ಬೆಂಗಳೂರು: ‘ಆರೆಸ್ಸೆಸ್ ಈ ದೇಶದ ಸಂವಿಧಾನ ಮತ್ತು ಸಮಾಜಕ್ಕೆ ಮಾತ್ರವಲ್ಲ, ಅದು ಸ್ವತಃ ತನ್ನ ಸೃಷ್ಟಿಯಾದ ಬಿಜೆಪಿಯನ್ನೂ ಸುಟ್ಟು ಬೂದಿ ಮಾಡುವ ವಿಷಜಂತು. ಈ ಸತ್ಯವನ್ನು ನಾವಲ್ಲ, ಬಿಜೆಪಿಯ ಶಾಸಕರೇ ಹೇಳುತ್ತಿದ್ದಾರೆ,’ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಆರೆಸ್ಸೆಸ್ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಶಾಸಕ ಸುರೇಶ್ ಗೌಡ ಅವರದ್ದು ಎನ್ನಲಾದ ವಿಡಿಯೋವನ್ನು ತಮ್ಮ ‘ಎಕ್ಸ್’ (X) ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಆರೆಸ್ಸೆಸ್‌ನ ಸರ್ವಾಧಿಕಾರಿ ಧೋರಣೆ ಮತ್ತು ಭ್ರಷ್ಟಾಚಾರದ ಬಗ್ಗೆ ಸರಣಿ ಪ್ರಶ್ನೆಗಳನ್ನು ಎತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಸುರೇಶ್ ಗೌಡ ವಿಡಿಯೋ ಅಸ್ತ್ರ
ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡ ಅವರು ‘ಆರೆಸ್ಸೆಸ್‌ನವರು ಕಡುಭ್ರಷ್ಟರು’ ಎಂದು ಹೇಳಿದ್ದಾರೆ ಎನ್ನಲಾದ ವಿಡಿಯೋವನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿರುವ ಹರಿಪ್ರಸಾದ್, ‘ಈ ಗಂಭೀರ ಆರೋಪಕ್ಕೆ ಉತ್ತರಿಸುವ ಧೈರ್ಯ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಇದೆಯೇ?’ ಎಂದು ನೇರವಾಗಿ ಸವಾಲು ಹಾಕಿದ್ದಾರೆ.
‘ಶಾಸಕರೇ ಇಷ್ಟು ಗಂಭೀರ ಆರೋಪ ಮಾಡಿದರೂ ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳದೆ, ಮತ್ತೆ ಅವರಿಗೆ ಟಿಕೆಟ್ ನೀಡಿದ್ದೇಕೆ? ಆರೆಸ್ಸೆಸ್‌ನ ಇನ್ನಷ್ಟು ನಿಗೂಢ ಸತ್ಯಗಳು ಅವರಿಂದ ಹೊರಬರಬಾರದು ಎಂಬ ಭಯವೇ ಇದಕ್ಕೆ ಕಾರಣವಲ್ಲವೇ?’ ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿದ್ದೇ ಆರೆಸ್ಸೆಸ್
ಆರೆಸ್ಸೆಸ್‌ನ ಹಿಡಿತಕ್ಕೆ ಬಿಜೆಪಿಯ ಘಟಾನುಘಟಿ ನಾಯಕರೇ ಬಲಿಯಾಗಿದ್ದಾರೆ ಎಂದು ಆರೋಪಿಸಿದ ಅವರು, ‘ಅಡ್ವಾಣಿಯವರನ್ನು ಮೂಲೆಗೆ ತಳ್ಳಿದ್ದೇ ಈ ಆರೆಸ್ಸೆಸ್. ಕರ್ನಾಟಕದಲ್ಲಿ ಯಡಿಯೂರಪ್ಪನವರನ್ನು ನೆಮ್ಮದಿಯಾಗಿರಲು ಬಿಡದೆ, ಕೊನೆಗೂ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಮೂಲೆಗೆ ಕೂರಿಸುವಲ್ಲಿ ಯಶಸ್ವಿಯಾಯಿತು. ಈಗ ಆರೆಸ್ಸೆಸ್‌ನ ಗುಲಾಮಗಿರಿ ಮಾಡದಿದ್ದರೆ, ತಮ್ಮ ತಂದೆಗಾದ ಗತಿಯೇ ತಮಗೂ ಬರಬಹುದೆಂಬ ಭಯ ಬಹುಶಃ ವಿಜಯೇಂದ್ರ ಅವರನ್ನು ಕಾಡುತ್ತಿರಬಹುದು’ ಎಂದು ವ್ಯಂಗ್ಯವಾಡಿದರು.
