Home ಅಂಕಣ ಯಾರಪ್ಪ ನೀನು.. ? ಎಲ್ಲಿಂದ ಬಂದೆ.. ?

ಯಾರಪ್ಪ ನೀನು.. ? ಎಲ್ಲಿಂದ ಬಂದೆ.. ?

0

(ಈ ವರೆಗೆ..).

ಲಕ್ಷ್ಮಿ ತನ್ನ ಹೆತ್ತವ್ವನ ಜತೆ  ಮಾತುಕತೆ ನಡೆಸಿದ್ದು ಗಂಗೆಗೆ ಸರಿ ಕಾಣದೆ ಲಕ್ಷ್ಮಿ ಅವ್ವನನ್ನು ಕೇವಲವಾಗಿ ಕಾಣುತ್ತಾಳೆ. ಲಕ್ಷ್ಮಿಗೆ ನೋವಾದರೂ ಸಹಿಸಿಕೊಂಡು ತನ್ನ ಅವ್ವನ ಅಸಹಾಯಕತೆಯನ್ನು ತಂಗಿಗೆ ಮನದಟ್ಟು ಮಾಡುತ್ತಾಳೆ. ಅವರ ಮಾತುಕತೆ ಮುಗಿಯುವಷ್ಟರಲ್ಲಿ ಆಸ್ಪತ್ರೆಯ ಡಿಸ್‌ಚಾರ್ಜ್‌ನ ಕೆಲಸಗಳು ಮುಗಿದಿರುತ್ತವೆ. ವೈದ್ಯರಿಗೆ ಹೇಳಿ ಊರಿಗೆ ಹೊರಡುತ್ತಾರೆ. ದಾರಿಯಲ್ಲಿ ಏನಾಗುತ್ತದೆ ? ಓದಿ.. ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆಯ 15ನೇ ಕಂತು.

ಲಕ್ಷ್ಮಿಯ ಆಸ್ಪತ್ರೆ ಬಿಡುಗಡೆ ಸಂಭ್ರಮವನ್ನು ಹೊತ್ತ ಎತ್ತಿನ ಬಂಡಿ ಸೋಪಾನಪೇಟೆಯ ಹಾದಿಯಲ್ಲಿ ಚಲಿಸತೊಡಗಿತ್ತು. ಅಲ್ಲಿನ ತಂಪನೆಯ ವಾತಾವರಣ ಲಕ್ಷ್ಮಿಯ ಒಳಗೆ ಹೊಸ ಹುರುಪು ತುಂಬಿ ಅವಳಿಗೆ ಉಂಟಾಗಿರುವ ಅನಾರೋಗ್ಯದ ಸಮಸ್ಯೆಯನ್ನೇ ಕೆಲವು ಗಂಟೆಗಳು ಮರೆಸಿಬಿಟ್ಟಿತ್ತು. ಗೆಳತಿ ಅಲಮೇಲು ಬಗೆ ಬಗೆಯಾಗಿ ವರ್ಣಿಸುತ್ತಿದ್ದ ಅದೇ ಸೋಪಾನಪೇಟೆಯ ಬೆಟ್ಟ, ಗುಡ್ಡ, ಕಾಡು, ಕಣಿವೆ, ನೊರೆ ಉಕ್ಕಿಸಿ ಹರಿವ ಜಲಪಾತಗಳ ನಡುವೆ ಲಕ್ಷ್ಮಿಯ ಮನಸ್ಸು ಹಕ್ಕಿಯಂತೆ ರೆಕ್ಕೆ  ಬಡಿಯುತ್ತಾ ವಿಹರಿಸತೊಡಗಿತ್ತು. ಇಷ್ಟು ವರ್ಷಗಳು ಅಣ್ಣ ಏನಂದಾನೋ, ತಮ್ಮ ಏನಂದಾನೋ ಎನ್ನುವ ಅಂಜಿಕೆಯಲ್ಲಿಯೇ ನಾಲ್ಕು ಕೋಣೆಯೊಳಗೇ ಕಳೆದು ಹೋಗಿದ್ದ  ಲಕ್ಷ್ಮಿ, ಇಂದು ಅವರೆಲ್ಲರ ಸಮ್ಮುಖದಲ್ಲಿ ಎಗ್ಗಿಲ್ಲದೆ ಹರಟಿದಳು, ಬಿಡುಬೀಸಾಗಿ ನಕ್ಕಳು, ತನಗೆ ಇಷ್ಟ ಬಂದ ಜಾಗಗಳಲ್ಲೆಲ್ಲಾ ಗಾಡಿ ನಿಲ್ಲಿಸಿ ಇಳಿದು ಸ್ವಚ್ಛಂದವಾಗಿ ಓಡಾಡಿ  ಸೋಪಾನ ಪೇಟೆ ನೋಡಬೇಕೆಂಬ ತನ್ನ ಇಷ್ಟೂ ವರ್ಷದ ಬಯಕೆಯನ್ನು ಈಡೇರಿಸಿಕೊಂಡಳು.

