Home ಬೆಂಗಳೂರು 19 ಬಿಜೆಪಿ ಸಂಸದರು ಇಂಡಿಯಾ ಗೇಟ್ ಕಾಯೋಕೆ ಇರೋದಾ? ಕೇಂದ್ರದ ತಾರತಮ್ಯಕ್ಕೆ ಪ್ರದೀಪ್ ಈಶ್ವರ್ ಆಕ್ರೋಶ

19 ಬಿಜೆಪಿ ಸಂಸದರು ಇಂಡಿಯಾ ಗೇಟ್ ಕಾಯೋಕೆ ಇರೋದಾ? ಕೇಂದ್ರದ ತಾರತಮ್ಯಕ್ಕೆ ಪ್ರದೀಪ್ ಈಶ್ವರ್ ಆಕ್ರೋಶ

0

ಬೆಂಗಳೂರು: ರಾಜ್ಯದಲ್ಲಿ ಉಂಟಾದ ಪ್ರವಾಹ ಹಾನಿಗೆ ಕೇಂದ್ರ ಸರ್ಕಾರ ನೀಡಿರುವ ಪರಿಹಾರದಲ್ಲಿ ತಾರತಮ್ಯ ಎಸಗಿದೆ ಎಂದು ಆರೋಪಿಸಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ , ರಾಜ್ಯದ ಬಿಜೆಪಿ ಸಂಸದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಕರ್ನಾಟಕದಿಂದ ಆಯ್ಕೆಯಾದ 19 ಬಿಜೆಪಿ ಸಂಸದರು ದೆಹಲಿಯಲ್ಲಿ ಇಂಡಿಯಾ ಗೇಟ್ ಕಾಯಲು ಇದ್ದಾರೆಯೇ?’ ಎಂದು ಖಾರವಾಗಿ ಪ್ರಶ್ನಿಸುವ ಮೂಲಕ ಕೇಂದ್ರದ ನಿರ್ಲಕ್ಷ್ಯದ ವಿರುದ್ಧ ತಮ್ಮ ರೊಚ್ಚು ಹೊರಹಾಕಿದ್ದಾರೆ.

ಪರಿಹಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ

ನೈರುತ್ಯ ಮುಂಗಾರಿನಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಸಾವಿರಾರು ಕೋಟಿ ರೂಪಾಯಿ ನಷ್ಟ ಸಂಭವಿಸಿದ್ದು, ರಾಜ್ಯ ಸರ್ಕಾರವು ಕೇಂದ್ರದ SDRF (ರಾಜ್ಯ ವಿಪತ್ತು ನಿರ್ವಹಣಾ ನಿಧಿ) ನಿಂದ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿತ್ತು.

ಆದರೆ, ಕೇಂದ್ರ ಸರ್ಕಾರವು ಮಹಾರಾಷ್ಟ್ರಕ್ಕೆ ₹1,556 ಕೋಟಿ ಪರಿಹಾರ ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ ಕೇವಲ ₹384 ಕೋಟಿ ರೂಪಾಯಿಗಳನ್ನು ನೀಡಿದೆ. ಈ ಅಲ್ಪ ಮೊತ್ತವನ್ನೇ ದೊಡ್ಡ ಸಾಧನೆ ಎಂಬಂತೆ ಬಿಜೆಪಿ ನಾಯಕ ಆರ್. ಅಶೋಕ ಅವರು ಟ್ವೀಟ್ ಮಾಡಿರುವುದಕ್ಕೆ ಪ್ರದೀಪ್ ಈಶ್ವರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ಇದು ರಾಜ್ಯಕ್ಕೆ ಮಾಡಿದ ಅವಮಾನ. ಬಿಜೆಪಿ ಸರ್ಕಾರಕ್ಕೆ ರಾಜ್ಯದ ಜನರ ಮೇಲೆ ಎಷ್ಟು ಪ್ರೀತಿ ಇದೆ ಎಂಬುದು ಇದರಿಂದಲೇ ತಿಳಿಯುತ್ತದೆ,’ ಎಂದು ಅವರು ಹೇಳಿದರು.

19 ಸಂಸದರ ಕೆಲಸವೇನು? ಇಂಡಿಯಾ ಗೇಟ್ ಕಾಯುವುದೇ?

ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಪ್ರದೀಪ್ ಈಶ್ವರ್, ‘ನಾವು ರಾಜ್ಯದ ಪರವಾಗಿ ಪರಿಹಾರ ಕೇಳಿದರೆ, ಆರ್. ಅಶೋಕ್ ಅವರು ಕಾಂಗ್ರೆಸ್ ಸಂಸದರನ್ನು ಕೇಳಿ ಎನ್ನುತ್ತಾರೆ. ಹಾಗಾದರೆ, ಎನ್‌ಡಿಎಯಿಂದ ಗೆದ್ದಿರುವ 19 ಸಂಸದರು ದೆಹಲಿಯ ಇಂಡಿಯಾ ಗೇಟ್ ಕಾಯಲು ಇದ್ದಾರೆಯೇ? ರಾಜ್ಯದ ಜನತೆ ಸಂಕಷ್ಟದಲ್ಲಿರುವಾಗ ಕೇಂದ್ರದ ಮುಂದೆ ಧ್ವನಿ ಎತ್ತಿ ನ್ಯಾಯ ಕೇಳುವುದು ಅವರ ಜವಾಬ್ದಾರಿಯಲ್ಲವೇ? ನಾವು ಕಾಂಗ್ರೆಸ್ ಪಕ್ಷಕ್ಕಾಗಿ ಪರಿಹಾರ ಕೇಳುತ್ತಿಲ್ಲ, ಕರ್ನಾಟಕದ ಜನರಿಗಾಗಿ ಕೇಳುತ್ತಿದ್ದೇವೆ,’ ಎಂದು ಗುಡುಗಿದರು.

