ ಸ್ವೀಕರಿಸಲು ಸಾಧ್ಯವೇ? ಬೇರೆಬೇರೆ ಕಾರಣಗಳಿಗೆ ಹಾಗೆ ಸ್ವೀಕರಿಸುವುದು ಸಾಧುವೇ?

ಎಸ್.ಪಿ. ಬಾಲಸುಬ್ರಹ್ಮಣ್ಯಂ ಒಳ್ಳೆಯ ಹಾಡುಗಾರ ಅಂತ ಹೇಳಿ, ಅವರನ್ನು ನೃತ್ಯದ ವೇದಿಕೆ ಹತ್ತಿಸಿ, ನಾಟ್ಯ ಮಾಡಲು ಹೇಳುವುದು ಸರಿಯೇ? ನಮ್ಮ ಸ್ವಾರ್ಥಕ್ಕಾಗಿ ಹಾಗೊಮ್ಮೆ ನಾವು ಮಾಡಿದ್ದರೆ, ಅದು ಆ ವ್ಯಕ್ತಿಯ ಗಾಯನ ಪಾಂಡಿತ್ಯಕ್ಕೆ ನಾವು ಮಾಡುವ ಅವಮಾನವೇ ಸರಿ. ಈಗ ಡಾ. ಸಿ. ಎನ್ ಮಂಜುನಾಥ್ ಅವರ ಜೊತೆ ದೇವೇಗೌಡರ ಕುಟುಂಬ ವರ್ತಿಸುತ್ತಿರುವ ರೀತಿ ಕೂಡಾ ಇದೇ ರೀತಿಯದ್ದು. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ರಾಜಕೀಯದ ಬಗ್ಗೆ ಎಳ್ಳಷ್ಟೂ ಆಸಕ್ತಿಯಿರದ ಮಂಜುನಾಥ್ ಅವರನ್ನು, ತಮ್ಮ ಪಕ್ಷವಿದ್ದೂ ಬೇರೊಂದು ಪಕ್ಷದ ಮೂಲಕ ಅವರು ಕಣಕ್ಕಿಳಿಸಿದ್ದಾರೆ. ಸ್ವತಃ ಮಂಜುನಾಥ್ ಅವರೇ, ಬಿಜೆಪಿಯಿಂದ ಟಿಕೆಟ್ ಘೋಷಣೆಯಾದ ನಂತರವೂ, ತಮಗೆ ರಾಜಕಾರಣದಲ್ಲಿ ಯಾವತ್ತೂ ಆಸಕ್ತಿಯಿಲ್ಲ ಎಂದು ಹೇಳಿದ್ದಾರೆ. ಇನ್ನು ಕುಮಾರಸ್ವಾಮಿಯವರು ಕೂಡಾ ಸಭೆಯೊಂದರಲ್ಲಿ, ಮಂಜುನಾಥ್ ಅವರ ಮಡದಿ ಮಕ್ಕಳ ಇಷ್ಟಕ್ಕೆ ವಿರುದ್ಧವಾಗಿ ನಾವು ರಾಜಕಾರಣಕ್ಕೆ ಕರೆತಂದಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

ಈಗ ಜನರ ಮುಂದೆ ಇರುವ ಪ್ರಶ್ನೆ ಸರಳವಾದದ್ದು. ವೈದ್ಯಕೀಯ ಕ್ಷೇತ್ರದಲ್ಲಿ ಎಳ್ಳಷ್ಟೂ ಆಸಕ್ತಿ, ಅಭಿರುಚಿ, ತಜ್ಞತೆ ಇಲ್ಲದ ಡಿ ಕೆ ಸುರೇಶ್ ಅವರನ್ನು ಹಾರ್ಟ್ ಸರ್ಜನ್ ಆಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದಾದರೆ; ರಾಜಕೀಯ ಕ್ಷೇತ್ರದತ್ತಲೂ ಅಷ್ಟೇ ನಿರಾಸಕ್ತಿ ಹೊಂದಿರುವ ಸಿ ಎನ್ ಮಂಜುನಾಥ್ ಅವರನ್ನು ಒಳ್ಳೆಯ ಡಾಕ್ಟರ್ ಎಂಬ ಕಾರಣಕ್ಕೆ ರಾಜಕಾರಣಿಯಾಗಿ ಸ್ವೀಕರಿಸಬೇಕೆ? ಡಿ ಕೆ ಸುರೇಶ್ ಮುನ್ನಾಭಾಯ್ ಅವತಾರವೆತ್ತಿ ಹಾರ್ಟ್ ಆಪರೇಷನ್ ಮಾಡಿದರೆ, ಆ ನಿರ್ದಿಷ್ಟ ರೋಗಿ ಮಾತ್ರ ಸಂತ್ರಸ್ತನಾಗಬಹದು; ಆದರೆ ಮಂಜುನಾಥ್ ಅವರು ಅನಾಸಕ್ತ ರಾಜಕಾರಣಿಯಾಗಿ ವಿಫಲವಾದರೆ ಇಡೀ ಕ್ಷೇತ್ರದ ಜನತೆ ಸಂತ್ರಸ್ತರಾಗಬೇಕಾಗುತ್ತದೆ.

ಹಾಗಂತ ಸುರೇಶ್ ಮತ್ತು ಮಂಜುನಾಥ್ ಅವರ ವೈಯಕ್ತಿಕ ವ್ಯಕ್ತಿತ್ವಗಳನ್ನು ನಾನಿಲ್ಲಿ ತೂಗಿ ಮಾತಾಡುತ್ತಿಲ್ಲ. ಆಯಾ ಕ್ಷೇತ್ರದ ಅನುಭವ ಮತ್ತು ನಿಪುಣತೆಯ ಬಗ್ಗೆ ವಿವರಿಸುತ್ತಿದ್ದೇನಷ್ಟೆ. ಒಂದು ಕ್ಷೇತ್ರದ ನಿಪುಣತೆಯು, ಸಂಬಂಧವೇ ಇಲ್ಲದ ಮತ್ತೊಂದು ಕ್ಷೇತ್ರದಲ್ಲಿ ನಗಣ್ಯ! ಈ ಸರಳ ಸತ್ಯ ಅರ್ಥ ಮಾಡಿಕೊಳ್ಳುವುದು ಕಾಲದ ತುರ್ತು.

ಮಾಚಯ್ಯ ಎಂ ಹಿಪ್ಪರಗಿ

Related Articles

ಇತ್ತೀಚಿನ ಸುದ್ದಿಗಳು