ಹೀಗೆ ಸಣ್ಣ ಮಗುವಿನಂತೆ ಕುಣಿದು ಕುಪ್ಪಳಿಸುತ್ತಿದ್ದ ಮಗಳನ್ನು ಕಂಡು ಅಪ್ಪ ಹಿರಿ ಹಿರಿ ಹಿಗ್ಗಿದರೆ, ಅವ್ವನಿಗೋ ಚಕಮಕಿಯ ಕಲ್ಲು ತಾಗಿದಂತೆ ಒಳಗೊಳಗೆ ಭಯದ ಚಳುಕು ಚಟಪಟಿಸಿ ವೇದನೆಯನ್ನುಂಟು ಮಾಡುತ್ತಿತ್ತು. ಒಂದು ಗಳಿಗೆ ಇದ್ದಂತೆ ಮತ್ತೊಂದು ಗಳಿಗೆ ಇರದ ಮಗಳ ಆರೋಗ್ಯ ಸ್ಥಿತಿಯನ್ನು ಚೆನ್ನಾಗಿ ಅರಿತಿದ್ದ ಅವ್ವ, ಮುಂದಿನ ಗಳಿಗೆ ಏನೋ ಎಂತೋ ಎಂಬ ಆತಂಕದಲ್ಲೇ ಕಣ್ಣುಮಿಟುಕಿಸದಂತೆ ಮಗಳ ಮುಖವನ್ನೇ ಓದತೊಡಗಿದ್ದಳು. ಸೋಪಾನಪೇಟೆ ದಾಟಿ ಗುಂಡಿ ಗೊರಕಲುಗಳ ಮಣ್ಣ ಹಾದಿಯ  ಮೇಲೆ ಗಾಡಿ ಓಡುತ್ತಲೇ ಇತ್ತು. ಬೆಟ್ಟ ಗುಡ್ಡ ಕಾಡು ಕಣಿವೆಗಳೆಲ್ಲ ಕಳೆದು, ಮನೆ ಮಾರು ಅಂಗಡಿ‌ ಕಚೇರಿಗಳು ಎದುರುಗೊಳ್ಳ ತೊಡಗಿದವು. ಇದನ್ನೆಲ್ಲಾ ಕಣ್ಣರಳಿಸಿ ನೋಡುತ್ತಿದ್ದ ಲಕ್ಷ್ಮಿ ಇದ್ದಕ್ಕಿದ್ದಂತೆ ಗಂಭೀರವಾದ ದನಿಯಲ್ಲಿ “ಗಾಡಿ ನಿಲ್ಸು ಯಜಮಾನ” ಎಂದಳು. ಲಕ್ಷ್ಮಿಯ ಗಡುಸಾದ ದನಿ ಕೇಳಿ ಗಾಡಿಯಲ್ಲಿದ್ದವರೆಲ್ಲಾ  ಬೆಚ್ಚಿದವರಂತೆ ಎಚ್ಚೆತ್ತು ನೆಟ್ಟಗೆ ಕುಳಿತರು. ಅಪ್ಪ ಲಗಾಮು ಎಳೆದರು ಹಠ ಹಿಡಿದಂತೆ ಓಡುತ್ತಲೇ ಇದ್ದ ಎತ್ತುಗಳು ಬಿರುಸಾಗಿ ಒಂದಷ್ಟು  ದೂರ ಚಲಿಸಿಯೇ ಬಿಟ್ಟವು. “ಗಾಡಿ ನಿಲ್ಸು ಅಂದಿದ್ದು ಕಿವಿಗೆ ಬೀಳ್ಳಿಲ್ವೇನೋ ಯಜಮಾನ” ಎಂದು ಗುಡುಗಿ “ಹಿಂದುಕ್ಕೋಗಿ  ನಾನ್ ಹೇಳಿದ್ ಜಾಗದಲ್ಲಿ  ಗಾಡಿ ನಿಲ್ಸು” ಎಂದು ತಾಕೀತು ಮಾಡಿದಳು.

