FIR ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಶಾಸಕ ಮುನಿರತ್ನ ಅವರನ್ನು ಕೋಲಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರ ಮುಳಬಾಗಿಲು ಮಾರ್ಗಮಧ್ಯದಲ್ಲೇ ಮುನಿರತ್ನ ಕಾರನ್ನು ಅಡ್ಡಗಟ್ಟಿದ ಕೋಲಾರ ಪೊಲೀಸರು ಅವರನ್ನ ಅಲ್ಲೇ ವಶಕ್ಕೆ ಪಡೆದಿದ್ದಾರೆ. ಮಾಹಿತಿಯ ಪ್ರಕಾರ ಆಂದ್ರಪ್ರದೇಶಕ್ಕೆ ಕೆಲವು ದಿನಗಳ ಕಾಲ ತಲೆಮರೆಸಿಕೊಳ್ಳಲು ಹೊರಟಿದ್ದರು ಎನ್ನಲಾಗಿದೆ.
ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿರುವುದಾಗಿ ಆರೋಪಿಸಿರುವ ಚೆಲುವರಾಜು, ಶಾಸಕ ಮುನಿರತ್ನ ವಿರುದ್ಧ ಕಾನೂನು ಕ್ರಮ ಕೈಗೊಂಡು ರಕ್ಷಣೆ ನೀಡಬೇಕೆಂದು ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನಿರತ್ನ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ.
ಎಫ್‌ಐಆರ್ ದಾಖಲಾಗುತ್ತಿದ್ದಂತೆ ಯಾರ ಸಂಪರ್ಕಕ್ಕೂ ಸಿಗದೇ ಮುನಿರತ್ನ ಕಾಣೆಯಾಗಿದ್ದರು. ಆಂದ್ರ ಕಡೆಗೆ ತೆರಳುವಾಗ ಮಾರ್ಗಮಧ್ಯದಲ್ಲೇ ಅಡ್ಡಗಟ್ಟಿದ ಕೋಲಾರ ಪೊಲೀಸರು ಮುನಿರತ್ನ ಅವರನ್ನು ಬೆಂಗಳೂರಿಗೆ ಕರೆತರಲಿದ್ದಾರೆ. ಬೆಂಗಳೂರು ಪೊಲೀಸರಿಗೆ ಹಸ್ತಾಂತರಿಸಲು ಮುಂದಾಗಿದ್ದಾರೆ.
ಇತ್ತ ಪೊಲೀಸರ ವಶಕ್ಕೆ ಸಿಗುವ ಮುನ್ನ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮಾತನಾಡಿದ ಮುನಿರತ್ನ ಇದೊಂದು ಷಡ್ಯಂತ್ರ. ಡಿಕೆ ಸುರೇಶ್ ಮತ್ತು ಕಾಂಗ್ರೆಸ್ ನವರು ನನ್ನ ಮೇಲೆ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ ಎಂದು ಹೇಳಿದ್ದಾರೆ.