Home ಅಂಕಣ ಯಾರು ಹೇಳಿದ್ದು ಹಿಂದಿ ಹೇರಿಕೆ ಇಲ್ಲ ಎಂದು..!

ಯಾರು ಹೇಳಿದ್ದು ಹಿಂದಿ ಹೇರಿಕೆ ಇಲ್ಲ ಎಂದು..!

0

ಹಿಂದಿ ಭಾಷೆ ಅದರ ಪಾಡಿಗದು ಇದ್ದರೂ ನಮ್ಮ ತಕರಾರಿಲ್ಲ.. ಅದು ಬರು ಬರುತ್ತಲೇ ನಮ್ಮ ಮಾತೃಭಾಷೆಯನ್ನು ತಿಂದು ಬರುತ್ತಿದೆ. ಅದರ ಬಗ್ಗೆ ನಾವು ಆಕ್ಷೇಪಿಸಲೇಬೇಕಿದೆ. ತಾಯ್ನುಡಿ ಬಗ್ಗೆ ಕಿಂಚಿತ್ ಪ್ರೀತಿ ಇದ್ದರೂ ಇಂತಹ ಹೇರಿಕೆ ವಿರುದ್ಧ ದನಿ ಎತ್ತಲು ಒಂದಾಗೋಣ

ಒಕ್ಕೂಟ ಸರ್ಕಾರ ಸಾರ್ವಜನಿಕವಾಗಿ ಪ್ರತೀ ಹಂತದಲ್ಲೂ ಹಿಂದಿ ಭಾಷೆಯನ್ನು ಈ ಹಿಂದಿನಿಂದಲೂ ಹೇರಿಕೆ ಮಾಡುತ್ತಲೇ ಬಂದಿದೆ. ಇದಕ್ಕೆ ಬಿಜೆಪಿ ಸರ್ಕಾರ ಅಥವಾ ಕಾಂಗ್ರೆಸ್ ಸರ್ಕಾರ ಎಂಬ ವಿಶೇಷವಾದ ಒತ್ತು ಇಳಿ ಧೀರ್ಘಗಳ ಅವಶ್ಯಕತೆಯಿಲ್ಲ. ಈ ಹಿಂದೆ 1968 ರಲ್ಲಿ ಹಿಂದಿ ಹೇರಿಕೆ ವಿರುದ್ಧ ಹೋರಾಟಕ್ಕಿಳಿದಾಗ ವಿಧ್ಯಾರ್ಥಿಗಳು ಗುಂಡೇಟಿಗೆ ಬಲಿಯಾಗಿದ್ದುದು ದಾಖಲೆಯಲ್ಲಿದೆ. 2008 ರಿಂದ ಶುರುವಾಗಿರುವ #StopHindiImposition ಅಭಿಯಾನದ ಸಂದರ್ಭದಲ್ಲಿ ಯಾವ ಬಿಜೆಪಿ ಸರ್ಕಾರವೂ ಇರಲಿಲ್ಲ ಎಂಬುದನ್ನೂ ಇಲ್ಲಿ ಮತ್ತೊಮ್ಮೆ ನೆನಪಿಸಬೇಕು. ಹಾಗಾಗಿ ಕನ್ನಡ ಪರ ಹೋರಾಟಗಾರರು ಕನ್ನಡಕ್ಕಾಗಿ, ಹಿಂದಿ ಹೇರಿಕೆಯ ವಿರುದ್ಧವಾಗಿ ಬೀದಿಗಿಳಿದಾಗ ಯಾವುದೋ ಪಕ್ಷದ ಪರ ಎಂಬ ಹಣೆಪಟ್ಟಿ ಕಟ್ಟುವ ಅವಶ್ಯಕತೆಯಿಲ್ಲ. ಇಂತಹ ವಾದಗಳು ಬಂದರೂ ಅದು ಮಾತೃಭಾಷಾ ಪರವಾದ ಹೋರಾಟವನ್ನು ದಾರಿ ತಪ್ಪಿಸುವ ನೀಚ ಮತ್ತು ಕುತಂತ್ರದ ರಾಜಕಾರಣ ಎಂದೇ ವ್ಯಾಖ್ಯಾನಿಸಬಹುದು. ಇದಕ್ಕೆ ಉಂಡ ತಟ್ಟೆಗೆ ಉಚ್ಚೆ ಹುಯ್ಯೋ ಪ್ರವೃತ್ತಿ ಅಥವಾ ತಾಯ್ಗಂಡತನ ಅಂತಲೇ ಕರೆಯೋದು.

ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರುವುದಕ್ಕೂ ಮುನ್ನ ಮತ್ತು ಬಿಜೆಪಿ ಸರ್ಕಾರ ಬಂದ ನಂತರದ ಹಿಂದಿ ಹೇರಿಕೆಗೆ ಅಜಗಜಾಂತರ ವ್ಯತ್ಯಾಸವಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪ್ರತಿಯೊಂದು ಸಾರ್ವಜನಿಕ ವಲಯಗಳಲ್ಲೂ ಹಿಂದಿಯನ್ನು ಕಡ್ಡಾಯ ಎಂಬಷ್ಟರ ಮಟ್ಟಿಗೆ ಹೇರಿಕೆ ಮಾಡಲಾಗುತ್ತಿದೆ. ಅನಿವಾರ್ಯ ಸಂದರ್ಭಗಳಲ್ಲಿ ಬಳಸಲೇಬೇಕಾದ ಬ್ಯಾಂಕ್, ಸಾರಿಗೆ, ಆಸ್ಪತ್ರೆ, ಟೆಲಿಕಾಂ ಸಂಸ್ಥೆಗಳು, ಕಿಲೋಮೀಟರ್ ಬೋರ್ಡ್, ನಾಮಫಲಕ, ಸರ್ಕಾರಿ ಸುತ್ತೋಲೆ, ಅಪ್ಲಿಕೇಶನ್ ಫಾರಂಗಳು ಕೊನೆ ಕೊನೆಗೆ ಕೆಲವು ಕಡೆ ಸಾರ್ವಜನಿಕ ಶೌಚಾಲಯಗಳೂ ಈಗ ಹಿಂದಿಮಯವಾಗಿವೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಂತೂ ಅತ್ಯಂತ ಅಸಹ್ಯ ಎನ್ನಿಸುವಷ್ಟರ ಮಟ್ಟಿಗೆ ಹಿಂದಿ ಭಾಷೆಯನ್ನು ಹೇರಿಕೆ ಮಾಡಲಾಗಿದೆ.

ಸರ್ಕಾರ ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದಿರಬೇಕು ಎಂಬ ನಿಯಮವನ್ನೇನೋ ಜಾರಿಗೆ ತರುತ್ತಿದೆ. ಆದರೆ ಆ ಬ್ಯಾಂಕ್ ಗಳು ಎಷ್ಟರ ಮಟ್ಟಿಗೆ ಸ್ಥಳೀಯ ಜನರ ಪರವಾಗಿ ನಿಲ್ಲುವ ಕೆಲಸಗಳನ್ನು ಮಾಡುತ್ತಿದೆ ಎಂಬುದೂ ಇಲ್ಲಿ ಯೋಚಿಸಬೇಕಾದ ವಿಚಾರ. ಈ ಕೆಳಗೆ ಕೊಟ್ಟಿರುವ “ಕೆನರಾ ಬ್ಯಾಂಕ್” ಗೆ ಸಂಬಂಧಿಸಿದ Account opening form ನ್ನು ಗಮನಿಸಿ. ಮೊದಲ ಪೇಜ್ ನಲ್ಲೇ ಹಳ್ಳಿಯ ಯಾರೊಬ್ಬರಿಗೂ ಅರ್ಥವಾಗದ ರೀತಿಯಲ್ಲಿ ಹಿಂದಿ ಭಾಷೆಯಿಂದ ತುಂಬಿಕೊಂಡಿದೆ.