ಅಪ್ಪ ಗಾಡಿ ತಿರುಗಿಸಿ ಮಗಳು ಹೇಳಿದ ಜಾಗದಲ್ಲಿ ನಿಲ್ಲಿಸಿದ. ಲಕ್ಷ್ಮಿ, ಒಂದೇ ನೆಗೆತಕ್ಕೆ ಗಾಡಿಯಿಂದ ಹಾರಿ ಒಂದು ಸರ್ಕಾರಿ ಕಚೇರಿಯ ಮುಂದೆ ಕೈ ಕಟ್ಟಿ  ನಿಂತಳು. ಸಂಜೆಯಾಗಿದ್ದರಿಂದ ಆ ಕಛೇರಿಯ ಬಾಗಿಲು ಮುಚ್ಚಿ ಅದರ ಸುತ್ತಾ ಮುತ್ತಾ ಅಲ್ಲೊಬ್ಬರು ಇಲ್ಲೊಬ್ಬರು ಎಂಬಂತೆ ಓಡಾಡುತ್ತಿದ್ದರು. ಹೀಗೆ ಅಚಾನಕವಾಗಿ ಗಾಡಿಯಿಂದ ಹಾರಿ ಗಂಡಸಿನ ಹಾಗೆ ಮೀಸೆ ತಿರುವುವಂತೆ ತನ್ನ ಮೇಲ್ ತುಟಿಯ ಮೇಲೆ ಕೈಯಾಡಿಸುತ್ತಿದ್ದ ತಂಗಿಯನ್ನು ಕಂಡು ಅಣ್ಣ ಚಂದ್ರಹಾಸನಿಗೆ ಮುಜುಗರವಾದಂತಾಯಿತು. ಓಡಿ ಬಂದು ಲಕ್ಷ್ಮಿಯ ಕೈ ಹಿಡಿದು “ಬಾವ್ವ ಲಕ್ಷ್ಮಿ ಗಾಡಿಹತ್ತು” ಎಂದು ಅವಳ ರಟ್ಟಿ ಹಿಡಿದು ಜಗ್ಗಿದ.  ಕೈ ಕೊಸರಿ ಕೊಂಡ ಲಕ್ಷ್ಮಿ “ನನ್ ಮಗ್ನೇ ನಿನ್ನ್ ತಂಗಿನೇನು ಹೊತ್ಕೊಂಡ್ ಹೋಗೋದಿಲ್ಲ ಬುಡೋ”  ಎಂದು ದೂರ ಸರಿದು ನಿಂತಳು. ಗಿರಿಧರನ ಕೈಗೆ ಲಗಾಮು ಕೊಟ್ಟು ಮಗಳ ಬಳಿ  ಓಡಿ ಬಂದ ಅಪ್ಪ ಲಕ್ಷ್ಮಿಯಿಂದ ಮಾರು ದೂರವೇ ನಿಂತು “ಏನ್ ನೋಡ್ತಿದ್ಯವ್ವ ಲಕ್ಷ್ಮಿ” ಎಂದು ಅಕ್ಕರೆ ತುಂಬಿದ ದನಿಯಲ್ಲಿ ಕೇಳಿದ. ಅಪ್ಪನನ್ನು ಮೇಲಿನಿಂದ ಕೆಳಗಿನವರೆಗೂ ದಿಟ್ಟಿಸಿದ ಲಕ್ಷ್ಮಿ “ಎಷ್ಟು ಪ್ರೀತಿಯಿಂದ ಕೇಳ್ತಿಯೋ ಯಜಮಾನ. ನನ್ನೇನು ನಿನ್ ಮಗಳು ಅಂದ್ಕೊಂಡಿದ್ದಿಯ”…..ಎಂದು ಹೇಳಿ ಸಣ್ಣಗೆ ನಕ್ಕು “ಹೋಗ್ಲಿ ಬುಡು ಈಗ್ಗೆ ಹದಿನೈದು ವರ್ಷದ್ ಹಿಂದೆ ನನ್ನ ಈ ಕರೆಂಟಿನ ಆಫೀಸಿಗೆ ಮೂರು ತಿಂಗಳು ಮಟ್ಟಿಗೆ ಡ್ಯೂಟಿಗ್ ಹಾಕಿದ್ದು ನೆನ್ಪಾಯ್ತು ಹಂಗಾಗೇ ಒಂದ್ ಸತಿ ನೋಡನ ಅನ್ಸಿ ಗಾಡಿ ನಿಲ್ಲಿಸಿ ಬಂದ್ನಪ್ಪ. ಅದುಕ್ಕೆ ಏನು ಒಬ್ರಾದ್ಮೇಲೆ ಒಬ್ರು ದಬದಬನೇ  ಹಿಂದುಗುಟ್ಲೆ ಓಡಿ ಬಂದ್ಬುಟ್ರಲ್ಲ  ಸರಿ ಸರಿ ನಡಿರಿ ಹೋಗನ” ಎಂದು ಹೇಳಿ  ಗಾಡಿ ಏರಿ ಕುಳಿತಳು.