ಭ್ರಷ್ಟಾಚಾರದ ಹಣ ‘ಸಂಘ ಸಮರ್ಪಣಮಸ್ತು’
ಬಿ.ಎಸ್. ಯಡಿಯೂರಪ್ಪ ಮತ್ತು ಆರೆಸ್ಸೆಸ್ ನಡುವಿನ ಸಂಬಂಧದ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ ಹರಿಪ್ರಸಾದ್, ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ:
ಯಡಿಯೂರಪ್ಪನವರು ಕಾಲಕಾಲಕ್ಕೆ ಆರೆಸ್ಸೆಸ್‌ಗೆ ದುಬಾರಿ ಕಾಣಿಕೆಗಳನ್ನು ನೀಡಿ ‘ಕೇಶವ ಕೃಪೆ’ಗೆ ಪಾತ್ರರಾಗಿ ತಮ್ಮ ಅಸ್ತಿತ್ವ ಉಳಿಸಿಕೊಂಡು ಬಂದಿದ್ದರೇ?
ಯಡಿಯೂರಪ್ಪ ಮತ್ತು ಸಂಘದ ನಾಯಕರು ಸೇರಿ ಭ್ರಷ್ಟಾಚಾರದ ಸಹಪಂಕ್ತಿ ಭೋಜನ ಮಾಡಿದ್ದಾರೆಯೇ? ನೋಂದಣಿಯಾಗದ ಈ ಸಂಘಟನೆ, ತನ್ನ ಅಂಗಸಂಸ್ಥೆಗಳ ಮೂಲಕ ವಸೂಲಿ ದಂಧೆ ನಡೆಸುತ್ತಿದೆಯೇ?
ಸಂಘಕ್ಕೆ ಸಲ್ಲಿಕೆಯಾಗುವ ಈ ಹಣ ಹವಾಲಾ ಮೂಲಕ ರವಾನೆಯಾಗುತ್ತದೆಯೇ ಅಥವಾ ಆರ್‌ಟಿಜಿಎಸ್ ಮೂಲಕವೇ?
ಬಿಜೆಪಿಯ ಭ್ರಷ್ಟಾಚಾರದ ಹಣ ‘ಸಂಘ ಸಮರ್ಪಣಮಸ್ತು’ ಆಗಿರುವ ಇನ್ನೆಷ್ಟು ಪ್ರಕರಣಗಳಿವೆ?
ತನಿಖಾ ಸಂಸ್ಥೆಗಳೂ ಸಂಘದ ಶಾಖೆಗಳೇ?
ಇಷ್ಟೆಲ್ಲಾ ಅಕ್ರಮಗಳ ಆರೋಪಗಳಿದ್ದರೂ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಐಟಿ, ಇ.ಡಿ, ಸಿಬಿಐ ಯಾಕೆ ಮೌನವಾಗಿವೆ ಎಂದು ಪ್ರಶ್ನಿಸಿದ ಹರಿಪ್ರಸಾದ್, ‘ಈ ಸಂಸ್ಥೆಗಳು ಕೂಡ ಸಂಘದ ಶಾಖೆಗಳಂತೆ ವರ್ತಿಸುತ್ತಿರುವಾಗ, ಅವರಿಂದ ತನಿಖೆಯನ್ನು ನಿರೀಕ್ಷಿಸುವುದು ಮೂರ್ಖತನ. ಬಿಜೆಪಿ ಮತ್ತು ಸಂಘದ ನಡುವಿನ ಈ ಅಕ್ರಮ ಹಾಗೂ ಅನೈತಿಕ ಸಂಬಂಧವನ್ನು ಬಯಲಿಗೆಳೆಯಬೇಕಾದ ಅನಿವಾರ್ಯತೆ ಇದೆ,’ ಎಂದು ಅವರು ಆಗ್ರಹಿಸಿದ್ದಾರೆ.