Home ದೇಶ ಪ್ರಧಾನಿ ಮೋದಿಯನ್ನು ಪ್ರಶ್ನಿಸಲು ಯತ್ನಿಸಿ ಐಟಿ ಸೆಲ್‌ ದಾಳಿಗೆ ತುತ್ತಾದ ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್...

ಪ್ರಧಾನಿ ಮೋದಿಯನ್ನು ಪ್ರಶ್ನಿಸಲು ಯತ್ನಿಸಿ ಐಟಿ ಸೆಲ್‌ ದಾಳಿಗೆ ತುತ್ತಾದ ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್ ಯಾರು?

0

ಓಸ್ಲೋ: ಪ್ರಧಾನಿ ನರೇಂದ್ರ ಮೋದಿ ಅವರ ನಾರ್ವೆ ಪ್ರವಾಸದ ವೇಳೆ ಅವರನ್ನು ಪ್ರಶ್ನಿಸಲು ಪ್ರಯತ್ನಿಸಿ, ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪತ್ರಕರ್ತೆಯ ಹೆಸರು ಹೆಲ್ಲೆ ಲಿಂಗ್ ಸ್ವೆಂಡ್ಸೆನ್.

ಯಾರು ಈ ಹೆಲ್ಲೆ ಲಿಂಗ್? ಹೆಲ್ಲೆ ಲಿಂಗ್ ಅವರು ನಾರ್ವೆಯ ಓಸ್ಲೋ ನಗರದಿಂದ ಪ್ರಕಟವಾಗುವ ‘ಡಾಗ್‌ಸಾವಿಸೆನ್’ (Dagsavisen) ಎಂಬ ಪ್ರಸಿದ್ಧ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರ ನಾರ್ವೆ ಭೇಟಿಯ ವರದಿಗಾರಿಕೆಗಾಗಿ ನಿಯೋಜನೆಗೊಂಡಿದ್ದ ಅಧಿಕೃತ ಮಾಧ್ಯಮ ಬಳಗದಲ್ಲಿ ಇವರೂ ಒಬ್ಬರಾಗಿದ್ದರು.

ವಿವಾದದ ಹಿನ್ನೆಲೆ ಏನು? ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರ್ ಮತ್ತು ಪ್ರಧಾನಿ ಮೋದಿ ಅವರ ಜಂಟಿ ಮಾಧ್ಯಮ ಪ್ರಕಟಣೆಯ ಸಂದರ್ಭದಲ್ಲಿ, ಇಬ್ಬರೂ ನಾಯಕರು ಮಾಧ್ಯಮಗಳ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಮುಂಚಿತವಾಗಿಯೇ ಸ್ಪಷ್ಟಪಡಿಸಲಾಗಿತ್ತು. ಆದಾಗ್ಯೂ, ಸಭೆ ಮುಗಿಸಿ ಹೊರಡುತ್ತಿದ್ದ ಪ್ರಧಾನಿ ಮೋದಿ ಅವರ ಬಳಿ ಹೆಲ್ಲೆ ಲಿಂಗ್ ಪ್ರಶ್ನೆ ಕೇಳಲು ಪ್ರಯತ್ನಿಸಿದರು. ಆದರೆ ಪ್ರಧಾನಿ ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮುಂದೆ ಸಾಗಿದರು.

ಇದಾದ ಬಳಿಕ ಹೆಲ್ಲೆ ಲಿಂಗ್ ಅವರು ಸಾಮಾಜಿಕ ಜಾಲತಾಣವಾದ ‘ಎಕ್ಸ್’ನಲ್ಲಿ ಪೋಸ್ಟ್ ಒಂದನ್ನು ಹಾಕಿ, ಪ್ರಧಾನಿ ಮೋದಿಯವರು ತಮ್ಮ ಪ್ರಶ್ನೆಗೆ ಉತ್ತರಿಸದೆ ನಿರ್ಗಮಿಸಿದರು ಎಂದು ಬರೆದುಕೊಂಡಿದ್ದರು. ಇದೇ ಸಂದರ್ಭದಲ್ಲಿ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವನ್ನು (World Press Freedom Index) ಉಲ್ಲೇಖಿಸಿದ್ದ ಅವರು, ಈ ಪಟ್ಟಿಯಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿದ್ದರೆ, ಭಾರತವು 157ನೇ ಸ್ಥಾನದಲ್ಲಿದೆ ಹಾಗೂ ಪ್ಯಾಲೇಸ್ತೀನ್, ಕ್ಯೂಬಾದಂತಹ ದೇಶಗಳೊಂದಿಗೆ ಪೈಪೋಟಿ ನಡೆಸುತ್ತಿದೆ ಎಂದು ಬರೆದಿದ್ದರು. ತಮ್ಮ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳುವ ವಿದೇಶಿ ನಾಯಕರನ್ನು ಪ್ರಶ್ನಿಸುವುದು ಪತ್ರಕರ್ತೆಯಾಗಿ ತನ್ನ ಕರ್ತವ್ಯ ಎಂದು ಅವರು ಪ್ರತಿಪಾದಿಸಿದ್ದರು. ಈ ಪೋಸ್ಟ್ ಬೆನ್ನಲ್ಲೇ ಭಾರತೀಯ ಟ್ರೋಲರ್‌ಗಳ ದಾಳಿಗೆ ಒಳಗಾದರು.

ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿಯಲ್ಲೂ ಪ್ರಶ್ನೆ: ನಂತರದ ಬೆಳವಣಿಗೆಯಲ್ಲಿ, ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ ಅಧಿಕೃತ ಪತ್ರಿಕಾಗೋಷ್ಠಿಯಲ್ಲಿ ಹೆಲ್ಲೆ ಲಿಂಗ್ ಅವರು ಮತ್ತೊಮ್ಮೆ ಭಾರತದಲ್ಲಿನ ಮಾನವ ಹಕ್ಕುಗಳು, ಪ್ರಜಾಪ್ರಭುತ್ವ ಮತ್ತು ಮಾಧ್ಯಮ ಸ್ವಾತಂತ್ರ್ಯದ ಕುರಿತು ಪ್ರಶ್ನೆಗಳನ್ನು ಕೇಳಿದರು. “ಇಷ್ಟೆಲ್ಲಾ ಆರೋಪಗಳಿರುವಾಗ ಅಂತಾರಾಷ್ಟ್ರೀಯ ಸಮುದಾಯ ಭಾರತವನ್ನು ಏಕೆ ನಂಬಬೇಕು?” ಎಂದು ಅವರು ಪ್ರಶ್ನಿಸಿದ್ದರು.

ಇದಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ರಾಜತಾಂತ್ರಿಕ ಅಧಿಕಾರಿ ಸಿಬಿ ಜಾರ್ಜ್ ಅವರು ತಕ್ಕ ಪ್ರತ್ಯುತ್ತರ ನೀಡಿದ್ದರು. ಭಾರತದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿದಿದ್ದ ಜಾರ್ಜ್, “ಭಾರತದ ವಿಸ್ತಾರದ ಅರಿವಿಲ್ಲದ ಕೆಲವರು, ಅಜ್ಞಾನಿ ಎನ್‌ಜಿಒಗಳು (NGO) ನೀಡುವ ಒಂದೆರಡು ವರದಿಗಳನ್ನು ಓದಿಕೊಂಡು ಬಂದು ಇಂತಹ ಪ್ರಶ್ನೆಗಳನ್ನು ಕೇಳುತ್ತಾರೆ” ಎಂದು ತಿರುಗೇಟು ನೀಡಿದ್ದರು. ಸಿಬಿ ಜಾರ್ಜ್ ಮತ್ತು ಪತ್ರಕರ್ತೆಯ ನಡುವಿನ ಈ ಸಂಭಾಷಣೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ರಾಜತಾಂತ್ರಿಕ ಸಭೆಗಳ ಸಂದರ್ಭದಲ್ಲಿ ನಿರ್ದಿಷ್ಟ ಪ್ರೋಟೋಕಾಲ್ ಇರುತ್ತದೆ ಮತ್ತು ಆ ಸಮಯದಲ್ಲಿ ಇಂತಹ ಮುಕ್ತ ಪ್ರಶ್ನೆಗಳಿಗೆ ಅವಕಾಶ ಇರುವುದಿಲ್ಲ ಎಂದು ಹಲವರು ಹೆಲ್ಲೆ ಲಿಂಗ್ ಅವರ ನಡವಳಿಕೆಯನ್ನು ಟೀಕಿಸಿದ್ದಾರೆ. ಈ ಇಡೀ ವಿವಾದದಿಂದಾಗಿ ತಾವು ಸಾಮಾಜಿಕ ಜಾಲತಾಣಗಳಲ್ಲಿ ‘ವಿದೇಶಿ ಗೂಢಚಾರಿ’ (Foreign Spy) ಎಂಬ ಆರೋಪ ಮತ್ತು ಟೀಕೆಗಳನ್ನು ಎದುರಿಸಬೇಕಾಗಿ ಬಂತು ಎಂದು ಹೆಲ್ಲೆ ಲಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.

You cannot copy content of this page

Exit mobile version