 ಅಕ್ಕನನ್ನು ಕಂಡು ಹೆದರಿದ ಗಂಗೆ, ಗಾಡಿ ಓಡಿಸುತ್ತಿದ್ದ ಅಪ್ಪನ ಬೆನ್ನಿಗೆ ಆತು ಕುಳಿತರೆ, ಚಂದ್ರಹಾಸ ಗಿರಿಧರರು ಒಳಗೊಳಗೆ ಚಡಪಡಿಸುತ್ತಾ ಲಕ್ಷ್ಮಿಯಿಂದ ಮಾರು ದೂರವೇ ಸರಿದು ಕುಳಿತರು. ಇದ್ಯಾವುದಕ್ಕೂ ಹೆದರದ ಅವ್ವ ಲಕ್ಷ್ಮಿಯ ಗಲ್ಲನೇವರಿಸುತ್ತಾ ” ಯಾರಪ್ಪ ನೀನು.. ? ಎಲ್ಲಿಂದ ಬಂದೆ.. ?” ಎಂದು ಕೇಳಿದಳು. ಅವ್ವನನ್ನು ದುರುಗುಟ್ಟಿ ನೋಡಿದ ಲಕ್ಷ್ಮಿ “ಓಹೋ ಬಹಳ ನಾಜೋಕಿ ಕಣಮ್ಮ ನೀನು ನೋಡು ನೋಡು ಹೆಂಗೆ ಬಾಯ್ ಬುಡ್ಸಕ್ ನೋಡ್ತಿಯ” ಎಂದು ಮುಖ ತಿರುಗಿಸಿ ಕೂತಳು. ಅವ್ವ ದುಃಖ ತುಂಬಿದ ದನಿಯಲ್ಲಿ “ನನ್ನ ಮಗಳೇ ಆಗಬೇಕಿತ್ತಾ ನಿನಗೆ” ಎಂದು ನಿಡುಸುಯ್ಯುತ್ತಾ ಕೇಳಿದಳು.

