Home ಇನ್ನಷ್ಟು ಕೋರ್ಟು - ಕಾನೂನು ಬೀದಿ ನಾಯಿಗಳ ನಿಯಂತ್ರಣಕ್ಕೆ ಸುಪ್ರೀಂಕೋರ್ಟ್ ಕಠಿಣ ಆದೇಶ; ಸಾರ್ವಜನಿಕ ಸ್ಥಳಗಳಿಂದ ಸ್ಥಳಾಂತರಕ್ಕೆ ಸೂಚನೆ, ಅಪಾಯಕಾರಿ ನಾಯಿಗಳಿಗೆ...

ಬೀದಿ ನಾಯಿಗಳ ನಿಯಂತ್ರಣಕ್ಕೆ ಸುಪ್ರೀಂಕೋರ್ಟ್ ಕಠಿಣ ಆದೇಶ; ಸಾರ್ವಜನಿಕ ಸ್ಥಳಗಳಿಂದ ಸ್ಥಳಾಂತರಕ್ಕೆ ಸೂಚನೆ, ಅಪಾಯಕಾರಿ ನಾಯಿಗಳಿಗೆ ಕರುಣಾ ಮರಣಕ್ಕೆ ಅಸ್ತು

0

ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ಕಡ್ಡಾಯವಾಗಿ ಬೇರೆಡೆಗೆ ಸ್ಥಳಾಂತರಿಸಬೇಕು ಮತ್ತು ತೀವ್ರವಾಗಿ ಜರ್ಜರಿತಗೊಂಡಿರುವ ಅಥವಾ ಅಪಾಯಕಾರಿ ನಾಯಿಗಳಿಗೆ ಅಗತ್ಯವಿದ್ದರೆ ಕರುಣಾ ಮరణ ನೀಡಬಹುದು ಎಂದು ಸುಪ್ರೀಂಕೋರ್ಟ್ ಅತ್ಯಂತ ಮಹತ್ವದ ಆದೇಶ ನೀಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ತಾನು ನೀಡಿದ್ದ ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡಲು ಅತ್ಯುನ್ನತ ನ್ಯಾಯಾಲಯವು ಸ್ಪಷ್ಟವಾಗಿ ನಿರಾಕರಿಸಿದೆ.

ನವೆಂಬರ್ 2025 ರಲ್ಲಿ ಈ ವಿಷಯದ ಕುರಿತು ತಾನು ಪ್ರಕಟಿಸಿದ್ದ ತೀರ್ಪಿನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಖಡಾಖಡಿಯಾಗಿ ಹೇಳಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಕುರಿತು ಸಲ್ಲಿಕೆಯಾಗಿದ್ದ ಸರಣಿ ಅರ್ಜಿಗಳ ವಿಚಾರಣೆ ನಡೆಸಿ ಈ ಪ್ರಮುಖ ನಿರ್ಧಾರ ಕೈಗೊಂಡಿದೆ.

ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಹೊರಡಿಸಲಾಗಿದ್ದ ನಿಯಮಗಳನ್ನು ಸಡಿಲಗೊಳಿಸಬೇಕು ಎಂಬ ಮನವಿಗಳನ್ನು ಕೋರ್ಟ್ ಸಂಪೂರ್ಣವಾಗಿ ತಳ್ಳಿಹಾಕಿದೆ. ಅಲ್ಲದೆ, ಈ ಮಾರ್ಗಸೂಚಿಗಳನ್ನು ಸರಿಯಾಗಿ ಅನುಷ್ಠಾನಗೊಳಿಸದ ರಾಜ್ಯ ಸರ್ಕಾರಗಳ ವಿರುದ್ಧ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸುಪ್ರೀಂಕೋರ್ಟ್‌ನ ಮಾರ್ಗಸೂಚಿಗಳ ಪ್ರಕಾರ, ಅನಿಮಲ್ ವೆಲ್ಫೇರ್ ಬೋರ್ಡ್ ಸೂಚಿಸಿರುವ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆಸ್ಪತ್ರೆಗಳು, ಶಾಲೆಗಳು, ಕಾಲೇಜುಗಳು, ಬಸ್ ನಿಲ್ದಾಣಗಳು ಮತ್ತು ರೈಲ್ವೇ ನಿಲ್ದಾಣಗಳಂತಹ ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಜನನಿಬಿಡ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಕಡ್ಡಾಯವಾಗಿ ಬೇರೆಡೆಗೆ ಸ್ಥಳಾಂತರಿಸಬೇಕು ಮತ್ತು ಈ ಆವರಣಗಳ ಸುತ್ತಮುತ್ತ ಬೀದಿ ನಾಯಿಗಳು ಇರದಂತೆ ನೋಡಿಕೊಳ್ಳಬೇಕು.