ಇತ್ತೀಚೆಗೆ ಬೇರಾವುದೋ ಕೆಲಸದ ಕಾರಣಕ್ಕೆ ಹತ್ತಿರದ ಕೆನರಾ ಬ್ಯಾಂಕ್ ಶಾಖೆಗೆ ಹೋಗಿದ್ದಾಗ ವಿಶೇಷವಾಗಿ ಗಮನಿಸಿದ ಒಂದು ಪ್ರಸಂಗ ಇಲ್ಲಿ ಪ್ರಸ್ತಾಪಿಸುತ್ತೇನೆ. ಇಬ್ಬರು ಇಳಿ ವಯಸ್ಸಿನ ಅಜ್ಜ ಅಜ್ಜಿ ಇನ್ನೊಬ್ಬ ಅಷ್ಟಾಗಿ ತಿಳುವಳಿಕೆ ಇಲ್ಲದ 25 ವರ್ಷ ಆಸುಪಾಸಿನ ಒಬ್ಬ ಅಪ್ಪಟ ಹಳ್ಳಿ ಹುಡುಗ. ಈ ಮೂವರೂ ಈ ಕೆಳಗೆ ಕೊಟ್ಟ ಅಕೌಂಟ್ ಓಪನಿಂಗ್ ಫಾರಂ ಹಿಡಿದುಕೊಂಡು ದಿಕ್ಕು ತೋಚದಂತೆ ಅವರಿವರ ಬಳಿ ಮಾಹಿತಿಗಾಗಿ ತಡಕಾಡುತ್ತಾ ಇದ್ದರು. ಕೇಳಿದರೆ ಮೊದಲ ಪುಟ ತೋರಿಸಿ ಇದು ಯಾವ ಭಾಷೆ ಅಂತಲೇ ಗೊತ್ತಿಲ್ಲ.. ಇದನ್ನ ಹೇಗೆ ತುಂಬೋದು ಅಂತ ತಮ್ಮ ಸಂಕಟ ಹೇಳಿಕೊಂಡರು. ಎರಡನೇ ಪುಟದಲ್ಲಿರುವ ಇಂಗ್ಲಿಷ್ ಫಾರಂ ತೋರಿಸಿದೆ.. ಅಲ್ಲೂ ಸಹ ಅವರದು ಅದೇ ಅಸಹಾಯಕತೆ. ತಮ್ಮ ಸ್ವಂತ ಊರಲ್ಲೇ ಇರುವ ಬ್ಯಾಂಕ್ ನ ಒಳಗೆ ಇವರು ಮತ್ತು ಇಂತವರು ಪರಕೀಯರಂತೆ ಇರಬೇಕಾದ ಕೆಟ್ಟ ವ್ಯವಸ್ಥೆ ಬ್ಯಾಂಕ್ ಗಳ ಒಳಗೆ ನಿರ್ಮಾಣವಾಗಿದೆ. ಇತ್ತ ಅಕ್ಷರಸ್ಥರಾದರೂ ಹಿಂದಿ ಬಾರದ ಕಾರಣಕ್ಕೆ ಅನಕ್ಷರಸ್ಥರಾಗಬೇಕಾಗಿದೆ.

ನನ್ನ ಪ್ರಕಾರ ಆ ಬ್ಯಾಂಕ್ ನ ಬ್ರಾಂಚ್ ಗೆ ಬರುವ 99.90% ಮಂದಿ ಹಿಂದಿ ಜನರಲ್ಲ. ಕೇವಲ ಆ ಬ್ರಾಂಚ್ ಅಲ್ಲ, ಕರ್ನಾಟಕದ ಬಹುತೇಕ ಭಾಗದಲ್ಲಿನ ಬ್ಯಾಂಕ್ ವ್ಯವಹಾರಸ್ತರದೂ ಇದೇ ಕಥೆ. ಸ್ಥಳೀಯವಲ್ಲದ, ಇತ್ತ ರಾಷ್ಟ್ರಭಾಷೆಯೂ ಅಲ್ಲದ ಭಾಷೆಯನ್ನು ಸರ್ಕಾರ ಮತ್ತದರ ಸುತ್ತಲಿನ ವ್ಯವಸ್ಥೆ ಯಾಕೆ ಇಷ್ಟು ಒತ್ತಾಯಪೂರ್ವಕವಾಗಿ ಹೇರಿಕೆ ಮಾಡುತ್ತಿದೆ ಎಂಬುದು ನಿಜಕ್ಕೂ ಆಶ್ಚರ್ಯಕರ ವಿಚಾರವಾಗಿದೆ.

ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ತವರು ಕರ್ನಾಟಕದ ದಕ್ಷಿಣ ಕನ್ನಡ. ಆದರೆ ಇವತ್ತಿನ ರಾಜಕೀಯ ಪ್ರಭಾವ, ಅಂಧಭಕ್ತಿಯ ಕಾರಣ ದಕ್ಷಿಣ ಕನ್ನಡ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ಸಂಪೂರ್ಣ ಹಿಡಿತ ಕಳೆದುಕೊಳ್ಳುತ್ತಿದೆ. ಪ್ರತಿಯೊಂದು ಬ್ಯಾಂಕ್ ಗಳನ್ನೂ ಉತ್ತರದ ನಷ್ಟದಲ್ಲಿರುವ ಬ್ಯಾಂಕ್ ಗಳ ಜೊತೆಗೆ ವಿಲೀನ ಮಾಡಲಾಗುತ್ತಿದೆ. ಈ ಹಿಂದೆ ನಮ್ಮ ಹಳ್ಳಿ ಕಡೆ ಬ್ಯಾಂಕ್ ಉದ್ಯೋಗಿ ಎಂದರೆ ದಕ್ಷಿಣ ಕನ್ನಡ ಮೂಲದವರೇ ಜಾಸ್ತಿ ಇರುತ್ತಿದ್ದರು. ತುಳು ಭಾಷಿಕರಾದರೂ ಕನ್ನಡಿಗರಿಗೆ ಅವರ್ಯಾರೂ ಹೊರಗಿನವರು ಎಂಬ ಭಾವ ಯಾವತ್ತೂ ಮೂಡಿರಲಿಲ್ಲ. ಆದರೆ ಯಾವಾಗಿಂದ ಈ ವಿಲೀನ ಪ್ರಕ್ರಿಯೆ ಶುರುವಾಯಿತೋ ಆಗಿಂದ ಸಂಪೂರ್ಣ ಅಲ್ಲಿಯ ಉದ್ಯೋಗಿಗಳದ್ದೂ ಸಂಪೂರ್ಣ ಹಿಂದಿಮಯವಾಗಿವೆ. ಭಾಷೆ ಬಾರದ ಎಷ್ಟೋ ಸ್ಥಳೀಯರು ಅಲ್ಲಿನ ಉದ್ಯೋಗಿಗಳ ಜೊತೆ ವ್ಯವಹರಿಸಲಾಗದೇ ವಾಪಸ್ ಹಿಂದಿರುಗಿದ್ದಿದೆ. ಇಷ್ಟು ರಾಜಾರೋಷವಾಗಿ ಹಿಂದಿ ಭಾಷೆಯನ್ನು ಹೇರಿಕೆ ಮಾಡುತ್ತಿದ್ದರೂ ರಾಜಕೀಯವಾಗಿ ಇದನ್ನು ಹೇರಿಕೆಯೇ ಅಲ್ಲ ಎಂಬಂತೆ ಬಿಂಬಿಸಲಾಗುತ್ತಿದೆ. ಅಥವಾ ಆ ಒಂದು ಹೊರೆಯನ್ನು ಸಹಜ ಎಂಬಂತೆ ಜನ ಸ್ವೀಕರಿಸುತ್ತಿದ್ದಾರೆ.