ಉತ್ತರ ಕರ್ನಾಟಕಕ್ಕೆ ಬಿಜೆಪಿ ಮೋಸ ಮಾಡುತ್ತಿದೆ

‘ಉತ್ತರ ಕರ್ನಾಟಕದ ಜನರಿಗೆ ಬಿಜೆಪಿ ಸತತವಾಗಿ ಮೋಸ ಮಾಡುತ್ತಿದೆ. ಅಲ್ಲಿನ ಜನರ ಮತ ಪಡೆದು ಗೆದ್ದ ನಾಯಕರು ಈಗ ಎಲ್ಲಿ ಅಡಗಿದ್ದಾರೆ?’ ಎಂದು ಪ್ರಶ್ನಿಸಿದ ಅವರು, ‘ಉತ್ತರ ಕರ್ನಾಟಕದಲ್ಲಿ ಫೈರ್ ಬ್ರ್ಯಾಂಡ್‌ಗಳೆಂದು ಹೇಳಿಕೊಳ್ಳುವ ಇಲಿಗಳು, ಈಗ ರಾಜ್ಯಕ್ಕೆ ಅನ್ಯಾಯವಾದಾಗ ಕೇಂದ್ರವನ್ನು ಏಕೆ ಪ್ರಶ್ನಿಸುತ್ತಿಲ್ಲ? ಅವರಿಗೆ ರಾಜ್ಯದ ಪರವಾಗಿ ಮಾತನಾಡುವ ಯೋಗ್ಯತೆ ಇಲ್ಲವೇ? ಆರ್. ಅಶೋಕ್ ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ, ಕೇಂದ್ರ ಸರ್ಕಾರವನ್ನು ಕೇಳಿ ರಾಜ್ಯಕ್ಕೆ ನ್ಯಾಯಯುತ ಪರಿಹಾರ ತರಲಿ,’ ಎಂದು ಸವಾಲು ಹಾಕಿದರು.

ಜೆಡಿಎಸ್ ಮತ್ತು ಆರೆಸ್ಸೆಸ್ ವಿರುದ್ಧವೂ ವಾಗ್ದಾಳಿ

ಇದೇ ಸಂದರ್ಭದಲ್ಲಿ, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಪ್ರದೀಪ್ ಈಶ್ವರ್, ಜೆಡಿಎಸ್ ಮತ್ತು ಆರೆಸ್ಸೆಸ್ ವಿರುದ್ಧವೂ ಹರಿಹಾಯ್ದರು.

ಕುಮಾರಸ್ವಾಮಿಯವರ ನಿಲುವೇನು?: ‘ಹಿಂದೆ ಆರೆಸ್ಸೆಸ್ ಅನ್ನು ಬೈದು ಸಂಪಾದಕೀಯ ಬರೆದಿದ್ದ ಎಚ್.ಡಿ. ಕುಮಾರಸ್ವಾಮಿ ಅವರ ಈಗಿನ ನಿಲುವೇನು? ಜೆಡಿಎಸ್‌ನಲ್ಲಿರುವ ‘S’ ಅಕ್ಷರದ ಅರ್ಥ ‘ಜಾತ್ಯಾತೀತ’ವೋ ಅಥವಾ ‘ಕೇಸರಿ’ಯೋ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಹೋಗುವುದೇ ಅವರ ಸಿದ್ಧಾಂತವೇ?’ ಎಂದು ಲೇವಡಿ ಮಾಡಿದರು.

ಆರೆಸ್ಸೆಸ್ ಪಥಸಂಚಲನಕ್ಕೆ ಯಾಕಿಷ್ಟು ಅವಸರ?: ‘ಆರೆಸ್ಸೆಸ್‌ಗೆ ಪಥಸಂಚಲನ ನಡೆಸಲು ಇಷ್ಟೊಂದು ಅವಸರ ಏನಿತ್ತು? ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಣ ಇಲಾಖೆಯು ಶಾಲಾ ಆವರಣದಲ್ಲಿ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿತ್ತು. ಬಹುಶಃ ಅವರು ಅಚಾನಕ್ಕಾಗಿ ಸಿಎಂ ಆಗಿದ್ದರಿಂದ ಈ ವಿಷಯವನ್ನು ಮರೆತಿದ್ದಾರೆ. ಆರೆಸ್ಸೆಸ್ ಭಾಷಣಗಳಿಂದ ಪ್ರೇರಿತರಾಗಿ ಬಡ ಯುವಕರು ಬಲಿಯಾಗುತ್ತಾರೆ. ಆದರೆ, ಅವರ ಮೇಲೆ ಕೇಸ್ ದಾಖಲಾದಾಗ ಯಾವ ಬಿಜೆಪಿ ನಾಯಕರೂ ಬಂದು ಜಾಮೀನು ಕೊಡಿಸುವುದಿಲ್ಲ, ಬೆಂಗಳೂರಿಗೆ ಬಂದರೆ ಒಂದು ಹೊತ್ತಿನ ಊಟವನ್ನೂ ಹಾಕಿಸುವುದಿಲ್ಲ,’ ಎಂದು ವ್ಯಂಗ್ಯವಾಡಿದರು.

You cannot copy content of this page

Exit mobile version