ಅತ್ಯಂತ ಅಪಾಯಕಾರಿಯಾದ, ಜರ್ಜರಿತಗೊಂಡಿರುವ ಅಥವಾ ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವ ನಾಯಿಗಳನ್ನು ಕೊಲ್ಲಲು ಕೋರ್ಟ್ ಸಮ್ಮತಿಸಿದ್ದು, ಅಗತ್ಯವಿದ್ದರೆ ಅಂತಹ ನಾಯಿಗಳಿಗೆ ಕರುಣಾ ಮರಣ ನೀಡಬಹುದು ಎಂದು ಸೂಚಿಸಿದೆ. ಇದರೊಂದಿಗೆ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ (ಸ್ಟೆರಿಲೈಸೇಶನ್) ಹಾಗೂ ಕಡ್ಡಾಯ ಲಸಿಕಾಕರಣದ ಮೂಲಕ ಅವುಗಳ ಸಂಖ್ಯೆಯನ್ನು ನಿಯಂತ್ರಿಸಬೇಕು. ಪ್ರತಿ ನಗರದಲ್ಲೂ ಇದಕ್ಕಾಗಿ ಪ್ರತ್ಯೇಕ ಕೇಂದ್ರಗಳು ಮತ್ತು ನಾಯಿಗಳ ಆಶ್ರಯ ತಾಣಗಳನ್ನು (ಶೆಲ್ಟರ್) ಸರ್ಕಾರಗಳು ಸ್ಥಾಪಿಸಬೇಕು.

ರೋಗನಿರೋಧಕ ಲಸಿಕೆಗಳನ್ನು ಯಾವಾಗಲೂ ಲಭ್ಯವಿಟ್ಟುಕೊಳ್ಳಬೇಕು ಹಾಗೂ ಬೀದಿ ನಾಯಿಗಳ ಆರೈಕೆ ಮಾಡುವ ಸಿಬ್ಬಂದಿಗೆ ಸೂಟ್ಟು ತರಬೇತಿ ನೀಡಬೇಕು. ಬೀದಿ ನಾಯಿಗಳ ಜೊತೆಗೆ ರಸ್ತೆಗಳಲ್ಲಿ ಅಲೆಯುವ ಇತರ ಜಾನುವಾರುಗಳಿಗಾಗಿ ‘ಗೋಶಾಲೆ’ಗಳನ್ನು ನಿರ್ಮಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಒಂದು ವೇಳೆ ಈ ಮಾರ್ಗಸೂಚಿಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರಗಳು ವಿಫಲವಾದರೆ ಅವುಗಳ ವಿರುದ್ಧ ಕಾನೂನಾತ್ಮಕವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಬೀದಿ ನಾಯಿಗಳು ಸಾರ್ವಜನಿಕ ರಸ್ತೆಗಳಲ್ಲಿ ಮಕ್ಕಳು ಮತ್ತು ವೃದ್ಧರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವುದನ್ನು ಮೂಕಪ್ರೇಕ್ಷಕರಾಗಿ ನೋಡುತ್ತಾ ಕೂರಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ತೀವ್ರ ಕಳವಳ ವ್ಯಕ್ತಪಡಿಸಿದೆ.

You cannot copy content of this page

Exit mobile version