ಬಹುಭಾಷೆಗಳನ್ನು ಹೊಂದಿರುವ ಭಾರತದಲ್ಲಿ ಯಾವುದೂ ಸಹ ರಾಷ್ಟ್ರಭಾಷೆಯಲ್ಲ. ಸಂವಿಧಾನದಲ್ಲಿ ಮಾನ್ಯತೆ ಸಿಕ್ಕ ದೇಶದ 22 ಅಧಿಕೃತ ಆಡಳಿತ ಭಾಷೆಗಳಲ್ಲಿ ಹಿಂದಿ ಭಾಷೆಗೆ ಇರುವಷ್ಟೇ ಸ್ಥಾನಮಾನ ಕನ್ನಡಕ್ಕೂ ಇದೆ. Article 343 ಹಾಗೂ 345 ರ ಅನ್ವಯ ದೇಶದ 22 ಭಾಷೆಗೂ ಸಮಾನ ಸ್ಥಾನಮಾನವಿದೆ. ಇಂತಹ ಸಂದರ್ಭದಲ್ಲಿ “ಹಿಂದಿ ದಿವಸ್” ನಂತಹ ಅವಿವೇಕದ ಆಚರಣೆ ಮುಂದಿನ ದಿನಗಳಲ್ಲಿ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ, ಏಕೈಕ ಅಧಿಕೃತ ಭಾಷೆಯಂತೆ ಘೋಷಿಸುವ ಮೊದಲ ಮೆಟ್ಟಿಲಾಗುತ್ತದೆ. ಅಂದರೆ ಸ್ಥಳೀಯವಲ್ಲದ ಭಾಷೆಯನ್ನು ಒತ್ತಾಪೂರ್ವಕವಾಗಿ ಕಲಿಸುವ ಪ್ರಯತ್ನ ನಡೆಯಲಿದೆ. ಆ ಮೂಲಕ ಹಿಂದಿ ಬಾರದವರನ್ನು ಸದಾ ದುರ್ಬಲರನ್ನಾಗಿ, ಅಸಹಾಯಕರನ್ನಾಗಿ ಮುಂದುವರೆಯುವಂತೆ ಮಾಡುವ ವ್ಯವಸ್ಥೆಗೆ ಹಿಂದಿ ದಿವಸ್ ಕಾರಣವಾಗಲಿದೆ.

ಹಿಂದಿ ಭಾಷೆ ಅದರ ಪಾಡಿಗದು ಇದ್ದರೂ ನಮ್ಮ ತಕರಾರಿಲ್ಲ.. ಅದು ಬರು ಬರುತ್ತಲೇ ನಮ್ಮ ಮಾತೃಭಾಷೆಯನ್ನು ತಿಂದು ಬರುತ್ತಿದೆ. ಅದರ ಬಗ್ಗೆ ನಾವು ಆಕ್ಷೇಪಿಸಲೇಬೇಕಿದೆ. ಸರ್ಕಾರ ಯಾವುದೇ ಬಂದರೂ ನಾವು ಇಂತಹ ಒತ್ತಾಯಪೂರ್ವಕ ಭಾಷಾ ಹೇರಿಕೆಯ ಬಗ್ಗೆ ಸ್ವಲ್ಪವಾದರೂ ಅರಿವಿಗೆ ಬಂದು ಯೋಚಿಸಬೇಕು. ಹಾಗೆಯೇ ತಾಯ್ನುಡಿ ಬಗ್ಗೆ ಕಿಂಚಿತ್ ಅಭಿಮಾನ, ಪ್ರೀತಿ ಇದ್ದರೂ ಇಂತಹ ಹೇರಿಕೆ ವಿರುದ್ಧ ದನಿ ಎತ್ತಲು ಒಂದಾಗೋಣ. ಸಧ್ಯ ನಿಮ್ಮ ಫೇಸ್ಬುಕ್, ಟ್ವಿಟ್ಟರ್, ಇನಸ್ಟಾಗ್ರಾಂ, ವಾಟ್ಸಾಪ್, ಕ್ಲಬ್ ಹೌಸ್ ಯಾವುದೇ ಜಾಲತಾಣಗಳಲ್ಲಿ ಈ ಬಗ್ಗೆ ಹೆಚ್ಚು ಚರ್ಚೆ ನಡೆಸುತ್ತಾ ಹಿಂದಿ ಹೇರಿಕೆಯನ್ನು ವಿರೋಧಿಸೋಣ.

ಹಿಂದಿಹೇರಿಕೆನಿಲ್ಲಿಸಿ #StopHindiImposition

You cannot copy content of this page

Exit mobile version