ತನ್ನ ಕೆನ್ನೆ, ಕೈಗಳನ್ನು ಗಟ್ಟಿಯಾಗಿ ಚಿವುಟಿಕೊಂಡ ಲಕ್ಷ್ಮಿ ಅವ್ವನ ಮುಖ ನೋಡುತ್ತಾ “ನೋಡು ನೋಡಮ್ಮಾ ಚಿವುಟಿದ್ರೆ ರಕ್ತ ಚಿಮ್ಮೊ ಹಂಗೆ ಸಾಕಿದ್ಯಲ್ಲ ಈ ಹುಡುಗಿನ. ಈ ರೂಪು ನೋಡಿದ್ರೆ ಎಂತವರಿಗೂ ಆಸೆ ಆಗಕಿಲ್ವ ಹೇಳು. ಅಂತದ್ರಲ್ಲಿ ನನ್ನ ಮಗಳೇ ಆಗಬೇಕಿತ್ತಾ ಅಂತ ಬೇರೆ ಕಣೀ ಕೇಳ್ತಿಯಲ್ಲ ಬುದ್ಧಿಗಿದ್ದಿ ಆಯ್ತೇನಮ್ಮ ನಿಂಗೆ” ಎಂದು ಹಸಿದ ಕಣ್ಣುಗಳಿಂದ ತನ್ನ ಕೈ ಭುಜಗಳನ್ನು ನೇವರಿಸಿಕೊಳ್ಳ ತೊಡಗಿದಳು. ಅಂಜುತ್ತ ಮಾರು ದೂರ ಹೋಗಿ ಕುಳಿತಿದ್ದ ಚಂದ್ರಹಾಸನಿಗೆ ಪಿತ್ತ ನೆತ್ತಿಗೇರಿದಂತಾಗಿ ಕೈ ನೇವರಿಸಿಕೊಳ್ಳುತ್ತಿದ್ದ ಲಕ್ಷ್ಮಿಯ ಬೆನ್ನ ಮೇಲೆ ಗುದ್ದಿ ” ಬೋಳಿಮಗನೆ ಈ ಮಾತಾಡಕೆ ನಾಚ್ಕೆ ಆಗಕ್ಕಿಲ್ವೆನ್ಲಾ ನಿನಗೆ. ನಡಿ ಮನೆಗ್ ಹೋಗಿ ನಿನಗೊಂದು ಸರಿಯಾದ ಶಾಸ್ತಿ ಕಾಣುಸ್ತಿವಿ” ಎಂದು ಕಟಕಟನೆ ಹಲ್ಲು ಕಡಿದ.

ಬೆನ್ನಿಗೆ ಬಿದ್ದ ಏಟಿನಿಂದ  ಸೆಟೆದುಕೊಂಡ ಲಕ್ಷ್ಮಿ, ಮುಷ್ಟಿ ಬಿಗಿದು ಹಲ್ಲು ಕಚ್ಚುತ್ತಾ ನಡುಗಲಾರಂಬಿಸಿದಳು. ಅಪ್ಪ ಗಾಡಿ  ನಿಲ್ಲಿಸಿ ಬಂದು ಲಕ್ಷ್ಮಿಯನ್ನು ಗಟ್ಟಿಯಾಗಿ ತಬ್ಬಿ ಹಿಡಿದ. ಅವ್ವ ಚಂದ್ರಹಾಸನನ್ನು ತಿಂದು ಬಿಡುವಂತೆ ನೋಡುತ್ತಾ “ಮಗಿಗೆ ಏನಾದ್ರು ಹೆಚ್ಚು ಕಮ್ಮಿ ಆದ್ರೆ ಏನ್ಲಾ ಮಾಡದು. ಒಳಗಿರೋ ಆ ದಯ್ಯನೇನು ಹೊಡಿಯೋಕಾದದ ಬಡಿಯಕಾದದ ಹೇಳು.   ಬಾಯಿ ಮುಚ್ಕೊಂಡು ತೆಪ್ಪುಗೆ ಕುತ್ಕೊಳ್ಳ” ಎಂದು ಗದರಿ, ಲಕ್ಷ್ಮಿಯನ್ನು ತನ್ನ ಎದೆಗೆ ಒರಗಿಸಿಕೊಂಡು “ನಿನ್ನ ದಮ್ಮಯ್ಯ ಕಣಪ್ಪ ಆ ಹೈದುಂಗೆ ಏನು ಗೊತ್ತಾಗಕ್ಕಿಲ್ಲ ಅವನ ತಪ್ಪುನ್ನ ಹೊಟ್ಟೆಗ್ಹಾಕ್ಕೊಳಪ್ಪ. ನನ್ನ ಮಗ್ಳುಗೆ  ಏನು ಕಷ್ಟ ಕೊಡಬ್ಯಾಡ” ಎಂದು ಅಂಗಲಾಚಿದಳು. ಎದೆಗೆ ಒರಗಿಸಿಕೊಂಡಿದ್ದ ಅವ್ವನನ್ನು ತಳ್ಳಿ, ತುಸು ದೂರ ಜರುಗಿ ಕೋಪೋದ್ರಿಕ್ತಳಾಗಿ ಕುಳಿತ ಲಕ್ಷ್ಮಿ, ಮನೆ ಸೇರುವವರೆಗೂ ಯಾರೊಂದಿಗೂ ತುಟಿಕ್ ಪಿಟಿಕ್ ಎನ್ನಲಿಲ್ಲ.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‌

You cannot copy content of this page

Exit mobile version